ಎಲ್‌ಡಿಎಫ್ ಸರ್ಕಾರಗಳಲ್ಲಿ ಸಿಪಿಐಎಂ ಮತ್ತು ಸಿಪಿಐ ನಾಯಕರು ಸಚಿವರಾಗುವುದು ಸಹಜ. ಆದರೆ ಯುಡಿಎಫ್ ಸರ್ಕಾರದಲ್ಲಿ ಕಮ್ಯೂನಿಸ್ಟ್ ಪಕ್ಷದ ನಾಯಕರೊಬ್ಬರು ಸಚಿವರಾಗುವುದು ಅಪರೂಪ.
ಕೇರಳವು ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರವನ್ನು ಬದಲಾಯಿಸಿಕೊಳ್ಳುವ ಜನರಿರುವ ರಾಜ್ಯ. ಕೇರಳಿಗರು 2019 ಅನ್ನು ಹೊರತುಪಡಿಸಿ ಉಳಿದೆಲ್ಲ ವಿಧಾನಸಭೆ ಚುನಾವಣೆಗಳಲ್ಲಿ ಯುಡಿಎಫ್‌ಗಾಗಲಿ, ಎಲ್‌ಡಿಎಫ್‌ಗಾಗಲಿ ಮತ್ತೊಮ್ಮೆ ಅವಕಾಶ ನೀಡಿದವರಲ್ಲ. ಸತತ ಎರಡನೇ ಬಾರಿಗೆ ಚುನಾವಣೆ ಗೆದ್ದ ಎಲ್‌ಡಿಎಫ್ 2026ರ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಅಧಿಕಾರ ಕಳೆದುಕೊಂಡಿತು. ಈ ಮೂಲಕ ಇಡೀ ದೇಶದಲ್ಲೇ ಒಂದೇ ಒಂದು ಕಮ್ಯೂನಿಸ್ಟ್ ಆಡಳಿತವಿರುವ ರಾಜ್ಯ ಇಲ್ಲದಂತಾಯಿತು.
ಆದರೆ ಯುಡಿಎಫ್ ಸರ್ಕಾರದಲ್ಲೊಬ್ಬರು ಕಮ್ಯೂನಿಸ್ಟ್ ನಾಯಕರಿದ್ದಾರೆ. ಕೇರಳದ ಸಾರಿಗೆ ಖಾತೆ ಪಡೆದ ಸಿ ಪಿ ಜಾನ್ ಇದೀಗ ದೇಶದ ಏಕೈಕ ಕಮ್ಯೂನಿಸ್ಟ್ ಸಚಿವರೆನಿಸಿಕೊಂಡಿದ್ದಾರೆ. ಕೇರಳದ ಸಾರಿಗೆ ಸಚಿವರಾಗಿರುವ ಸಿ ಪಿ ಜಾನ್ ಕಮ್ಯೂನಿಸ್ಟ್ ಮಾರ್ಕ್ಸಿಸ್ಟ್ ಪಾರ್ಟಿ – ಸಿಎಂಪಿಯ ಪ್ರಧಾನ ಕಾರ್ಯದರ್ಶಿ.
