ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ ಸಿಲುಕಿದ ಸತ್ಯಾನ್ವೇಷಣೆ!

Date:

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ತಲುಪಿದೆಯೇ?

ಮನುಷ್ಯನಿಲ್ಲದೆ ಸಮಾಜವಿಲ್ಲ, ಸಮಾಜವಿಲ್ಲದೆ ಮನುಷ್ಯನಿಲ್ಲ. ಮನುಷ್ಯ ಹುಟ್ಟುವುದು ಒಬ್ಬಂಟಿಯಾಗಿ, ಆದರೆ ಬೆಳೆಯುವುದು ಸಮಾಜದಲ್ಲಿ. ಸಮಾಜವೇ ಅವನಿಗೆ ಭಾಷೆ, ಸಂಸ್ಕೃತಿ, ನೀತಿ, ಕಾಯಕ ಮತ್ತು ಬದುಕಿನ ಮೌಲ್ಯಗಳನ್ನು ಕಲಿಸುತ್ತದೆ. ಆದ್ದರಿಂದ ಸಮಾಜ ಒಬ್ಬ ಮನುಷ್ಯನನ್ನು ಅವನ ಜಾತಿ, ಹಣ, ಅಧಿಕಾರ ಅಥವಾ ಬಟ್ಟೆಯ ಆಧಾರದ ಮೇಲೆ ಅಳೆಯಬಾರದು. ಬಸವಣ್ಣನವರು ಹೇಳಿದಂತೆ, “ಕುಲದಲ್ಲಿ ಹುಟ್ಟಿದ ಕುಲವೇ ಕುಲವಲ್ಲ, ಆಚಾರವೇ ಕುಲ” ಎಂಬ ಆಶಯದಂತೆ, ಮನುಷ್ಯನ ನಿಜವಾದ ಮೌಲ್ಯವನ್ನು ಅವನ ಕಾಯಕದ ಪ್ರಾಮಾಣಿಕತೆ, ನಡೆ-ನುಡಿಯ ಸತ್ಯ ಮತ್ತು ಇತರರಿಗೆ ನೆರವಾಗುವ ಮಾನವೀಯ ಗುಣಗಳ ಮೂಲಕ ಗುರುತಿಸಬೇಕು.

- Advertisement -

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮಾತ್ರ ಬದುಕದೆ ಸಮಾಜದ ಒಳಿತಿಗಾಗಿ ಬದುಕಿದಾಗಲೇ ಅವನ ಬದುಕು ಸಾರ್ಥಕವಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

25ರ ಹರೆಯದಲ್ಲೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾದ ಆದಿವಾಸಿ ಕ್ರಾಂತಿಕಾರಿ...

ಕೇವಲ 25 ವರ್ಷಗಳ ಬದುಕಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಸವಾಲು ಹಾಕಿ, ಸಾವಿರಾರು ಆದಿವಾಸಿಗಳನ್ನು ಸಂಘಟಿಸಿ, ಭೂಮಿಯ ಹಕ್ಕು ಮತ್ತು ಸ್ವಯಂ ಆಡಳಿತಕ್ಕಾಗಿ ಬೃಹತ್ ಚಳವಳಿಯನ್ನು ಕಟ್ಟಿದ ಬಿರ್ಸಾ ಮುಂಡಾ ಅವರು ಕೇವಲ...

ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ವೀಸಾ ರದ್ದತಿ ಪ್ರಕರಣ:...

ನಿರಂತರ ಹೋರಾಟದ ಮೂಲಕ ಗಳಿಸಿದ ಸ್ವಾತಂತ್ರ್ಯ, 'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಸಿದ್ಧಾಂತದ ಸಂವಿಧಾನದ ಮೂಲಕ ಸ್ಥಾಪಿಸಿದ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಅವುಗಳನ್ನು ಕಾಪಾಡುವಲ್ಲಿ ಆಡಳಿತದ ಹೊಣೆಗಾರಿಕೆ ಭಾರತದ ಜಾಗತಿಕ ಪ್ರತಿಷ್ಠೆಯ ಮೂಲಾಧಾರಗಳಾಗಿವೆ. ನಾರ್ವೆಯ...

ಸಮಾಜವೂ ವ್ಯಕ್ತಿಯನ್ನು ಮೇಲಿಂದ ನೋಡುವ, ತುಳಿಯುವ ಅಥವಾ ಜಾತಿ-ವರ್ಗಗಳ ಆಧಾರದ ಮೇಲೆ ದೂರವಿಡುವ ಮನಸ್ಥಿತಿಯಿಂದ ಹೊರಬಂದು ಪ್ರತಿಯೊಬ್ಬನನ್ನೂ ತನ್ನ ಸಹೋದರನಂತೆ ಸಮಾನವಾಗಿ ಕಂಡಾಗ ಮಾತ್ರ ನಿಜವಾದ ಮಾನವೀಯ ಸಮಾಜ ನಿರ್ಮಾಣವಾಗಲು ಸಾಧ್ಯ. ಸಮಾಜದ ಒಳ್ಳೆಯತನದಲ್ಲೇ ಮನುಷ್ಯನ ಒಳ್ಳೆಯತನವಿದೆ ಎಂಬ ಸತ್ಯ ಇಲ್ಲಿ ಅರ್ಥಪೂರ್ಣವಾಗುತ್ತದೆ.

ಮನುಷ್ಯ ಸಮಾಜ ಬದಲಾವಣೆಯ ಕನಸುಗಳನ್ನು ಕಾಣುತ್ತಲೇ ಬಂದಿದ್ದಾನೆ. ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಆರ್ಥಿಕ ಪ್ರಗತಿ ಮತ್ತು ಶೋಷಣೆಮುಕ್ತ ಬದುಕು ಇವು ಪ್ರತಿ ಕಾಲಘಟ್ಟದ ಹೋರಾಟಗಳ ಆಶಯಗಳಾಗಿವೆ.

ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಮತ್ತು ಪ್ರಜಾಪ್ರಭುತ್ವದ ಬೆಳವಣಿಗೆಯೊಂದಿಗೆ ಸಮಾಜ ಸಾಕಷ್ಟು ಮುಂದುವರಿದಿದೆ. ಅದರ ಅಭಿವೃದ್ಧಿಯ ಅಂಕಿಅಂಶಗಳೂ ನಮ್ಮ ಕಣ್ಣ ಮುಂದಿವೆ. ಬಡತನ ಕಡಿಮೆಯಾಗಿದೆ, ಜನರ ಜೀವನಮಟ್ಟ ಸುಧಾರಿಸಿದೆ ಎಂಬ ವರದಿಗಳೂ ಆಗಾಗ ಪ್ರಕಟವಾಗುತ್ತಿವೆ. ಆದರೆ ಈ ಅಭಿವೃದ್ಧಿಯ ಬೆಳಕು ಸಮಾಜದ ಕಟ್ಟಕಡೆಯ ಮನುಷ್ಯನ ಬದುಕನ್ನೂ ತಲುಪಿದೆಯೇ? ಬದಲಾವಣೆಯ ಫಲ ಎಲ್ಲರಿಗೂ ಸಮಾನವಾಗಿ ದೊರೆಯುತ್ತಿದೆಯೇ? ಎಂಬ ಪ್ರಶ್ನೆಗಳು ಇಂದಿಗೂ ನಮ್ಮನ್ನು ಗಾಢವಾಗಿ ಕಾಡುತ್ತಿವೆ.

ಇತ್ತೀಚೆಗೆ ವಿಶ್ವಬ್ಯಾಂಕ್ ಪ್ರಕಟಿಸಿರುವ ಭಾರತದ ಬಡತನದ ಅಂಕಿಅಂಶಗಳು ಗಮನ ಸೆಳೆಯುತ್ತವೆ. 2011–12ರಿಂದ 2023–24ರವರೆಗೆ ದಿನಕ್ಕೆ 4.20 ಡಾಲರ್‌ಗಿಂತ ಕಡಿಮೆ ಬಳಕೆ ವೆಚ್ಚದ ಆಧಾರದ ಬಡತನದ ಪ್ರಮಾಣ ಶೇ.57.7ರಿಂದ ಶೇ.16.1ಕ್ಕೆ ಇಳಿದಿದೆ. ಈ ಅವಧಿಯಲ್ಲಿ ಅಂದಾಜು 49.6 ಕೋಟಿ ಜನರು ಈ ಬಡತನದ ವರ್ಗದಿಂದ ಹೊರಬಂದಿದ್ದಾರೆ. ತೀವ್ರ ಬಡತನದ ಪ್ರಮಾಣವೂ ಶೇ.27.1ರಿಂದ ಶೇ.2.6ಕ್ಕೆ ಇಳಿದಿದೆ. ಇದು ನಿರಾಕರಿಸಲಾಗದ ಆರ್ಥಿಕ ಪ್ರಗತಿಯ ಸೂಚನೆಯಾಗಿದೆ.

ಆದರೆ ಬಡತನದ ಪ್ರಮಾಣ ಇಳಿದಿದೆ ಎಂಬುದೇ ಆರ್ಥಿಕ ಸಮಾನತೆ ನೆಲೆಸಿದೆ ಎಂಬುದಕ್ಕೆ ಸಾಕ್ಷಿಯಲ್ಲ. ಬಡತನದ ರೇಖೆಯನ್ನು ದಾಟಿದ ವ್ಯಕ್ತಿ ನಿಜವಾಗಿಯೂ ಸುಸ್ಥಿರ, ಗೌರವಯುತ ಮತ್ತು ಭದ್ರತೆಯ ಬದುಕನ್ನು ಕಟ್ಟಿಕೊಂಡಿದ್ದಾನೆಯೇ ಎಂಬುದನ್ನೂ ಪರಿಶೀಲಿಸಬೇಕಾಗಿದೆ.

ಇದಕ್ಕೆ ಪೂರಕವಾಗಿ ವಿಶ್ವ ಅಸಮಾನತೆ ವರದಿ–2026 ಭಾರತದ ಆರ್ಥಿಕ ವ್ಯವಸ್ಥೆಯ ಮತ್ತೊಂದು ಮುಖವನ್ನು ತೆರೆದಿಡುತ್ತದೆ. ವರದಿಯ ಪ್ರಕಾರ ದೇಶದ ಒಟ್ಟು ರಾಷ್ಟ್ರೀಯ ಆದಾಯದ ಸುಮಾರು ಶೇ.58ರಷ್ಟು ಪಾಲು ಅಗ್ರ ಶೇ.10ರಷ್ಟು ಜನರ ಕೈಯಲ್ಲಿದೆ. ಕೆಳಗಿನ ಶೇ.50ರಷ್ಟು ಜನರಿಗೆ ದೊರೆಯುತ್ತಿರುವ ಪಾಲು ಕೇವಲ ಶೇ.15ರಷ್ಟು. ಇನ್ನು ದೇಶದ ಒಟ್ಟು ಸಂಪತ್ತಿನಲ್ಲಿ ಅಗ್ರ ಶೇ.10ರಷ್ಟು ಜನರ ಪಾಲು ಸುಮಾರು ಶೇ.65ರಷ್ಟಿದೆ.

