ಗ್ರಾಮೀಣ ಬಡವರ ಆರ್ಥಿಕ ಸುರಕ್ಷತಾ ಕವಚವಾಗಿದ್ದ ‘ಬೇಡಿಕೆ ಆಧಾರಿತ ಹಕ್ಕು’ ಈಗ ವಿಬಿ ಜಿ ರಾಮ್ ಜಿಯಲ್ಲಿ ಬಜೆಟ್ ಮಿತಿಗೊಳಗಾದ ‘ಸೀಮಿತ ಯೋಜನೆ’ಯಾಗಿ ಬದಲಾಗಿದೆ. ಈಗಾಗಲೇ ಹಣಕಾಸಿನ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರಗಳಿಗೆ, ಸ್ಥಳೀಯ ಆರ್ಥಿಕ ಬಿಕ್ಕಟ್ಟುಗಳನ್ನು ನಿಭಾಯಿಸುತ್ತ ಶೇ.40ರಷ್ಟು ವೆಚ್ಚವನ್ನು ಭರಿಸುವುದು ಮುಂದಿನ ದಿನಗಳಲ್ಲಿ ಅತ್ಯಂತ ಕಠಿಣ ಆಡಳಿತಾತ್ಮಕ ಸವಾಲಾಗಲಿದೆ.
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೇಗಾ – MGNREGA) ಬದಲಿಗೆ 2025ರ ಡಿಸೆಂಬರ್ನಲ್ಲಿ ಅಂಗೀಕರಿಸಿದ ‘ವಿಕಸಿತ ಭಾರತ – ಗ್ರಾಮೀಣ ಉದ್ಯೋಗ ಮತ್ತು ಆಜೀವಿಕ ಖಾತರಿ ಮಿಷನ್ ಕಾಯ್ದೆ, 2025’ (ವಿಬಿ ಜಿ ರಾಮ್ ಜಿ) ಜೂನ್1 ರಿಂದ ಜಾರಿಗೆ ಬಂದಿದೆ. ಇದು ಭಾರತದ ಗ್ರಾಮೀಣ ಉದ್ಯೋಗ ನೀತಿಯಲ್ಲಿ ಕಳೆದ ಎರಡು ದಶಕಗಳಲ್ಲೇ ಅತ್ಯಂತ ದೊಡ್ಡ ಬದಲಾವಣೆಯಾಗಿದ್ದು, ಈ ಹೊಸ ಕಾನೂನು, ಗ್ರಾಮೀಣ ಉದ್ಯೋಗವನ್ನು ಕೇವಲ ‘ಬೇಡಿಕೆ ಆಧಾರಿತ ಹಕ್ಕು’ ಎಂಬ ಹಂತದಿಂದ ತಂತ್ರಜ್ಞಾನ ಆಧಾರಿತ ಮತ್ತು ಕೇಂದ್ರ-ರಾಜ್ಯ ಜಂಟಿ ಧನಸಹಾಯದ ಯೋಜನೆಯಾಗಿ ಪರಿವರ್ತಿಸಿದೆ.
ಅಲ್ಲದೆ, ಈ ಹೊಸ ಗ್ರಾಮೀಣ ಉದ್ಯೋಗ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸುವ ಮುನ್ನ, ಇದರ ಅನುಷ್ಠಾನ ಮತ್ತು ನಿರ್ವಹಣೆಗೆ ಸಂಬಂಧಿಸಿದ ನಿಯಮಾವಳಿಗಳ ಕರಡನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಹೊಸ ನಿಯಮಗಳು ಮತ್ತು ರಾಜ್ಯ ಸರ್ಕಾರಗಳ ಮೇಲಾಗುವ ಆರ್ಥಿಕ ಹಾಗೂ ಆಡಳಿತಾತ್ಮಕ ಪರಿಣಾಮಗಳನ್ನು ನೋಡುವುದಾದರೆ, ಆರ್ಥಿಕ ನಿಧಿಯ ಪ್ರಮುಖ ಹೊರೆಯನ್ನು ರಾಜ್ಯ ಸರ್ಕಾರಗಳ ಹೆಗಲಿಗೆ ವರ್ಗಾಯಿಸುತ್ತದೆ ಮತ್ತು ಸಂಪನ್ಮೂಲ ಹಂಚಿಕೆ ಪ್ರಕ್ರಿಯೆಯನ್ನು ಮೇಲಿನಿಂದ ಕೆಳಮಟ್ಟದ ಪ್ರಕ್ರಿಯೆಯನ್ನಾಗಿ ಪರಿವರ್ತಿಸುತ್ತದೆ.
