ಬಿರ್ಸಾ ಮುಂಡಾ ಅವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಾಗಿರಲಿಲ್ಲ. ಅವರು ಸಾಮಾಜಿಕ ಪರಿವರ್ತನೆಯ ಹರಿಕಾರರೂ ಆಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಸುರೇಖಾ ವಿ.ಕೆ. ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕ್ರಾಂತಿವೀರ ಬಿರ್ಸಾ ಮುಂಡಾ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಅರ್ಪಿಸಿದ ಬಳಿಕ ಅವರು ಮಾತನಾಡಿದರು.
ಬಿರ್ಸಾ ಮುಂಡಾ ಅವರು ಮೂಢನಂಬಿಕೆ, ಸಾಮಾಜಿಕ ಅಸಮಾನತೆ ಮತ್ತು ಶೋಷಣೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಶಿಕ್ಷಣ, ಸಂಘಟನೆ ಹಾಗೂ ಸ್ವಾಭಿಮಾನದ ಮೂಲಕ ಎಲ್ಲ ಸಮುದಾಯದ ಜನರು ಗೌರವಯುತ ಬದುಕು ಕಟ್ಟಿಕೊಳ್ಳಬೇಕು ಎಂಬ ಆಶಯ ಹೊಂದಿದ್ದರು ಎಂದು ತಿಳಿಸಿದರು.
ಅಲ್ಪಾವಧಿಯ ಜೀವನದಲ್ಲಿಯೇ ಅಪಾರ ಹೋರಾಟದ ಚೈತನ್ಯ ಮೂಡಿಸಿದ ಬಿರ್ಸಾ ಮುಂಡಾ, ಆದಿವಾಸಿ ಸಮುದಾಯದ ಮೇಲೆ ಬ್ರಿಟಿಷರು ನಡೆಸುತ್ತಿದ್ದ ಶೋಷಣೆ, ಭೂಮಿ ಕಬಳಿಕೆ, ಸಾಮಾಜಿಕ ಅನ್ಯಾಯ ಹಾಗೂ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದರು. ಜನರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿ, ತಮ್ಮ ಹೋರಾಟದ ಮೂಲಕ ಸ್ವಾಭಿಮಾನದ ಬದುಕಿಗೆ ಪ್ರೇರಣೆಯಾಗಿದ್ದರು. ಅವರ ಜಯಂತಿ ಆಚರಣೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಆದಿವಾಸಿ ವೀರರ ತ್ಯಾಗ, ಬಲಿದಾನ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸಿ ಗೌರವಿಸುವ ಸಂದರ್ಭವಾಗಿದೆ ಎಂದರು.

ಜೈ ಸೇವಾ ಆಶ್ರಮದ ರತನ್ ಮಹಾರಾಜ್ ಮಾತನಾಡಿ, “ಬಿರ್ಸಾ ಮುಂಡಾ ಅವರು ಕೇವಲ 25 ವರ್ಷಗಳ ಅಲ್ಪಾವಧಿ ಜೀವನದಲ್ಲಿಯೇ ಎಲ್ಲ ಧರ್ಮಗಳ ಹಾಗೂ ಸಮುದಾಯಗಳ ಜನರ ಹಿತಕ್ಕಾಗಿ ಶತಮಾನಗಳವರೆಗೆ ಸ್ಮರಣೀಯವಾಗುವಂತಹ ಹೋರಾಟ ನಡೆಸಿದ ವೀರರಾಗಿದ್ದಾರೆ. ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆಯೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು” ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಿರೀಶ್ ರಂಜೋಳಕರ್, ತಾಲೂಕು ಅಧಿಕಾರಿ ಶಂಕ್ರಯ್ಯ ಬಂಕಾಪುರ, ಸಾಹಿತಿ ಮಾಣಿಕ ನೇಳಗಿ, ಪತ್ರಕರ್ತರಾದ ಮಾಳಪ್ಪ ಅಡಸಾರೆ, ಸುನೀಲ ಭಾವಿಕಟ್ಟಿ ಸೇರಿದಂತೆ ಪ್ರಮುಖರಾದ ರಾಜೇಂದ್ರ ಪಾರ್ಧಿ, ವಿಜಯಕುಮಾರ ಡುಮ್ಮೆ, ಸುನೀಲ ಖಾಸೆಂಪುರ, ಶರಣಪ್ಪ ಖಾಸೆಂಪುರ, ಚಂದ್ರು ಶಾಮು ಪುಷ್ನಾಳೆ, ಷಣ್ಮುಖಪ್ಪ ಶೆಕಾಪುರ, ಬೀರಪ್ಪ ವಡಗಾಂವ್, ಪಂಡರಿ ನೇಳಗೆ, ಸಂಜು ಕೋಳಿ ಅಲಿಯಂಬರ್, ನಂದು ಪಾರ್ಧಿ, ಗಣಪತಿ, ಸೋಪಾನ್, ಲಕ್ಷ್ಮಣ ಪಾರ್ಧಿ, ಲಕ್ಷ್ಮೀ ಪಾರ್ಧಿ, ವಿವೇಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ರೈತರ ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಭಗವಂತ ಖೂಬಾ