ಈ ಅಂಕಿಅಂಶಗಳು ನಮ್ಮ ಮುಂದೆ ಒಂದು ಗಂಭೀರ ಪ್ರಶ್ನೆಯನ್ನು ಇಡುತ್ತವೆ. ದೇಶದ ಆರ್ಥಿಕ ಸಂಪತ್ತು ಹೆಚ್ಚಾಗುತ್ತಿದೆ. ಬಡತನದ ಪ್ರಮಾಣವೂ ಕಡಿಮೆಯಾಗುತ್ತಿದೆ. ಆದರೆ ಸಂಪತ್ತು ಮತ್ತು ಆದಾಯದ ಹಂಚಿಕೆಯಲ್ಲಿ ಇಷ್ಟೊಂದು ಅಂತರವಿರುವಾಗ ಆರ್ಥಿಕ ಪ್ರಗತಿಯ ನಿಜವಾದ ಫಲಾನುಭವಿಗಳು ಯಾರು? ಅಭಿವೃದ್ಧಿಯ ಫಲ ಕಟ್ಟಕಡೆಯ ಮನುಷ್ಯನ ಬದುಕಿನಲ್ಲಿ ಎಷ್ಟರಮಟ್ಟಿಗೆ ಪ್ರತಿಫಲಿಸುತ್ತಿದೆ?

ಇಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಅಭಿವೃದ್ಧಿ ಕುರಿತ ಚಿಂತನೆಗಳು ಗಮನಾರ್ಹವಾಗುತ್ತವೆ. ಅವರ ಪ್ರಕಾರ ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಬೆಳವಣಿಗೆ ಅಥವಾ ಸಂಪತ್ತಿನ ಹೆಚ್ಚಳವಲ್ಲ; ಪ್ರತಿಯೊಬ್ಬ ಮನುಷ್ಯನಿಗೂ ಗೌರವಯುತವಾಗಿ ಬದುಕುವ ಅವಕಾಶಗಳು ದೊರೆಯುವುದೇ ನಿಜವಾದ ಅಭಿವೃದ್ಧಿ. ಬಡತನವೆಂದರೆ ಕೇವಲ ಹಣದ ಕೊರತೆಯಲ್ಲ; ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸ್ವಾವಲಂಬನೆಯ ಅವಕಾಶಗಳಿಂದ ವಂಚಿತವಾಗಿರುವುದೂ ಹೌದು. ಹಾಗೆಯೇ ಸಮಾನತೆ ಎಂದರೆ ಸಂಪತ್ತಿನ ಹಂಚಿಕೆಯಷ್ಟೇ ಅಲ್ಲ; ಪ್ರತಿಯೊಬ್ಬರಿಗೂ ತಮ್ಮ ಬದುಕನ್ನು ಉತ್ತಮಗೊಳಿಸಿಕೊಳ್ಳುವ ಸಮಾನ ಅವಕಾಶಗಳು ದೊರೆಯುವುದು. ಈ ದೃಷ್ಟಿಕೋನದಿಂದ ನೋಡಿದಾಗ ದೇಶದ ಆರ್ಥಿಕ ಪ್ರಗತಿಯ ಅಂಕಿಅಂಶಗಳಿಗಿಂತ ಸಾಮಾನ್ಯ ಮನುಷ್ಯನ ಬದುಕಿನಲ್ಲಿ ಆಗಿರುವ ನೈಜ ಬದಲಾವಣೆಯೇ ಅಭಿವೃದ್ಧಿಯ ನಿಜವಾದ ಮಾನದಂಡವಾಗಬೇಕು.

ಇಂತಹ ಸಾಮಾಜಿಕ ವೈರುಧ್ಯಗಳನ್ನೇ ಪ್ರತಿಬಿಂಬಿಸುವ ನನ್ನ ‘ಹುಡುಕಾಟ’ ಕವಿತೆ ನೆನಪಾಗುತ್ತದೆ. ಅದರ ಕೊನೆಯ ಆರು ಸಾಲುಗಳಲ್ಲಿ ಒಂದು ಸರಳ ದೃಶ್ಯದ ಮೂಲಕ ಹೀಗೆ ಅಭಿವ್ಯಕ್ತಿಸಿದ್ದೇನೆ.

“…………………. ಹಸಿರು ಮರದ ನೆರಳ ಕೆಳಗೆ ಹರಕು ಚಪ್ಪಲಿಗಳ ರಾಶಿ ರಾಶಿ ಹಸಿರು ಕನಸುಗಳ ಕಾಲಡಿ ಸಿಕ್ಕಿ ಹರಿದ ಚಪ್ಪಲಿಗಳಿಗೆ ಮೊಳೆ ಜಡಿಯುತ್ತಿದ್ದಾನೆ ಚರ್ಮಕಾರ ಬದಲಾವಣೆಯ ಅರ್ಥ ವ್ಯರ್ಥ!!”

ಈ ಸಾಲುಗಳಲ್ಲಿ ಕಾಣಿಸಿಕೊಳ್ಳುವ ಹಸಿರು ಮರ, ಹರಕು ಚಪ್ಪಲಿಗಳು ಮತ್ತು ಚರ್ಮಕಾರ ಇವು ಕೇವಲ ದೈನಂದಿನ ಬದುಕಿನ ದೃಶ್ಯಗಳಲ್ಲ. ಅವುಗಳ ಹಿಂದೆ ಒಂದು ವಿಶಾಲವಾದ ಸಾಮಾಜಿಕ ವಾಸ್ತವ ಅಡಗಿದೆ.

ಹಸಿರು ಮರ ಸಮೃದ್ಧಿಯ, ಜೀವಂತಿಕೆಯ ಮತ್ತು ಭರವಸೆಯ ಸಂಕೇತ. ಅದರ ನೆರಳಿನಲ್ಲಿ ಹರಕು ಚಪ್ಪಲಿಗಳ ರಾಶಿಯಿದೆ. ಸಮಾಜದಲ್ಲಿ ಬದಲಾವಣೆಯ ಹಸಿರು ಕನಸುಗಳಿವೆ. ಸಮಾನತೆಯ ಆಶಯಗಳಿವೆ. ಶೋಷಣೆಮುಕ್ತ ಸಮಾಜದ ಪರಿಕಲ್ಪನೆಗಳಿವೆ. ಆದರೆ ಆ ಕನಸುಗಳ ಕಾಲಡಿಯಲ್ಲಿಯೇ ಕೆಲವು ಜನರ ಬದುಕು ತುಳಿತಕ್ಕೊಳಗಾಗುತ್ತಿದೆಯೇ ಎಂಬ ಆತಂಕವನ್ನು ಕವಿತೆ ವ್ಯಕ್ತಪಡಿಸುತ್ತದೆ.