| ವೈಶಿಷ್ಟ್ಯ | ಮನರೇಗಾ (2005) | ಬಿ-ಜಿ ರಾಮ್ ಜಿ ಕಾಯ್ದೆ (2025) |
| ಖಾತರಿ ದಿನಗಳು | ಪ್ರತಿ ಗ್ರಾಮೀಣ ಕುಟುಂಬಕ್ಕೆ 100 ದಿನಗಳು | ಪ್ರತಿ ಗ್ರಾಮೀಣ ಕುಟುಂಬಕ್ಕೆ 125 ದಿನಗಳು |
| ಧನಸಹಾಯ ಮಾದರಿ | ಕೇಂದ್ರ ವಲಯದ ಯೋಜನೆ (ಅಕುಶಲ ಕಾರ್ಮಿಕರ 100% ಕೂಲಿಯನ್ನು ಕೇಂದ್ರವೇ ನೀಡುತ್ತಿತ್ತು) | ಕೇಂದ್ರ ಪ್ರಾಯೋಜಿತ ಯೋಜನೆ (ಕೇಂದ್ರ ಮತ್ತು ರಾಜ್ಯಗಳ ನಡುವೆ ವೆಚ್ಚ ಹಂಚಿಕೆ) |
| ಬಜೆಟ್ ವ್ಯವಸ್ಥೆ | ಬೇಡಿಕೆ ಆಧಾರಿತ ‘ಕಾರ್ಮಿಕ ಬಜೆಟ್’ (ಮಿತಿ ಇಲ್ಲದ ಹಣಕಾಸು ಒದಗಣೆ) | ನಿಯಮಿತ ಹಂಚಿಕೆ (Normative Allocation) (ಕೇಂದ್ರದಿಂದ ಮುಂಚಿತವಾಗಿಯೇ ಬಜೆಟ್ ಮಿತಿ ನಿಗದಿ) |
| ಕೃಷಿ ಹಂಗಾಮು | ವರ್ಷಪೂರ್ತಿ ನಿರಂತರ ಕೆಲಸ | ವರ್ಷದಲ್ಲಿ 60 ದಿನಗಳ ಕಾಲ ಕಡ್ಡಾಯ ರಜೆ/ವಿರಾಮ |
| ಆಸ್ತಿ ಸೃಜನೆ | ಗ್ರಾಮ ಸಭೆಗಳಿಂದ ಸ್ಥಳೀಯವಾಗಿ ಗುರುತಿಸಲ್ಪಟ್ಟ ಕೆಲಸಗಳು | ರಾಷ್ಟ್ರೀಯ ಮೂಲಸೌಕರ್ಯ ವ್ಯವಸ್ಥೆಯೊಂದಿಗೆ (National Infrastructure Stack) ಜೋಡಣೆ |
- ಹೊಸ ನಿಯಮಗಳ 60:40 ವೆಚ್ಚ ಹಂಚಿಕೆ ಸೂತ್ರ
ಮನರೇಗಾ ಯೋಜನೆಯಡಿ ಅಕುಶಲ ಕಾರ್ಮಿಕರ ಸಂಪೂರ್ಣ ಶೇ.100ರಷ್ಟು ಕೂಲಿಯನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಆದರೆ ಹೊಸ ಕಾಯ್ದೆ ಪ್ರಕಾರ, ಇದನ್ನು ‘ಕೇಂದ್ರ ಪ್ರಾಯೋಜಿತ ಯೋಜನೆ’ (CSS) ಎಂದು ವರ್ಗೀಕರಿಸಲಾಗಿದ್ದು, ರಾಜ್ಯಗಳು ದೊಡ್ಡ ಮೊತ್ತದ ಹಣವನ್ನು ಭರಿಸಬೇಕಾಗುತ್ತದೆ. ಅಂದರೆ ಸಾಮಾನ್ಯ ವರ್ಗದ ರಾಜ್ಯಗಳಿಗೆ ಶೇ.60ರಷ್ಟು ಹಣವನ್ನು ಕೇಂದ್ರ ನೀಡಿದರೆ, ಶೇ.40ರಷ್ಟು ಹಣವನ್ನು ಆಯಾ ರಾಜ್ಯ ಸರ್ಕಾರಗಳು ಭರಿಸಬೇಕು.
ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳು ಹಾಗೂ ಶಾಸನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದ್ದು, ಅಲ್ಲಿ ಕೇಂದ್ರ ಸರ್ಕಾರವೇ ಶೇ.90ರಷ್ಟು ವೆಚ್ಚವನ್ನು ಭರಿಸಲಿದೆ. ಇನ್ನು ಶಾಸನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣ ಆರ್ಥಿಕ ಹೊರೆಯನ್ನು ಕೇಂದ್ರ ಸರ್ಕಾರವೇ ಹೊರುವುದಾಗಿ ಹೇಳಿದೆ.
- ‘ನಿಯಮಿತ ಹಂಚಿಕೆ’ (Normative Allocation) ವ್ಯವಸ್ಥೆ
ಹಿಂದೆ ಗ್ರಾಮೀಣ ಭಾಗದಲ್ಲಿ ಉದ್ಯೋಗದ ಬೇಡಿಕೆ ಹೆಚ್ಚಾದಾಗ ಕೇಂದ್ರ ಸರ್ಕಾರವು ಹೆಚ್ಚುವರಿ ಹಣವನ್ನು ಕಾನೂನುಬದ್ಧವಾಗಿ ಬಿಡುಗಡೆ ಮಾಡಲೇಬೇಕಾಗಿತ್ತು. ಆದರೆ ಈಗ ಆ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ. ಇನ್ನು ಮುಂದೆ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಹಣಕಾಸು ಆಯೋಗದ ಮಾನದಂಡಗಳ ಆಧಾರದ ಮೇಲೆ ಹಣಕಾಸು ವರ್ಷದ ಆರಂಭದಲ್ಲೇ ಪ್ರತಿ ರಾಜ್ಯಕ್ಕೆ ಇಷ್ಟೇ ಹಣ ಎಂದು ಮುಂಚಿತವಾಗಿ ನಿಗದಿಪಡಿಸುತ್ತದೆ.
ಬಜೆಟ್ ಮಿತಿ ಮೀರಿದರೆ ರಾಜ್ಯಗಳಿಗೇ ಹೊಣೆ: ಒಂದು ವೇಳೆ ಯಾವುದಾದರೂ ರಾಜ್ಯದಲ್ಲಿ ಬರಗಾಲ ಅಥವಾ ಬೆಳೆ ನಷ್ಟದಂತಹ ತುರ್ತು ಪರಿಸ್ಥಿತಿ ಉಂಟಾಗಿ, ಕೇಂದ್ರ ನಿಗದಿಪಡಿಸಿದ ಬಜೆಟ್ಗಿಂತ ಹೆಚ್ಚಿನ ಉದ್ಯೋಗ ಒದಗಿಸಬೇಕಾಗಿ ಬಂದರೆ, ಆ ಹೆಚ್ಚುವರಿ ವೆಚ್ಚದ ಶೇ.100ರಷ್ಟು ಅನುದಾನವನ್ನು ರಾಜ್ಯ ಸರ್ಕಾರವೇ ತನ್ನ ಸ್ವಂತ ನಿಧಿಯಿಂದ ಭರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ತನ್ನ ಕಾನೂನುಬದ್ಧ ಜವಾಬ್ದಾರಿಯಿಂದ ನಯವಾಗಿ ನುಸುಳಿಕೊಂಡಿದೆ.
