ಪಶ್ಚಿಮ ಬಂಗಾಳದ ಬಸಿರ್‌ಹತ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಪ್ರಕಟಗೊಂಡ ಪೂರಕ ಮತದಾರರ ಪಟ್ಟಿಯಲ್ಲಿ ಒಂದೇ ಬೂತ್‌ನ 340 ಮತದಾರರ ಹೆಸರನ್ನು ಏಕಾಏಕಿ ಅಳಿಸಿಹಾಕಲಾಗಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಬೋರೋ ಗೋಬ್ರಾ ಗ್ರಾಮದ ಬೂತ್ ಸಂಖ್ಯೆ 5ರ ಈ ಎಲ್ಲಾ ಮತದಾರರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಹಿಂದೆ ಪ್ರಕಟವಾಗಿದ್ದ ಕರಡು ಪಟ್ಟಿಯಲ್ಲಿ ಇವರನ್ನು ‘ವಿಚಾರಣೆಗೆ ಒಳಪಡಿಸಲಾಗಿದೆ’ (Under Adjudication) ಎಂದು ಗುರುತಿಸಲಾಗಿತ್ತು. ಆದರೆ, ನಿನ್ನೆ ಸಂಜೆ 5 ಗಂಟೆಗೆ ಪ್ರಕಟವಾದ ಮೊದಲ ಪೂರಕ ಪಟ್ಟಿಯಲ್ಲಿ ಇವರ ಹೆಸರನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ.
ಬಿಎಲ್‌ಒ ಹೆಸರೂ ಡಿಲೀಟ್
ಆಶ್ಚರ್ಯಕರ ಸಂಗತಿಯೆಂದರೆ, ಇದೇ ಪಟ್ಟಿಯಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಎಂ ಡಿ. ಶಫಿಯುಲ್ ಆಲಂ ಅವರ ಹೆಸರನ್ನು ಸಹ ಅಳಿಸಿಹಾಕಲಾಗಿದೆ. ಈ ಸಾಮೂಹಿಕ ಅಳಿಸುವಿಕೆಯನ್ನು ಖಂಡಿಸಿ ನೂರಕ್ಕೂ ಹೆಚ್ಚು ನಿವಾಸಿಗಳು ಬಿಎಲ್‌ಒ ನಿವಾಸದ ಬಳಿ ಮತ್ತು ಸ್ಥಳೀಯ ರಸ್ತೆಗಳಲ್ಲಿ ಜಮಾಯಿಸಿ ದಿಢೀರ್ ಪ್ರತಿಭಟನೆ ನಡೆಸಿದರು. ತಮ್ಮ ಸಮುದಾಯವನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ಈ ರೀತಿ ಹೊರಗಿಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣಾ ಅಧಿಕಾರಿಗಳ ಪಾರದರ್ಶಕತೆಯ ಕೊರತೆಯ ಬಗ್ಗೆ ಸಂತ್ರಸ್ತ ನಿವಾಸಿಗಳು ಮತ್ತು ಸ್ಥಳೀಯ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಎಲ್‌ಒ ಆಲಂ, ‘ಬಸಿರ್‌ಹತ್ ಬ್ಲಾಕ್-II ರ ಬಿಡಿಒ ಅವರನ್ನು ಸಂಪರ್ಕಿಸಿ ಪರಿಹಾರ ಕೋರಿದರೂ, ‘ಈಗ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ’ ಎಂಬ ಉತ್ತರ ಬಂದಿದೆ. ಮತ್ತೊಂದೆಡೆ ಚುನಾವಣಾ ನೋಂದಣಾಧಿಕಾರಿಯನ್ನು (ಇಆರ್‌ಒ) ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ದಾಖಲೆ ನೀಡಿದರೂ ಪ್ರಯೋಜನವಾಗಿಲ್ಲ
‘ಚುನಾವಣಾ ಆಯೋಗವು ನಿಗದಿಪಡಿಸಿರುವ 11 ಮಾನ್ಯ ದಾಖಲೆಗಳಲ್ಲಿ ಕೇವಲ ಒಂದನ್ನು ಒದಗಿಸಿದರೂ ಸಾಕಾಗುತ್ತದೆ. ಆದರೂ, ನಮ್ಮಲ್ಲಿ ಹಲವರು ಮೂರು ಅಥವಾ ನಾಲ್ಕು ದಾಖಲೆಗಳನ್ನು ಸಲ್ಲಿಸಿದ್ದರು. ಹೀಗಿದ್ದರೂ ನಮ್ಮ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ’ ಎಂದು ಸಂತ್ರಸ್ತ ಮತದಾರರಾದ ಕಾಜಿರುಲ್ ಮಂಡಲ್ ಬೇಸರ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗವು ನಿರ್ದಿಷ್ಟ ರಾಜಕೀಯ ಪ್ರಭಾವಕ್ಕೆ ಒಳಗಾಗಿ, ಪಕ್ಷಪಾತದಿಂದ ಈ ರೀತಿ ವರ್ತಿಸಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲು ನ್ಯಾಯಮಂಡಳಿ ಮೊರೆ ಹೋಗುವುದಾಗಿ ಆಲಂ ಘೋಷಿಸಿದ್ದಾರೆ.