ಇದನ್ನು ಓದಿದ್ದೀರಾ? ಸತೀಶನ್ ಕೇರಳ ಸಿಎಂ ಆಗಬೇಕು: ಆತ್ಮಹತ್ಯೆಗೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತ
1957ರ ಏಪ್ರಿಲ್ 22ರಂದು ತ್ರಿಶೂರ್ ಜಿಲ್ಲೆಯ ಕುನ್ನಂಕುಳಂ ಪ್ರದೇಶದಲ್ಲಿ ಜನಿಸಿದ ಸಿ ಪಿ ಜಾನ್ ಅವರ ತಂದೆ ಸಿ ಪಿ ಪೌಲೋಸ್ ಮತ್ತು ತಾಯಿ ರೋಸಾ. ಕಾನೂನು ಪದವಿ ಪಡೆದ ಜಾನ್ ವಕೀಲರಾಗಿ, ಆರ್ಥಿಕ ತಜ್ಞರಾಗಿ ಮತ್ತು ರಾಜಕೀಯ ತಂತ್ರಜ್ಞರಾಗಿ ಖ್ಯಾತಿ ಪಡೆದವರು. 1980ರ ದಶಕದಲ್ಲಿ ಸಿಪಿಐಎಂನಲ್ಲಿ ಸಕ್ರಿಯರಾಗಿದ್ದರು. ವಿದ್ಯಾರ್ಥಿ ವಿಭಾಗ ಎಸ್‌ಎಫ್‌ಐನ ರಾಜ್ಯಾಧ್ಯಕ್ಷರಾಗಿದ್ದರು. 1986ರಲ್ಲಿ ಎಂ.ವಿ. ರಾಘವನ್ ಸಿಪಿಐಎಂನಿಂದ ಬಹಿಷ್ಕೃತರಾದಾಗ ಅವರೊಂದಿಗೆ ನಿಂತವರು ಜಾನ್.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅನ್ನು ಎದುರಿಸಲು ಸಿಪಿಐಎಂ ಮುಸ್ಲಿಂ ಲೀಗ್ (IUML) ಮತ್ತು ಕೇರಳ ಕಾಂಗ್ರೆಸ್‌ನಂತಹ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂಬುದು ಎಂ.ವಿ. ರಾಘವನ್ ವಾದವಾಗಿತ್ತು. ಆದರೆ ಮುಸ್ಲಿಂ ಲೀಗ್‌ನಂತಹ ಕೋಮು ಆಧಾರಿತ ಪಕ್ಷಗಳೊಂದಿಗೆ ಯಾವುದೇ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂಬುದು ಆಗಿನ ಸಿಪಿಐಎಂನ ಅಧಿಕೃತ ನಿಲುವಾಗಿತ್ತು. ರಾಘವನ್ ಅವರ ಪ್ರಸ್ತಾಪವನ್ನು ಇ.ಎಂ.ಎಸ್. ನಂಬೂದಿರಿಪಾಡ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಸಿದ್ಧಾಂತ ವಿರೋಧಿ ಎಂದು ತಿರಸ್ಕರಿಸಿದ್ದರು.
ಅದಾದ ಬಳಿಕ ಪಕ್ಷದ ಅಧಿಕೃತ ನಿರ್ಧಾರವನ್ನು ಒಪ್ಪದೆ, ತಮ್ಮ ಪರ್ಯಾಯ ಕಾರ್ಯಕರ್ತರನ್ನು ಸಂಘಟಿಸಲು ಮತ್ತು ಪಕ್ಷದ ಶಿಸ್ತನ್ನು ಮೀರಿ ಭಿನ್ನಮತ ಮೂಡಿಸಲು ಪ್ರಯತ್ನಿಸಿದ್ದಕ್ಕಾಗಿ ರಾಘವನ್ ಅವರನ್ನು ಪಕ್ಷದಿಂದ ಹೊರಹಾಕಲಾಯಿತು. ಸಿಪಿಐಎಂನಿಂದ ಉಚ್ಚಾಟನೆಗೊಂಡ ನಂತರ ಎಂ.ವಿ. ರಾಘವನ್ ಕಮ್ಯೂನಿಸ್ಟ್ ಮಾರ್ಕ್ಸಿಸ್ಟ್ ಪಾರ್ಟಿ -ಸಿಎಂಪಿ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದರು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವನ್ನು ಸೇರಿದರು. ಕೇರಳ ಸರ್ಕಾರದ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಇವರೊಂದಿಗೆ ನಿಂತವರು ಜಾನ್. ಜಾನ್ ಯುಡಿಎಫ್ ಒಕ್ಕೂಟ ಸೇರುವ ನಿರ್ಧಾರಕ್ಕೆ ಬೆಂಬಲ ನೀಡಿದ್ದು ಸಾಂಪ್ರದಾಯಿಕ ಎಡಪಂಥೀಯರುಗಳಿಗೆ ದೊಡ್ಡ ಆಘಾತವಾಗಿತ್ತು. ಇಂದಿಗೂ ಎಡಪಕ್ಷಗಳ ಒಕ್ಕೂಟದಲ್ಲಿ ಈ ಕಮ್ಯೂನಿಸ್ಟ್ ಪಕ್ಷವಿಲ್ಲ.
