ಸಾರಿಗೆ ಫೆರ್ರಿ (ದೋಣಿ) ಹತ್ತಲು ಯತ್ನಿಸುತ್ತಿದ್ದ ಬಸ್ಸೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿದ ಪರಿಣಾಮ ಕನಿಷ್ಠ 23 ಮಂದಿ ಮೃತಪಟ್ಟಿರುವ ಭೀಕರ ಘಟನೆ ಬಾಂಗ್ಲಾದೇಶದ ರಾಜ್‌ಬಾರಿ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದೆ. ನಾಪತ್ತೆಯಾದವರಿಗಾಗಿ ರಕ್ಷಣಾ ಪಡೆಗಳಿಂದ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ನೈಋತ್ಯ ಜಿಲ್ಲೆಯಾದ ರಾಜ್‌ಬಾರಿಯ ದೌಲಾಡಿಯಾ ಟರ್ಮಿನಲ್‌ನಲ್ಲಿ ಬುಧವಾರ ಸಂಜೆ 5.15ರ ಸುಮಾರಿಗೆ ಈ ದುರಂತ ಸಂಭವಿಸಿದೆ. ‘ಪ್ರಥಮ್ ಅಲೋ’ ವರದಿ ಪ್ರಕಾರ, ಬಸ್ಸಿನಲ್ಲಿ ಕನಿಷ್ಠ 50 ಪ್ರಯಾಣಿಕರಿದ್ದರು. ಮೃತರಲ್ಲಿ 11 ಮಹಿಳೆಯರು, 8 ಮಕ್ಕಳು ಮತ್ತು 4 ಪುರುಷರು ಸೇರಿದ್ದಾರೆ. ಈ ಪೈಕಿ 22 ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಒಂದು ಮೃತದೇಹದ ವಾರಸುದಾರರು ಇನ್ನೂ ಪತ್ತೆಯಾಗಿಲ್ಲ ಎಂದು ‘ಡೈಲಿ ಸ್ಟಾರ್’ ಪತ್ರಿಕೆ ವರದಿ ಮಾಡಿದೆ.
ಹವಾಮಾನ ವೈಪರೀತ್ಯದ ನಡುವೆಯೂ ರಕ್ಷಣಾ ನೌಕೆ ‘ಹಮ್ಜಾ’ ಬಳಸಿ ಸತತ ಆರು ಗಂಟೆಗಳ ಕಾರ್ಯಾಚರಣೆಯ ಬಳಿಕ ಬಸ್ಸನ್ನು ನದಿಯಿಂದ ಹೊರತೆಗೆಯಲಾಗಿದೆ. ರಾತ್ರಿ 11.15ರ ಸುಮಾರಿಗೆ ಬಸ್ಸಿನ ಒಂದು ಭಾಗ ಗೋಚರಿಸಿದ್ದು, ಬಳಿಕ ಕ್ರೇನ್ ಮೂಲಕ ಮೇಲಕ್ಕೆ ಎತ್ತಲಾಯಿತು. ಅಗ್ನಿಶಾಮಕ ದಳ ಮತ್ತು ಕರಾವಳಿ ಕಾವಲು ಪಡೆಯ ಮುಳುಗುತಜ್ಞರು, ಸೇನೆ ಹಾಗೂ ಪೊಲೀಸರ ನೆರವಿನೊಂದಿಗೆ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಇದನ್ನು ಓದಿದ್ದೀರಾ? ಅಸ್ಸಾಂ ವಿಧಾನಸಭಾ ಚುನಾವಣೆ: ಪಕ್ಷಾಂತರಿಗಳಿಗೆ ಪಾಠ ಕಲಿಸುತ್ತಾರೆಯೇ ಮತದಾರರು?
ಈದ್ ರಜೆಯ ಬಳಿಕ ಹೆಚ್ಚಿನ ಪ್ರಯಾಣಿಕರು ಈ ಬಸ್ಸಿನಲ್ಲಿ ರಾಜಧಾನಿ ಢಾಕಾಗೆ ಮರಳುತ್ತಿದ್ದರು. ಟರ್ಮಿನಲ್ ಮೇಲ್ವಿಚಾರಕ ಮೊನೀರ್ ಹೊಸೈನ್ ಅವರ ಪ್ರಕಾರ, “ಬಸ್ ಪಾಂಟೂನ್‌ನಿಂದ (ತೇಲುವ ಸೇತುವೆ) ಫೆರ್ರಿ ಕಡೆಗೆ ಹೋಗುತ್ತಿದ್ದಾಗ, ಮತ್ತೊಂದು ಸಣ್ಣ ಫೆರ್ರಿ ಪಾಂಟೂನ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ನೇರವಾಗಿ ನದಿಗೆ ಧುಮುಕಿದೆ. ನಮ್ಮ ಕಣ್ಣೆದುರೇ ಬಸ್ ನದಿಗೆ ಬಿತ್ತು, ಆದರೆ ನಾವು ಏನೂ ಮಾಡಲು ಸಾಧ್ಯವಾಗಲಿಲ್ಲ” ಎಂದು ಅವರು ಕಂಬನಿ ಮಿಡಿದರು.
ಬಸ್ ನದಿಗೆ ಮುಖಮಾಡಿ ಬೀಳುತ್ತಿರುವ ಹಾಗೂ ನೆರೆದಿದ್ದವರು ಭಯದಿಂದ ಕಿರುಚುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವೇ ಕ್ಷಣಗಳಲ್ಲಿ ಬಸ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ಬಸ್ಸಿನಲ್ಲಿದ್ದ ಸುಮಾರು 11 ಮಂದಿ ಈಜಿ ದಡ ಸೇರಿದ್ದಾರೆ ಅಥವಾ ರಕ್ಷಿಸಲ್ಪಟ್ಟಿದ್ದಾರೆ.
ವಿಡಿಯೊದಲ್ಲಿ, ಯುವಕನೊಬ್ಬ ನೀರಿನಿಂದ ಈಜಿ ಬರುತ್ತಿರುವುದು ಮತ್ತು ದಡದಲ್ಲಿದ್ದವರು ಮಫ್ಲರ್‌ಗಳ ಸಹಾಯದಿಂದ ಆತನನ್ನು ಮೇಲೆತ್ತುತ್ತಿರುವುದು ಸೆರೆಯಾಗಿದೆ. ಜೀವರಕ್ಷಕ ಟ್ಯೂಬ್‌ಗಳನ್ನು ನದಿಗೆ ಎಸೆಯಲಾಗಿದ್ದು, ದೋಣಿಗಳ ಮೂಲಕವೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಬಸ್ಸಿನಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರು. ಹೊರಗಡೆ ನಿಂತಿದ್ದ ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದರೆ, ಬಸ್ಸಿನೊಳಗಿದ್ದ ಅವರ ಸಂಬಂಧಿಕರು ಜಲಸಮಾಧಿಯಾಗಿದ್ದಾರೆ.
ಈ ದುರಂತದ ಕುರಿತು ಪ್ರಧಾನಿ ತಾರಿಕ್ ರೆಹಮಾನ್ ಅವರು ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದು, ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ರಾಜ್‌ಬಾರಿ ಜಿಲ್ಲಾಧಿಕಾರಿ ಸುಲ್ತಾನಾ ಅಖ್ತರ್ ಅವರ ಸೂಚನೆ ಮೇರೆಗೆ, ಘಟನೆಯ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ.




