ಡಾ. ಕೆ.ವಿ. ನಾರಾಯಣ ಅವರು ವಿಮರ್ಶಕರಾಗಿ, ಭಾಷಾವಿಜ್ಞಾನಿಯಾಗಿ, ವಿಚಾರವಾದಿಯಾಗಿ ಕನ್ನಡ ನಾಡಿಗೆ ಪರಿಚಿತರು. ಅವರ ಇತ್ತೀಚಿನ ಪ್ರತಿಯೊಂದು ಮಾತು ಮತ್ತು ಬರಹಗಳಲ್ಲೂ ವೈಚಾರಿಕತೆ ಇದ್ದೆ ಇರುತ್ತಿತ್ತು. ಅವರು ಇಷ್ಟು ಬೇಗ ಅಗಲಿ ಹೋಗುತ್ತಾರೆ ಅನ್ನುವ ಯಾವ ಸೂಚನೆಯೂ ನಮಗೆ ಇರಲಿಲ್ಲ. ಅವರಿಗೆ ಅಂತಿಮ ನಮನಗಳು.
ಇವರು ನಿಜವಾದ ಅರ್ಥದಲ್ಲಿ ಕನ್ನಡದ ನಾಡೋಜ. ಅಂದರೆ ಅವರು ನಮ್ಮ ಆಲೋಚನೆ, ಭಾವನೆ, ಚಿಂತನೆ, ಸಮಸ್ಯಾಪರಿಹಾರ ಎಲ್ಲವುಗಳಿಗೆ ಒಂದು ಮುಖ್ಯ ರೆಫರೆನ್ಸ್ ಪಾಯಿಂಟ್ ಆಗಿದ್ದವರು. ಈ ನಾಡು ಯಾವುದೆ ಸಮಸ್ಯೆಯನ್ನು ಎದುರಾದಾಗ ಕೆ.ವಿ. ನಾರಾಯಣ ಏನು ಹೇಳಬಲ್ಲರು ಎಂದು ನಾವೆಲ್ಲ ಕುತೂಹಲದಿಂದ ಅವರ ಕಡೆಗೆ ನೋಡುತ್ತಿದ್ದೆವು. ಅಷ್ಟೆ ಅಲ್ಲ ನಮಗೆ ಯಾವುದೆ ರೀತಿಯ ಐಡಿಯಲಾಜಿಕಲ್ ಕ್ಲಾರಿಟಿ ಬೇಕಿದ್ದರೆ ಕೆ.ವಿ.ಎನ್. ಅವರಿಗೆ ಕರೆ ಮಾಡುತ್ತಿದ್ದೆವು. ಅವರೊಂದಿಗೆ ಚರ್ಚಿಸುತ್ತಿದ್ದೆವು. ಕ್ರಾಸ್ ಚೆಕ್ ಮಾಡಿಕೊಳ್ಳುತ್ತಿದ್ದೆವು. ಅವರ ಒಬ್ಬ ಶಿಷ್ಯರನ್ನು ಅವರು ವರದರಾಜು ಎಂದೆ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. (ನನಗೆ ಅವರ ಬರಹ, ಆಲೋಚನೆಗಳನ್ನು ಸದಾ ವರದಿ ಮಾಡುತ್ತಾರೆ ಎಂಬ ಅರ್ಥದಲ್ಲಿ) ಈಗ ಆ ರೆಫರೆನ್ಸ್ ಪಾಯಿಂಟ್ ಇಲ್ಲವಾಗಿದೆ.
