ಅಂದು 2010ರ ಡಿಸೆಂಬರ್ 21. ಒಡಿಶಾದ ರಾಯಗಡ ಜಿಲ್ಲೆಯ 35 ವರ್ಷದ ಬುಡಕಟ್ಟು ನಾಯಕ ಭಗೀರಥಿ ಮಂದಂಗಿ ಕಾಣೆಯಾಗಿದ್ದಾರೆಂದು ಅವರ ಕುಟುಂಬಸ್ಥರು ದೂರು ದಾಖಲಿಸಿದ್ದ ನಾಲ್ಕನೇ ದಿನ. ಆ ದಿನ ಭಗೀರಥಿ ಅವರ ಸಹೋದರ ಜಗನ್ನಾಥ್ ಅವರಿಗೆ ಸ್ಥಳೀಯ ಪೊಲೀಸರಿಂದ ಆಘಾತಕಾರಿ ಕರೆಯೊಂದು ಬಂದಿತ್ತು. ನೆರೆಯ ಆಂಧ್ರಪ್ರದೇಶದ ಝಂಜಾವತಿ ನದಿ ಅಣೆಕಟ್ಟಿನಲ್ಲಿ ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ತೇಲುತ್ತಿರುವುದಾಗಿ ಪೊಲೀಸರು ತಿಳಿಸಿದ್ದರು. “ನಾವು ಶವವನ್ನು ನೋಡುವಷ್ಟರಲ್ಲಿ ಅದು ಸಂಪೂರ್ಣವಾಗಿ ಕೊಳೆತು, ಬಹುತೇಕ ಅಸ್ಥಿಪಂಜರದಂತಾಗಿತ್ತು. ಅದು ನಮ್ಮ ಸಹೋದರನದ್ದೇ ಶವವೆಂದು ಗುರುತಿಸುವುದು ನಮಗೆ ತುಂಬಾ ಕಷ್ಟವಾಗಿತ್ತು. ಕೊನೆಗೆ ಡಿಎನ್ಎ ಪರೀಕ್ಷೆಯ ನಂತರವಷ್ಟೇ ಅದು ಭಗೀರಥಿಯ ಮೃತದೇಹ ಎಂಬುದು ದೃಢಪಟ್ಟಿತು” ಎಂದು ಜಗನ್ನಾಥ್ ಹೇಳಿದ್ದಾರೆ.
ಅಂದಹಾಗೆ, ರಾಯಗಡ ಜಿಲ್ಲೆಯ ಪ್ರಮುಖ ಬುಡಕಟ್ಟು ನಾಯಕರಾಗಿದ್ದ ಭಗೀರಥಿ ಮಂದಂಗಿ ಅವರು 16ನೇ ಶತಮಾನದ ಪ್ರಸಿದ್ಧ ‘ಮಜ್ಜಿಘರಿಯಾನಿ’ ದೇವಸ್ಥಾನದ ಟ್ರಸ್ಟಿಯಾಗಿದ್ದರು. ಅವರ ಹತ್ಯೆಯು ಒಡಿಶಾದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಸರಣಿ ಘಟನೆಗಳಿಗೆ ನಾಂದಿ ಹಾಡಿತ್ತು. ದೇವಸ್ಥಾನದ ಹಣಕಾಸಿನ ಅವ್ಯವಹಾರದ ಆರೋಪಗಳು, ಪೊಲೀಸ್ ತನಿಖೆಯ ವೈಫಲ್ಯಗಳು, ಪ್ರತೀಕಾರಕ್ಕಾಗಿ ನಡೆದ ಜೋಡಿ ಕೊಲೆಗಳು ಹಾಗೂ ಬರೋಬ್ಬರಿ 16 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ಅವರ ಕೊಲೆ ಪ್ರಕರಣದಲ್ಲಿ ಬಿಜು ಜನತಾ ದಳದ (BJD) ಮಾಜಿ ಪ್ರಭಾವಿ ನಾಯಕ, ಮಾಜಿ ರಾಜ್ಯಸಭಾ ಸಂಸದ ನಕ್ಕಿಂತಿ ಭಾಸ್ಕರ್ ರಾವ್ ಅವರು ಪ್ರಮುಖ ಆರೋಪಿಯಾಗಿದ್ದಾರೆ. 2025ರ ಸೆಪ್ಟೆಂಬರ್ನಲ್ಲಿ ಬಿಜೆಡಿ ತೊರೆದಿದ್ದ ರಾವ್ ಮತ್ತು ಇತರ ನಾಲ್ವರು ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಕಳೆದ ಅಕ್ಟೋಬರ್ 26ರಂದು ರದ್ದುಗೊಳಿಸಿತ್ತು. ಈ ಬೆನ್ನಲ್ಲೇ, ಅವರು ನವೆಂಬರ್ 9ರಂದು ಉಪ-ವಿಭಾಗೀಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಅವರಿಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಇಡೀ ಪ್ರಕರಣದ ಕೇಂದ್ರಬಿಂದು 16ನೇ ಶತಮಾನದ ಐತಿಹಾಸಿಕ ‘ಮಜ್ಜಿಘರಿಯಾನಿ’ ದೇವಸ್ಥಾನದ ನಿಧಿ ಮತ್ತು ಆಭರಣಗಳ ದುರುಪಯೋಗದ ಆರೋಪ. ಈ ದೇವಾಲಯಕ್ಕೆ ಟ್ರಸ್ಟಿಯಾಗಿದ್ದ ಭಗೀರಥಿ ಅವರ ಕೊಲೆಗೂ ದೇವಾಲಯದ ನಿಧಿ ಅಕ್ರಮಕ್ಕೂ ಸಂಬಂಧವಿದೆ ಎಂದು ಆರಂಭದಿಂದಲೂ ಹೇಳಲಾಗಿತ್ತು. ದೇವಸ್ಥಾನಕ್ಕೆ ಭಕ್ತರು ನೀಡಿದ್ದ ನಗದು ಮತ್ತು ಚಿನ್ನಾಭರಣಗಳ ದುರುಪಯೋಗವನ್ನು ಭಗೀರಥಿ ವಿರೋಧಿಸಿದ್ದೇ ಅವರ ಕೊಲೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದರು. ಮಾತ್ರವಲ್ಲದೆ, ಅವರನ್ನು ಕೊಲೆ ಮಾಡುವ ಮೊದಲು ಕೈಕಾಲುಗಳನ್ನು ಕಟ್ಟಿಹಾಕಲಾಗಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿತ್ತು.
ಆದ್ದರಿಂದಲೇ, ಅವರ ಮೃತದೇಹ ಪತ್ತೆಯಾದ ಎರಡು ದಿನಗಳ ಬಳಿಕ (2010 ಡಿಸೆಂಬರ್ 23) ರಾಯಗಡ ಪೊಲೀಸರು ಅಪಹರಣ, ಕೊಲೆ, ಕ್ರಿಮಿನಲ್ ಪಿತೂರಿ ಹಾಗೂ ಸಾಕ್ಷ್ಯ ನಾಶದ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದರು. ಆದರೆ, ಯಾರನ್ನೂ ಬಂಧಿಸಿರಲಿಲ್ಲ. ಆದಾಗ್ಯೂ, ಅವರ ಮೃತದೇಹ ಪತ್ತೆಯಾಗುವ ಮೊದಲೇ ಅವರ ಸಹೋದರ ಜಗನ್ನಾಥ್ ನೀಡಿದ್ದ ದೂರಿನಲ್ಲಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ, ಭಾಸ್ಕರ್ ರಾವ್ ಅವರ ಸಹೋದರ ಎನ್. ಪೆರಿ ರಾಜು ಮತ್ತು ಭಾಸ್ಕರ್ ರಾವ್ ಅವರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಅಪರಿಚಿತರ ವಿರುದ್ಧ ದಾಖಲಾಗಿದ್ದ ಎಫ್ಐಆರ್ನಲ್ಲಿ ನಂತರದ ಹಂತದಲ್ಲಿ ರಾವ್ ಮತ್ತು ಇತರ ಆರೋಪಿಗಳ ಹೆಸರನ್ನು ಸೇರಿಸಲಾಯಿತು. ಪೊಲೀಸ್ ತನಿಖೆಯ ಮಂದಗತಿಯನ್ನು ಖಂಡಿಸಿ ಬುಡಕಟ್ಟು ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ ಪರಿಣಾಮ, 2011ರ ಏಪ್ರಿಲ್ 5ರಂದು ಅಂದಿನ ಬಿಜೆಡಿ ಸರ್ಕಾರವು ಪ್ರಕರಣವನ್ನು ಒಡಿಶಾ ಕ್ರೈಂ ಬ್ರಾಂಚ್ಗೆ ಹಸ್ತಾಂತರಿಸಿತು.
