ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಸೋಮವಾರ ನಡೆದ ಪುರುಷರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಭಾರತ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ. ಕರ್ನಾಟಕದ ರುದ್ರಾಕ್ಷ್ ಪಾಟೀಲ್, ಹಿಮಾಂಶು ಧಿಲ್ಲೋನ್ ಮತ್ತು ರಾಕೇಶ್ ಮಾನೆ ಅವರನ್ನೊಳಗೊಂಡ ಭಾರತೀಯ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತಂದಿದೆ. ಈ ವಿಭಾಗದಲ್ಲಿ ಚೀನಾ ಚಿನ್ನ ಗೆದ್ದರೆ, ದಕ್ಷಿಣ ಕೊರಿಯಾ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ.
ತಂಡ ವಿಭಾಗದಲ್ಲಿ ಬೆಳ್ಳಿ ಗೆದ್ದ ಸಂಭ್ರಮದ ಜೊತೆಗೆ, ರುದ್ರಾಕ್ಷ್ ಪಾಟೀಲ್ ಮತ್ತು ಹಿಮಾಂಶು ಧಿಲ್ಲೋನ್ ಪುರುಷರ ವೈಯಕ್ತಿಕ 10 ಮೀಟರ್ ಏರ್ ರೈಫಲ್ ಫೈನಲ್‌ಗೂ ಲಗ್ಗೆ ಇಟ್ಟಿದ್ದಾರೆ. ಅರ್ಹತಾ ಸುತ್ತಿನಲ್ಲಿ ಇವರಿಬ್ಬರು ಕ್ರಮವಾಗಿ ಮೂರು ಮತ್ತು ಏಳನೇ ಸ್ಥಾನ ಗಳಿಸುವ ಮೂಲಕ ಪದಕದ ಭರವಸೆ ಮೂಡಿಸಿದ್ದಾರೆ. ಇದೇ ವೇಳೆ, ಚೀನಾ ತಂಡವು 1899 ಅಂಕಗಳೊಂದಿಗೆ ಭಾರತದ ಹಿಂದಿನ ದಾಖಲೆಯನ್ನು ಮುರಿದು ಹೊಸ ಏಷ್ಯನ್ ದಾಖಲೆ ನಿರ್ಮಿಸಿರುವುದು ಗಮನಾರ್ಹ.
ಮಹಿಳೆಯರ ಟೇಬಲ್ ಟೆನಿಸ್ ಗುಂಪು ಹಂತದ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 3-0 ಅಂತರದಿಂದ ಬಗ್ಗುಬಡಿದಿದೆ. ಸುತೀರ್ಥ ಮುಖರ್ಜಿ, ಸಿಂಡ್ರೆಲಾ ದಾಸ್ ಮತ್ತು ಶ್ರೀಜಾ ಅಕುಲ ಅವರು ನೇರ ಸೆಟ್‌ಗಳಿಂದ ಪಾಕ್ ಆಟಗಾರ್ತಿಯರನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಪಂದ್ಯದ ಬಳಿಕ ಉಭಯ ದೇಶಗಳ ಆಟಗಾರ್ತಿಯರು ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಉತ್ತಮ ಕ್ರೀಡಾಸ್ಫೂರ್ತಿ ಮೆರೆದಿದ್ದು ವಿಶೇಷವಾಗಿತ್ತು.
ಈಜು ಸ್ಪರ್ಧೆಯ ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಶ್ರೀಹರಿ ನಟರಾಜ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಆದರೆ, ಬಹುನಿರೀಕ್ಷಿತ 4×200 ಮೀಟರ್ ರಿಲೇಯಲ್ಲಿ ನಟ ಆರ್. ಮಾಧವನ್ ಪುತ್ರ ವೇದಾಂತ್ ಮಾಧವನ್ ಉತ್ತಮ ಆರಂಭ ಒದಗಿಸಿದರೂ ಅಂತಿಮವಾಗಿ ಭಾರತ ಕೊನೆಯ ಸ್ಥಾನ ಪಡೆದು ನಿರಾಸೆ ಮೂಡಿಸಿದೆ. ಅತ್ತ, ವುಶು ಕ್ರೀಡೆಯ ಮಹಿಳೆಯರ ಚಾಂಗ್‌ಕ್ವಾನ್ ಫೈನಲ್‌ನಲ್ಲಿ ನ್ಯೆಮನ್ ವಾಂಗ್ಸು 15ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಸೆಪಾಕ್‌ಟಾಕ್ರೋ ಕ್ರೀಡೆಯ ಪುರುಷರ ತಂಡ ವಿಭಾಗದಲ್ಲಿ ಜಪಾನ್ ವಿರುದ್ಧ ಭಾರತ ರೋಚಕ ಜಯ ಸಾಧಿಸಿದೆ. ಮೊದಲ ಸೆಟ್‌ನಲ್ಲಿ 5-10 ಹಿನ್ನಡೆಯಲ್ಲಿದ್ದರೂ, ದಿಟ್ಟ ಹೋರಾಟ ನಡೆಸಿ 15-13 ಅಂತರದಿಂದ ಗೆಲುವು ಒಲಿಸಿಕೊಂಡಿದೆ. ಇನ್ನೊಂದೆಡೆ, ಸಾಫ್ಟ್ ಟೆನಿಸ್ ಮಿಶ್ರ ಡಬಲ್ಸ್‌ನಲ್ಲಿ ಜೇ ಮೀನಾ ಮತ್ತು ಆದ್ಯಾ ತಿವಾರಿ ಜೋಡಿಯು ಕಾಂಬೋಡಿಯಾ ವಿರುದ್ಧ 5-0 ಅಂತರದ ಭರ್ಜರಿ ಜಯ ದಾಖಲಿಸಿ ಮುಂದಿನ ಹಂತಕ್ಕೆ ಮುನ್ನಡೆದಿದೆ.
ಚೀನಾ 11 ಚಿನ್ನ, 6 ಬೆಳ್ಳಿ ಹಾಗೂ 3 ಕಂಚು ಸೇರಿ ಒಟ್ಟು 20 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಜಪಾನ್ (6 ಚಿನ್ನ ಸೇರಿ ಒಟ್ಟು 20 ಪದಕ) ದ್ವಿತೀಯ ಹಾಗೂ ದಕ್ಷಿಣ ಕೊರಿಯಾ (4 ಚಿನ್ನ ಸೇರಿ 14 ಪದಕ) ತೃತೀಯ ಸ್ಥಾನದಲ್ಲಿವೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ (ಇಳವೇನಿಲ್ ವಲರಿವನ್, ಸೋನಮ್ ಉತ್ತಮ ಮಸ್ಕರ್, ವಿದರ್ಸಾ ಕೆ) ಮತ್ತು ಮಹಿಳೆಯರ 10 ಮೀ. ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ತಲಾ ಒಂದು ಬೆಳ್ಳಿ ಗೆದ್ದಿದ್ದ ಭಾರತ 10ನೇ ಸ್ಥಾನದಲ್ಲಿದೆ. ಇದೀಗ ಪುರುಷರ ಶೂಟಿಂಗ್ ತಂಡ ಗೆದ್ದ ಬೆಳ್ಳಿಯೂ ಸೇರಿ ಕ್ರೀಡಾಕೂಟದಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 3ಕ್ಕೇರಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಪದಕಗಳ ನಿರೀಕ್ಷೆಯಿದೆ.