ಇವರು ಈಗ್ಗೆ ಕೆಲವು ವರ್ಷಗಳ ಹಿಂದೆ ಓದು ಕರ್ನಾಟಕ ಎಂಬ ಯೋಜನೆ ಒಂದನ್ನು ಆರಂಭಿಸಿದ್ದರು. ಕರ್ನಾಟಕವನ್ನು ಕನ್ನಡದ ಮೂಲಕ ನೋಡುವ ಮತ್ತು ಕರ್ನಾಟಕದಲ್ಲಿ ಸಂಭವಿಸುವ ಎಲ್ಲ ಜ್ಞಾನ ಕನ್ನಡದ ಮೂಲಕ ಸಂಭವಿಸಬೇಕು ಎನ್ನುವ ತಾತ್ವಿಕ ದೃಷ್ಟಿ ಇದ್ದ ಯೋಜನೆ ಅದು. ನಾಡು, ನುಡಿಯ ಬೆಳವಣಿಗೆ ಬಗ್ಗೆ ಕಾಳಜಿ ಇದ್ದ ಹತ್ತಾರು ಮಂದಿ ಯುವಜನರನ್ನು ಕಟ್ಟಿಕೊಂಡು ಆ ಯೋಜನೆಯನ್ನು ಆಗುಮಾಡುವ ಪ್ರಯತ್ನಗಳನ್ನು ಅವರು ಮಾಡುತ್ತಿದ್ದರು. ಇದೊಂದು ಮಹತ್ವದ ಪ್ರಯತ್ನ ಆಗಿತ್ತು. ಇದನ್ನು ಮುಂದಿನ ಪೀಳಿಗೆ ಆನಂತರ ಮುಂದಕ್ಕೆ ಒಯ್ಯಲಿಲ್ಲ.
ಯಾವುದೆ ಪಠ್ಯಗಳನ್ನು ಸಂಕಥನಗಳು ಎಂದು ಕೆ.ವಿ.ಎನ್. ಭಾವಿಸುತ್ತಿದ್ದರು. ಪಠ್ಯಗಳನ್ನು ಭಿನ್ನ ಕೋನಗಳಿಂದ ಹೇಗೆಲ್ಲ ನೋಡಬಹುದು ಎಂಬ ವಿದ್ವತ್ ವ್ಯಾಯಾಮಗಳನ್ನು ಹಲವು ಕಮ್ಮಟಗಳ ಮೂಲಕ ಇವರು ಹಲವು ವರ್ಷಗಳಿಂದ ಮಾಡುತ್ತಿದ್ದರು. ಸಾಹಿತ್ಯ ಪ್ರಕಾರಗಳ ಜೊತೆಗೆ ವಿಚಾರಪಠ್ಯಗಳನ್ನೂ ಚರ್ಚೆಗೆ ಎತ್ತಿಕೊಳ್ಳುತ್ತಿದ್ದರು. ಪ್ರಸ್ತುತ ಸಾಮಾಜಿಕ ಸಂದರ್ಭಕ್ಕೆ ಅನ್ವಯಿಸಿ ಪಠ್ಯಗಳ ಓದು ಮತ್ತು ವಿಶ್ಲೇಷಣೆ ನಡೆಸುವ ಬಗೆಗಳನ್ನು ಅಲ್ಲಿ ಶೋಧಿಸುತ್ತಿದ್ದರು. ಬೆಸಗರಹಳ್ಳಿ ಟ್ರಸ್ಟ್ ಸಹಯೋಗ ಅವಕ್ಕೆ ಇರುತ್ತಿತ್ತು. ಅಲ್ಲೆಲ್ಲ ನಾಡಿನ ನೂರಾರು ಯುವಪೀಳಿಗೆ ಪಾಲ್ಗೊಳ್ಳುತ್ತಿತ್ತು. ಬೌದ್ಧಿಕವಾಗಿ ಅರ್ಥಪೂರ್ಣ ಸಂವಾದಗಳನ್ನು ನಡೆಸಬಲ್ಲ ಒಂದು ಹಿರಿಯ ತಲೆಯನ್ನು ನಾವು ಕಳೆದುಕೊಂಡಿದ್ದೇವೆ.
