ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ಬಳ್ಳಾರಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಮತ್ತು ಬಿರುಗಾಳಿ ನಿರೀಕ್ಷೆಯಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಇಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಸಂಜೆಯ ನಂತರ ಭಾರೀ ಮಳೆಯ ಸಾಧ್ಯತೆಯಿದೆ. ಗರಿಷ್ಠ ತಾಪಮಾನ ಸುಮಾರು 30-31°C ಮತ್ತು ಕನಿಷ್ಠ 21°C ದಾಖಲಾಗಿದೆ. ಹವಾಮಾನ ಇಲಾಖೆ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದ್ದು, ನಾಗರಿಕರು ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಲಾಗಿದೆ.
ಸಿಡಿಲು ಮತ್ತು ಬಿರುಗಾಳಿಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಮತ್ತು ಮರಗಳು ರಸ್ತೆಗುರುಳುವ ಸಾಧ್ಯತೆಯಿರುವುದರಿಂದ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಮತ್ತು ತಗ್ಗು ಪ್ರದೇಶಗಳಲ್ಲಿ ಜಾಗರೂಕತೆಯಿಂದ ವಾಹನ ಚಲಾಯಿಸುವಂತೆ ಸೂಚಿಸಲಾಗಿದೆ.
This video cannot be played in your browser. Open the video directly
ಬೆಂಗಳೂರಿನಲ್ಲಿ ಮಳೆ ಅವಾಂತರ…
ಸೋಮವಾರ ರಾತ್ರಿ ಶುರುವಾದ ಗುಡುಗು ಸಹಿತ ಭಾರೀ ಮಳೆ ಮಂಗಳವಾರ ಬೆಳಗ್ಗೆಯವರೆಗೂ ಮುಂದುವರಿಯಿತು. ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಚಾಮರಾಜಪೇಟೆ, ಶಾಂತಿನಗರ, ವಿಜಯನಗರ, ರಾಜಾಜಿನಗರ, ಬನಶಂಕರಿ, ಮಲ್ಲೇಶ್ವರಂ ಸೇರಿ ನಗರದ ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕೆಆರ್ ಮಾರ್ಕೆಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ನೀರು ನುಗ್ಗುವುದನ್ನು ತಡೆಯಲು ಹೆಣಗಾಡಿದರು. ಎರಡು ಚಕ್ರ ವಾಹನ ಸವಾರರು ಮತ್ತು ಕಾರು ಚಾಲಕರು ಜಲಾವೃತ ರಸ್ತೆಗಳಲ್ಲಿ ನಿಧಾನಗತಿಯಲ್ಲಿ ಸಂಚರಿಸಬೇಕಾಯಿತು. ಕಚೇರಿಗೆ ಹೋಗುವವರು ಮತ್ತು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತಲುಪಲು ಕಷ್ಟಪಟ್ಟರು.
ಬೆಂಗಳೂರು ಸಂಚಾರ ಪೊಲೀಸರು ಹಲವು ಕಡೆ ನಿಧಾನಗತಿ ಸಂಚಾರದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಮಾಗಡಿ ರಸ್ತೆ, ಅಯ್ಯಪ್ಪ ಅಂಡರ್‌ಪಾಸ್, ಕಾರ್ತಿಕ್ ನಗರ ಸೇರಿ ಕೆಲವು ಪ್ರಮುಖ ಮಾರ್ಗಗಳಲ್ಲಿ ನೀರು ನಿಂತಿರುವುದರಿಂದ ಹಲವೆಡೆ ಮರಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಹವಾಮಾನ ಇಲಾಖೆಯ ಪ್ರಕಾರ ನಗರದಲ್ಲಿ ಸುಮಾರು 20 ಮಿ.ಮೀ. ಮಳೆ ದಾಖಲಾಗಿದ್ದು, ಕೆಲವು ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಿದೆ.
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ಮತ್ತು ಬೇಗೂರು ಭಾಗಗಳಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಅರೆಕನಹಳ್ಳಿ ತುಂಬಿ ಹರಿದು ಲೋಕನಹಳ್ಳಿ-ಒಡೆಯರಪಾಳ್ಯ ಸಂಪರ್ಕಿಸುವ ಸೇತುವೆ ಕೊಚ್ಚಿಹೋಗಿದ್ದು, ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಹಳ್ಳದ ಪಕ್ಕದಲ್ಲಿದ್ದ ಗಣೇಶ ದೇವಾಲಯವೂ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು, ರಸ್ತೆಗಳ ಇಕ್ಕೆಲಗಳು ಜರಿದು ಬಿದ್ದಿರುವುದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಮಲೆಮಹದೇಶ್ವರ ಬೆಟ್ಟದ ಬಳಿ ಮಣ್ಣುಕುಸಿತದಿಂದ ತಮಿಳುನಾಡು ಸಂಪರ್ಕ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಂತಿದ್ದು, ಕೌದಳ್ಳಿ ಸಮೀಪದ ಸೇತುವೆಗೂ ಹಾನಿಯಾಗಿ ಬಸ್‌ಗಳನ್ನು ಪರ್ಯಾಯ ಮಾರ್ಗವಾಗಿ ಬದಲಾಯಿಸಲಾಗಿದೆ. ದೀರ್ಘಕಾಲದ ಬರಗಾಲದ ನಂತರ ಬಂದ ಈ ಮಳೆ ರೈತರಿಗೆ ಹುರುಳಿ ಬಿತ್ತನೆಗೆ ಆಶಾಭಾವನೆ ಮೂಡಿಸಿದ್ದರೂ, ಹಾನಿ ಮತ್ತು ಸಂಚಾರ ಅಡಚಣೆಗಳಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ನಾಗರಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಮತ್ತು ಜಲಾವೃತ ಪ್ರದೇಶಗಳಲ್ಲಿ ವಾಹನ ಚಲಾಯಿಸುವಾಗ ಜಾಗರೂಕರಾಗಿರುವಂತೆ ಸಲಹೆ ನೀಡಲಾಗಿದೆ.