ಕ್ರೈಂ ಬ್ರಾಂಚ್ ತನಿಖೆ ಕೈಗೆತ್ತಿಕೊಂಡ ಒಂದು ತಿಂಗಳೊಳಗೆ, ಅಂದರೆ 2011ರ ಮೇ 1ರಂದು ಪ್ರಕರಣಕ್ಕೆ ಮತ್ತೊಂದು ಭೀಕರ ತಿರುವು ಸಿಕ್ಕಿತು. ಭಾಸ್ಕರ್ ರಾವ್ ಅವರ ಸಹೋದರರಾದ ಎನ್. ಪೆರಿ ರಾಜು ಮತ್ತು ಎನ್. ನಾಗೇಶ್ವರ ರಾವ್ ಚೌಧರಿ ಅವರ ಮೇಲೆ ದೇವಸ್ಥಾನದ ಆವರಣದಲ್ಲೇ ಮಾರಣಾಂತಿಕ ದಾಳಿ ನಡೆಸಿ ಹತ್ಯೆ ಮಾಡಲಾಯಿತು. ಭಗೀರಥಿ ಹತ್ಯೆಗೆ ಪ್ರತೀಕಾರವಾಗಿ ಈ ಜೋಡಿ ಕೊಲೆ ನಡೆದಿದೆ ಎಂದು ತನಿಖಾಧಿಕಾರಿಗಳು ಶಂಕಿಸಿ ನಾಲ್ವರನ್ನು ಬಂಧಿಸಿದ್ದರು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆ ನಾಲ್ವರು ನಂತರ ಖುಲಾಸೆಗೊಂಡರು.
ಮತ್ತೊಂದೆಡೆ, ಭಗೀರಥಿ ಕೊಲೆ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಮಂದಂಗಿ ಕುಟುಂಬವು 2014ರಲ್ಲಿ ಸಿಬಿಐ ತನಿಖೆ ಕೋರಿ ಒಡಿಶಾ ಹೈಕೋರ್ಟ್ ಮೆಟ್ಟಿಲೇರಿತು. ಸಿಬಿಐ ತನಿಖೆಗೆ ನಿರಾಕರಿಸಿದ ಹೈಕೋರ್ಟ್, 2016ರ ಮೇ ತಿಂಗಳಲ್ಲಿ ಡಿವೈಎಸ್ಪಿ ಶ್ರೇಣಿಗಿಂತ ಕಡಿಮೆಯಿಲ್ಲದ ಹಿರಿಯ ಅಧಿಕಾರಿಯಿಂದ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕ್ರೈಂ ಬ್ರಾಂಚ್ಗೆ ನಿರ್ದೇಶನ ನೀಡಿತು. ಆರಂಭಿಕ ತನಿಖೆಯಲ್ಲಿ ಪೊಲೀಸರು ಅಪರಾಧ ನಡೆದ ಸ್ಥಳ ಮತ್ತು ಶವ ಪತ್ತೆಯಾದ ಸ್ಥಳದಿಂದ ನಿರ್ಣಾಯಕ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಫಲರಾಗಿದ್ದರು. ಅಲ್ಲದೆ, ಇದೇ ಹೊತ್ತಿನಲ್ಲಿ, ಮಾವೋವಾದಿಗಳು ಈ ಹತ್ಯೆ ಮಾಡಿರಬಹುದು ಎಂಬ ವದಂತಿಗಳನ್ನೂ ಹರಿಬಿಡಲಾಗಿತ್ತು.
