ʼಚಹಾʼ ಜಗತ್ತಿನ ನೆಚ್ಚಿನ ಪಾನೀಯ, ಜಗತ್ತಿನಲ್ಲಿ ಅತಿ ಹೆಚ್ಚು ಚಹಾ ಕುಡಿಯುವ ದೇಶಗಳಲ್ಲಿ ಭಾರತವು ಒಂದು. 1 ಕೋಟಿಗೂ ಹೆಚ್ಚಿನ ಜನ ಚಹಾ ಉದ್ಯಮವನ್ನು ನಂಬಿದ್ದಾರೆ. ಅದರಲ್ಲೂ 50% ಮಹಿಳೆಯರು ಚಹಾ ವ್ಯಾಪಾರದಿಂದ ಬದುಕು ನಡೆಸುತ್ತಿದ್ದಾರೆ ಎಂದು ಸಾಹಿತಿ ಸತೀಶ್ ಜವರೇಗೌಡ ಹೇಳಿದರು.
ಚಹಾ ದಿನದ ಪ್ರಯುಕ್ತ ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಬ್ರಿಟಿಷರು ನಮಗೆ ಚಹಾ ಕುಡಿಯುವುದನ್ನು ಕಲಿಸಿದರು. ಆದರೆ ನಾವು ಅದಕ್ಕೆ ಏಲಕ್ಕಿ, ಶುಂಠಿ, ಚಕ್ಕೆ ಸೇರಿಸಿ ನಮ್ಮದೇ ಆದ ಮಸಾಲ ಚಾಯ್ ಮಾಡಿಕೊಂಡಿದ್ದೇವೆ. ನೀರಿನ ನಂತರ ಜಗತ್ತಿನಲ್ಲಿ ಚಹಾ ಅತಿ ಹೆಚ್ಚು ಕುಡಿಯುವ ಪಾನೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ” ಎಂದು ಅಭಿಪ್ರಾಯಿಸಿದರು.
“ಅಸ್ಸಾಂನಲ್ಲಿ ‘ಟೀ ಫೆಸ್ಟಿವಲ್’ ಪಶ್ಚಿಮ ಬಂಗಾಳದಲ್ಲಿ ‘ಟೀ ಟೂರಿಸಂʼ, ಕೇರಳದಲ್ಲಿ ‘ಎಸ್ಟೇಟ್ ವಾಕ್ ಥಾನ್’, ತಮಿಳುನಾಡಿನಲ್ಲಿ ‘ಆರ್ಗ್ಯಾನಿಕ್ ಶೋ’ ಹೆಸರಿನಲ್ಲಿ ಚಹಾ ದಿನದ ಆಚರಣೆ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಚಹಾ ತೋಟದ ಕಾರ್ಮಿಕರಿಗೆ ಸಿಹಿ ಹಂಚಿಕೆ ಮಾಡಿ, ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಕರ್ನಾಟಕದಲ್ಲಿ ಕಾಫಿ ಬೋರ್ಡ್ ಹಾಗೆಯೇ ಟೀ ಬೋರ್ಡ್‌ಗಳು ಇಲ್ಲದಿದ್ದರೂ ಸ್ಥಳೀಯ ಪ್ಲಾಂಟರ್ ಅಸೋಸಿಯೇಷನ್ ಮೇ 21ರಂದು ವಿಶ್ವ ಚಹಾ ದಿನವನ್ನು ಆಚರಿಸುತ್ತವೆ” ಎಂದು ತಿಳಿಸಿದರು.
ವೈದ್ಯ ಡಾ. ಬಿ ಸುಜಯ್ ಮಾತನಾಡಿ, “ಚಹಾ ಸೇವನೆಯು ಒತ್ತಡ ನಿರ್ವಹಣೆಯ ಮೂಲಕ ಮಾನಸಿಕ ಆರೋಗ್ಯಕ್ಕೆ ಪರಿಣಾಮಕಾರಿ, ಅಂತರಾಷ್ಟ್ರೀಯ ಚಹಾ ದಿನದಲ್ಲಿ ಈ ಪ್ರಯೋಜನಗಳ ಅರಿವು ಮೂಡಿಸಲಾಗುತ್ತದೆ. ಮಾನಸಿಕ ಯೋಗ ಕ್ಷೇಮಕ್ಕಾಗಿ ನೈಸರ್ಗಿಕ ಚಹಾ ಸಹಾಯಕಾರಿ. ಆದರೆ, ಆರೋಗ್ಯದ ದೃಷ್ಟಿಯಿಂದ ಅತಿ ಹೆಚ್ಚು ಸೇವನೆ ಅಹಿತಕರ” ಎಂದು ವೈದ್ಯ ಡಾ. ಬಿ ಸುಜಯ್ ಕುಮಾರ್ ಹೇಳಿದರು
ಕಾರ್ಯಕ್ರಮದಲ್ಲಿ ಪ್ರಜ್ಞಾವಂತ ವೇದಿಕೆ ಸಂಚಾಲಕ ಸಿ ಎಸ್ ವೆಂಕಟೇಶ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಸಂಜಯ ಪ್ರಕಾಶನದ ಸಂಸ್ಥಾಪಕ ಎಸ್ ಎಂ ಶಿವಕುಮಾರ್, ಅಗಮ್ಯ ಕಲಾತಂಡದ ಸಂಚಾಲಕ ಚಂದ್ರು, ಪ್ರೊಫೆಸರ್ ಮಹದೇವ, ವಕೀಲ ಎಸ್ ಆರ್ ಸಿದ್ದೇಶ್, ಕ್ಯಾತನಹಳ್ಳಿ ಚಂದ್ರಣ್ಣ, ಶಿಕ್ಷಕಿ ಎಚ್ ಜೆ ಶೀಲಾ, ಪ್ರಾಧ್ಯಾಪಕ ಧನಂಜಯ, ಚಿಕ್ಕ ತಮ್ಮೇಗೌಡ, ಸುರೇಶ್, ವಿಜಯ್ ಮುಂತಾದವರು ಭಾಗಿಯಾಗಿದ್ದರು.