- ಕೃಷಿ ಹಂಗಾಮಿನ ಕಡ್ಡಾಯ ವಿರಾಮ (60 ದಿನಗಳು) :
ಮನರೇಗಾ ಕಾಯ್ದೆಯಲ್ಲಿ ವರ್ಷಪೂರ್ತಿ ಕೆಲಸಗಳನ್ನು ನೀಡಬೇಕಾಗಿತ್ತು. ಕಾರ್ಮಿಕರು ಅರ್ಜಿ ಸಲ್ಲಿಸಿದ ಎರಡುವಾರಗಳ ಒಳಗಾಗಿ ಜಾಬ್ ಕಾರ್ಡ್ಗಳನ್ನು ನೀಡಿ ಉದ್ಯೋಗ ಒದಗಿಸಬೇಕಾಗಿತ್ತು. ಆದರೆ ವಿಬಿ ಜಿ ರಾಮ್ ಜಿ ಕಾಯ್ದೆಯಲ್ಲಿ ಬೆಳೆ ಬಿತ್ತನೆ ಮತ್ತು ಕಟಾವಿನ ಪ್ರಮುಖ ಹಂಗಾಮಿನಲ್ಲಿ ಯೋಜನೆಯ ಎಲ್ಲ ಸಾರ್ವಜನಿಕ ಕಾಮಗಾರಿಗಳನ್ನು ವರ್ಷದಲ್ಲಿ ಕಡ್ಡಾಯವಾಗಿ 60 ದಿನಗಳ ಕಾಲ ಸ್ಥಗಿತಗೊಳಿಸಬೇಕು ಎಂದು ತಿಳಿಸಿದೆ. ʼಖಾಸಗಿ ಕೃಷಿ ಕೆಲಸಗಳಿಗೆ ಕಾರ್ಮಿಕರ ಕೊರತೆಯಾಗದಂತೆ ತಡೆಯಲು ಮತ್ತು ರೈತರಿಗೆ ನೆರವಾಗಲು ಈ ನಿಯಮವನ್ನು ತರಲಾಗಿದೆʼ ಎಂದಿರುವ ಸರ್ಕಾರ ಕಾರ್ಮಿಕರಿಗೆ ಕೆಲಸವಿಲ್ಲದೆ, ಉಳ್ಳವರ ಬಳಿ ಹೋಗಿ ಯಥಾ ಪ್ರಕಾರ ಕೈಚಾಚಿ ನಿಲ್ಲುವಂಥ ಅನಿವಾರ್ಯತೆಯನ್ನು ತಂದೊಡ್ಡಿದೆ. ಅಲ್ಲದೆ, ಜಮೀನುದಾರರಿಗೆ ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡುವ ಹುನ್ನಾರ…. ಮತ್ತೊಮ್ಮೆ ಸಾಬೀತಾಗಿದೆ.
- ರಾಜ್ಯ ಸರ್ಕಾರಗಳ ಮೇಲಾಗುವ ಪ್ರಮುಖ ಪರಿಣಾಮಗಳು
ಕೂಲಿ ವೆಚ್ಚದಲ್ಲಿ ಶೇ.40% ಭಾಗವನ್ನು ರಾಜ್ಯಗಳೇ ಭರಿಸಬೇಕಿರುವುದರಿಂದ ಬಡ ರಾಜ್ಯಗಳ ಮೇಲೆ ತೀವ್ರ ಆರ್ಥಿಕ ಹೊರೆಯಾಗಲಿದ್ದು, ರಾಜ್ಯಗಳ ಖಜಾನೆಗೆ ಭಾರಿ ಹೊಡೆತ ಬೀಳುತ್ತದೆ. ಬಿಹಾರ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಒಡಿಶಾದಂತಹ ಹೆಚ್ಚಿನ ಗ್ರಾಮೀಣ ಜನಸಂಖ್ಯೆ ಹೊಂದಿರುವ ಬಡ ರಾಜ್ಯಗಳು ತಮ್ಮ ಬಜೆಟ್ನಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಉದ್ಯೋಗದ ಅಗತ್ಯತೆ ಹೆಚ್ಚಿರುವ ರಾಜ್ಯಗಳಲ್ಲೇ ಸ್ವಂತ ಆದಾಯದ ಮೂಲಗಳು ಕಡಿಮೆ ಇರುವುದರಿಂದ ಈ ನಿಯಮ ದೊಡ್ಡ ಸವಾಲಾಗಿದೆ.
- ಕೇಂದ್ರೀಕರಣ ಮತ್ತು ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ
ಹಣಕಾಸು ಹಂಚಿಕೆಯ ಸಂಪೂರ್ಣ ನಿಯಂತ್ರಣ ಕೇಂದ್ರ ಸರ್ಕಾರದ ಬಳಿ ಇರುವುದರಿಂದ ರಾಜ್ಯಗಳು ತಮ್ಮ ಇಚ್ಛೆಯಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತವೆ. ಬಯೋಮೆಟ್ರಿಕ್ ತಂತ್ರಜ್ಞಾನದ ಬಳಕೆ, ಇ-ಕೆವೈಸಿ(e-KYC) ಪ್ರಕ್ರಿಯೆ ಮತ್ತು ಸಾಮಾಜಿಕ ತಪಾಸಣೆಗಳನ್ನು(Social Audit) ನಿಗದಿತ ಸಮಯದಲ್ಲಿ ಮುಗಿಸದಿದ್ದರೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುವ ಅನುದಾನವನ್ನು ಕಡಿತಗೊಳಿಸುವ ಅಥವಾ ತಡೆಹಿಡಿಯುವ ಅಧಿಕಾರವನ್ನು ಹೊಂದಿದೆ.