ಪಕ್ಷದಲ್ಲಿ ಬಿರುಕು ಮತ್ತು ಜಾನ್ ಪಯಣ
2014ರಲ್ಲಿ ಎಂ ವಿ ರಾಘವನ್ ನಿಧನದ ಬಳಿಕ ಸಿಎಂಪಿಯಲ್ಲಿ ದೊಡ್ಡ ಬಿರುಕು ಉಂಟಾಗಿತ್ತು. ಒಂದು ಗುಂಪು ಎಲ್‌ಡಿಎಫ್ ಕಡೆಗೆ, ಇನ್ನೊಂದು ಜಾನ್ ನೇತೃತ್ವದಲ್ಲಿ ಯುಡಿಎಫ್‌ನಲ್ಲಿ ಉಳಿಯಿತು. ಜಾನ್ ತಮ್ಮ ಗುಂಪನ್ನು ಸಿಎಂಪಿ ಕೇರಳ ರಾಜ್ಯ ಸಮಿತಿ ಎಂದು ಹೇಳಿಕೊಂಡು ಮುಂದುವರೆಸಿದರು. ಹಾಗೆಯೇ ಯುಡಿಎಫ್‌ನ ನಂಬಿಕಸ್ತ ಮಿತ್ರಪಕ್ಷದ ನಾಯಕರಾಗಿ ಉಳಿದರು. ಹಲವು ವರ್ಷಗಳಿಂದ ಜಾನ್ ಯುಡಿಎಫ್‌ನ ವಕ್ತಾರರಾಗಿ, ಕೇರಳ ರಾಜ್ಯ ಯೋಜನಾ ಮಂಡಳಿಯ ಸದಸ್ಯರಾಗಿ ವಿವಿಧ ಸಮಿತಿಗಳಲ್ಲಿ ಸಕ್ರಿಯರಾಗಿ ಕೆಲಸ ಮಾಡಿದರು. ಕುನ್ನಂಕುಳಂನಲ್ಲಿ ಹಲವು ಬಾರಿ ಸ್ಪರ್ಧಿಸಿದರೂ ಜಾನ್‌ಗೆ ಗೆಲುವು ಸಿಗಲಿಲ್ಲ. ಆದರೆ ಚುನಾವಣೆಯಿಂದ ಮಾತ್ರ ಜಾನ್ ಹಿಂದೆ ಸರಿಯಲಿಲ್ಲ.
ಇಂದು ಕೇರಳ ಸಾರಿಗೆ ಸಚಿವ!
ಹಲವು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಾಣುತ್ತಿದ್ದ ಜಾನ್ 2026ರ ವಿಧಾನಸಭೆ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಲ್ಲಿ ಸ್ಪರ್ಧಿಸಿ 9,863 ಮತಗಳ ಅಂತರದಿಂದ ಐತಿಹಾಸಿಕ ಗೆಲುವು ಸಾಧಿಸಿದರು. ಈಗ ವಿ ಡಿ ಸತೀಶನ್ ನೇತೃತ್ವದ ಯುಡಿಎಫ್ ಸರ್ಕಾರದಲ್ಲಿ ಸಾರಿಗೆ, ರಸ್ತೆ, ಜಲ ಸಾರಿಗೆ, ಮೋಟಾರು ವಾಹನಗಳ ಸಚಿವರಾಗಿದ್ದಾರೆ. ಪ್ರಮಾಣವಚನ ಸ್ವೀಕರಿಸುವಾಗ ದೇವರ ಹೆಸರಿನಲ್ಲಿ ಪ್ರಮಾಣ ಮಾಡದೆ ಸಾದಾ ಪ್ರತಿಜ್ಞೆ (solemn affirmation) ಮಾಡಿದರು. ಈ ಮೂಲಕ ದೇಶದ ಏಕೈಕ ಕಮ್ಯೂನಿಸ್ಟ್ ಸಚಿವರಾದರು.