ಭಾಷಾಯೋಜನೆ, ಭಾಷಾನೀತಿಗಳ ಬಗ್ಗೆ ಅಧಿಕೃತವಾಗಿ ಮಾತಾಡಬಲ್ಲ ವಿದ್ವಾಂಸರಾದ ಕೆ.ವಿ.ಎನ್. ಅವರು ನೋಮ್ ಚಾಮ್ಸ್ಸ್ಕಿ, ಮತ್ತು ಡಿ.ಎನ್. ಶಂಕರಭಟ್ಟರ ವಿಚಾರಗಳನ್ನು ತಾವೂ ಪ್ರತಿಪಾದಿಸುತ್ತಿದ್ದವರು. ಫ್ಯುಕೊ, ಡೆರಿಡಾ ಚಿಂತನೆಗಳನ್ನು, ಬುದ್ಧಿಜೀವಿಗಳ ಬಿಕ್ಕಟ್ಟುಗಳನ್ನು ಕುರಿತು ತರ್ಕಿಸಿ ಮಾತಾಡುತ್ತಿದ್ದರು. ನುಡಿಗಳು ಸುಮ್ಮನೆ ಅಳಿಯುವುದಿಲ್ಲ; ಯಾವುದೆ ನುಡಿಯನ್ನು ಆಡುವ ಜನರ ಬದುಕನ್ನು ಅವರು ಘನತೆಯಿಂದ ಬದುಕಲು ಆಗದೆ ಇರುವ ಪರಿಸ್ಥಿತಿ ಬಂದಾಗ ಅವರ ನುಡಿಗೂ ಕಂಟಕ ಬರುತ್ತದೆ; ಇಲ್ಲವಾದರೆ ಇಲ್ಲ ಎಂಬುದು ಅವರ ಬಹು ಮುಖ್ಯವಾದ ಪ್ರತಿಪಾದನೆ ಆಗಿತ್ತು. ನುಡಿಯ ಬಳಕೆಯ ವಲಯಗಳನ್ನು ಬದುಕಿನಲ್ಲಿ ವಿಸ್ತರಿಸದೆ ನುಡಿಯ ಉಳಿವಿನ ಬಗೆಗೆ ಮಾಡುವ ಯಾವ ಯೋಜನೆಗಳೂ ನಿರರ್ಥಕ; ಜನರ ಬದುಕನ್ನು ಉತ್ತಮಪಡಿಸುವ ಕೆಲಸ ಮಾಡದೆಯೆ ಬರಿದೆ ಅವರ ನುಡಿಗಳನ್ನು ಮ್ಯೂಸಿಯಮ್ಮಿನ ಪೀಸಿನಂತೆ ಉಳಿಸುವ ಯತ್ನಕ್ಕೆ ಅರ್ಥವಿಲ್ಲ ಎಂಬುದು ಅವರ ವಾದವಾಗಿತ್ತು.
ಇದನ್ನು ಓದಿದ್ದೀರಾ?: ಕೆವಿಎನ್: ಕನ್ನಡದ ಘನವಿವೇಕ
ಅವರ ವಿದ್ವತ್ ಬರಹಗಳು ಸುಲಭವಾಗಿ ಅರ್ಥವಾಗುವುದಿಲ್ಲ; ಅವು ಕಠಿಣ ಎಂಬುದು ಅವರ ಬರಹಗಳ ಮೇಲಿನ ಒಂದು ಸಾಮಾನ್ಯ ಆರೋಪವಾಗಿತ್ತು. ಆದರೆ ಅವರು ಇತ್ತೀಚೆಗೆ ಜಗತ್ತಿನ ಹಲವು ತಜ್ಞರ ಬರಹಗಳನ್ನು ಅರಗಿಸಿಕೊಂಡು ಸರಳವಾಗಿ ಅರ್ಥವಾಗುವಂತೆ ಕನ್ನಡ ಓದುಗರಿಗೆ ಮಂಡಿಸುವ ಕೆಲಸವನ್ನು ಮಾಡುತ್ತಿದ್ದರು. ಇವರ ʻನಮ್ಮೊಡನೆ ನಮ್ಮ ನುಡಿʼ, ʻನುಡಿಗಳ ಅಳಿವು ಬೇರೆ ದಿಕ್ಕಿನ ನೋಟʼ, ʻಬುದ್ಧಿಜೀವಿ ಬಿಕ್ಕಟ್ಟುಗಳುʼ, ʻಹೊಸ ಓದುಗರಿಗೆ ಕುವೆಂಪುʼ ಮೊದಲಾದ ಕೃತಿಗಳು ಇದಕ್ಕೆ ಉದಾಹರಣೆಗಳು.