- 125 ದಿನಗಳ ಕೆಲಸ ನಿರ್ವಹಣೆಯ ಸವಾಲು
ಕಾನೂನುಬದ್ಧ ಉದ್ಯೋಗದ ದಿನಗಳನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆಯಾದರೂ, ಕೃಷಿ ಕೆಲಸಗಳು ಇರುವ 60 ದಿನಗಳು ಕಾಮಗಾರಿಯನ್ನು ನೀಡದಿರುವುದರಿಂದ ಇಡೀ ವರ್ಷದಲ್ಲಿ ಕೆಲಸ ನೀಡಲು ಲಭ್ಯವಿರುವ ದಿನಗಳ ಸಂಖ್ಯೆ ಕಡಿಮೆಯಾಗುತ್ತದೆ. ಕಡಿಮೆ ಅವಧಿಯಲ್ಲಿ 125 ದಿನಗಳ ಕೆಲಸವನ್ನು ನಿರ್ವಹಿಸುವುದು ಆಡಳಿತ ಯಂತ್ರಕ್ಕೆ ದೊಡ್ಡ ಸವಾಲಾಗಲಿದೆ. ಒಂದು ವೇಳೆ ಉದ್ಯೋಗ ಕೇಳಿದ 15 ದಿನಗಳಲ್ಲಿ ಕೆಲಸ ನೀಡಲು ವಿಫಲವಾದರೆ, ರಾಜ್ಯ ಸರ್ಕಾರಗಳೇ ತಮ್ಮ ಸ್ವಂತ ಹಣದಿಂದ ಉದ್ಯೋಗರಹಿತ ಭತ್ಯೆಯನ್ನು ನೀಡಬೇಕಾಗಿದೆ.
- ತಾಂತ್ರಿಕ ಮತ್ತು ಆಡಳಿತಾತ್ಮಕ ಬದಲಾವಣೆಗಳು
ಈಗಿರುವ ಎಲ್ಲ ಮನರೇಗಾ ಜಾಬ್ ಕಾರ್ಡ್ಗಳನ್ನು ಇ-ಕೆವೈಸಿ ಪರಿಶೀಲನೆಯ ನಂತರ ತಾತ್ಕಾಲಿಕವಾಗಿ ಬಳಸಬಹುದು. ಆದರೆ ಮುಂದೆ ರಾಜ್ಯ ಸರ್ಕಾರಗಳು ಹೊಸದಾಗಿ ‘ಗ್ರಾಮೀಣ ರೋಜಗಾರ್ ಖಾತರಿ ಕಾರ್ಡ್’ಗಳನ್ನು ವಿತರಿಸಬೇಕಾಗುತ್ತದೆ. ಜತೆಗೆ, ಕಾಮಗಾರಿಗಳನ್ನು ನಡೆಸುವುದರ ಕುರಿತು AI(ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಮತ್ತು ಜಿಪಿಎಸ್(GPS) ಮೂಲಕ ನಿಗಾ ಇಡಲು ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಗಳನ್ನು ರಚಿಸುವುದನ್ನು ಕಡ್ಡಾಯವಾಗಿದೆ.
- ಹೊಸ ನಿಯಮಗಳಿಂದ ರಾಜ್ಯಗಳ ಪಾಲಿಗೆ ಏನಿದೆ?
