ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.
ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್, ಹರಿತ ವಸ್ತುವಿನಿಂದ ಪೈಲಟ್ ಮೇಲೆ ದಾಳಿ ಮಾಡಿ ವಿಮಾನದ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳಲು ವಿಫಲ ಪ್ರಯತ್ನ ನಡೆಸಿರುವ ವರದಿಯಾಗಿದೆ.
ಕಾಕ್‌ಪಿಟ್ ಎಂಬುದು ವಿಮಾನದ ಮುಂದಿನ ತುದಿಯ ಭಾಗವಾಗಿದ್ದು, ಇಲ್ಲಿಂದ ಪೈಲಟ್‌ಗಳು ವಿಮಾನದ ಹಾರಾಟವನ್ನು ನಿಯಂತ್ರಿಸುತ್ತಾರೆ. ದೊಡ್ಡ ಪ್ರಯಾಣಿಕ ವಿಮಾನಗಳ ಕಾಕ್‌ಪಿಟ್‌ನಲ್ಲಿ ಸಾಮಾನ್ಯವಾಗಿ ಎರಡು ಪೈಲಟ್‌ಗಳ ಆಸನಗಳಿರುತ್ತವೆ: ಒಂದು ಪೈಲಟ್‌ಗೆ ಮತ್ತೊಂದು ಸಹಪೈಲಟ್‌ಗೆ. ವಿಮಾನವನ್ನು ತಿರುಗಿಸಲು, ಮೇಲಕ್ಕೆತ್ತಲು, ಕೆಳಕ್ಕೆ ಇಳಿಸಲು ಮತ್ತು ಎಂಜಿನ್‌ನ ಶಕ್ತಿಯನ್ನು ನಿಯಂತ್ರಿಸಲು ಇಲ್ಲಿ ಚಾಲನ ಸಾಧನಗಳಿರುತ್ತವೆ. ವಿಮಾನದ ಎತ್ತರ, ವೇಗ, ದಿಕ್ಕು, ಎಂಜಿನ್‌ನ ಸ್ಥಿತಿ, ವಿಮಾನದ ಸ್ಥಳ, ಹವಾಮಾನ/ರಡಾರ್ ಮಾಹಿತಿ ಮತ್ತು ಎಚ್ಚರಿಕೆ ಸಂದೇಶಗಳನ್ನು ತೋರಿಸುವ ಡಿಜಿಟಲ್ ಪರದೆಗಳು ಮತ್ತು ಚಾಲನೆ ಸಾಧನಗಳಿರುತ್ತವೆ. ರೇಡಿಯೋ ಸಂಪರ್ಕ ವ್ಯವಸ್ಥೆಗಳ ಮೂಲಕ ಪೈಲಟ್‌ಗಳು ಏರ್ ಟ್ರಾಫಿಕ್ ಕಂಟ್ರೋಲ್, ಏರ್‌ಲೈನ್‌ನ ಕಾರ್ಯಾಚರಣೆ ವಿಭಾಗ ಮತ್ತು ಕ್ಯಾಬಿನ್ ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿರುತ್ತಾರೆ.
ನ್ಯಾವಿಗೇಷನ್ ಮತ್ತು ಆಟೊಮೇಷನ್ ವ್ಯವಸ್ಥೆಗಳು: ಇವುಗಳಲ್ಲಿ ಫ್ಲೈಟ್ ಮ್ಯಾನೇಜ್‌ಮೆಂಟ್ ಸಿಸ್ಟಂ ಮತ್ತು ಆಟೋಪೈಲಟ್ ಕಂಟ್ರೋಲ್ ಸೇರಿವೆ. ಚೆಕ್‌ಲಿಸ್ಟ್‌ಗಳು, ತುರ್ತು ನಿಯಂತ್ರಣ ಮತ್ತು ಸುರಕ್ಷತಾ ಸಾಧನಗಳಿರುತ್ತವೆ. ಇಬ್ಬರು ಪೈಲಟ್‌ಗಳ ಆಸನಗಳ ಹಿಂದೆ ಸಾಮಾನ್ಯವಾಗಿ ಹೆಚ್ಚುವರಿ ನಿರೀಕ್ಷಕ ಅಥವಾ ಜಂಪ್ ಸೀಟ್ ಕೂಡ ಕಾಣಬರುತ್ತದೆ.
