ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್ ಆಪರೇಷನ್’ ಪ್ರಕರಣಕ್ಕೆ ಇದೀಗ ಬಹುದೊಡ್ಡ ಟ್ವಿಸ್ಟ್ ಸಿಕ್ಕಿದೆ. ವಿವಾದಿತ ವಿಡಿಯೋದಲ್ಲಿದ್ದ ಮುಸುಕುಧಾರಿ ಮಹಿಳೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ‘ನಾನು ಒತ್ತಡಕ್ಕೆ ಮಣಿದು ಸುಳ್ಳು ಹೇಳಿದ್ದೆ, ಸಿದ್ದರಾಮಯ್ಯರನ್ನ ಭೇಟಿಯೇ ಮಾಡಿಲ್ಲ’ ಎಂದು ಆ ಮಹಿಳೆ ಹೇಳಿರುವುದಾಗಿ ವರದಿಯಾಗಿದೆ.
ವಿಡಿಯೋದಲ್ಲಿ ಕಂಡುಬಂದಿದ್ದ ಕೇರಳ ಮೂಲದ ಈ ಮಹಿಳೆಯ ಸ್ಥಳಕ್ಕೆ ಸಿಸಿಬಿ ಅಧಿಕಾರಿಗಳ ತಂಡವು ತೆರಳಿದ್ದು, ಆಕೆಯಿಂದ ವಿಡಿಯೋ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ವೇಳೆ ಮಹಿಳೆಯು, “ನಾನು ಸಿದ್ದರಾಮಯ್ಯ ಅವರನ್ನು ಎಂದಿಗೂ ಭೇಟಿಯಾಗಿಯೇ ಇಲ್ಲ. ಸಿದ್ದರಾಮಯ್ಯ ನನಗಾಗಲಿ ಅಥವಾ ಪ್ರಕರಣಕ್ಕಾಗಲಿ ಯಾವುದೇ ರೀತಿಯ ತೊಂದರೆ ನೀಡಿಲ್ಲ. ಷಡ್ಯಂತ್ರದ ಹಿಂದಿದ್ದ ಸಂಚುಕೋರರ ತೀವ್ರ ಒತ್ತಡಕ್ಕೆ ಮಣಿದು ನಾನು ಸುಳ್ಳು ಹೇಳಿಕೆ ನೀಡಿದ್ದೆ. ಸಂಚುಕೋರರು ನನಗೆ ಹೇಗೆ ಹೇಳಿಕೊಟ್ಟಿದ್ದರೋ ಹಾಗೆಯೇ ನಾನು ಕ್ಯಾಮೆರಾ ಮುಂದೆ ಹೇಳಿದ್ದೇನೆ” ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಮುಂದುವರಿದು ಮಾತನಾಡಿದ ಆಕೆ, “2023ರಲ್ಲೇ ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸಿಗೆ ಕಳಂಕ ತರುವ ದುರುದ್ದೇಶದಿಂದಲೇ ಈ ಷಡ್ಯಂತ್ರ ಹೆಣೆಯಲಾಗಿತ್ತು. ಉದ್ದೇಶಪೂರ್ವಕವಾಗಿ ನನ್ನಿಂದ ಸುಳ್ಳು ಹೇಳಿಕೆಗಳನ್ನು ಕೊಡಿಸಲಾಗಿತ್ತು” ಎಂದು ವಿವರಿಸಿದ್ದಾರೆ.
ಸದ್ಯ ಮುಸುಕುಧಾರಿ ಮಹಿಳೆಯ ಈ ಮಹತ್ವದ ಹೇಳಿಕೆಯನ್ನು ಆಧರಿಸಿ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಮುಂದಿನ ಒಂದೆರಡು ವಾರಗಳಲ್ಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಈ ಸ್ಟಿಂಗ್ ವಿವಾದವು ಕಾವು ಪಡೆದುಕೊಂಡಿರುವ ಬೆನ್ನಲ್ಲೇ, ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ನವೆಂಬರ್ 2 ರಂದು ಭೇಟಿಗೆ ಸಮಯ ಕೋರಿದ್ದು, ಈ ವೇಳೆ ರಾಜ್ಯ ರಾಜಕೀಯ ವಿದ್ಯಮಾನಗಳು ಮತ್ತು ತಮ್ಮ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಷಡ್ಯಂತ್ರದ ಕುರಿತು ವಿಸ್ತೃತವಾಗಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.





