ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಆರಂಭವಾದ ಪಕ್ಷವು, ಭ್ರಷ್ಟಾಚಾರಿ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧ ದೆಹಲಿ ಸಚಿವ ರಾಜ್ ಕುಮಾರ್ ಆನಂದ್ ಆರೋಪ ಮಾಡಿದ್ದಾರೆ. ತಮ್ಮ ಸಚಿವ ಸ್ಥಾನ ಮತ್ತು ಎಎಪಿಗೆ ರಾಜೀನಾಮೆ ನೀಡಿದ್ದಾರೆ.
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಸೇರಿದಂತೆ ಪ್ರಮುಖ ನಾಯಕರನ್ನು ಇಡಿ ಬಂಧಿಸಿದ್ದು, ಜೈಲಿನಲ್ಲಿರಿಸಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಅವರೆಲ್ಲರ ಬಂಧನವನ್ನು ಖಂಡಿಸಿರುವ ‘ಇಂಡಿಯಾ’ ಮೈತ್ರಿಕೂಟ, ‘ವಿಪಕ್ಷಗಳನ್ನು ತುಳಿಯಲು ಬಿಜೆಪಿ ರಾಜಕೀಯ ಪಿತೂರಿ ಮಾಡುತ್ತಿದೆ’ ಎಂದು ಆರೋಪಿಸಿದೆ.
ಇಂತಹ ಸಮಯದಲ್ಲಿ ಆನಂದ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಎಎಪಿ ನಾಯಕ ಸೌರಭ್ ಭಾರದ್ವಾಜ್, “ಆನಂದ್ ಅವರಿಗೆ ಪಕ್ಷ ತೊರೆಯಲು ಬಿಜೆಪಿ ‘ಒತ್ತಡ’ ಹೇರಿದೆ. ಹೀಗಾಗಿಯೇ, ಅವರು ಪಕ್ಷ ತೊರೆದಿದ್ದಾರೆ” ಎಂದು ಆರೋಪಿಸಿದ್ದಾರೆ.
ರಾಜೀನಾಮೆ ನೀಡಿರುವ ಆನಂದ್, “ಭ್ರಷ್ಟಾಚಾರದ ವಿರುದ್ಧ ಹೋರಾಡುವ ಆಂದೋಲನದಿಂದ ಪಕ್ಷವು ಹೊರಹೊಮ್ಮಿದ ಕಾರಣಕ್ಕೆ ನಾನು ಎಎಪಿ ಸೇರಿದ್ದೆ. ಆದರೆ, ಇಂದು ಪಕ್ಷವು ಭ್ರಷ್ಟಚಾರದಲ್ಲಿ ತೊಡಗಿದೆ. ಅದಕ್ಕಾಗಿಯೇ ನಾನು ಪಕ್ಷ ತೊರೆಯಲು ನಿರ್ಧರಿಸಿದ್ದೇನೆ” ಎಂದು ಹೇಳಿದ್ದಾರೆ.
“ಎಎಪಿಯಲ್ಲಿ ದಲಿತ ಶಾಸಕ, ಕೌನ್ಸಿಲರ್ ಇಲ್ಲ. ನಾಯಕತ್ವ ಸ್ಥಾನಕ್ಕೂ ದಲಿತ ನಾಯಕರನ್ನು ನೇಮಿಸಿಲ್ಲ. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ನಾನು ಅನುಸರಿಸುತ್ತೇನೆ. ದಲಿತರ ಪರ ಕೆಲಸ ಮಾಡಲು ಸಾಧ್ಯವಾಗದಿದ್ದ ಮೇಲೆ ಪಕ್ಷದಲ್ಲಿ ಇರುವುದರಲ್ಲಿ ಅರ್ಥವಿಲ್ಲ” ಎಂದು ಆನಂದ್ ಹೇಳಿದ್ದಾರೆ.
2023ರ ನವೆಂಬರ್‌ನಲ್ಲಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಆನಂದ್ ಅವರ ಮನೆಯ ಮೇಲೂ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿತ್ತು.