ಇಲ್ಲಿ ಚರ್ಮಕಾರನ ಪಾತ್ರ ಬಹಳ ಮಹತ್ವದ್ದಾಗಿದೆ. ಸಮಾಜದ ಬಹುಸಂಖ್ಯಾತ ಶ್ರಮಜೀವಿಗಳ ಬದುಕಿನ ಪ್ರತಿನಿಧಿಯಾಗಿ ಅವನು ಕಾಣಿಸುತ್ತಾನೆ. ತನ್ನ ದುಡಿಮೆಯಿಂದ ಇತರರ ಹರಿದ ಚಪ್ಪಲಿಗಳನ್ನು ಸರಿಪಡಿಸುವ ಅವನು, ತನ್ನ ಬದುಕಿನ ಹರಿದ ಪುಟಗಳನ್ನು ತಾನೇ ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾನೆ. ಅವನ ವೃತ್ತಿ ಸಮಾಜಕ್ಕೆ ಅಗತ್ಯವಾದರೂ ಅವನ ಶ್ರಮಕ್ಕೆ ದೊರೆಯುವ ಮೌಲ್ಯ ಮತ್ತು ಸಾಮಾಜಿಕ ಗೌರವ ಎಷ್ಟಿದೆ? ತಲೆಮಾರುಗಳಿಂದ ವೃತ್ತಿಯ ಹೆಸರಿನಲ್ಲಿ ಜಾತಿಯ ಸಂಕೋಲೆಗಳನ್ನು ಹೊತ್ತಿರುವ ಸಮುದಾಯಗಳಿಗೆ ಆಧುನಿಕ ಸಮಾಜ ನಿಜವಾದ ಘನತೆಯನ್ನು ನೀಡಿದೆಯೇ?

ಈ ಚರ್ಮಕಾರನ ಬದುಕಿನ ವಾಸ್ತವವನ್ನು ನೆನಪಿಸುವ ಎರಡು ಸಣ್ಣ ಘಟನೆಗಳು ಇತ್ತೀಚೆಗೆ ನನ್ನ ಅನುಭವಕ್ಕೆ ಬಂದವು.

ಒಮ್ಮೆ ನನ್ನ ಸ್ನೇಹಿತನ ಬೂಟು ಸಂಪೂರ್ಣ ಹರಿದುಹೋಗಿದ್ದರಿಂದ ನಗರದ ಒಂದು ಭಾಗದಲ್ಲಿದ್ದ ಚರ್ಮಕಾರನ ಬಳಿ ರಿಪೇರಿ ಮಾಡಿಸಲು ಹೋದೆವು. ಆದರೆ ಆತ, ‘ಈಗ ಆಗುವುದಿಲ್ಲ ಸರ್’ ಎಂದು ಹೇಳಿ ಕೆಲಸ ಮಾಡಲು ನಿರಾಕರಿಸಿದ. ಅಲ್ಲಿಂದ ಹೊರಬಂದು ದಾರಿಯಲ್ಲಿ ಮಾತನಾಡುತ್ತಿದ್ದಾಗ ನನ್ನ ಸ್ನೇಹಿತ, ‘ಸಮಾಜದಲ್ಲಿ ಬಹಳಷ್ಟು ಜನರಿಗೆ ಹೊಟ್ಟೆ ತುಂಬಿದೆ. ಯಾರಿಗೂ ಹಸಿವು ಕಾಡುವುದಿಲ್ಲ’ ಎಂದ. ಆತನ ಈ ಮಾತು ನನ್ನನ್ನು ಸ್ವಲ್ಪ ಚಿಂತನೆಗೆ ಹಚ್ಚಿತು.

ಇದೇ ಸ್ನೇಹಿತ ಮತ್ತೊಂದು ಸಂದರ್ಭದಲ್ಲಿ ಬೇರೆ ಚರ್ಮಕಾರನ ಬಳಿ ಬೂಟು ರಿಪೇರಿಗೆ ಕೊಟ್ಟಿದ್ದ. ಆತ ಸ್ವಲ್ಪ ಹೊತ್ತು ಬಿಟ್ಟು ಬರುವಂತೆ ಹೇಳಿದ್ದರಿಂದ ನಾವು ಬೇರೆಡೆಗೆ ಹೋಗಿದ್ದೆವು. ರಿಪೇರಿ ಮುಗಿದ ನಂತರ ಆ ಚರ್ಮಕಾರನೇ ಫೋನ್ ಮಾಡಿ, ‘ಸರ್, ನಿಮ್ಮ ಬೂಟು ರಿಪೇರಿ ಮಾಡಿ ಇಟ್ಟುಕೊಂಡಿದ್ದೇನೆ. ಬೇಗ ಬಂದು ತೆಗೆದುಕೊಂಡು ಹೋಗಿ. ಏಕೆಂದರೆ ನಾನು ಮನೆಗೆ ರಾತ್ರಿ ಊಟಕ್ಕೆ ಬೇಕಾದ ಧವಸಧಾನ್ಯ ಮತ್ತು ಸ್ವಲ್ಪ ತರಕಾರಿ ತೆಗೆದುಕೊಂಡು ಹೋಗಬೇಕು ಸರ್’ ಎಂದು ಹೇಳಿದ. ನನ್ನ ಸ್ನೇಹಿತ ಹೋಗಿ ಬೂಟು ತೆಗೆದುಕೊಂಡು ಹಣ ಪಾವತಿಸಿ ಬಂದ.