ಕಾಕ್‌ಪಿಟ್ ಮತ್ತು ಪ್ರಯಾಣಿಕರ ಕ್ಯಾಬಿನ್ ನಡುವೆ, ಸದಾ ಲಾಕ್ ಮಾಡಿರುವ ಭದ್ರ ಬಾಗಿಲು ಇರುತ್ತದೆ. ಬಲವಂತ ಪ್ರವೇಶವನ್ನು ತಡೆಯಲು ಮತ್ತು ಸಣ್ಣ ಶಸ್ತ್ರಾಸ್ತ್ರಗಳ ಗುಂಡುಗಳು ಮತ್ತು ಗ್ರೆನೇಡ್‌ಗಳ ಚೂರುಗಳಿಂದಲೂ ರಕ್ಷಣೆ ನೀಡುವಂತೆ ಈ ಬಾಗಿಲುಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಹೀಗಾಗಿ ಅಧಿಕೃತ ಕ್ಯಾಬಿನ್ ಸಿಬ್ಬಂದಿ ಮಾತ್ರವೇ ಕಾಕ್‌ಪಿಟ್ ನ್ನು ಪ್ರವೇಶಿಸಬಹುದು. ಪ್ರಯಾಣಿಕರು ಅಥವಾ ಯಾವುದೇ ಅನಧಿಕೃತ ವ್ಯಕ್ತಿಯು ವಿಮಾನದ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳುವುದನ್ನು ತಡೆಯುವುದು ಈ ಸುರಕ್ಷತಾ ವ್ಯವಸ್ಥೆಯ ಉದ್ದೇಶ.
ದುಬೈನಿಂದ ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ಬೋಯಿಂಗ್ -737 ಮ್ಯಾಕ್ಸ್ 8 ವಿಮಾನದಲ್ಲಿ 174 ಮಂದಿ ಪ್ರಯಾಣಿಕರಿದ್ದರು. ಕಾಕ್‌ಪಿಟ್‌ನಲ್ಲಿ ಹಿಂಸಾತ್ಮಕ ಘರ್ಷಣೆಯ ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ಕಡೆಗೆ ತಿರುಗಿಸಲಾಯಿತು. ಪ್ರಯಾಣಿಕರು ಮತ್ತು ಸಿಬ್ಬಂದಿ ಒಟ್ಟಾಗಿ ಆರೋಪಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ವಿಮಾನದಲ್ಲಿದ್ದ ಫ್ಲೈದುಬೈಯ ಇಬ್ಬರು ಪೋಜಿಷನಿಂಗ್ ಪೈಲಟ್‌ಗಳು ವಿಮಾನದ ನಿಯಂತ್ರಣವನ್ನು ವಹಿಸಿಕೊಂಡು ಅದನ್ನು ಸುರಕ್ಷಿತವಾಗಿ ನೆಲಕ್ಕಿಳಿಸಿದ್ದಾರೆ. ವಿಮಾನ ಮೊದಲು 7700 ಎಂಬ ಸಾಮಾನ್ಯ ತುರ್ತು ಕೋಡ್ ಕಳುಹಿಸಿತು. ನಂತರ 7500 ಕೋಡ್ ಕಳುಹಿಸಲಾಯಿತು. ಇದು ‘ಅನಧಿಕೃತ ಹಸ್ತಕ್ಷೇಪ’ದ ಸಂಕೇತ. ತರುವಾಯ ಇಸ್ರೇಲಿ ಯುದ್ಧವಿಮಾನಗಳಿಗೆ ಎಚ್ಚರಿಕೆ ರವಾನಿಸಲಾಗಿದೆ.
