ಬಿ.ಶ್ಯಾಮಸುಂದರ್ ವೇದಿಕೆ : ಸಮಾಜೋಧಾರ್ಮಿಕ ಕ್ರಾಂತಿಯ ಮೂಲಕ ಹೊಸ ಚಿಂತನೆಗಳಿಗೆ ನಾಂದಿ ಹಾಡಿದ ಬಂಡಾಯದ ನೆಲ ಬೀದರನಲ್ಲಿ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ ಆಯೋಜಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಶನಿವಾರ ಆಯೋಜಿಸಿದ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಅಸ್ಪೃಶ್ಯತೆ, ಕಂದಾಚಾರ ಹಾಗೂ ಜಾತಿ ವ್ಯವಸ್ಥೆಯ ವಿರುದ್ಧ ನಿರಂತರ ಹೋರಾಟ ನಡೆಸಿದ ದಲಿತ ಬಂಡಾಯ ಚಳವಳಿ ಸಮಾಜದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದೆ. ವಚನ ಮತ್ತು ದಾಸ ಸಾಹಿತ್ಯ ಜಗತ್ತಿಗೆ ಕನ್ನಡ ನಾಡು ನೀಡಿದ ಶ್ರೀಮಂತ ಕೊಡುಗೆಗಳಾಗಿವೆ. ಸಮಾಜದಲ್ಲಿ ಪರಿವರ್ತನೆ ಉಂಟಾಗಲು ಅನೇಕ ಕಾರಣಗಳಿದ್ದರೂ ಸಾಹಿತ್ಯವು ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾಜಿಕ ಅಸಮಾನತೆ, ಶೋಷಣೆ ಹಾಗೂ ಅನ್ಯಾಯದ ವಿರುದ್ಧ ವಚನ ಮತ್ತು ದಾಸ ಸಾಹಿತ್ಯದಲ್ಲಿ ಬಂಡಾಯದ ಧ್ವನಿ ಸ್ಪಷ್ಟವಾಗಿ ಮೊಳಗಿದೆ. ಇದೇ ಬಂಡಾಯದ ಸಾಹಿತ್ಯಿಕ ಪರಂಪರೆ ಎಪ್ಪತ್ತರ ದಶಕದಲ್ಲಿ ಮತ್ತಷ್ಟು ಪ್ರಬಲವಾಗಿ ಅಭಿವ್ಯಕ್ತಗೊಂಡಿತು” ಎಂದು ಹೇಳಿದರು.

“ಸಾಹಿತ್ಯವು ಅಧಿಕಾರ ವ್ಯವಸ್ಥೆಯ ಪರವಾಗಿ ನಿಲ್ಲುವ ಬದಲು ಸಮಾಜದ ಪರವಾಗಿ ಧ್ವನಿ ಎತ್ತಬೇಕು. ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನು ತಿದ್ದುವ, ಸಮಾಜಕ್ಕೆ ಸರಿಯಾದ ದಿಕ್ಕು ತೋರಿಸುವ ಹಾಗೂ ಅನ್ಯಾಯದ ವಿರುದ್ಧ ಪ್ರಶ್ನಿಸುವ ಸಾಹಿತ್ಯ ಹೆಚ್ಚು ಹೆಚ್ಚು ಹೊರಬರಬೇಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರೆತಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯ ಪರಿಷತ್ತಿನಿಂದ ಸಾಮಾಜಿಕ ನ್ಯಾಯಕ್ಕೆ ಆದ್ಯತೆ: ಡಿ.ಜಿ.ಸಾಗರ್
ದಸಂಸ ರಾಜ್ಯ ಸಂಚಾಲಕ ಡಿ.ಜಿ.ಸಾಗರ ಆಶಯ ನುಡಿ ಮಾತನಾಡಿ, “ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಕಡೆಯ ವ್ಯಕ್ತಿಗೂ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಯ ಪರಿಚಯ ಮಾಡಿಕೊಡುವ ಕಾರ್ಯ ಮಾಡುತ್ತಿದೆ. ಈ ಹಿಂದೆ ಸಾಹಿತ್ಯ ಸಮ್ಮೇಳನಗಳಲ್ಲಿ ದಲಿತ ಸಾಹಿತ್ಯ ಗೋಷ್ಠಿ ಆಯೋಜಿಸಲು ನಿರಾಕರಿಸಿದ್ದ ಕಸಾಪ, ಇಂದು ದಲಿತ ಸಮುದಾಯದ ಸಾಹಿತಿಗಳು ಹಾಗೂ ಹೋರಾಟಗಾರರನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಈ ಹಿಂದೆ ಹಿರಿಯ ಸಾಹಿತಿ ಸಿದ್ಧಲಿಂಗಯ್ಯ ಅವರನ್ನು ಕಸಾಪ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಅವಕಾಶ ಕಲ್ಪಿಸಿದ ಉದಾಹರಣೆಯೂ ಇದೆ” ಎಂದು ಹೇಳಿದರು.