ಅವರ ವಿಮರ್ಶೆ ತೀರ್ಪುಗಳನ್ನು ನೀಡುವುದಿಲ್ಲ; ಲೇಖಕರನ್ನು ಸ್ಥಾನೀಕರಣ ಮಾಡುವುದಿಲ್ಲ. ಬೆಲೆ ಕಟ್ಟುವುದಿಲ್ಲ; ಅವರು ಬೇರೆಯವರ ವಿಧಾನ, ಮಂಡನೆಗಳನ್ನು ಪರಿಶೀಲಿಸುತ್ತಾರೆ. ಆದರೆ ತಮ್ಮದೆ ನಿರ್ಣಯ – ನಿಲುವುಗಳನ್ನು ನೇರ ಮಂಡಿಸುವುದಿಲ್ಲ ಎಂಬುದು ಅವರ ವಿಮರ್ಶೆಯ ಬರಹದ ಮೇಲಿನ ಇನ್ನೊಂದು ಸಾಮಾನ್ಯವಾದ ಆರೋಪ. ಆದರೆ ಕೆ.ವಿ.ಎನ್. ಹಾಗೆ ಅವಸರದ ನಿರ್ಣಯಗಳಿಗೆ ಬರದೆ ಓದುಗರಿಗೆ ವಿಮರ್ಶೆಯಲ್ಲಿ ತೆರಪುಗಳನ್ನು ನಿರ್ಮಾಣ ಮಾಡಿ ಕೊಡುತ್ತಿದ್ದರು. ಓದುಗರಲ್ಲಿ ತಮ್ಮದೆ ಅಭಿಪ್ರಾಯಗಳು ಮೂಡಬೇಕು ಎಂಬುದು ಕೆ.ವಿ.ಎನ್. ಅವರ ವಿಮರ್ಶಾ ಬರಹಗಳ ಆಶಯ ಆಗಿರುತ್ತಿತ್ತು.
ಇತಿಹಾಸ ರಚನೆಯ ರಾಜಕಾರಣದ ಬಗ್ಗೆ ಕೆ.ವಿ.ಎನ್. ಆಗಾಗ ಮಾತಾಡುತ್ತಿದ್ದರು. ವಾಸ್ತವ ಇತಿಹಾಸ ಎಂಬುದು ಯಾವಾಗಲು ಇರುವುದಿಲ್ಲ. ನಮ್ಮಲ್ಲಿ ಇರುವ ಎಲ್ಲ ಇತಿಹಾಸದ ಬರವಣಿಗೆಯೂ ಕಟ್ಟಲ್ಪಟ್ಟ ರಚನೆ ಎಂಬುದು ಅವರ ಪ್ರತಿಪಾದನೆ ಆಗಿತ್ತು. ಒಂದು ಎಕ್ಸ್ಟ್ರೀಮ್ಗೆ ಹೋಗಿ ಕೆಲವೊಮ್ಮೆ ಇತಿಹಾಸ ಎಂಬುದೆ ಇಲ್ಲ ಎಂದೂ ಅವರು ಹೇಳುತ್ತಿದ್ದರು. ಕೆಲವು ನಿರ್ದಿಷ್ಟ ಉದ್ದೇಶಗಳಿಗಾಗಿ ಇತಿಹಾಸ ಕಟ್ಟಲ್ಪಡುತ್ತದೆ ಮತ್ತು ಬಳಕೆ ಆಗುತ್ತದೆ. ಅದು ಅಧಿಕಾರ ರಾಜಕಾರಣದ ಭಾಗ ಎಂಬುದು ಅವರ ನಿಲುವಾಗಿತ್ತು. ಹಾಗೆಯೆ ಭಾಷೆ ಆಗಲಿ ಇತಿಹಾಸ ಆಗಲಿ ಅವು ಅಸಮಾನತೆಯ ಬಿಂಬಗಳು; ತರತಮವನ್ನು ತೊಡೆಯುವ ಸಾಧನಗಳನ್ನಾಗಿ ಅವುಗಳನ್ನು ಜನಬದುಕನ್ನು ಸುಧಾರಿಸುವ ಮೂಲಕವೆ ನಿರ್ಮಿಸುವ ಮತ್ತು ಬಳಸುವ ಹೊಣೆ ನಮ್ಮದು ಎಂದು ಅವರು ನಂಬಿದ್ದರು.
