2024ರಲ್ಲಿ ನಡೆದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದು ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಹರಿಯಾಣ ಮಹಿಳಾ ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಸುಚಿತ್ರಾ ಅವರು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸುಚಿತ್ರಾ ಮತ್ತು ಅವರ ಪತಿ ಗೌರವ್ ಅವರು ತನಿಖಾಧಿಕಾರಿಗಳ ಮುಂದೆ ಹಾಜರಾಗಿ, ಸುಚಿತ್ರಾ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು 7 ಕೋಟಿ ರೂ. ಪಾವತಿಸುವುದಾಗಿ ದೂರು ನೀಡಿದ ನಂತರ ನಾರ್ತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇದನ್ನು ಓದಿದ್ದೀರಾ? ಇಸ್ರೇಲ್ ಮೇಲೆ ಉಡಾವಣೆ ಮಾಡಿದ ಕ್ಷಿಪಣಿಗಳ ಮೇಲೆ ‘ಥ್ಯಾಂಕ್ ಯು ಇಂಡಿಯಾ’ ಎಂದು ಬರೆದ ಇರಾನ್
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಸಂಸದ ಕೆ ಸುರೇಶ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಹಾಯಕರಾದ ಶಹಾಬ್ ಖಾನ್ ಅವರ ಹೆಸರನ್ನು ಈ ದೂರಿನಲ್ಲಿ ದಾಖಲಿಸಲಾಗಿದೆ ವರದಿಗಳು ತಿಳಿಸಿವೆ.
ಬ್ಯಾಂಕ್ ವರ್ಗಾವಣೆ ಮತ್ತು ನಗದು ರೂಪದಲ್ಲಿ ಸೇರಿದಂತೆ ಹಲವು ವಹಿವಾಟುಗಳ ಮೂಲಕ ಈ ಮೊತ್ತವನ್ನು ನೀಡಲಾಗಿದೆ ಎಂದು ವರದಿಯಾಗಿದೆ. ಆದರೆ, ತಮಗೆ ಟಿಕೆಟ್ ನೀಡಿಲ್ಲ ಮತ್ತು ಹಣವನ್ನೂ ಹಿಂದಿರುಗಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.