ಇಂದು ದೇಶವು ಅಘೋಷಿತ ತುರ್ತು ಪರಿಸ್ಥಿತಿಯಂತಹ ಸಂದಿಗ್ಧ ಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಮನುವಾದದ ಚಿಂತನೆಗಳು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುತ್ತಿವೆ. ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾನದ ಹಕ್ಕಿನ ಕುರಿತೂ ಪ್ರಶ್ನೆಗಳು ಎದ್ದಿವೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಪ್ರಶ್ನಿಸುವವರನ್ನು ಬಂಧಿಸುವಂತಹ ಬೆಳವಣಿಗೆಗಳು ಆತಂಕಕಾರಿ ಎಂದು ಬೇಸರ ವ್ಯಕ್ತಪಡಿಸಿದರು.
ಇಂದಿನ ಶಿಕ್ಷಣ ವ್ಯವಸ್ಥೆ ದುಬಾರಿಯಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದು ಕಷ್ಟವಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸಿದಾಗ ಅವರನ್ನು ದೇಶದ್ರೋಹಿಗಳಂತೆ ನೋಡುವ ಪ್ರವೃತ್ತಿ ಬೆಳೆಯುತ್ತಿದೆ. ದಲಿತ ಸಮುದಾಯದ ಒಳಗಿನ ಒಳಮೀಸಲಾತಿ ವಿಚಾರವೂ ಪರಸ್ಪರ ಭಿನ್ನಾಭಿಪ್ರಾಯ ಮತ್ತು ದ್ವೇಷಕ್ಕೆ ಕಾರಣವಾಗಬಾರದು. ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ರಾಜಕೀಯ ಹಾಗೂ ಸಾಮಾಜಿಕವಾಗಿ ಪುನರುಜ್ಜೀವನಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ದಲಿತ ಸಂಘಟನೆಗಳು ಪರಸ್ಪರ ಒಗ್ಗಟ್ಟಿನಿಂದ ಹಳ್ಳಿಗಳಿಗೆ ತೆರಳಿ ಜನರಲ್ಲಿ ಸಮಾನತೆ, ಸಹೋದರತ್ವ ಮತ್ತು ಸಂವಿಧಾನದ ಅರಿವು ಮೂಡಿಸಬೇಕು. ಸಂವಿಧಾನದ ಆಶಯಗಳಾದ ಜಾತ್ಯತೀತತೆ ಮತ್ತು ಸಮಾಜವಾದವನ್ನು ಸಮಾಜದಲ್ಲಿ ಬಲಪಡಿಸಬೇಕು. ಜಾತಿ ಆಧಾರಿತ ತಾರತಮ್ಯ, ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅನ್ಯಾಯದ ವಿರುದ್ಧ ನಿರಂತರ ಹೋರಾಟ ನಡೆಸಬೇಕಿದೆ. ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಸಂವಿಧಾನದ ಆಶಯಗಳನ್ನು ಕಾಪಾಡುವುದು ಎಲ್ಲ ನಾಗರಿಕರ ಕರ್ತವ್ಯವಾಗಿದೆ. ಹಳ್ಳಿಗಳಲ್ಲಿ ಶೋಷಿತರು, ಕಾರ್ಮಿಕರು ಮತ್ತು ದುಡಿಯುವ ವರ್ಗದ ಜನರ ನಡುವೆ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ ಎಂದು ಹೇಳಿದರು.