ಪ್ರಸಕ್ತ ಹಣಕಾಸು ವರ್ಷಕ್ಕೆ(2026-27) ಕೇಂದ್ರ ಸರ್ಕಾರವು ‘ವಿಬಿ-ಜಿ ರಾಮ್ ಜಿ’ ಯೋಜನೆಗಾಗಿ ₹95,692.31 ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ರಾಜ್ಯ ಸರ್ಕಾರಗಳ ಮಟ್ಟಿಗೆ ಹೇಳುವುದಾದರೆ, ನಿಧಿ ಹಂಚಿಕೆ ಮತ್ತು ಹೆಚ್ಚುವರಿ ವೆಚ್ಚಗಳಿಗೆ ಸಂಬಂಧಿಸಿದ ನಿಯಮಗಳು ಅತ್ಯಂತ ನಿರ್ಣಾಯಕವಾಗಿವೆ. ʼನಿಯಮಬದ್ಧ ಹಂಚಿಕೆಗಾಗಿ ವಸ್ತುನಿಷ್ಠ ಮಾನದಂಡಗಳ ಕರಡು ನಿಯಮಗಳು, 2026’ರ ಪ್ರಕಾರ, “ಕೇಂದ್ರ ಸರ್ಕಾರವು ಪ್ರತಿ ಹಣಕಾಸು ವರ್ಷದಲ್ಲೂ ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ಪ್ರತಿ ರಾಜ್ಯಕ್ಕೂ ನೀಡಬೇಕಾದ ನಿಯಮಬದ್ಧ ನಿಧಿ ಹಂಚಿಕೆಯನ್ನು ನಿರ್ಧರಿಸುತ್ತದೆ” ನಿಯಮಗಳ ಅನ್ವಯ, ರಾಜ್ಯಗಳಿಗೆ ಈ ನಿಯಮಬದ್ಧ ಹಂಚಿಕೆಯನ್ನು ನಿರ್ಣಯಿಸಲು ಕೇಂದ್ರ ಸರ್ಕಾರವು 16ನೇ ಹಣಕಾಸು ಆಯೋಗದ ಸಮತಲ ವಿಕೇಂದ್ರೀಕರಣದ ಶಿಫಾರಸುಗಳನ್ನು ಬಳಸಿಕೊಳ್ಳಲಿದೆ.
ಈ 16ನೇ ಹಣಕಾಸು ಆಯೋಗದ ಸೂತ್ರವನ್ನು ಬಳಸುವುದರಿಂದ, ಕೆಲವು ರಾಜ್ಯಗಳು 2025–26ರಲ್ಲಿ ಹಳೆಯ ನರೇಗಾ ಯೋಜನೆಯಡಿ ಪಡೆದಿದ್ದಕ್ಕಿಂತ ಕಡಿಮೆ ಅನುದಾನವನ್ನು ಈ ಹೊಸ ‘ವಿಬಿ-ಜಿ ರಾಮ್ ಜಿ’ ಯೋಜನೆಯಡಿ ಪಡೆಯುವ ಸಾಧ್ಯತೆಯಿದೆ. ಇಂತಹ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ಸೇರಿವೆ. ಮತ್ತೊಂದೆಡೆ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಅಸ್ಸಾಂ, ಹರಿಯಾಣ, ಪಂಜಾಬ್ ಮತ್ತು ಬಿಹಾರ ರಾಜ್ಯಗಳ ಪಾಲಿನ ಅನುದಾನ ಹೆಚ್ಚಾಗುವ ಸಾಧ್ಯತೆಯಿದೆ.
ಇವೆಲ್ಲದರ ನಡುವೆ, ಕರಡು ನಿಯಮಗಳಲ್ಲಿನ ಮತ್ತೊಂದು ಪ್ರಮುಖ ಅಂಶವೆಂದರೆ ಕೆಲವು ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ರಾಜ್ಯಗಳ ನಿಯಮಬದ್ಧ ಹಂಚಿಕೆಯ ಒಂದು ಭಾಗವನ್ನು ಕೇಂದ್ರವು ತನ್ನ ಬಳಿಯೇ ಕಾಯ್ದಿರಿಸಿಕೊಳ್ಳಬಹುದು. ಕಾರ್ಮಿಕರಿಗೆ ಸಕಾಲದಲ್ಲಿ ಕೂಲಿ ಪಾವತಿಸುವುದು, ಸಾಮಾಜಿಕ ತನಿಖೆಯ ಅಗತ್ಯಗಳನ್ನು ಪೂರೈಸುವುದು, ಒಂದು ಹಣಕಾಸು ವರ್ಷದಲ್ಲಿ ಪೂರ್ಣಗೊಂಡ ಕೆಲಸಗಳ ಶೇಕಡಾವಾರು ಪ್ರಮಾಣ ಮತ್ತು ಕೇಂದ್ರ ಸರ್ಕಾರವು ನಿಗದಿಪಡಿಸಬಹುದಾದ ಇತರ ಕಾರ್ಯಕ್ಷಮತೆ ಆಧಾರಿತ ಸೂಚಕಗಳನ್ನು ಗಮನಿಸಿ ಈ ಕಾಯ್ದಿರಿಸಿದ ನಿಧಿಯನ್ನು ರಾಜ್ಯಗಳ ನಡುವೆ ಮರುಹಂಚಿಕೆ ಮಾಡಲಾಗುತ್ತದೆ. ಆದರೆ, ನಿಯಮಬದ್ಧ ಹಂಚಿಕೆಯಲ್ಲಿ ಎಷ್ಟು ಪ್ರಮಾಣದ ಹಣವನ್ನು ಹೀಗೆ ಕಾಯ್ದಿರಿಸಬಹುದು ಎಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ. ಈ ನಿಬಂಧನೆಯು ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರಲಿದೆ.
