ಚುನಾವಣಾ ಪ್ರಚಾರದಲ್ಲಿ ‘ಪ್ರಧಾನಿ ಮೋದಿ’ ಫೋಟೋ ಬಳಕೆ ಮಾಡಿದ ಹಿನ್ನೆಲೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಬಿಜೆಪಿ ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುಂದಾಗಿದ್ದಾರೆ. ಆದರೆ, ಅವರ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಬಳಕೆ ಮಾಡುತ್ತಿದ್ದಾರೆ. ಇದು ರಾಜ್ಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ, ಚುನಾವಣಾ ಪ್ರಚಾರದಲ್ಲಿ ಈಶ್ವರಪ್ಪ ಅವರು ನರೇಂದ್ರ ಮೋದಿ ಅವರ ಫೋಟೋ ಮತ್ತು ಹೆಸರು ಬಳಕೆ ಮಾಡದಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಮತ್ತು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
“ಶಿವಮೊಗ್ಗದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಇದ್ದಾರೆ. ಇದರ ಮಧ್ಯದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರವರು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಚುನಾವಣಾ ಪ್ರಚಾರದ ವೇಳೆ, ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಅವರು ಬಳಕೆ ಮಾಡುತ್ತಿದ್ದಾರೆ. ಈಶ್ವರಪ್ಪ ಪಕ್ಷದ ಅಭ್ಯರ್ಥಿ ಅಲ್ಲದ ಕಾರಣ ಪಕ್ಷದ ಹೆಸರು ಭಾವಚಿತ್ರ ಬಳಸುವ ಅಧಿಕಾರ ಅವರಿಗೆ ಇರುವುದಿಲ್ಲ. ಆ ರೀತಿಯಲ್ಲಿ ಮೋದಿ ಫೋಟೋ ಬಳಕೆ ಮಾಡಬಾರದು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ” ಎಂದು ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಹೇಳಿದರು.
“ಒಂದು ಪಕ್ಷದ ಹೆಸರನ್ನು ಮತ್ತೊಬ್ಬರು ಬಳಸಬಾರದು. ಆ ರೀತಿಯಲ್ಲಿ ಈಶ್ವರಪ್ಪ ಮಾಡುವುದು ಮುಂದುವರಿದರೆ, ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮವಾಗುತ್ತದೆ. ನಮ್ಮ ಪಕ್ಷದ ಅಭ್ಯರ್ಥಿ ಆಗಿಲ್ಲ ಅಂದರೆ ಅವರು ನಮ್ಮ ಪಕ್ಷದ ಹೆಸರು, ಭಾವಚಿತ್ರ ಬಳಸುವ ಅಧಿಕಾರ ಇರುವುದಿಲ್ಲ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ಕ್ರಾಪ್ ಗೋದಾಮಿಗೆ ಬೆಂಕಿ ತಗುಲಿ ಹೊತ್ತಿ ಉರಿದ ಎರಡು ಟ್ರಾಕ್ಟರ್, ಬೈಕ್
ಪುತ್ರ ಕಾಂತೇಶ್‌ಗೆ ಹಾವೇರಿಯಿಂದ ಬಿಜೆಪಿ ಟಿಕೆಟ್ ನೀಡದ ಕಾರಣ ಕೆ.ಎಸ್.ಈಶ್ವರಪ್ಪ ಅವರು ಬಂಡಾಯವೆದಿದ್ದಾರೆ. ಬಿ.ವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಿದ್ದಾರೆ. ಚುನಾವಣಾ ಪ್ರಚಾರದ ವೇಳೆ, ಈಶ್ವರಪ್ಪ ಅವರು ಬಿಜೆಪಿ ಚಿಹ್ನೆ ಕೈ ಬಿಟ್ಟು, ಮೋದಿ ಅವರ ಫೋಟೋ ಬಳಕೆ ಮಾಡುತ್ತಿದ್ದಾರೆ.
ಮೋದಿ ಫೋಟೊ ಬಳಕೆ ಮಾಡುವ ವಿಚಾರವಾಗಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಅವರು ಈಶ್ವರಪ್ಪ ವಿರುದ್ಧ ವ್ಯಂಗ್ಯವಾಡಿದ್ದರು.
ರಾಘವೇಂದ್ರ ಅವರಿಗೆ ತಿರುಗೇಟು ನೀಡಿದ್ದ ಈಶ್ವರಪ್ಪ, “ಮೋದಿ ಅವರಪ್ಪನ ಆಸ್ತಿನಾ, ಮೋದಿ ಭಾವಚಿತ್ರವನ್ನು ಯಾರಾದರೂ ಬಳಸಬಹುದು” ಎಂದು ಹೇಳಿದ್ದರು. ಈ ಘಟನೆ ಬೆನ್ನಲ್ಲೇ, ಮೋದಿ ಅವರ ಫೋಟೋ ಬಳಕೆಗಾಗಿ ಕೋರ್ಟ್ಗೆ ಕೆವಿಯಟ್ ಅರ್ಜಿ ಸಲ್ಲಿಸಿದ್ದಾರೆ. ಈಶ್ವರಪ್ಪ ಅವರ ದೂರು ಹೊರತುಪಡಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ನಾಲ್ಕು ದೂರು ನೀಡಿದೆ.
- ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಅಧಿಕಾರಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಊಟ ಬಡಿಸಿರುವ ಬಗ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
- ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ನಿರ್ಮಾಪಕರಾಗಿರುವ ರಣಗಲ್ ಚಲನಚಿತ್ರದ ಜಾಹೀರಾತು ಮೊತ್ತವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು ಎಂದು ದೂರು ನೀಡಿದೆ.
- ಕುಡಚಿಯಲ್ಲಿ ಬಿಜೆಪಿ ಎಲ್‌ಇಡಿ ವಾಹನದಲ್ಲಿದ್ದ ಪ್ರಣಾಳಿಕೆ ಸಲಹಾ ಪೆಟ್ಟಿಗೆಯನ್ನು ಸುಟ್ಟು ಹಾಕಿರುವ ಬಗ್ಗೆ ದೂರು.
- ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಕ್ಕಿ ಹಂಚುತ್ತಿರುವ ಆರೋಪದ ಬಗ್ಗೆ ದೂರು.