ದಲಿತ ಸಂಘಟನೆಗಳ ಹೋರಾಟ ಕೇವಲ ರಾಜಕೀಯ ಉದ್ದೇಶ ಹೊಂದಿಲ್ಲ. ಸಮಾಜದಲ್ಲಿನ ತಾರತಮ್ಯ ಮತ್ತು ಶೋಷಣೆಯ ವಿರುದ್ಧ ಧ್ವನಿ ಎತ್ತುವುದೇ ಅವುಗಳ ಮೂಲ ಆಶಯವಾಗಿದೆ. ದಲಿತ ಸಂಘರ್ಷ ಸಮಿತಿಗೆ ತನ್ನದೇ ಆದ ಮೌಲ್ಯಗಳು ಮತ್ತು ಹೋರಾಟದ ಪರಂಪರೆ ಇದೆ. ಇಂದಿಗೂ ಸಮಾಜದಲ್ಲಿ ಅಸ್ಪೃಶ್ಯತೆ ಜೀವಂತವಾಗಿದ್ದು, ಅದರಿಂದ ಶೋಷಿತರು ಅನುಭವಿಸುತ್ತಿರುವ ನೋವು ಮತ್ತು ಅನ್ಯಾಯವನ್ನು ಖಂಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ದಸಂಸ ಮಾಡುತ್ತಿದೆ ಎಂದು ತಿಳಿಸಿದರು.
ನ್ಯಾಯಕ್ಕಾಗಿ ಧ್ವನಿಯೆತ್ತುವ ಜವಾಬ್ದಾರಿ ನಮ್ಮ ಮೇಲಿದೆ: ಮಾರುತಿ ಬೌದ್ಧೆ
ಬೀದರ್ ಜಿಲ್ಲೆಯಲ್ಲಿ ರೈತ ಸಂಘ, ಕಮ್ಯೂನಿಸ್ಟ್ ಪಕ್ಷ ಹಾಗೂ ದಲಿತ ಸಂಘರ್ಷ ಸಮಿತಿಯ ಅನೇಕ ಹೋರಾಟಗಾರರು ಇಂದು ನಮ್ಮೊಂದಿಗಿಲ್ಲದಿದ್ದರೂ, ಅವರ ಹೋರಾಟದ ಆಶಯಗಳು ನಮಗೆ ಶಕ್ತಿ ತುಂಬುತ್ತಿವೆ. ನ್ಯಾಯಕ್ಕಾಗಿ ಧ್ವನಿಯೆತ್ತಲು ಅವರು ಸದಾ ಪ್ರೇರಣೆಯಾಗಿದ್ದಾರೆ ಎಂದು ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನದ ಸರ್ವಾಧ್ಯಕ್ಷ ಮಾರುತಿ ಬೌದ್ಧೆ ಹೇಳಿದರು.
ಬಸವಣ್ಣನವರು ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ತಮ್ಮ ಮನೆಯಿಂದಲೇ ಬಂಡಾಯವೆದ್ದು ಕಲ್ಯಾಣಕ್ಕೆ ಆಗಮಿಸಿದ್ದರು. ಹೀಗಾಗಿ ಬೀದರ್ ನೆಲವು ಬಸವಣ್ಣ ಹಾಗೂ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ ಮುಹಮ್ಮದ್ ಗವಾನ್ ಅವರಂತಹ ಮಹನೀಯರು ಬಂಡಾಯದ ಚಿಂತನೆಗಳನ್ನು ಸಾರಿದ ಐತಿಹಾಸಿಕ ಭೂಮಿಯಾಗಿದೆ ಎಂದು ಹೇಳಿದರು.