ಎಲ್ಲ ಸಂದರ್ಭಗಳಲ್ಲಿಯೂ ಕಾಕ್ ಪಿಟ್ ನಲ್ಲಿ ಇಬ್ಬರು ಅಧಿಕೃತ ವ್ಯಕ್ತಿಗಳು ಇರಲೇಬೇಕು. ಇಬ್ಬರು ಪೈಲಟ್‌ಗಳಲ್ಲಿ ಒಬ್ಬರು ಶೌಚಾಲಯಕ್ಕೆ ಹೋಗಲು ಅಥವಾ ಬೇರೆ ಕಾರಣಕ್ಕಾಗಿ ಹೊರಹೋದರೆ ಅವರು ಮರಳುವ ತನಕ ತರಬೇತಿ ಪಡೆದ ಕ್ಯಾಬಿನ್ ಸಿಬ್ಬಂದಿಯ ಬದಲಿ ಸದಸ್ಯರೊಬ್ಬರು ಕಾಕ್‌ಪಿಟ್‌ನಲ್ಲಿ ಇರುತ್ತಾರೆ.
ಈ ಘಟನೆಯಲ್ಲಿ ಕ್ಯಾಬಿನ್ ನಲ್ಲಿ ಇಬ್ಬರು ಪೈಲಟ್‌ಗಳು ಕ್ರೂ-ಪೊಸಿಷನಿಂಗ್‌ಗಾಗಿ ಪ್ರಯಾಣಿಸುತ್ತಿದ್ದುದು ಸಹಾಯಕವಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ಹಾರಾಟಕ್ಕೆ ಮುನ್ನ ಎಲ್ಲ ಅಧಿಕೃತ ಪ್ರಯಾಣಿಕರು ವಿಮಾನವನ್ನು ಏರಿದ ನಂತರ ವಿಮಾನದ ಹೊರಗಿನ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಆ ಕ್ಷಣದಿಂದ ವಿಮಾನ ಮತ್ತೆ ನೆಲಕ್ಕಿಳಿದು ವಿಮಾನದ ಬಾಗಿಲುಗಳನ್ನು ಮತ್ತೆ ತೆರೆಯುವ ತನಕ ಕಾಕ್‌ಪಿಟ್ ಬಾಗಿಲು ಲಾಕ್ ಆಗಿರುತ್ತದೆ. ಆದರೆ ಅಧಿಕೃತ ಪ್ರವೇಶಕ್ಕೆ ಅನುಮತಿ ಇದ್ದೇ ಇರುತ್ತದೆ.
ಪೈಲಟ್‌ಗಳು ತಮ್ಮ ಎರಡೂ ಆಸನಗಳಿಂದಲೇ ಕಾಕ್ ಪಿಟ್ ಬಾಗಿಲನ್ನು ಲಾಕ್ ಮತ್ತು ಅನ್‌ಲಾಕ್ ಮಾಡಬಹುದು ಹಾಗೂ ಬಾಗಿಲಿನ ಹೊರಗಿನ ಪ್ರದೇಶದ ಉಸ್ತುವಾರಿ ನಡೆಸಬಹುದು. ಕ್ಯಾಬಿನ್ ಸಿಬ್ಬಂದಿ ಆಕ್ಸೆಸ್ ಕೀಪ್ಯಾಡ್ ಮೂಲಕ ಪ್ರವೇಶಕ್ಕಾಗಿ ವಿನಂತಿಸಬಹುದು. ಪೈಲಟ್‌ನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರೆ, ನಿಗದಿತ ಸಮಯದ ನಂತರ ವ್ಯವಸ್ಥೆಯೇ, ಪ್ರವೇಶಕ್ಕೆ ಅನುಮತಿ ನೀಡಬಹುದು. ಪೈಲಟ್ ಸಕ್ರಿಯವಾಗಿ ಪ್ರವೇಶವನ್ನು ತಡೆಯದಿದ್ದರೆ ಮಾತ್ರ ಇದು ಸಾಧ್ಯ.
