ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಜಲಾಶಯ ಭರ್ತಿಯಾಗಿ ಈಗ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ, ಇದುವರೆಗೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸದಿರುವುದು ಬಾಗಲಕೋಟೆ ಜಿಲ್ಲೆಯ ರೈತರು ಹಾಗೂ ಕೃಷ್ಣಾ ತೀರದ ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಜುಲೈನಲ್ಲಿ ಭರ್ತಿಯ ಅಂಚಿಗೆ ತಲುಪಿ, ಸೆ.12ರಂದು ತನ್ನ ಗರಿಷ್ಠ ಮಟ್ಟವಾದ 519.60 ಮೀಟರ್ ತಲುಪಿದ್ದ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ ನಿಧಾನವಾಗಿ ನೀರು ಸಂಗ್ರಹ ಇಳಿಕೆಯಾಗುತ್ತಿದೆ. ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕ್ಷೀಣಿಸಿರುವ ಪರಿಣಾಮ ಜಲಾಶಯದ ಒಳಹರಿವು ಗುರುವಾರ ಶೂನ್ಯಕ್ಕೆ ತಲುಪಿದೆ.
ಒಂದೆಡೆ ಜಲಾಶಯ ಸಂಪೂರ್ಣ ಭರ್ತಿಯಾದ ಸಂಭ್ರಮ, ಮಳೆಗಾಲ ಕ್ಷೀಣಿಸುತ್ತಿರುವ ಬೆನ್ನಲ್ಲೇ ನೀರಿನ ಮಟ್ಟ ಇಳಿಯುತ್ತಿರುವ ಆತಂಕ. ಇದರ ಮಧ್ಯೆ ಕೃಷ್ಣಾ ನದಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈ ಬಾರಿ ಬಾಗಿನ ಅರ್ಪಿಸುವುದು ಯಾವಾಗ ಎಂಬ ಪ್ರಶ್ನೆ ಕೃಷ್ಣಾ ತೀರದ ಜನರು, ರೈತರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ ಜಲಾಶಯಕ್ಕೆ ಯಾವುದೇ ಒಳಹರಿವು ಇಲ್ಲದಿದ್ದರೂ, ಮುಂಗಾರು ಹಂಗಾಮಿನ ಕಾಲುವೆಗಳಿಗೆ ನೀರು ಪೂರೈಕೆ, ಕೆರೆಗಳ ಭರ್ತಿ, ವಿವಿಧ ಬಳಕೆ ಹಾಗೂ ಆವಿಯಾಗುವಿಕೆ ಸೇರಿದಂತೆ ಪ್ರತಿದಿನ ಸುಮಾರು 14,212 ಕ್ಯೂಸೆಕ್ ನೀರು ಹೊರಹೋಗುತ್ತಿದೆ.
ಇದರ ಪರಿಣಾಮ 519.60 ಮೀಟರ್‌ನಲ್ಲಿದ್ದ ಜಲಾಶಯದ ನೀರಿನ ಮಟ್ಟ ಗುರುವಾರ 519.51 ಮೀಟರ್‌ಗೆ ಇಳಿಕೆಯಾಗಿದೆ. 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಆಲಮಟ್ಟಿಯಲ್ಲಿ ಸದ್ಯ ಸುಮಾರು 121 ಟಿಎಂಸಿ ಅಡಿ ನೀರು ಸಂಗ್ರಹವಿದೆ.
ಒಳಹರಿವು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ಜಲಾಶಯವು ಸದ್ಯದಲ್ಲೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಕಡಿಮೆಯಾಗಿದೆ. ಹೀಗಾಗಿ ಭರ್ತಿಯಾದ ಸಂದರ್ಭದಲ್ಲೇ ನಡೆಯಬೇಕಿದ್ದ ಬಾಗಿನ ಅರ್ಪಣೆ ಕುರಿತು ಕೃಷ್ಣಾ ತೀರದಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಆಲಮಟ್ಟಿ ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ಸಂಪ್ರದಾಯ 2002ರಿಂದ ನಡೆದುಕೊಂಡು ಬಂದಿದೆ. ಈ ವರ್ಷ ರಾಜ್ಯದ ಪ್ರಮುಖ ದೊಡ್ಡ ಜಲಾಶಯಗಳಲ್ಲಿ ಒಂದಾದ ಆಲಮಟ್ಟಿ ಭರ್ತಿಯಾದರೂ, ಇದುವರೆಗೆ ಬಾಗಿನ ಅರ್ಪಣೆ ನಡೆದಿಲ್ಲ ಎಂಬುದು ಬಾಗಲಕೋಟೆ ಜಿಲ್ಲೆಯ ರೈತರ ಆರೋಪವಾಗಿದೆ.
ಕಳೆದ ತಿಂಗಳು ಕೂಡಲಸಂಗಮಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೃಷ್ಣಾ–ಮಲಪ್ರಭಾ ಸಂಗಮ ಸ್ಥಳದಲ್ಲಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದರು. ಇದೇ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯದ ಬಾಗಿನ ಸಂಪ್ರದಾಯವನ್ನೂ ಈ ವರ್ಷ ಮುಂದುವರಿಸಬೇಕು ಎಂದು ರೈತ ಮುಖಂಡ ವಿಠ್ಠಲ್ ಬಿರಾದಾರ ಒತ್ತಾಯಿಸಿದ್ದಾರೆ.