ಇತ್ತೀಚೆಗೆ ಸಂಗಾತ ಪತ್ರಿಕೆಗಾಗಿ ಅವರನ್ನು ಸಂದರ್ಶನದ ನೆಪದಲ್ಲಿ ಮಾತಾಡಿಸಿದಾಗ ದಣಿವಿಲ್ಲದೆ ಸರಿಸುಮಾರು ಐದು ಗಂಟೆಗಳ ಕಾಲ ಮಾತಾಡಿದ್ದರು. ಮಾತಾಡುವಾಗ ತಾವು ಹೇಳುವ ವಿಚಾರಗಳನ್ನು ಖಚಿತವಾಗಿ ಮತ್ತು ಕರಾರುವಾಕ್ಕಾಗಿ ಹಾಗೂ ಸಂಕ್ಷಿಪ್ತವಾಗಿ ಮಂಡಿಸುವುದು ಅವರ ಮಾತಿನ ಕಲೆಯ ಬಹು ಮುಖ್ಯ ಲಕ್ಷಣವಾಗಿತ್ತು. ಮಾತಿನಲ್ಲಿ ಇರುವ ಉಪಯುಕ್ತತೆ ಮತ್ತು ರಿಡಂಡೆನ್ಸಿ ಬಗ್ಗೆ ಅವರಿಗೆ ಸದಾ ಎಚ್ಚರ ಇರುತ್ತಿತ್ತು. ಪದಗಳ ಅರ್ಥವು ಡೆಲಿವರಿ ಎಂಡ್ಗಿಂತ ರಿಸೀವಿಂಗ್ ಎಂಡ್ನಲ್ಲೆ ರೂಪಗೊಳ್ಳುತ್ತದೆ ಎಂಬುದು ಅವರ ಖಚಿತ ನಿಲುವು. ಹಾಗಾಗಿಯೆ ಯಾವುದೆ ಲಿಖಿತ ಪಠ್ಯದ ಅರ್ಥ ಪದಗಳಲ್ಲಿ ಇರುವುದಲ್ಲ ಓದುಗನಲ್ಲಿ ಆಗುವುದು ಎಂಬುದು ಅವರ ನಂಬುಗೆ ಆಗಿತ್ತು.

