ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ತಂಡದ ಕ್ರಿಕೆಟಿಗ ಶಶಾಂಕ್ ಸಿಂಗ್, ಅವರ ತಂದೆ ಹಾಗೂ ಚಾಲಕನ ವಿರುದ್ಧ ತಮ್ಮ ಮನೆಯ ಅಡುಗೆಯವನನ್ನು ಕೂಡಿಹಾಕಿ, ನಿಂದಿಸಿ, ದೈಹಿಕ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪದಡಿ ಭೋಪಾಲ್‌ನ ರತೀಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಧ್ಯಪ್ರದೇಶದ ರೇವಾ ಮೂಲದ ವಿಪೇಂದ್ರ ಸಿಂಗ್ ತೋಮರ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 296(B), 115(2) ಮತ್ತು 3(5) ಅಡಿಯಲ್ಲಿ ಕ್ರಿಕೆಟಿಗ ಶಶಾಂಕ್ ಸಿಂಗ್, ನಿವೃತ್ತ ಐಪಿಎಸ್ ಅಧಿಕಾರಿಯಾಗಿರುವ ಅವರ ತಂದೆ ಶೈಲೇಶ್ ಸಿಂಗ್ ಮತ್ತು ಚಾಲಕ ಮಿಶ್ರಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೂನ್ 25ರಂದು ಭೋಪಾಲ್‌ನ ನೀಲ್ಬಾದ್‌ನಲ್ಲಿರುವ ಶಶಾಂಕ್ ಅವರ ಮನೆಗೆ ವಿಪೇಂದ್ರ ಸಿಂಗ್ ಅವರನ್ನು ತಿಂಗಳಿಗೆ 15,000 ಸಂಬಳ ಹಾಗೂ ಊಟ, ವಸತಿ ಸೌಲಭ್ಯದ ಒಪ್ಪಂದದ ಮೇರೆಗೆ ಖಾಸಗಿ ಅಡುಗೆಯವರಾಗಿ ನೇಮಿಸಿಕೊಳ್ಳಲಾಗಿತ್ತು.
ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೇ ಕಿರುಕುಳ ನೀಡಲಾರಂಭಿಸಿದ ಅವರು ನನ್ನ ಮೊಬೈಲ್ ಕಸಿದುಕೊಂಡರು, ಜೂನ್ 28ರಂದು ಮೊಬೈಲ್ ಹಿಂದಿರುಗಿಸುವಂತೆ ಕೇಳಿದಾಗ, ತಂದೆ-ಮಗ ಹಾಗೂ ಚಾಲಕ ಸೇರಿ ನನ್ನನ್ನು ಕೋಣೆಯಲ್ಲಿ ಕೂಡಿಹಾಕಿ, ದೈಹಿಕವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ದೂರಿನಲ್ಲಿ ವಿಪೇಂದ್ರ ಆರೋಪಿಸಿದ್ದಾರೆ. ಅಲ್ಲದೆ, ಮನೆಯಲ್ಲಿ ಮೂರು ದಿನ ಊಟ ಮಾಡಿದ್ದಕ್ಕಾಗಿ ಬಲವಂತವಾಗಿ ನನ್ನ ಫೋನ್‌ನಿಂದ 1,000 ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಕೆಲಸದಿಂದ ಕಿತ್ತುಹಾಕಿದರು ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.
ಇದನ್ನು ಓದಿದ್ದೀರಾ? ಕೃತಕ ಬುದ್ಧಿಮತ್ತೆಯೆಂಬ ಹೊಸ ಗುಲಾಮಗಿರಿ: ‘ಎಐ’ಗೆ ಬೇಕು ಸಾಂವಿಧಾನಿಕ ಬಲ
ತಮ್ಮ ಮೇಲಿನ ಹಲ್ಲೆ ಹಾಗೂ ಕೂಡಿಹಾಕಿದ ಎಲ್ಲಾ ಆರೋಪಗಳನ್ನು ಶಶಾಂಕ್ ಸಿಂಗ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ನಾವು ಯಾರನ್ನೂ ಕೂಡಿಹಾಕಿಲ್ಲ ಅಥವಾ ದೈಹಿಕವಾಗಿ ಹಲ್ಲೆ ಮಾಡಿಲ್ಲ, ಆತ ಅಡುಗೆಯವನೆಂದು ಹೇಳಿಕೊಂಡು ಕೆಲಸಕ್ಕೆ ಬಂದಿದ್ದ, ಆದರೆ ಆತನಿಗೆ ಅಡುಗೆ ಮಾಡುವುದೇ ಬರುತ್ತಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಡುಗೆ ಮಾಡುವ ಬದಲು ಆತ ನಮ್ಮ ಮನೆಯ ಒಳಗೆ, ನನ್ನ ಕೋಣೆಯೊಳಗೆ ಬಂದು ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನು ತೆಗೆಯುತ್ತಿದ್ದ. ಕಳ್ಳತನ ಮಾಡುವ ಉದ್ದೇಶದಿಂದಲೇ ಆತ ಬಂದಿದ್ದ ಎನ್ನುವ ಬಲವಾದ ಅನುಮಾನವಿದೆ, ಅದೃಷ್ಟವಶಾತ್ ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾಗಿಲ್ಲ ಎಂದಿದ್ದಾರೆ.
ಆತನ ಮೊಬೈಲ್‌ನಲ್ಲಿ ನಮ್ಮ ಮನೆಯ ಅತ್ಯಂತ ಖಾಸಗಿ ಫೋಟೋಗಳು ಹಾಗೂ ವಿಡಿಯೋಗಳು ಇದ್ದುದರಿಂದ ನನ್ನ ತಾಯಿ ಆತನ ಬಳಿ ಅವುಗಳನ್ನು ಡಿಲೀಟ್ ಮಾಡಿಸಿದ್ದಾರೆ, ಆತ ತಪ್ಪು ಮಾಡಿದ್ದರಿಂದ ನಾವೇ ಸಹಾಯವಾಣಿ 100ಕ್ಕೆ ಕರೆ ಮಾಡಿ ಪೊಲೀಸರಿಗೆ ಒಪ್ಪಿಸಬೇಕಿತ್ತು, ಆದರೆ ಆತ ಕ್ಷಮೆ ಕೇಳಿ ಬೇಡಿಕೊಂಡಿದ್ದರಿಂದ ನಾವು ಬಿಟ್ಟು ಕಳುಹಿಸಿದೆವು ಎಂದು ಶಶಾಂಕ್ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಭೋಪಾಲ್ ಪೊಲೀಸರು ಇದೀಗ ತನಿಖೆ ಚುರುಕುಗೊಳಿಸಿದ್ದಾರೆ. ದೂರುದಾರ ವಿಪೇಂದ್ರ ಸಿಂಗ್ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವೈದ್ಯಕೀಯ ವರದಿ ಹಾಗೂ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಡಿಸಿಪಿ ರಶ್ಮಿ ಅಗರ್ವಾಲ್ ದುಬೆ ಸ್ಪಷ್ಟಪಡಿಸಿದ್ದಾರೆ.