ಬಾಗಿನ ಅರ್ಪಿಸುವ ಕುರಿತು ಈಗಾಗಲೇ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ತರಲಾಗಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಬಿ. ಕುಲಕರ್ಣಿ ತಿಳಿಸಿದ್ದಾರೆ. ಕೇವಲ ಬಾಗಿನ ಅರ್ಪಿಸಿ ಮುಗಿಸುವ ಬದಲು, ಯುಕೆಪಿ ಮೂರನೇ ಹಂತದ ಬಾಕಿ ಸಮಸ್ಯೆಗಳಿಗೂ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಈ ಕುರಿತು ಈದಿನ.ಕಾಮ್ ಜೊತೆಗೆ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, “ಆಲಮಟ್ಟಿ ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಕೃಷ್ಣಾ ತೀರದ ಜನರ ನಿರೀಕ್ಷೆಯೂ ದೊಡ್ಡದಿದೆ. ಬಾಗಿನ ಅರ್ಪಿಸುವ ಕಾರ್ಯಕ್ರಮ ಶೀಘ್ರವೇ ನಡೆಸಬೇಕು. ಇದೇ ಸಂದರ್ಭದಲ್ಲಿ ಯುಕೆಪಿ ಮೂರನೇ ಹಂತದ ಯೋಜನೆಗಳ ಸಮಸ್ಯೆಗಳ ಕುರಿತು ಚರ್ಚಿಸಿ, ಪರಿಹಾರದ ದಿಕ್ಕಿನಲ್ಲಿ ಸರ್ಕಾರ ಸ್ಪಷ್ಟ ಕ್ರಮ ಕೈಗೊಳ್ಳಬೇಕು” ಎಂದು ಅಖಂಡ ಕರ್ನಾಟಕ ಒತ್ತಾಯಿಸಿದ್ದಾರೆ.
ಜಲಾಶಯ ಭರ್ತಿಯಾದ ಕ್ಷಣ ಕಳೆದು, ಈಗ ನೀರಿನ ಮಟ್ಟ ನಿಧಾನವಾಗಿ ಇಳಿಯುತ್ತಿದೆ. ಹೀಗಾಗಿ ಆಲಮಟ್ಟಿಗೆ ಬಾಗಿನ ಯಾವಾಗ? ಬಾಗಿನದೊಂದಿಗೆ ಕೃಷ್ಣಾ ಕಣಿವೆಯ ಬಾಕಿ ಪ್ರಶ್ನೆಗಳಿಗೆ ಉತ್ತರ ಯಾವಾಗ? ಎಂಬುದು ಸದ್ಯ ಕೃಷ್ಣಾ ತೀರದ ಜನರ ಮುಂದಿರುವ ಪ್ರಶ್ನೆಯಾಗಿದೆ.
ರೈತ ಸಂಘಟನೆ ಮುಖಂಡ ಸಂಗಮ ಸಗರ್ ಮಾತನಾಡಿ, “ಆಲಮಟ್ಟಿಗೆ ಬಾಗಿನ ಅರ್ಪಿಸದಿರುವುದನ್ನು ಕೇವಲ ಸಂಪ್ರದಾಯದ ಲೋಪವೆಂದು ಪರಿಗಣಿಸಲು ಸಾಧ್ಯವಿಲ್ಲ. ಉತ್ತರ ಕರ್ನಾಟಕದ ರೈತರ ಜೀವನಾಡಿಯಾಗಿರುವ ಕೃಷ್ಣಾ ನೀರಿನ ವಿಚಾರದಲ್ಲಿ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯದ ಪ್ರತೀಕ ಇದಾಗಿದೆ. ರೈತರ ನೀರಿನ ಹಕ್ಕು, ಸಂಕಷ್ಟ ಮತ್ತು ಭಾವನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಈ ಬೆಳವಣಿಗೆಯ ನೈತಿಕ ಹೊಣೆಗಾರಿಕೆಯನ್ನು ವಹಿಸಿ, ಇಂತಹ ನಿರ್ಲಕ್ಷ್ಯ ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಬಾಗಲಕೋಟೆಯ ಆಲಮಟ್ಟಿ ಜಲಾಶಯ ಭರ್ತಿಯಾಗಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ, ಇದುವರೆಗೆ ಬಾಗಿನ ಅರ್ಪಿಸದಿರುವುದು ಕೃಷ್ಣಾ ತೀರದ ರೈತರಲ್ಲಿ ಅಸಮಾಧಾನ ಮೂಡಿಸಿದೆ. ಇದು ಕೇವಲ ಧಾರ್ಮಿಕ ಸಂಪ್ರದಾಯದ ಪ್ರಶ್ನೆಯಷ್ಟೇ ಅಲ್ಲದೆ, ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ, ಸರ್ಕಾರ ತಕ್ಷಣವೇ ಆಲಮಟ್ಟಿಗೆ ಬಾಗಿನ ಅರ್ಪಿಸುವ ಜೊತೆಗೆ, ಯುಕೆಪಿ 3ನೇ ಹಂತದ ಬಾಕಿ ಯೋಜನೆಗಳನ್ನು ಶೀಘ್ರ ಈಡೇರಿಸಿ ರೈತರ ಹಿತ ಕಾಯಲು ಕ್ರಮ ಕೈಗೊಳ್ಳಬೇಕಿದೆ.