ಕಾಕ್‌ಪಿಟ್ ಗೆ ನುಗ್ಗಲು ಪ್ರಯತ್ನಿಸುವ ಪ್ರಯಾಣಿಕರನ್ನು ತಡೆಯಲು ಈ ಸುರಕ್ಷತಾ ಪದರಗಳು ಅತ್ಯಂತ ಪರಿಣಾಮಕಾರಿ. ಆದರೆ ಕಾಕ್‌ಪಿಟ್‌ನೊಳಗೆ ಈಗಾಗಲೇ ಇರುವ ಪೈಲಟ್ ವಿರುದ್ಧ ಈ ಯಾವುದೇ ಸುರಕ್ಷತಾ ಕ್ರಮಗಳು ಉಪಯೋಗಕ್ಕೆ ಬರುವುದಿಲ್ಲ.
ಒಳಗಿನ ಅಪಾಯವು ದುರುದ್ದೇಶ, ಸೈದ್ಧಾಂತಿಕ ಉದ್ದೇಶ, ಒತ್ತಡ, ಸೇಡಿನ ಮನೋಭಾವ ಅಥವಾ ಆರ್ಥಿಕ ಒತ್ತಡದಿಂದ ಉಂಟಾಗಬಹುದು. ಆದರೆ ನಿರ್ಲಕ್ಷ್ಯ, ಆತ್ಮತೃಪ್ತಿ, ದಣಿವು, ದುರ್ಬಲ ಮೇಲ್ವಿಚಾರಣೆ ಮತ್ತು ಕಾರ್ಯವಿಧಾನಗಳ ಉಲ್ಲಂಘನೆಯಿಂದಲೂ ಒಳಗಿನ ಅಪಾಯ ಜರುಗಬಹುದು.
ಕೋಡ್ 7500 ಮತ್ತು ತುರ್ತು ಭೂಸ್ಪರ್ಶ
ಟ್ರಾನ್ಸ್‌ಪಾಂಡರ್ ‘ಸ್ಕ್ವಾಕ್’ ನಾಲ್ಕು ಅಂಕಿಗಳ ಕೋಡ್ ಆಗಿದ್ದು, ವಿಮಾನವು ಅದನ್ನು ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಕಳುಹಿಸುತ್ತದೆ. 7500 ಕೋಡ್ ‘ಅನಧಿಕೃತ ಹಸ್ತಕ್ಷೇಪ’ಕ್ಕಾಗಿ ಬಳಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ‘ಹೈಜಾಕ್ ಕೋಡ್’ ಎಂದು ಕರೆಯಲಾಗುತ್ತದೆ. 7700 ಕೋಡ್ ನ್ನು ವೈದ್ಯಕೀಯ, ತಾಂತ್ರಿಕ, ಬೆಂಕಿ, ನಿಯಂತ್ರಣಕ್ಕೆ ಸಂಬಂಧಿಸಿದ ಸಮಸ್ಯೆ ಅಥವಾ ಯಾವುದೇ ಇತರ ಅಪಾಯವಾಗಿರಲಿ, ವಿಮಾನಕ್ಕೆ ತುರ್ತು ಆದ್ಯತೆ ನೀಡಲು ಬಳಸಲಾಗುತ್ತದೆ.
