ಕರ್ನಾಟಕದಾದ್ಯಂತ ಅಕ್ರಮ ಆಸ್ತಿ (ಡಿಎ) ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸೆಪ್ಟೆಂಬರ್ 22ರಂದು ಎಂಟು ಸರ್ಕಾರಿ ಅಧಿಕಾರಿಗಳ ಕಛೇರಿ, ಮನೆಗಳ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಒಟ್ಟು 29.61 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಬೆಂಗಳೂರು ನಗರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕಲಬುರಗಿ, ಮಂಡ್ಯ, ಕೊಡಗು, ಧಾರವಾಡ ಮತ್ತು ಬೀದರ್ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಆರೋಪಿತ ಅಧಿಕಾರಿಗಳು, ಅವರ ಸಂಬಂಧಿಕರು ಮತ್ತು ಸಹಚರರಿಗೆ ಸಂಬಂಧಿಸಿದ ಒಟ್ಟು 33 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ದಾಳಿ ವೇಳೆ 17.98 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ 11.63 ಕೋಟಿ ರೂ. ಮೌಲ್ಯದ ಚರಾಸ್ತಿ ಸೇರಿದಂತೆ ಒಟ್ಟು 29.61 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಪಾಸ್ತಿಗಳು ಪತ್ತೆಯಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ವಿವರಗಳು:
- ಶ್ರೀದೇವಿ ಜಿಲ್ಲಾ ನೋಂದಣಾಧಿಕಾರಿ, ಬಸವನಗುಡಿ, ಬೆಂಗಳೂರು: ಅತಿ ಹೆಚ್ಚು 6.80 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ. 2 ನಿವೇಶನ, 2 ಮನೆ, ಕೃಷಿ ಜಮೀನು ಹಾಗೂ ಗಾರ್ಮೆಂಟ್ ಫ್ಯಾಕ್ಟರಿ ಸೇರಿದಂತೆ ಸ್ಥಿರಾಸ್ತಿ. 30.87 ಲಕ್ಷ ನಗದು, 35.58 ಲಕ್ಷ ರೂ. ಮೌಲ್ಯದ ಚಿನ್ನ-ಬೆಳ್ಳಿ ಆಭರಣ, ವಾಹನಗಳು ಸಹ ಪತ್ತೆಯಾಗಿವೆ.
- ಶಿವರಾಜು ಎಂ. ಬಿಸಿಎಂ ಹಾಸ್ಟೆಲ್ ಸೂಪರಿಂಟೆಂಡೆಂಟ್, ಮದ್ದೂರು, ಮಂಡ್ಯ: 2.71 ಕೋಟಿ ರೂ. ಆಸ್ತಿ. 5 ನಿವೇಶನ, 2 ಮನೆ, 2 ವಾಣಿಜ್ಯ ಮಳಿಗೆ, ಫಾರ್ಮ್‌ಹೌಸ್ ಮತ್ತು ಜಮೀನು.
- ಹೆಚ್.ಎಂ. ರಂಗನಾಥ್ ನಿವೃತ್ತ ಸಹಾಯಕ ಅಭಿಯಂತರ, ಜಿಬಿಎ, ಬೆಂಗಳೂರು: 3.84 ಕೋಟಿ ರೂ. ಆಸ್ತಿ. 1.03 ಕೋಟಿ ನಗದು, 4 ಮನೆ, 2 ನಿವೇಶನ ಹಾಗೂ 9 ಎಕರೆಗೂ ಹೆಚ್ಚು ಕೃಷಿ ಭೂಮಿ.
- ರಾಜೇಶ್ವರಿ ಎಇಇ, ಜೆಸ್ಕಾಂ, ಕಲಬುರಗಿ: 1.91 ಕೋಟಿ ರೂ.
- ಹೆಚ್.ಆರ್. ರಮೇಶ್ ಮುನ್ಸಿಪಲ್ ಕಮಿಷನರ್, ಕೊಡಗು: 1.78 ಕೋಟಿ ರೂ.
- ಕಿರಣ್ ಬೈಂದೂರು ಎಇಇ, ಹೆಸ್ಕಾಂ, ಧಾರವಾಡ: 1.79 ಕೋಟಿ ರೂ.
- ದರ್ಶನ್ ಗೌಡ ಜಿ. ಎಫ್‌ಡಿಎ, ಡಿಸಿ ಕಚೇರಿ, ಚಿಕ್ಕಬಳ್ಳಾಪುರ: 1.86 ಕೋಟಿ ರೂ.
- ಮಾಣಿಕ್ ರಾವ್ ನಿವೃತ್ತ ಕೃಷಿ ಅಧಿಕಾರಿ, ಬೀದರ್: 2.51 ಕೋಟಿ ರೂ. 14 ಎಕರೆಗೂ ಹೆಚ್ಚು ಕೃಷಿ ಜಮೀನು, 3 ಮನೆ ಮತ್ತು 6 ನಿವೇಶನಗಳು.
ಲೋಕಾಯುಕ್ತ ಪೊಲೀಸರು ಸರ್ಕಾರಿ ಅಧಿಕಾರಿಗಳ ಎಲ್ಲಾ ದಾಖಲೆಗಳು, ನಗದು, ಚಿನ್ನಾಭರಣ ಹಾಗೂ ವಾಹನಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಕೈಗೊಂಡಿರುವ ಈ ಬೃಹತ್ ದಾಳಿಯು ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯ ಅಗತ್ಯವನ್ನು ಎತ್ತಿಹಿಡಿದಿದೆ. ಅಕ್ರಮ ಆಸ್ತಿ ಗಳಿಕೆಯಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದರ ಜೊತೆಗೆ, ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗದಂತೆ ತಡೆಯಲು ಕಠಿಣ ಕಾನೂನು ಕ್ರಮ ಜಾರಿಗೊಳಿಸಬೇಕೆಂಬ ಸಾರ್ವಜನಿಕ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿದೆ.