ಇದನ್ನು ಓದಿದ್ದೀರಾ? ಪ್ರಮಾಣವಚನ ಸ್ವೀಕರಿಸಿದ ಗಂಟೆಯಲ್ಲೇ ನನಗೆ ಕೇಂದ್ರ ಮಂತ್ರಿ ಸ್ಥಾನ ಬೇಡವೆಂದ ಸುರೇಶ್ ಗೋಪಿ
ಜಾನ್‌ಗಿರುವ ಸವಾಲುಗಳು ಹಲವು
ಎಲ್‌ಡಿಎಫ್ ಸರ್ಕಾರಗಳಲ್ಲಿ ಸಿಪಿಐಎಂ ಮತ್ತು ಸಿಪಿಐ ನಾಯಕರು ಸಚಿವರಾಗುವುದು ಸಹಜ. ಆದರೆ ಯುಡಿಎಫ್ ಸರ್ಕಾರದಲ್ಲಿ ಕಮ್ಯೂನಿಸ್ಟ್ ಪಕ್ಷದ ನಾಯಕರೊಬ್ಬರು ಸಚಿವರಾಗುವುದು ಅಪರೂಪ. ಜಾನ್ ಸಚಿವರಾಗಿರುವುದು ಯುಡಿಎಫ್‌ನಲ್ಲಿ ಎಡಪಂಥೀಯ ಧ್ವನಿ ಇರುವ ಭರವಸೆಯನ್ನು ಮೂಡಿಸಿದೆ.
ಜಾನ್‌ಗೆ ಸದ್ಯ ಹಲವು ಸವಾಲುಗಳಿವೆ. ಕೇರಳದಲ್ಲಿ ಸಾರಿಗೆ ಇಲಾಖೆ ಅತ್ಯಂತ ಮುಖ್ಯವಾದ ಇಲಾಖೆ. ರಸ್ತೆಗಳ ಅಭಿವೃದ್ಧಿ, ಸಾರ್ವಜನಿಕ ಸಾರಿಗೆ, ವಿಝಿಂಜಂ ಬಂದರು, ಜಲ ಸಾರಿಗೆಯಂತಹ ವಿಷಯಗಳಲ್ಲಿ ಜಾನ್ ಅತಿ ದೊಡ್ಡ ಜವಾಬ್ದಾರಿ. ತಮ್ಮ ಕಮ್ಯೂನಿಸ್ಟ್ ಸಿದ್ಧಾಂತವನ್ನು ದಾಟದೆ ಯುಡಿಎಫ್‌ನೊಂದಿಗಿದ್ದು ಸಾರಿಗೆ ಸಚಿವರ ಕಾರ್ಯ ನಿರ್ವಹಿಸುವುದೇ ಸದ್ಯ ಜಾನ್‌ಗಿರುವ ಸವಾಲು. 40 ವರ್ಷಗಳ ಹೆಚ್ಚು ಕಾಲದ ಪಯಣದ ನಂತರ ಮೊದಲ ಬಾರಿಗೆ ಶಾಸಕರಾಗಿ, ಸಚಿವರಾಗಿ ಜವಾಬ್ದಾರಿ ಪಡೆದ ಜಾನ್ ಕೇರಳ ರಾಜಕೀಯಕ್ಕೆ ಹೊಸ ದೃಷ್ಟಿಕೋನ ನೀಡುವ ನಿರೀಕ್ಷೆಯೂ ಇದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