ಈ ಎರಡು ಘಟನೆಗಳು ಮೇಲ್ನೋಟಕ್ಕೆ ಸಾಮಾನ್ಯವೆನಿಸಿದರೂ, ಅವುಗಳ ನಡುವೆ ಒಂದು ಬದುಕಿನ ವೈರುಧ್ಯವಿದೆ. ಒಂದೇ ವೃತ್ತಿಯಲ್ಲಿ ತೊಡಗಿರುವ ಇಬ್ಬರು ವ್ಯಕ್ತಿಗಳ ಕೆಲಸದ ಬಗೆಗಿನ ಧೋರಣೆ ಮತ್ತು ಅವರ ಬದುಕಿನ ಅನಿವಾರ್ಯತೆಗಳು ಒಂದೇ ರೀತಿಯಾಗಿರಬೇಕೆಂದಿಲ್ಲ. ಮೊದಲ ಚರ್ಮಕಾರ ಕೆಲಸ ಮಾಡಲು ನಿರಾಕರಿಸಿದರೆ, ಎರಡನೆಯ ಚರ್ಮಕಾರನಿಗೆ ತನ್ನ ದುಡಿಮೆಯ ಹಣದಿಂದ ಅಂದಿನ ರಾತ್ರಿ ಊಟಕ್ಕೆ ಬೇಕಾದ ಸಾಮಗ್ರಿಗಳನ್ನು ಮನೆಗೆ ತೆಗೆದುಕೊಂಡು ಹೋಗುವ ತುರ್ತು ಇತ್ತು. ಇದರಿಂದ ಮೊದಲನೆಯವನಿಗೆ ಹಸಿವಿಲ್ಲ, ಎರಡನೆಯವನಿಗೆ ಮಾತ್ರ ಹಸಿವಿದೆ ಎಂಬ ತೀರ್ಮಾನಕ್ಕೆ ಬರಲಾಗುವುದಿಲ್ಲ. ಆದರೆ ಎರಡನೆಯವನ ಮಾತು ದುಡಿಮೆಯ ಹಿಂದೆ ಅಡಗಿರುವ ಕುಟುಂಬದ ಅನಿವಾರ್ಯತೆಯನ್ನು ನಮ್ಮ ಮುಂದೆ ತೆರೆದಿಡುತ್ತದೆ.

ಒಬ್ಬನಿಗೆ ಕೆಲಸವನ್ನು ಮುಂದೂಡುವ ಅವಕಾಶವಿರಬಹುದು; ಮತ್ತೊಬ್ಬನಿಗೆ ಅದೇ ಕೆಲಸದ ಹಣ ಅಂದಿನ ಊಟದ ವ್ಯವಸ್ಥೆಗೆ ಅಗತ್ಯವಾಗಿರಬಹುದು. ಹಾಗಾದರೆ ಸಮಾಜದಲ್ಲಿ ಬಡತನದ ಪ್ರಮಾಣ ಕಡಿಮೆಯಾಗುತ್ತಿದೆ ಎಂಬ ಅಂಕಿಅಂಶಗಳ ನಡುವೆ ಇಂತಹ ಬದುಕಿನ ವಾಸ್ತವಗಳನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಒಬ್ಬ ವ್ಯಕ್ತಿಯ ಆರ್ಥಿಕ ಸ್ಥಿತಿಗತಿಯನ್ನು ಕೇವಲ ಅವನ ವೃತ್ತಿಯ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವೇ? ಇಂತಹ ಸಣ್ಣ ಘಟನೆಗಳೇ ಸಮಾಜದೊಳಗಿನ ಆರ್ಥಿಕ ಅಸಮಾನತೆ ಮತ್ತು ದುಡಿಮೆಯ ಅನಿವಾರ್ಯತೆಯ ಕುರಿತು ನಮ್ಮನ್ನು ಆಲೋಚಿಸುವಂತೆ ಮಾಡುತ್ತವೆ.

ಒಂದು ಕಾಲದಲ್ಲಿ ಅಸ್ಪೃಶ್ಯತೆ, ಜಾತಿ ತಾರತಮ್ಯ ಮತ್ತು ಸಾಮಾಜಿಕ ಬಹಿಷ್ಕಾರಗಳ ವಿರುದ್ಧ ಅನೇಕ ಹೋರಾಟಗಳು ನಡೆದಿವೆ. ಸಂವಿಧಾನ ಸಮಾನತೆಯ ಹಕ್ಕನ್ನು ನೀಡಿದೆ. ಶಿಕ್ಷಣ ಮತ್ತು ಮೀಸಲಾತಿಯಂತಹ ಅವಕಾಶಗಳು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಮುನ್ನಡೆಗೆ ದಾರಿ ಮಾಡಿಕೊಟ್ಟಿವೆ. ಆದರೂ ಜಾತಿ ಆಧಾರಿತ ವೃತ್ತಿಗಳಿಂದ ಹೊರಬರಲು ಸಾಧ್ಯವಾಗದವರು, ಭೂಮಿ ಮತ್ತು ಆಸ್ತಿಯ ಒಡೆತನವಿಲ್ಲದವರು, ಅಸಂಘಟಿತ ವಲಯದಲ್ಲಿ ದುಡಿಯುವವರು, ದಿನಗೂಲಿಯನ್ನೇ ಬದುಕಿನ ಆಧಾರವಾಗಿಸಿಕೊಂಡವರು ಇಂದಿಗೂ ನಮ್ಮ ಕಣ್ಣಮುಂದಿದ್ದಾರೆ.

ಹೀಗಿರುವಾಗ ಅಭಿವೃದ್ಧಿಯ ಅಂಕಿಅಂಶಗಳನ್ನು ಮಾತ್ರ ಮುಂದಿಟ್ಟುಕೊಂಡು ಸಾಮಾಜಿಕ ಬದಲಾವಣೆ ಸಂಪೂರ್ಣವಾಗಿದೆ ಎಂದು ಹೇಳಲು ಸಾಧ್ಯವೇ?

ಹಿಂದಿನ ಮನಮೋಹನ ಸಿಂಗ್ ನೇತೃತ್ವದ ಸರ್ಕಾರದ ಅವಧಿಯಲ್ಲಿಯೂ ಬಡತನದ ಕುರಿತು ವಿವಿಧ ಅಂದಾಜುಗಳು ಪ್ರಕಟವಾಗಿದ್ದವು.