7500 ಕೋಡ್ ಕಳಿಸಿದ ಮಾತ್ರಕ್ಕೆ ಸಾಂಪ್ರದಾಯಿಕ ಅರ್ಥದಲ್ಲಿ ಹೈಜಾಕಿಂಗ್ ನಡೆದಿದೆ ಎಂದು ಸಾಬೀತಾಗುವುದಿಲ್ಲ. ವಿಮಾನದಲ್ಲಿ ಯಾರಾದರೂ ಕಾನೂನುಬಾಹಿರ ಹಸ್ತಕ್ಷೇಪ ನಡೆಸುತ್ತಿರಬಹುದು ಎಂಬ ಸೂಚನೆಯನ್ನೂ ಅದು ನೀಡುತ್ತದೆ. ಅಷ್ಟೇ ಅಲ್ಲದೆ, ಹೈಜಾಕ್ ಪ್ರಯತ್ನ, ಕಾಕ್‌ಪಿಟ್‌ಗೆ ಹಿಂಸಾತ್ಮಕ ಪ್ರವೇಶ, ಒತ್ತಡ ಹೇರಿಕೆ ಅಥವಾ ವಿಮಾನದ ನಿಯಂತ್ರಣಕ್ಕೆ ಅಪಾಯಕರ ಪ್ರತಿಕೂಲ ಕೃತ್ಯಗಳೂ ಇದ್ದಿರಬಹುದು. ಸಾಮಾನ್ಯ ಧ್ವನಿ ಸಂವಹನ ಸುರಕ್ಷಿತ ಅಥವಾ ಅಸಂಭವ ಎನಿಸುವ ಸಂದರ್ಭದಲ್ಲಿ, ನಿಯಂತ್ರಕರಿಗೆ ಮೌನ ಎಚ್ಚರಿಕೆ ನೀಡಲು ಈ ಕೋಡ್ ಅನ್ನು ಬಳಸಬಹುದಾಗಿದೆ.
ದುಬೈನಿಂದ ಟೆಲ್ ಅವೀವ್ ಗೆ ತೆರಳುತ್ತಿದ್ದ FZ1073 ಮೊದಲು 7700 ಮತ್ತು ನಂತರ 7500 ಸಂಕೇತಗಳನ್ನು ಕಳುಹಿಸಿತು. ಆರಂಭದಲ್ಲಿ ಸಾಮಾನ್ಯ ತುರ್ತು ಪರಿಸ್ಥಿತಿ, ನಂತರ ಕಾನೂನುಬಾಹಿರ ಹಸ್ತಕ್ಷೇಪದ ಸಾಧ್ಯತೆ ಅಥವ ಅಂತಹ ಕೃತ್ಯವನ್ನು ದೃಢೀಕರಿಸುವ ಸಂದೇಶವಿದು. ವಿಮಾನದಲ್ಲಿದ್ದವರಿಗೆ ವೈದ್ಯಕೀಯ ನೆರವು ನೀಡಲು, ಭದ್ರತಾ ನಿಯಂತ್ರಣ ಕೈಗೊಳ್ಳಲು, ಬಂಧಿಸಲು ಹಾಗೂ ಸಾಕ್ಷ್ಯಗಳನ್ನು ಕಾಪಾಡಿ ಇಟ್ಟುಕೊಳ್ಳಲೆಂದೇ ತಬೂಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಈ ವಿಮಾನ.
ಈ ವಿಮಾನ ಯುಎಇ ಮತ್ತು ಇಸ್ರೇಲ್ ನಡುವೆ ಸಂಚರಿಸುತ್ತಿತ್ತು. ರಾಜಕೀಯವಾಗಿ ಬಲು ಸೂಕ್ಷ್ಮ ಮಾರ್ಗವಿದು. ಹೆಚ್ಚಿನ ಸಂಖ್ಯೆಯಲ್ಲಿ ಇಸ್ರೇಲಿ ಪ್ರಯಾಣಿಕರಿದ್ದರು. ವಿಮಾನವನ್ನು ಸೌದಿ ಅರೇಬಿಯಾ ಕಡೆಗೆ ತಿರುಗಿಸಲಾಯಿತು. ಸೌದಿ ಅರೇಬಿಯಾ ಇನ್ನೂ ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿಲ್ಲ.




