ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಲೆಗ್-ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರು ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ಸೇರುತ್ತಿದ್ದಂತೆಯೇ ಅವರನ್ನು ಬಿಜೆಪಿಯ ರಾಷ್ಟ್ರೀಯ ಒಬಿಸಿ ಮೋರ್ಚಾದ ಕಾರ್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅಮರ್‌ಪಾಲ್ ಮೌರ್ಯ ಸಮ್ಮುಖದಲ್ಲಿ ಚಾಹಲ್ ಬಿಜೆಪಿ ಸೇರಿದ್ದಾರೆ. ಸೇರ್ಪಡೆ ಬೆನ್ನಲ್ಲೇ ಒಬಿಸಿ ಮೋರ್ಚಾದಲ್ಲಿ ಸ್ಥಾನ ದೊರೆತಿರುವುದಕ್ಕೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಅಮರ್‌ಪಾಲ್ ಮೌರ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಚಾಹಲ್ ಧನ್ಯವಾದ ಅರ್ಪಿಸಿದ್ದಾರೆ.
ಚಾಹಲ್ ಅವರೊಂದಿಗೆ ಒಡಿಶಾದ ಪ್ರೊಫೆಸರ್ ಅದ್ವೈತ್ ಚರಣ್ ಗಣನಾಯಕ್ ಮತ್ತು ಉತ್ತರ ಪ್ರದೇಶದ ವಕೀಲೆ ಸೀಮಾ ಸಮೃದ್ಧಿ ಕುಶ್ವಾಹ ಅವರನ್ನೂ ವಿಶೇಷ ಆಹ್ವಾನಿತರನ್ನಾಗಿ ಒಬಿಸಿ ಮೋರ್ಚಾಗೆ ನೇಮಿಸಲಾಗಿದೆ. ಇದೇ ವೇಳೆ ಕರ್ನಾಟಕದ ಉಡುಪಿಯ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ.
ಮುಂಬರುವ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ತನ್ನ ಒಬಿಸಿ ಮೋರ್ಚಾಕ್ಕೆ 37 ಕಾರ್ಯಕಾರಿ ಸದಸ್ಯರು, 7 ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದೆ.
19ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಚಾಹಲ್, 2016ರಲ್ಲಿ ಭಾರತೀಯ ಅಂತರರಾಷ್ಟ್ರೀಯ ತಂಡವನ್ನು ಪ್ರವೇಶಿಸಿದ್ದರು. 2024ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಅವರು, ಟಿ20 ಕ್ರಿಕೆಟ್ ಮಾದರಿಯಲ್ಲಿ 400 ವಿಕೆಟ್‌ಗಳನ್ನು ಕಬಳಿಸಿದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಪ್ರಥಮ ದರ್ಜೆ (ರೆಡ್-ಬಾಲ್) ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರೂ, ಏಕದಿನ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸುವ ಆಸೆ ಹೊಂದಿದ್ದಾರೆ.