ಪ್ರತಿವರ್ಷ ನವೆಂಬರ್ 7ರಂದು ಬಾಬಾಸಾಹೇಬ ಅಂಬೇಡ್ಕರ್ ಅವರು ಶಾಲೆಗೆ ದಾಖಲಾದ ವಿಶೇಷ ದಿನವಾಗಿದೆ. ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ನವೆಂಬರ್ 7ನ್ನು ವಿದ್ಯಾರ್ಥಿ ದಿನವನ್ನಾಗಿ ಆಚರಿಸಲು ಅಧಿಕೃತ ಆದೇಶ ಹೊರಡಿಸಬೇಕು. ಶೋಷಿತ ಸಮುದಾಯಗಳಿಗೆ ಇಂದಿಗೂ ಸಾಗುವಳಿ ಭೂಮಿ ಲಭ್ಯವಾಗಿಲ್ಲ. ಹೀಗಾಗಿ ಅರ್ಹ ಫಲಾನುಭವಿಗಳಿಗೆ ಸಿ-ಫಾರಂ ವಿತರಿಸಬೇಕು. ಬಡವರು, ದಲಿತರು ಹಾಗೂ ಶೋಷಿತ ಸಮುದಾಯಗಳಿಗೆ ಮಂಜೂರಾದ ಸಾಗುವಳಿ ಭೂಮಿಯನ್ನು ಮಾರಾಟ ಮಾಡದಂತೆ ರಕ್ಷಿಸಲು ಹೊಸ ಕಾಯ್ದೆ ಜಾರಿಗೆ ತರಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ದೇಶದಲ್ಲಿ ಸಂವಿಧಾನದ ಅಸ್ತಿತ್ವ ಮತ್ತು ಆಶಯಗಳ ಕುರಿತು ಆತಂಕ ಹಾಗೂ ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗೆ ನಡೆದ ಹಿಂದೂ ಸಮಾವೇಶವೊಂದರಲ್ಲಿ ‘ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ’ ಎಂದು ಹೇಳಿಕೆ ನೀಡಿರುವ ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ಗುಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಬೀದರ್ ಜಿಲ್ಲೆ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದ್ದರೂ, ಇಲ್ಲಿನ ಜನರಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಅಪಾರ ಅಭಿಮಾನವಿದೆ ಎಂದು ಶಾಸಕ ರಹೀಂ ಖಾನ್ ಹೇಳಿದರು.
ದಲಿತರ ಮೇಲಿನ ದೌರ್ಜನ್ಯ ಮತ್ತು ದಬ್ಬಾಳಿಕೆಗಳು ಇಂದಿಗೂ ಮುಂದುವರಿದಿವೆ. ಇವುಗಳ ನಿರ್ಮೂಲನೆಗೆ ಅಂಬೇಡ್ಕರ್ ಅವರು ನೀಡಿದ ಶ್ರೇಷ್ಠ ಸಂವಿಧಾನವನ್ನು ಅಧ್ಯಯನ ಮಾಡಿ, ಅದರ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮಾನತೆ ನೆಲೆಸುವಂತೆ ಪ್ರಯತ್ನಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಸಾಮಾಜಿಕ ನ್ಯಾಯದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, “ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಬೇಕಾದರೆ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಮೌಲ್ಯಗಳು ಅನುಷ್ಠಾನಗೊಳ್ಳಬೇಕಿದೆ. ಗಡಿ ಭಾಗದಲ್ಲಿ ಹೊಸ ತಲೆಮಾರಿನ ಯುವಕರನ್ನು ಸಂಘಟಿಸುವ ಜೊತೆಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ನಡೆಸುತ್ತಿರುವ ಕಾರ್ಯ ಮೆಚ್ಚುವಂತಹದು” ಎಂದರು.
ಕನ್ನಡಪರ ಪ್ರತಿಷ್ಠಾನಗಳ ಅನುಷ್ಠಾನಕ್ಕೆ ಆಗ್ರಹ: ಸುರೇಶ ಚನ್ನಶೆಟ್ಟಿ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ನಾಡು-ನುಡಿಗಾಗಿ ಜೀವನದುದ್ದಕ್ಕೂ ಶ್ರಮಿಸಿದ ಪ್ರಭುರಾವ ಕಂಬಳಿವಾಲೆ ಹಾಗೂ ಡಾ. ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಲ್ಲಿ ಸರ್ಕಾರ ಈಗಾಗಲೇ ಟ್ರಸ್ಟ್ ರಚಿಸಿದೆ. ಅದನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ಮುಂದಿನ ದಿನಗಳಲ್ಲಿ ನಾಡು-ನುಡಿಗಾಗಿ ಹಾಗೂ ಕನ್ನಡ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಮಾಜಿ ಸಚಿವ ದಿವಂಗತ ಭೀಮಣ್ಣ ಖಂಡ್ರೆ ಮತ್ತು ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರ ಹೆಸರಿನಲ್ಲಿ ಪ್ರತಿಷ್ಠಾನಗಳನ್ನು ಅಸ್ತಿತ್ವಕ್ಕೆ ತರಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕನ್ನಡ ಭವನವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಹಸ್ತಾಂತರಿಸಬೇಕು. ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದ ನವೀಕರಣಕ್ಕೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾದ ಮೂಲಸೌಕರ್ಯಗಳನ್ನು ಒದಗಿಸುವ ಮುಖಾಂತರ ಕನ್ನಡಪರ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು ಎಂದು ಮಾಡಿದರು.
