ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ 15 ವರ್ಷದ ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿಗೆ ಪದಾರ್ಪಣೆ ಮಾಡಲು ಅವಕಾಶ ನೀಡದಿರುವ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಭಾರತ ತಂಡದ ಸಹಾಯಕ ಕೋಚ್ ರಿಯಾನ್ ಟೆನ್ ಡೊಸ್ಚೇಟ್ ಸ್ಪಷ್ಟನೆ ನೀಡಿದ್ದಾರೆ. ‘ವೈಭವ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಂಪೂರ್ಣ ಸಿದ್ಧರಾಗಿದ್ದಾರೆ. ಆದರೆ, ತಂಡದಲ್ಲಿ ಸ್ಥಾನ ಪಡೆಯುವ ಮುನ್ನ ಇತರ ಆಟಗಾರರಂತೆ ಅವರು ಕೂಡ ಒಂದು ನಿರ್ದಿಷ್ಟ ಪ್ರಕ್ರಿಯೆಯನ್ನು ಪಾಲಿಸಬೇಕಿದೆ’ ಎಂದು ಅವರು ಹೇಳಿದ್ದಾರೆ.
ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತ ತಂಡವು ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಸರಣಿಯಲ್ಲಿ 0-2 ಅಂತರದ ವೈಟ್‌ವಾಶ್ ಮುಖಭಂಗ ಅನುಭವಿಸಿದೆ. ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಕೇವಲ 1 ರನ್‌ನಿಂದ ಭಾರತ ವಿರೋಚಿತ ಸೋಲು ಕಂಡಿತ್ತು. ಈ ಸರಣಿಯಲ್ಲಿ ಐಪಿಎಲ್ ಹೀರೊ ವೈಭವ್‌ಗೆ ಅವಕಾಶ ನೀಡದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಚ್ ರಿಯಾನ್, “ವೈಭವ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಿದ್ಧರಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಕೇವಲ ಮೂರು ತಿಂಗಳ ಹಿಂದೆಯಷ್ಟೇ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡುವಲ್ಲಿ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸಿದ್ದರು. ಅವರ ಐಪಿಎಲ್ ಪ್ರದರ್ಶನವೂ ಉತ್ತಮವಾಗಿತ್ತು. ಆಟಗಾರರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಮುಖ್ಯವಾಗಿದ್ದು, ಅವರಿಗೆ ತಂಡದಲ್ಲಿ ಸುದೀರ್ಘ ಅವಕಾಶ ನೀಡಲು ನಾವು ಬಯಸಿದ್ದೇವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಐರ್ಲೆಂಡ್ ವಿರುದ್ಧದ ಮೊದಲ ಟಿ20: ಯುವ ಪ್ರತಿಭೆ ವೈಭವ್‌ಗೆ ಅವಕಾಶ ಕೈತಪ್ಪಿದ್ದೇಕೆ?
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ 230ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಬರೋಬ್ಬರಿ 776 ರನ್ ಸಿಡಿಸಿದ್ದರು. ಅಲ್ಲದೆ, ಟೂರ್ನಿಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯೊಂದಿಗೆ ‘ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್’ ಮತ್ತು ‘ಎಮರ್ಜಿಂಗ್ ಪ್ಲೇಯರ್’ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.
“ವೈಭವ್ ಆಟವನ್ನು ನೋಡಲು ನಾವೆಲ್ಲರೂ ಉತ್ಸುಕರಾಗಿದ್ದೇವೆ, ಆತ ಎಷ್ಟೊಂದು ಪ್ರತಿಭಾವಂತ ಎನ್ನುವುದರಲ್ಲಿ ಪ್ರಶ್ನೆಯೇ ಇಲ್ಲ. ಆದರೆ ಅವರು ನಿಗದಿತ ಪ್ರಕ್ರಿಯೆಯ ಮೂಲಕವೇ ಬರಬೇಕಿದೆ” ಎಂದು ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಹೇಳಿದ್ದ ಮಾತನ್ನೇ ರಿಯಾನ್ ಟೆನ್ ಡೊಸ್ಚೇಟ್ ಕೂಡ ಪುನರುಚ್ಚರಿಸಿದರು.
ಜುಲೈ 1ರಿಂದ ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಟಿ20 ಸರಣಿಗೆ ಭಾರತ ತಂಡ ತೆರಳಲಿದೆ. ಈ ಸರಣಿಯಲ್ಲಿ ವೈಭವ್ ಪದಾರ್ಪಣೆ ಮಾಡಿದರೆ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತದ ಅತಿ ಕಿರಿಯ ಆಟಗಾರ ಎಂಬ ಇತಿಹಾಸ ನಿರ್ಮಿಸಲಿದ್ದಾರೆ. 16ನೇ ವಯಸ್ಸಿಗೆ ಪದಾರ್ಪಣೆ ಮಾಡಿದ್ದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು 15 ವರ್ಷದ ವೈಭವ್ ಮುರಿಯಲಿದ್ದಾರೆ.