ಈ ಲೇಖನ ಓದಿದ್ದೀರಾ?: ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ ಹಿನ್ನೆಲೆಯೇನು? ಪ್ರಸ್ತುತ ಮಹತ್ವವೇನು?
ಪ್ರಕರಣದಲ್ಲಿ ಸಾಕ್ಷ್ಯಗಳ ಅನಿಶ್ಚಿತತೆಯಿಂದಾಗಿ ವರ್ಷಗಳ ಕಾಲ ತನಿಖೆಯು ಸ್ಥಗಿತಗೊಂಡಿತ್ತು. ಇದೇ ಸಾಕ್ಷ್ಯಗಳ ಕೊರತೆಯ ಕಾರಣವೊಡ್ಡಿ 2024ರ ಜನವರಿಯಲ್ಲಿ ಒಡಿಶಾ ಪೊಲೀಸರು ನ್ಯಾಯಾಲಯಕ್ಕೆ ‘ಮುಕ್ತಾಯ ವರದಿ’ ಸಲ್ಲಿಸಿದರು. ಇದನ್ನು ಪ್ರಶ್ನಿಸಿ ಜಗನ್ನಾಥ್ ಮಂದಂಗಿ ಅವರು 2024ರ ಫೆಬ್ರವರಿಯಲ್ಲಿ ಎಸ್ಡಿಜೆಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಪ್ರಕರಣದಲ್ಲಿ ಗಣನೀಯ ಸಾಕ್ಷ್ಯಾಧಾರಗಳು ಮತ್ತು ಸಾಕ್ಷಿಗಳ ಹೇಳಿಕೆಗಳಿರುವುದನ್ನು ಪರಿಗಣಿಸಿದ ನ್ಯಾಯಾಲಯವು 2024ರ ನವೆಂಬರ್ನಲ್ಲಿ ಭಾಸ್ಕರ್ ರಾವ್ ಮತ್ತು ಇತರ ಐವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತು. ಇದನ್ನು ಪ್ರಶ್ನಿಸಿ ರಾವ್ ಒಡಿಶಾ ಹೈಕೋರ್ಟ್ ಮೆಟ್ಟಿಲೇರಿದಾಗ, ವಿಚಾರಣಾ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆಯುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ, 2026ರ ಜನವರಿ 30ರಂದು ರಾಯಗಡ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು.
ಆದರೆ, ಅಕ್ಟೋಬರ್ 26ರಂದು ಈ ಜಾಮೀನನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್ದೇವ ಅವರ ಪೀಠವು, “ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ. ಅಲ್ಲದೆ, ಯಾವ ಷರತ್ತುಗಳ ಮೇಲೆ ಕೆಳ ನ್ಯಾಯಾಲಯವು ಜಾಮೀನು ನೀಡಬೇಕೆಂದು ಹೈಕೋರ್ಟ್ ನಿರ್ದೇಶನ ನೀಡುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.
ಇದೀಗ, ಭಾಸ್ಕರ್ ರಾವ್ ಅವರು ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಅವರು ಜೈಲು ಪಾಲಾಗಿರುವ ಬಗ್ಗೆ ಪ್ರಕ್ರಿಯಿಸಿರುವ ಜಗನ್ನಾಥ್ ಮಂದಂಗಿ, “ನನ್ನ ಸಹೋದರನ ಕೊಲೆ ಪ್ರಕರಣದಲ್ಲಿ ನಮಗೆ ಇನ್ನೂ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ನಮ್ಮ ಕಾನೂನು ಹೋರಾಟ ನಿರಂತರವಾಗಿ ಮುಂದುವರಿಯಲಿದೆ” ಎಂದಿರುವುದಾಗಿ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.