ಬಹಿರಂಗ ಅಧಿವೇಶನದಲ್ಲಿ 7 ನಿರ್ಣಯ ಅಂಗೀಕಾರ
ಬೀದರ್ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಏಳು ಮಹತ್ವದ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
1.ದಿವಂಗತ ಬಿ. ಶ್ಯಾಮಸುಂದರ್ ಅವರ ಜೀವನ ಮತ್ತು ಸಾಧನೆಗಳ ಕುರಿತು ಸಮಗ್ರ ಅಧ್ಯಯನ ನಡೆಸಿ, ಅವರ ಕೃತಿ ಸಂಪುಟವನ್ನು ಕರ್ನಾಟಕ ಸರ್ಕಾರವೇ ಪ್ರಕಟಿಸಬೇಕು. 2.ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. 3.ರಾಜ್ಯಾದ್ಯಂತ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. 4.ಬೀದರ್ ಕನ್ನಡ ಭವನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸುಪರ್ದಿಗೆ ವಹಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕು. 5.ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರವನ್ನು ಸಂಪೂರ್ಣವಾಗಿ ನವೀಕರಿಸಬೇಕು. 6.ಬೀದರ್ ವಿಶ್ವವಿದ್ಯಾಲಯದಲ್ಲಿ ದಲಿತ ಸಾಹಿತ್ಯ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸಬೇಕು.7.ದಲಿತ ಬಂಡಾಯ ಹೋರಾಟಗಾರರ ಜೀವನ, ಹೋರಾಟ ಮತ್ತು ಸಾಧನೆಗಳನ್ನು ದಾಖಲಿಸುವ ಪುಸ್ತಕ ಹಾಗೂ ಗ್ರಂಥಗಳನ್ನು ಪ್ರಕಟಿಸಬೇಕು.
ಬಹಿರಂಗ ಅಧಿವೇಶನದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಂ.ಎಸ್. ಮನೋಹರ್ ಅವರು ಗೊತ್ತುವಳಿ ಮಂಡಿಸಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಗೌರವ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಸಿದ್ಧಾರ್ಥ ಮಹಾವಿದ್ಯಾಲಯದಿಂದ ಅಂಬೇಡ್ಕರ್ ವೃತ್ತ, ಭಗತ್ ಸಿಂಗ್ ವೃತ್ತ, ಬಸವೇಶ್ವರ ವೃತ್ತ, ಛತ್ರಪತಿ ಶಿವಾಜಿ ವೃತ್ತ, ಹರಳಯ್ಯ ವೃತ್ತ ಹಾಗೂ ಕನ್ನಡಾಂಬೆ ವೃತ್ತದ ಮಾರ್ಗವಾಗಿ ರಂಗಮಂದಿರದವರೆಗೆ ಮೆರವಣಿಗೆ ನಡೆಯಿತು.
ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ದೊಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಕಾರ್ಯಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ದೇಶಕ ಸಿದ್ರಾಮ ಸಿಂಧೆ, ಯುವ ಮುಖಂಡರಾದ ಶಶಿಧರ ಹೊಸಳ್ಳಿ ಸೇರಿದಂತೆ ಅನೇಕರಿದ್ದರು.