ಕನ್ನಡದ ಕೆಸರು ಗದ್ದೆಯಲ್ಲಿ ಇಂಗ್ಲಿಷಿನ ವೈಹಾಳಿ ಅಥವಾ ʻಕನ್ನಡಿಗಳು ಇನ್ನು ಸಾಕುʼ ಅನ್ನುವ ಬರಹ ಅವರ ಪ್ರಾತಿನಿಧಿಕ ಬರಹಗಳಲ್ಲಿ ಒಂದು. ನಮ್ಮನ್ನು ನಾವು ನೋಡಿಕೊಳ್ಳಲು ಅನ್ಯಕನ್ನಡಿಗಳನ್ನು ಬಳಸುವ ಅಗತ್ಯವಿದೆಯೆ ಎಂಬ ಪ್ರಶ್ನೆಯನ್ನು ಕೆ.ವಿ.ಎನ್. ಇಲ್ಲಿ ಮಂಡಿಸಿದ್ದಾರೆ. ಕನ್ನಡವು ಬಹು ಕಾಲದಿಂದ ಪಡೆಯುವ ಭಾಷೆಯಾಗಿಯೆ ಬಾಳುತ್ತ ಬರುತ್ತಿದೆ. ಅದು ಕೊಡುವ ಭಾಷೆ ಆಗಿಯು ಬೆಳೆಯಬೇಕು ಎಂಬುದು ಅವರ ಇಲ್ಲಿನ ಮುಖ್ಯ ಪ್ರತಿಪಾದನೆ. ಇದಕ್ಕಾಗಿ ಏನೆಲ್ಲ ನಾವು ಮಾಡಬೇಕು ಎಂಬ ಬಗ್ಗೆ ಅವರು ಆಗಾಗ ಮಾತಾಡುತ್ತಿದ್ದರು. ಅವರ ಹಲವು ಬರಹಗಳಲ್ಲಿ ಈ ತಾತ್ವಿಕತೆ ಇರುವುದನ್ನು ಕಾಣಬಹುದು. ಅವರ ಭಾಷಾಂತರ ಕುರಿತ ಚಿಂತನೆಯಲ್ಲು ಈ ತಾತ್ವಿಕತೆ ಇದೆ. ಹಾಗಾಗಿಯೆ ಅವರು ಕುವೆಂಪು ಭಾಷಾ ಭಾರತಿ ಸಂಸ್ಥೆಯ ಅಧ್ಯಕ್ಷರಾದ ಅವಧಿಯಲ್ಲಿ ಕನ್ನಡದ ಹಲವು ಬರಹಗಳನ್ನು ಇಂಗ್ಲಿಷಿಗೆ ಮತ್ತು ಇತರ ಭಾರತೀಯ ಭಾಷೆಗಳಿಗೆ ತರ್ಜುಮೆ ಮಾಡಿಸುವ ಕೆಲಸವನ್ನು ಮಾಡಿದ್ದರು.
ತೊಂಡುಮೇವು ಹೆಸರಿನಲ್ಲಿ ಅವರ ಸಮಗ್ರ ಬರಹಗಳು ಪ್ರಕಟ ಆದ ನಂತರವೂ ನಿರಂತರ ಬರವಣಿಗೆ ಮತ್ತು ಸಂವಾದದಲ್ಲಿ ತೊಡಗುತ್ತಲೆ ಬಂದ ಕೆ.ವಿ.ಎನ್. ಇದೀಗ ದೈಹಿಕವಾಗಿ ನಿರ್ಗಮಿಸಿದ್ದಾರೆ. ಈಗ ಅವರ ಬರಹಗಳನ್ನು ಮತ್ತು ಚಿಂತನೆಗಳನ್ನು ನಾವು ಹೆಚ್ಚು ಹೆಚ್ಚು ಮುಖಾಮುಖಿ ಆಗಬೇಕಾದ ಅಗತ್ಯವಿದೆ.

ರಾಮಲಿಂಗಪ್ಪ ಟಿ. ಬೇಗೂರು
ಲೇಖಕರು, ಸಂಶೋಧಕರು, ವಿಮರ್ಶಕರು ಮತ್ತು ಪ್ರಾಧ್ಯಾಪಕರು. ಪ್ರಸ್ತುತ ಹೊಸಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.'ಮಾಯಾಪಾತಳ', 'ಮಾರ್ಕಾಂತರ', 'ಅಲ್ಲಮಪ್ರಭು', 'ಪರಕಾಯ', 'ನಾಟಕ ದಂಗೆ', ಫ್ರಾನ್ಜ್ ಕಾಫ್ಕನ ಕಾದಂಬರಿಯ ಅನುವಾದ 'ವಿಚಾರಣೆ' ಮುಂತಾದ ಕೃತಿಗಳನ್ನು ರಚಿಸಿದ್ದಾರೆ.