2011–12ರ ಯೋಜನಾ ಆಯೋಗದ ತೆಂಡೂಲ್ಕರ್ ವಿಧಾನಾಧಾರಿತ ಅಂದಾಜಿನ ಪ್ರಕಾರ ದೇಶದ ಗ್ರಾಮೀಣ ಪ್ರದೇಶದಲ್ಲಿ ಶೇ.25.7ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದರು. ಒಟ್ಟಾರೆ ದೇಶದ ಪ್ರಮಾಣ ಶೇ.21.9ರಷ್ಟಿತ್ತು. ನಂತರದ ವರ್ಷಗಳಲ್ಲಿ ಬಡತನವನ್ನು ಅಳೆಯುವ ಮಾನದಂಡಗಳು ಬದಲಾಗಿವೆ. ಆದ್ದರಿಂದ ಈ ಅಂಕಿಅಂಶಗಳನ್ನು ನೇರವಾಗಿ ಹೋಲಿಸುವ ಬದಲು ಅವುಗಳ ಕಾಲಘಟ್ಟ ಮತ್ತು ಮಾನದಂಡಗಳನ್ನು ಗಮನಿಸಬೇಕಾಗುತ್ತದೆ.

ಆದರೆ ಸರ್ಕಾರಗಳು ಬದಲಾಗಬಹುದು, ಆಡಳಿತದ ನೀತಿಗಳು ಬದಲಾಗಬಹುದು, ಅಭಿವೃದ್ಧಿಯ ಅಂಕಿಅಂಶಗಳು ಬದಲಾಗಬಹುದು.

ಆದರೂ ಸಮಾಜದ ಕಟ್ಟಕಡೆಯ ಮನುಷ್ಯನ ಬದುಕಿನ ಮೂಲಭೂತ ಪ್ರಶ್ನೆಗಳು ಮಾತ್ರ ಮುಂದುವರಿಯಬಾರದು.

ಒಬ್ಬ ಚರ್ಮಕಾರನಿಗೆ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗಬೇಕು. ತನ್ನ ದುಡಿಮೆಗೆ ನ್ಯಾಯಯುತ ಆದಾಯ ದೊರೆಯಬೇಕು. ವಾಸಿಸಲು ಗೌರವಯುತ ಮನೆ, ಆರೋಗ್ಯದ ಭದ್ರತೆ ಮತ್ತು ಸಾಮಾಜಿಕ ಗೌರವ ಸಿಗಬೇಕು. ತನ್ನ ವೃತ್ತಿಯ ಕಾರಣಕ್ಕೆ ಅವಮಾನಕ್ಕೊಳಗಾಗುವ ಪರಿಸ್ಥಿತಿ ಇರಬಾರದು. ಇವೆಲ್ಲವೂ ಕೇವಲ ಕನಸುಗಳಾಗಿ ಉಳಿಯದೆ ವಾಸ್ತವವಾಗಬೇಕು.

ಅಭಿವೃದ್ಧಿಯೆಂದರೆ ಕೇವಲ ರಸ್ತೆ, ಸೇತುವೆ, ಕಟ್ಟಡ, ಕೈಗಾರಿಕೆ ಮತ್ತು ಬೃಹತ್ ಯೋಜನೆಗಳ ನಿರ್ಮಾಣವಲ್ಲ. ಅವುಗಳ ಜೊತೆಗೆ ಮನುಷ್ಯನ ಬದುಕಿನ ಗುಣಮಟ್ಟವೂ ಸುಧಾರಿಸಬೇಕು. ದೇಶದ ಸಂಪತ್ತು ಕೆಲವೇ ಜನರ ಕೈಯಲ್ಲಿ ಕೇಂದ್ರೀಕೃತವಾಗದೆ ದುಡಿಯುವ ಜನರಿಗೂ ಅದರ ನ್ಯಾಯಯುತ ಪಾಲು ದೊರೆಯಬೇಕು. ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ, ಭೂಮಿ, ಆರೋಗ್ಯ ಮತ್ತು ಆರ್ಥಿಕ ಸ್ವಾವಲಂಬನೆಯ ಅವಕಾಶಗಳು ಹೆಚ್ಚಬೇಕು.

ಇಲ್ಲಿ ಕವಿತೆಯ ಕೊನೆಯ ಸಾಲಿನ ಆಶಯವನ್ನು ಮತ್ತೊಮ್ಮೆ ಗಮನಿಸಬೇಕಾಗಿದೆ: ‘ಬದಲಾವಣೆಯ ಅರ್ಥ ವ್ಯರ್ಥ!!’

ಇದು ಬದಲಾವಣೆಯನ್ನೇ ನಿರಾಕರಿಸುವ ಘೋಷಣೆಯಲ್ಲ. ಬದಲಾವಣೆಯ ಹೆಸರಿನಲ್ಲಿ ನಡೆಯುವ ಮೇಲ್ನೋಟದ ಪ್ರಗತಿಯ ಕುರಿತಾದ ಪ್ರಶ್ನೆ. ಬದಲಾವಣೆ ನಿಜವಾಗಿಯೂ ಸಂಭವಿಸಿದ್ದರೆ ಅದರ ಮೊದಲ ಗುರುತು ಸಮಾಜದ ಕಟ್ಟಕಡೆಯ ಮನುಷ್ಯನ ಬದುಕಿನಲ್ಲಿ ಕಾಣಿಸಿಕೊಳ್ಳಬೇಕು. ಹರಿದ ಚಪ್ಪಲಿಗಳನ್ನು ದುರಸ್ತಿ ಮಾಡಿಕೊಳ್ಳುವ ಚರ್ಮಕಾರನಿಗೆ ತನ್ನ ಬದುಕನ್ನೇ ಬದಲಾಯಿಸಿಕೊಳ್ಳುವ ಅವಕಾಶ ದೊರೆಯಬೇಕು. ಅವನ ಮುಂದಿನ ಪೀಳಿಗೆಗೆ ಅದೇ ವೃತ್ತಿ ಅನಿವಾರ್ಯವಾಗಬಾರದು. ವೃತ್ತಿ ಆಯ್ಕೆಯ ಸ್ವಾತಂತ್ರ್ಯ, ಸಾಮಾಜಿಕ ಗೌರವ ಮತ್ತು ಆರ್ಥಿಕ ಸ್ವಾವಲಂಬನೆ ದೊರೆಯಬೇಕು.