ಸಮ್ಮೇಳನಾಧ್ಯಕ್ಷರ ಜೀವನ ಸಾಧನೆ ಕುರಿತು ನಡೆದ ಗೋಷ್ಠಿಯಲ್ಲಿ ಶ್ರೀಕಾಂತ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಕೆ.ಎಸ್.ಬಂಧು ಉಪನ್ಯಾಸ ನೀಡಿದರು. ಬಳಿಕ ನಡೆದ ಸಂಕಿರಣ ಗೋಷ್ಠಿಯಲ್ಲಿ ಬಿ.ಶ್ಯಾಮಸುಂದರ್ ಅವರ ಬದುಕು ಮತ್ತು ಹೋರಾಟ ಕುರಿತು ನಿವೃತ್ತ ಪ್ರಾಚಾರ್ಯ ವಿಠಲದಾಸ ಪ್ಯಾಗೆ, ದಲಿತ ಬಂಡಾಯ ಚಳವಳಿ ಪರಂಪರೆ : ಸವಾಲು ಸಾಧ್ಯತೆ ಕುರಿತು ಸಿಯುಕೆ ಪ್ರಾಧ್ಯಾಪಕ ಡಾ.ಅಪ್ಪುಗೆರೆ ಸೋಮಶೇಖರ್, ಮಹಿಳಾ ಮತ್ತು ಸಂವಿಧಾನ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯ ಡಾ.ಜಯದೇವಿ ಗಾಯಕವಾಡ ಹಾಗೂ ಬುದ್ಧ-ಬಸವ-ಡಾ.ಬಿ.ಆರ್. ಅಂಬೇಡ್ಕರ್ ಕುರಿತು ನಿವೃತ್ತ ಪ್ರಾಚಾರ್ಯ ಶಿವಶರಣಪ್ಪ ಹುಗ್ಗಿ ಪಾಟೀಲ್ ಉಪನ್ಯಾಸ ಮಂಡಿಸಿದರು.
ಇದನ್ನೂ ಓದಿ : ಸಂದರ್ಶನ | ಶೋಷಿತರ ಸ್ವಾಭಿಮಾನದ ಹೋರಾಟಕ್ಕೆ ದನಿಯಾದ ದಲಿತ ಚಳವಳಿ : ಮಾರುತಿ ಬೌದ್ಧೆ
ಸಮಾರಂಭದಲ್ಲಿ ಆಣದೂರಿನ ವೈಶಾಲಿನಗರದ ಭಂತೆ ವರಜ್ಯೋತಿ ನೇತೃತ್ವ ವಹಿಸಿದ್ದರು. ಪ್ರಮುಖರಾದ ಎಸ್.ಪಿ. ಹಳ್ಳದ್, ಸುರೇಶ ಹಾದಿಮನಿ, ಶಂಭುಲಿಂಗ ವಾಲ್ದೊಡ್ಡಿ,ಎಸ್.ಎಂ.ಜನವಾಡಕರ್, ಅರುಣ ಪಟೇಲ್, ಕಸಾಪ ಪದಾಧಿಕಾರಿಗಳಾದ ಪ್ರಶಾಂತ ಮಠಪತಿ, ಟಿ.ಎಂ.ಮಚ್ಚೆ, ಬಾಲಾಜಿ ಅಮರವಾಡಿ, ನಾಗಭೂಷಣ ಮಾಮುಡಿ, ರೂಪಾ ಪಾಟೀಲ್, ಸಿ.ಬಿ. ಸೋಮಶೆಟ್ಟಿ, ಶಾಂತಾಬಾಯಿ ಕಾಂಬಳೆ, ಶಿವಯ್ಯ ಸ್ವಾಮಿ, ಕಲ್ಯಾಣರಾವ್ ಗುಮ್ಮಾ, ದೇವಿದಾಸ ಚಿಮಕೋಡೆ, ಗುರುನಾಥ ರಾಜಗೀರಾ, ಮಹೇಶ ಗೋರನಾಳಕರ್, ಬಾಬು ಟೈಗರ್, ವಿನಯಕುಮಾರ ಮಾಳಗೆ, ವಿಜಯಕುಮಾರ ಸೋನಾರೆ, ಅಭಿ ಕಾಳೆ, ಉದಯ ನಾಯಕ, ಡಾ.ಮಕ್ಸೂದ್ ಚಂದಾ, ನಿಜಾಮೋದ್ದಿನ್, ಸುಮಂತ ಕಟ್ಟಿಮನಿ, ಗಾಲಿಬ್ ಹಾಸ್ಮಿ, ಓಂಕಾರ ಮಠಪತಿ, ದಾನಿ ಬಾಬುರಾವ್ ಸೇರಿದಂತೆ ಕನ್ನಡಾಭಿಮಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.