ಇದನ್ನೂ ಓದಿದ್ದೀರಾ? ಸಮಸ್ಯೆಗೆ ಸ್ಪಂದಿಸುವ ಸ್ಥಳೀಯ ಸರ್ಕಾರವಿಲ್ಲ: ಮೂಲಸೌಕರ್ಯ ಮರೀಚಿಕೆ, ಸಿಗದ ಪಂಚಾಯತ್ ಯೋಜನೆ

ರಾಜ್ಯ ಮಹಿಳಾ ಒಕ್ಕೂಟದ ಮುಖಂಡರಾದ ಸ್ವರ್ಣ ಭಟ್ ಅವರು ಈ ದಿನ.ಕಾಮ್ನೊಂದಿಗೆ ಮಾತನಾಡಿ, “ವಿಬಿ ಜಿ ರಾಮ್ ಜಿ ಜೂನ್ 1ರಿಂದ ಜಾರಿಯಾಗಿದೆ. ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಆದೇಶ ಪ್ರತಿಯನ್ನು ಹೊರಡಿಸಲಾಗಿದೆ. ವಿಬಿ-ಜಿ ರಾಮ್ ಜಿ ಯೋಜನೆಯು ಜುಲೈ 01 ರಿಂದ 2026-27 ನೇ ಸಾಲಿನ ಅನುಷ್ಠಾನಗೊಳಿಸುವ ಕುರಿತು THE VIKSIT BHARAT- GUARANTEE FOR ROZGAR AND AJEEVIKA MISSION (GRAMIN): VB-G RAM G BILL, 2025, chapter II clauses 6. (1) ಕಾಯ್ದೆಯಲ್ಲಿ ರಚಿಸಲಾದ ನಿಯಮಗಳಂತೆ ಮತ್ತು ಕೃಷಿ ಕಾರ್ಮಿಕರ ಸಾಕಷ್ಟು ಲಭ್ಯತೆಯನ್ನು ಸುಗಮಗೊಳಿಸಲು, sub section (2) ರ ಅಡಿಯಲ್ಲಿ ಸೂಚಿಸಬಹುದಾದಂತಹ ಕೃಷಿ ಚಟುವಟಿಕೆಗಳ ಹಂಗಾಮಿನ ಉತ್ತುಂಗದ ಸಮಯದಲ್ಲಿ, ವಿಬಿ-ಜಿ ರಾಮ್ ಜಿ ಯೋಜನೆಯಡಿಯಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಬಾರದು ಅಥವಾ ಕಾರ್ಯಗತಗೊಳಿಸಬಾರದು. ರಾಜ್ಯ ಸರ್ಕಾರಗಳು ಒಂದು ಹಣಕಾಸು ವರ್ಷದಲ್ಲಿ ಬಿತ್ತನೆ ಮತ್ತು ಕೊಯ್ಲಿನ ಗರಿಷ್ಠ ಕೃಷಿ ಚಟುವಟಿಕೆಗಳ ಹಂಗಾಮಿನ ಉತ್ತುಂಗದ ಸಮಯ ಒಳಗೊಂಡಂತೆ 60 ದಿನಗಳ ಅವಧಿಯನ್ನು ಮುಂಚಿತವಾಗಿ ತಿಳಿಸಬೇಕು ಹಾಗೂ ಈ ಕಾಯ್ದೆಯಡಿಯಲ್ಲಿ ಕೆಲಸಗಳನ್ನು ಕೈಗೊಳ್ಳಬಾರದು. ರಾಜ್ಯ ಸರ್ಕಾರವು ಜಿಲ್ಲೆಗಳು, ಬ್ಲಾಕ್ಗಳು ಅಥವಾ ಗ್ರಾಮ ಪಂಚಾಯತ್ಗಳು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಗೆ, ಕೃಷಿ-ಹವಾಮಾನ ವಲಯಗಳು, ಸ್ಥಳೀಯ ಕೃಷಿ ಚಟುವಟಿಕೆಗಳ ಮಾದರಿಗಳು ಅಥವಾ ಇತರೆ ಸಂಬಂಧಿತ ಅಂಶಗಳ ಆಧಾರದ ಮೇಲೆ ವಿಭಿನ್ನ ಅಧಿಸೂಚನೆಗಳನ್ನು ಹೊರಡಿಸಬಹುದು ಮತ್ತು ಅಂತಹ ಪ್ರತಿಯೊಂದು ಅಧಿಸೂಚನೆಯು ಈ ಕಾಯ್ದೆಯ ಉದ್ದೇಶಗಳಿಗಾಗಿ ಬದ್ಧ ಪರಿಣಾಮವನ್ನು ಹೊಂದಿರುತ್ತದೆ ಎಂದು ಸೂಚಿಸಲಾಗಿದೆ” ಎಂದರು.
ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಕಾಲಕ್ಕೆ ಬಿತ್ತನೆ, ಕಟಾವು ಆರಂಭವಾಗುತ್ತದೆ. ಒಂದು ತಿಂಗಳ ಪರಿಧಿಯೊಳಗೆ ಬಿತ್ತನೆ ಕಾರ್ಯ ಮುಗಿಯುತ್ತದೆ. ಇನ್ನೊಂದು ತಿಂಗಳು ಕೆಲಸ ಇರುವುದಿಲ್ಲ. ಅಲ್ಲದೆ ಮನರೇಗಾ ಇದ್ದ ಸಂದರ್ಭದಲ್ಲಿ ಕಾರ್ಮಿಕರು ಸ್ವಾಭಿಮಾನದಿಂದ ಬದುಕುತ್ತಿದ್ದರು. ಕೃಷಿ ಜಮೀನುಗಳಲ್ಲಿ ಕೆಲಸ್ಕ್ಕೆ ಹೋಗಲು ಕಾರ್ಮಿಕರಿಗೆ ಡಿಮ್ಯಾಂಡ್ ಇರುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರ ಕಾರ್ಮಿಕರನ್ನು ಉಳ್ಳವರ ಗುಲಾಮರನ್ನಾಗಿ ಮಾಡಿದೆ. ಕಾರ್ಮಿಕರಿಗೆ ಕೃಷಿ ಚಟುವಟಿಕೆ ಸಮಯದಲ್ಲಿ ಕೆಲಸವಿಲ್ಲದ ಕಾರಣ ಜಮೀನುದಾರರ ಬಳಿ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿದೆ….
ಆರ್ಥಿಕ ಮತ್ತು ಭವಿಷ್ಯದ ದೃಷ್ಟಿಕೋನ
ಒಟ್ಟಾರೆಯಾಗಿ, ಗ್ರಾಮೀಣ ಬಡವರ ಆರ್ಥಿಕ ಸುರಕ್ಷತಾ ಕವಚವಾಗಿದ್ದ ‘ಬೇಡಿಕೆ ಆಧಾರಿತ ಹಕ್ಕು’ ಈಗ ವಿಬಿ ಜಿ ರಾಮ್ ಜಿಯಲ್ಲಿ ಬಜೆಟ್ ಮಿತಿಗೊಳಗಾದ ‘ಸೀಮಿತ ಯೋಜನೆ’ಯಾಗಿ ಬದಲಾಗಿದೆ. ಈಗಾಗಲೇ ಹಣಕಾಸಿನ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರಗಳಿಗೆ, ಸ್ಥಳೀಯ ಆರ್ಥಿಕ ಬಿಕ್ಕಟ್ಟುಗಳನ್ನು ನಿಭಾಯಿಸುತ್ತ ಶೇ.40ರಷ್ಟು ವೆಚ್ಚವನ್ನು ಭರಿಸುವುದು ಮುಂದಿನ ದಿನಗಳಲ್ಲಿ ಅತ್ಯಂತ ಕಠಿಣ ಆಡಳಿತಾತ್ಮಕ ಸವಾಲಾಗಲಿದೆ