ಚರ್ಮಕಾರನಿಗೆ ಹರಿದ ಚಪ್ಪಲಿಗಳನ್ನು ಸರಿಪಡಿಸುವ ಕೌಶಲ್ಯವಿದೆ. ಆದರೆ ಅವನ ಬದುಕನ್ನು ಕಾಡುತ್ತಿರುವ ಸಾಮಾಜಿಕ ಅಸಮಾನತೆ, ಆರ್ಥಿಕ ಶೋಷಣೆ ಮತ್ತು ಜಾತಿ ತಾರತಮ್ಯಗಳನ್ನು ಸರಿಪಡಿಸುವ ಜವಾಬ್ದಾರಿ ಸಮಾಜ ಮತ್ತು ಆಡಳಿತ ವ್ಯವಸ್ಥೆಯ ಮೇಲಿದೆ. ಕೇವಲ ಕಲ್ಯಾಣ ಯೋಜನೆಗಳ ಘೋಷಣೆಗಳಿಂದ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವುದಿಲ್ಲ. ಶಿಕ್ಷಣದ ಸಮಾನ ಅವಕಾಶ, ಗುಣಮಟ್ಟದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ಉದ್ಯೋಗ ಭದ್ರತೆ, ಸಾಮಾಜಿಕ ನ್ಯಾಯ ಮತ್ತು ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಯ ಮೂಲಕವೇ ನಿಜವಾದ ಬದಲಾವಣೆ ಸಾಧ್ಯ.

ಹಸಿರು ಕನಸುಗಳು ಎಲ್ಲರಿಗೂ ಸೇರಿರಬೇಕು. ಆ ಕನಸುಗಳ ನೆರಳು ಶ್ರೀಮಂತರ ಅರಮನೆಗಳ ಮೇಲೆ ಮಾತ್ರ ಬೀಳದೆ ಬಡವರ ಗುಡಿಸಲುಗಳನ್ನೂ ತಲುಪಬೇಕು. ಅಭಿವೃದ್ಧಿಯ ಬೆಳಕು ಸಮಾಜದ ಕಟ್ಟಕಡೆಯ ಮನೆಯನ್ನೂ ಬೆಳಗಿಸಬೇಕು.

ಆದ್ದರಿಂದ, ಬಡತನ ಇಳಿಕೆಯ ಅಂಕಿಅಂಶಗಳನ್ನು ಸಂಭ್ರಮಿಸುವುದರ ಜೊತೆಗೆ ಅಸಮಾನತೆಯ ವಾಸ್ತವವನ್ನೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ದೇಶದ ಪ್ರಗತಿಯನ್ನು ಅಳೆಯುವಾಗ ಎತ್ತರದ ಕಟ್ಟಡಗಳ ಸಂಖ್ಯೆಯನ್ನಷ್ಟೇ ನೋಡದೆ, ಆ ಕಟ್ಟಡಗಳನ್ನು ನಿರ್ಮಿಸಿದ ಕಾರ್ಮಿಕನ ಬದುಕಿನ ಸ್ಥಿತಿಯನ್ನೂ ನೋಡಬೇಕು. ಕೈಗಾರಿಕೆಗಳ ಉತ್ಪಾದನೆಯನ್ನಷ್ಟೇ ಗಮನಿಸದೆ ಅಲ್ಲಿ ದುಡಿಯುವ ಶ್ರಮಿಕನ ಬದುಕಿನ ಭದ್ರತೆಯನ್ನೂ ಗಮನಿಸಬೇಕು.

ಕೊನೆಗೆ ನಮ್ಮೆಲ್ಲರ ಮುಂದಿರುವ ಪ್ರಶ್ನೆ ಇಷ್ಟೇ: ಹಸಿರು ಕನಸುಗಳು ಯಾರಿಗಾಗಿ? ಬದಲಾವಣೆ ಯಾರಿಗಾಗಿ? ಅಭಿವೃದ್ಧಿಯ ಫಲ ಯಾರಿಗಾಗಿ?

ಈ ಪ್ರಶ್ನೆಗಳಿಗೆ ಉತ್ತರವನ್ನು ಕೇವಲ ಸರ್ಕಾರಗಳಿಂದ ಅಥವಾ ಆಡಳಿತ ವ್ಯವಸ್ಥೆಯಿಂದ ಮಾತ್ರ ನಿರೀಕ್ಷಿಸಲು ಸಾಧ್ಯವಿಲ್ಲ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾಗಿದೆ. ಬಡತನದ ಪ್ರಮಾಣ ಇಳಿಕೆಯಾಗುವುದರ ಜೊತೆಗೆ ಆರ್ಥಿಕ ಅಸಮಾನತೆಯೂ ಕಡಿಮೆಯಾಗಬೇಕು. ದುಡಿಯುವ ಕೈಗಳಿಗೆ ನ್ಯಾಯಯುತ ಪ್ರತಿಫಲ ದೊರೆಯಬೇಕು. ಜಾತಿ, ವರ್ಗ ಮತ್ತು ವೃತ್ತಿಯ ಆಧಾರದಲ್ಲಿ ಮನುಷ್ಯರನ್ನು ಅಳೆಯುವ ಮನಸ್ಥಿತಿ ಬದಲಾಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವಯುತ ಬದುಕು, ಸಮಾನ ಅವಕಾಶ ಮತ್ತು ಸ್ವಾವಲಂಬನೆಯ ಭರವಸೆ ದೊರೆತಾಗ ಮಾತ್ರ ಅಭಿವೃದ್ಧಿ ನಿಜವಾದ ಅರ್ಥ ಪಡೆದುಕೊಳ್ಳುತ್ತದೆ.

