ತಾನು ಶಿವನ ಅವತಾರ ಎಂದು ಹೇಳಿಕೊಂಡು 35 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಸ್ವಯಂ ಘೋಷಿತ ದೇವಮಾನವ 40 ವರ್ಷದ ಆರೋಪಿ ಹೃಷಿಕೇಶ್ ವೈದ್ಯನನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿರುವಾಗಿ ಶನಿವಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ನಾಸಿಕ್‌ನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಬಂಧನ ಮಾಡಲಾಗಿದೆ. ಈ ಪ್ರಕರಣದಲ್ಲಿ ಹಲವು ಮಂದಿ ಸಂತ್ರಸ್ತರು ದೂರು ನೀಡಲು ಮುಂದಾಗಿದ್ದಾರೆ. ಈ ಸುದ್ದಿಗಳನ್ನು ನೋಡಿ ಧೈರ್ಯ ತಂದುಕೊಂಡ ಮಹಿಳೆಯು ಹೃಷಿಕೇಶ್ ವೈದ್ಯನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾರೆ.
ಇದನ್ನು ಓದಿದ್ದೀರಾ? ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಬಂಧನದ ಬಳಿಕ ದೂರು ದಾಖಲಿಸಲು 50ಕ್ಕೂ ಅಧಿಕ ಕರೆ!
ಆದರೆ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ವೈದ್ಯ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿ, ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ಇನ್ನು ಮೊದಲ ಅಪರಾಧವು ಪುಣೆಯಲ್ಲಿ ನಡೆದಿದೆ ಎನ್ನಲಾಗಿರುವುದರಿಂದ, ವಸಾಯಿಯ ಮಾಣಿಕ್‌ಪುರ ಪೊಲೀಸರು ಬುಧವಾರ ‘ಶೂನ್ಯ ಎಫ್‌ಐಆರ್’ ದಾಖಲಿಸಿದ್ದಾರೆ. ನಂತರ ತನಿಖೆಯನ್ನು ಪುಣೆಯ ಹಡಪ್ಸರ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಅಪರಾಧ ಎಲ್ಲಿ ನಡೆದಿದ್ದರೂ ಅಥವಾ ಯಾವ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದರೂ ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಿಸಬಹುದಾದ ಎಫ್‌ಐಆರ್ ಅನ್ನು ಶೂನ್ಯ ಎಫ್‌ಐಆರ್ ಎಂದು ಕರೆಯಲಾಗುತ್ತದೆ.
2023ರಲ್ಲಿ ಮಹಿಳೆ ಫೇಸ್‌ಬುಕ್ ಮೂಲಕ ಆರೋಪಿಯ ಸಂಪರ್ಕಕ್ಕೆ ಬಂದಿದ್ದಾಳೆ ಎನ್ನಲಾಗಿದೆ. ಅದೇ ವರ್ಷದ ಡಿಸೆಂಬರ್‌ನಲ್ಲಿ ಆರೋಪಿಯು ಆಕೆಯನ್ನು ಭೇಟಿಯಾಗಲು ಪುಣೆಗೆ ಭೇಟಿ ನೀಡಿದ್ದನು. ತಾನು ಮಹಾದೇವ (ಶಿವನ) ಅವತಾರ ಮತ್ತು ಆಕೆ ತನ್ನ ‘ಪಾರ್ವತಿ’ ಎಂದು ಹೇಳಿಕೊಂಡು ಆಕೆಯನ್ನು ವಂಚಿಸಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಆರೋಪಿಯು ಅತ್ಯಾಚಾರ ಮಾಡುವುದಕ್ಕೂ ಮುನ್ನ ಮಹಿಳೆಯ ದೇಹ ಮರಗಟ್ಟುವಂತಹ ಯಾವುದೋ ವಸ್ತುವನ್ನು ನೀಡಿದ್ದಾನೆ. ಅದಾದ ಬಳಿಕ ಅತ್ಯಾಚಾರ ಎಸಗಿ ಆಕೆಯ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದಾನೆ. ಅದಾದ ಬಳಿಕ ಈ ಚಿತ್ರಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ, ಆತ ಆಕೆಯನ್ನು ಪಾಲ್ಘರ್‌ನ ವಸೈನಲ್ಲಿರುವ ಹೋಟೆಲ್‌ಗೆ ಕರೆಸಿ, ಅಲ್ಲಿ ಮತ್ತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಸ್ವಯಂ ಘೋಷಿತ ದೇವಮಾನವನಿಂದ ಕಿರುಕುಳ; ವ್ಯಕ್ತಿ ಆತ್ಮಹತ್ಯೆ
ಇನ್ನೊಂದೆಡೆ ಅತ್ಯಾಚಾರ ಆರೋಪಿ ಮತ್ತು ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಬಂಧನ ಮಾಡಲಾಗಿದ್ದು ಸದ್ಯ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ಈಗಾಗಲೇ ಹಲವಾರು ಮಂದಿ ದೂರು ನೀಡಲು ಮುಂದೆ ಬಂದಿದ್ದಾರೆ. ಕಳೆದ ಐದು ದಿನಗಳಲ್ಲಿ ಮಾಹಿತಿ ನೀಡುವ ಉದ್ದೇಶದಿಂದ ಅಥವಾ ತಮ್ಮ ಮೇಲೂ ಅತ್ಯಾಚಾರ ನಡೆದಿದೆ ಎಂದು ದೂರು ನೀಡಲು 50ಕ್ಕೂ ಹೆಚ್ಚು ಮಂದಿ ಕರೆ ಮಾಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಅಶೋಕ್ ಖರತ್ ನಾಸಿಕ್ ಜಿಲ್ಲೆಯ ಸಿನ್ನಾರ್‌ನಲ್ಲಿರುವ ದೇವಾಲಯ ಟ್ರಸ್ಟ್‌ನ ಮುಖ್ಯಸ್ಥರಾಗಿದ್ದು, ಹಲವಾರು ರಾಜಕೀಯ ನಾಯಕರು ಅವರನ್ನು ಭೇಟಿ ಮಾಡಿದ್ದರು. ಮಾರ್ಚ್ 18ರಂದು 35 ವರ್ಷದ ಮಹಿಳೆಯೊಬ್ಬರು ಮೂರು ವರ್ಷಗಳ ಅವಧಿಯಲ್ಲಿ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದಾದ ಬಳಿಕ ಈ ಸ್ವಯಂ ಘೋಷಿತ ದೇವಮಾನವನ ಬಂಧನ ಮಾಡಲಾಗಿದೆ. ಈ ಬಂಧನದ ಬಳಿಕ ಅಶೋಕ್ ವಿರುದ್ಧ ಹಲವಾರು ಅತ್ಯಾಚಾರ ದೂರುಗಳು ದಾಖಲಾಗಿವೆ.
ಮಹಾರಾಷ್ಟ್ರ ಸರ್ಕಾರ ನೇಮಿಸಿದ ಎಸ್‌ಐಟಿ ಈ ಹಿಂದೆ ಖರತ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಅಥವಾ ದೂರು ನೀಡಲು ಸಹಾಯವಾಣಿಯನ್ನು ಪ್ರಕಟಿಸಿದೆ. ಲೈಂಗಿಕ ದೌರ್ಜನ್ಯ, ಸುಲಿಗೆ ಸೇರಿದಂತೆ ಹಲವಾರು ದೂರುಗಳು ಸದ್ಯ ಖರತ್ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಎಂಟು ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಪ್ರತಿ ದಿನ ಸರಾಸರಿ 15-20 ಕರೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.




