ಭಟ್ಕಳದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಮಸೀದಿಯ ಕಿಟಕಿ ಗಾಜನ್ನು ಕಲ್ಲಿನಿಂದ ಒಡೆದಿರುವ ಹಾಗೂ ಮೆರವಣಿಗೆಯತ್ತ ಗೊಜ್ಜು ತೂರಿರುವ ಆರೋಪಕ್ಕೆ ಸಂಬಂಧಿಸಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಸೆ.16ರಂದು ರಾತ್ರಿ ಸುಮಾರು 9.45ರ ವೇಳೆಗೆ ತಲಾಂದ ಸಾರ್ವಜನಿಕ ಗಣಪತಿ ವಿಸರ್ಜನೆ ಮೆರವಣಿಗೆ ತಲಾಂದ ಕಡೆಯಿಂದ ಗುಳ್ಳೆ ರೈಲ್ವೆ ಬ್ರಿಡ್ಜ್ ದಾಟಿ ರೈಲ್ವೆ ಸ್ಟೇಷನ್ ರಸ್ತೆ ಮೂಲಕ ಸಾಗುತ್ತಿದ್ದ ವೇಳೆ, ಗುಳ್ಳೆ ರೈಲ್ವೆ ಸ್ಟೇಷನ್ ರಸ್ತೆಯ ಪಕ್ಕದಲ್ಲಿರುವ ಇಸ್ಮಾಯಿಲ್ ಸುನ್ನಿ ಜಾಮೀಯಾ ಮಸೀದಿಯ ಹಿಂಭಾಗದ ಕಿಟಕಿ ಗಾಜನ್ನು ಯಾರೋ ಕಿಡಿಗೇಡಿಗಳು ಕಲ್ಲಿನಿಂದ ಒಡೆದಿದ್ದಾರೆ ಎಂದು ಮಸೀದಿ ಕಾರ್ಯದರ್ಶಿ ದೂರು ನೀಡಿದ್ದಾರೆ. ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.166/2026ರಂತೆ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಕುಮಟಾ | ನಿಲ್ಲಿಸಿದ್ದ ಲಾರಿ ಏಕಾಏಕಿ ಚಲಿಸಿ ಏಳನೀರು ವ್ಯಾಪಾರಿ ಸಾವು: ಮತ್ತೊಬ್ಬರಿಗೆ ಗಾಯ
ಇದೇ ವೇಳೆ, ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜು ತಂದೆ ಸಂಕಪ್ಪ ನಾಯ್ಕ ಅವರು ನೀಡಿದ ದೂರಿನಂತೆ ಮತ್ತೊಂದು ಪ್ರಕರಣ ದಾಖಲಾಗಿದೆ. ಸೆ.16ರಂದು ರಾತ್ರಿ ಸುಮಾರು 8.20ಕ್ಕೆ ತಲಾಂದ ಗಣೇಶೋತ್ಸವ ಮಂಟಪದಿಂದ ಗಣೇಶ ವಿಗ್ರಹವನ್ನು ವಿಸರ್ಜನೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತಿತ್ತು. ರಾತ್ರಿ ಸುಮಾರು 9.30ರ ವೇಳೆಗೆ ಮೆರವಣಿಗೆ ಗುಳ್ಳೆ ರೈಲ್ವೆ ಹಳಿ ಮೇಲಿರುವ ಬ್ರಿಡ್ಜ್ ದಾಟುತ್ತಿದ್ದ ಸಂದರ್ಭದಲ್ಲಿ ರಾಮಚಂದ್ರ ನಾಯ್ಕ ಅವರಿಗೆ ಸೇರಿದ ಅಲ್ಡಿಂಗ್ ಮೇಲಿನಿಂದ ಯಾರೋ ಕಿಡಿಗೇಡಿಗಳು ಮೆರವಣಿಗೆಯತ್ತ ಗೊಜ್ಜು ತೂರಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಗುನ್ನಾ ನಂ.167/2026ರಂತೆ ಪ್ರಕರಣ ದಾಖಲಾಗಿದೆ.
ಪ್ರಕರಣಗಳ ಆರೋಪಿತರ ಪತ್ತೆಗಾಗಿ ಭಟ್ಕಳ ಎಎಸ್‌ಪಿ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರನ್ನು ಒಳಗೊಂಡ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಹಾಗೂ ಆರೋಪಿತರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಪರಿಸ್ಥಿತಿ ಶಾಂತಿಯುತವಾಗಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಬಳಿಕ ಪೊಲೀಸ್ ಠಾಣೆಯಲ್ಲಿ ಸೇರಿದ್ದ ಜನರಿಗೆ ಪ್ರಕರಣ ದಾಖಲಿಸಿರುವ ಕುರಿತು ಮಾಹಿತಿ ನೀಡಲಾಗಿದ್ದು, ಅವರು ಶಾಂತಿಯುತವಾಗಿ ಠಾಣೆಯಿಂದ ತೆರಳಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.