ಈ ಲೇಖನ ಓದಿದ್ದೀರಾ?: ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ ಹಿನ್ನೆಲೆಯೇನು? ಪ್ರಸ್ತುತ ಮಹತ್ವವೇನು?

ಹಸಿರು ಕನಸುಗಳು ಎಲ್ಲರ ಬದುಕಿನಲ್ಲೂ ಚಿಗುರಬೇಕು. ಅಭಿವೃದ್ಧಿಯ ಬೆಳಕು ಶ್ರೀಮಂತರ ಮನೆಗಳನ್ನಷ್ಟೇ ಅಲ್ಲದೆ ಬಡವರ ಗುಡಿಸಲುಗಳನ್ನೂ ತಲುಪಬೇಕು. ಚರ್ಮಕಾರನ ಕೈಯಲ್ಲಿ ಹರಿದ ಚಪ್ಪಲಿಗಳಿಗೆ ಮೊಳೆ ಜಡಿಯುವ ಕಾಯಕ ಮುಂದುವರಿದರೂ, ಅವನ ಬದುಕು ಮಾತ್ರ ತಲೆಮಾರುಗಳಿಂದ ಹರಿದ ಚಪ್ಪಲಿಯಂತೆಯೇ ಉಳಿಯಬಾರದು. ಅವನ ಮಕ್ಕಳಿಗೂ ತಮ್ಮ ಬದುಕನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮತ್ತು ಅವಕಾಶ ದೊರೆಯಬೇಕು.

ಏಕೆಂದರೆ ಬದಲಾವಣೆ ಎಂದರೆ ಕೇವಲ ಅಂಕಿಅಂಶಗಳಲ್ಲಿನ ಸುಧಾರಣೆಯಲ್ಲ; ಅದು ಮನುಷ್ಯನ ಬದುಕಿನಲ್ಲಿ ಕಾಣಿಸಿಕೊಳ್ಳುವ ಸಮಾನತೆ, ಘನತೆ, ನ್ಯಾಯ ಮತ್ತು ಸ್ವಾವಲಂಬನೆ. ಇವು ಸಾಕಾರಗೊಳ್ಳದಿದ್ದರೆ ಬದಲಾವಣೆಯ ಮಾತುಗಳು ಎಷ್ಟೇ ಆಕರ್ಷಕವಾಗಿದ್ದರೂ ಅವುಗಳ ಅರ್ಥ ಅಪೂರ್ಣವಾಗಿಯೇ ಉಳಿಯುತ್ತದೆ.

ಹಸಿರು ಕನಸುಗಳ ಕಾಲಡಿಯಲ್ಲಿ ಬದುಕಿನ ಸತ್ಯಗಳು ತುಳಿತಕ್ಕೊಳಗಾಗಬಾರದು. ಕನಸುಗಳು ಸಾಕಾರಗೊಳ್ಳಲಿ; ಬದಲಾವಣೆ ಕಟ್ಟಕಡೆಯ ಮನುಷ್ಯನ ಬದುಕಿನಲ್ಲಿಯೂ ಕಾಣಿಸಿಕೊಳ್ಳಲಿ. ಆಗ ಮಾತ್ರ ಬದಲಾವಣೆಗೆ ನಿಜವಾದ ಅರ್ಥ ಬರುತ್ತದೆ.

ಇದೇ ನನ್ನ ‘ಹುಡುಕಾಟ’ ಕವಿತೆ ಎತ್ತುವ ಸಾಮಾಜಿಕ ಪ್ರಶ್ನೆ. ಇದು ಒಬ್ಬ ಕವಿಯ ಪ್ರಶ್ನೆಯಲ್ಲ; ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆಯನ್ನು ಬಯಸುವ ಇಡೀ ಸಮಾಜದ ಆತ್ಮಾವಲೋಕನದ ಪ್ರಶ್ನೆಯಾಗಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ ವೇದಿಕೆಯಾಗಲಿ

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು...

ಆನ್‌ಲೈನ್‌ನಲ್ಲಿ 70 ಬಾಲಕಿಯರಿಗೆ ಲೈಂಗಿಕ ಶೋಷಣೆ: ಭಾರತೀಯ ವಿದ್ಯಾರ್ಥಿಗೆ ಯುಕೆಯಲ್ಲಿ 30 ವರ್ಷ ಜೈಲು!

ಬ್ರಿಟನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿ ಬಿಲಾಲ್ ಕಾಜಿಗೆ ಅಲ್ಲಿನ ನ್ಯಾಯಾಲಯವು 30 ವರ್ಷಗಳ...

ಪಂಜಾಬ್‌ನಲ್ಲಿ 5,000ಕ್ಕೂ ಹೆಚ್ಚು ಕೃಷಿ ತ್ಯಾಜ್ಯ ಸುಡುವ ಪ್ರಕರಣ ದಾಖಲು: 1 ಕೋಟಿ ರೂ. ದಂಡ ವಿಧಿಸಿದ ಸರ್ಕಾರ

ದೆಹಲಿ ಮತ್ತು ಉತ್ತರ ಭಾರತದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ನಡುವೆಯೇ, ಪಂಜಾಬ್‌ನಲ್ಲಿ ಕೃಷಿ...

50% ಸಮಾನ ಹೆಚ್ಚಳ ಷರತ್ತು; ಕೇಂದ್ರದ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಸುಪ್ರಿಯಾ ಸುಳೆ ಬೆಂಬಲ

ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಎಲ್ಲ ರಾಜ್ಯಗಳಲ್ಲೂ ಯಾವುದೇ ತಾರತಮ್ಯವಿಲ್ಲದೆ '50%ರಷ್ಟು ಸಮಾನ’ವಾಗಿ...