ಬಸಿರ್‌ಹತ್ ಬ್ಲಾಕ್-II ರ ಬೇಗಂಪುರ ಬೀಬೀಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬೂತ್ ಸಂಖ್ಯೆ 5 ರಲ್ಲಿ ಈ ವಿವಾದ ಕೇಂದ್ರೀಕೃತವಾಗಿದೆ. ಈ ಬೂತ್‌ನಲ್ಲಿ ಒಟ್ಟು 992 ನೋಂದಾಯಿತ ಮತದಾರರಿದ್ದರು. ಸಾವು ಅಥವಾ ಸ್ಥಳಾಂತರದ ಕಾರಣದಿಂದ 38 ಹೆಸರುಗಳನ್ನು ಸಾಮಾನ್ಯ ಪ್ರಕ್ರಿಯೆಯಡಿ ಕೈಬಿಡಲಾಗಿತ್ತು. ಆದರೆ, ಉಳಿದವರ ಪೈಕಿ 358 ಮತದಾರರನ್ನು ಅವರ ಅರ್ಹತೆಯ ಕುರಿತ ವಿಚಾರಣೆಗೆ ಕರೆಯಲಾಗಿತ್ತು.
ಇದನ್ನು ಓದಿದ್ದೀರಾ? ಅಸ್ಸಾಂ ವಿಧಾನಸಭಾ ಚುನಾವಣೆ: ಪಕ್ಷಾಂತರಿಗಳಿಗೆ ಪಾಠ ಕಲಿಸುತ್ತಾರೆಯೇ ಮತದಾರರು?
ಕರಡು ಪಟ್ಟಿಯಲ್ಲಿ ಈ ಪೈಕಿ 18 ಪ್ರಕರಣಗಳನ್ನು ಬಗೆಹರಿಸಲಾಗಿತ್ತು. ಆದರೆ, ಉಳಿದ 340 ಮತದಾರರ ಹೆಸರುಗಳನ್ನು 23 ರಂದು ಪೂರಕ ಪಟ್ಟಿ ಪ್ರಕಟವಾಗುವವರೆಗೂ ‘ವಿಚಾರಣೆ’ ಹಂತದಲ್ಲಿಯೇ ಇಡಲಾಗಿತ್ತು. ಪೂರಕ ಪಟ್ಟಿ ಪ್ರಕಟವಾದ ತಕ್ಷಣವೇ ಅವೆಲ್ಲವನ್ನೂ ‘ಡಿಲೀಟ್’ ವಿಭಾಗಕ್ಕೆ ಸೇರಿಸಲಾಗಿದೆ.
’ಈ ಮತದಾರರಿಗೆ ಅರ್ಜಿಗಳನ್ನು ಭರ್ತಿ ಮಾಡಲು ನಾನು ಖುದ್ದಾಗಿ ಸಹಾಯ ಮಾಡಿದ್ದೇನೆ ಮತ್ತು ಚುನಾವಣಾ ಆಯೋಗದ ನಿಯಮಗಳ ಪ್ರಕಾರವೇ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದೆ. ಆದರೂ, ಆಯ್ದು ಕೆಲವರ ಹೆಸರುಗಳನ್ನು ಮಾತ್ರ ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ’ ಎಂದು ಬಿಎಲ್‌ಒ ಆಲಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.




