ಲಡಾಖ್ ಕೇಂದ್ರಾಡಳಿತ ಪ್ರದೇಶದ 28 ಪ್ರಮುಖ ಹಾಗೂ ಕಾರ್ಯತಂತ್ರದ (Strategic) ಸ್ಥಳಗಳಿಗೆ ಅಧಿಕೃತ ಭೂಪಟದಲ್ಲಿ ಪ್ರಮಾಣಿತ ಹೆಸರುಗಳನ್ನು (Standardised Names) ಭಾರತ ಸರ್ಕಾರ ಗುರುತಿಸಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಇದಕ್ಕೆ ತಕ್ಕ ತಿರುಗೇಟು ನೀಡಿರುವ ಭಾರತ, “ಲಡಾಖ್ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ ಚೀನಾ ಒಪ್ಪಿಕೊಂಡರೂ, ಒಪ್ಪಿಕೊಳ್ಳದಿದ್ದರೂ ಲಡಾಖ್ ಭಾರತಕ್ಕೆ ಸೇರಿದ್ದು ಎಂದು ಸ್ಪಷ್ಟಪಡಿಸಿದೆ.
ಅಕ್ಟೋಬರ್ 2 ರಂದು ಭಾರತ ಸರ್ಕಾರವು ಲಡಾಖ್ ಆಡಳಿತದೊಂದಿಗೆ ಸಮಾಲೋಚನೆ ನಡೆಸಿ, ನೈಜ ನಿಯಂತ್ರಣ ರೇಖೆಯ (LAC) ಬಳಿಯ ಗೋಗ್ರಾ (Gogra) ಮತ್ತು ಹಾಟ್ ಸ್ಪ್ರಿಂಗ್ಸ್‌ನಂತಹ ಪ್ರಮುಖ ಗಡಿ ಘರ್ಷಣಾ ಬಿಂದುಗಳು ಸೇರಿದಂತೆ 28 ಭೌಗೋಳಿಕ ಸ್ಥಳಗಳನ್ನು ಅಧಿಕೃತ ಭಾರತೀಯ ನಕ್ಷೆಯಲ್ಲಿ ಔಪಚಾರಿಕವಾಗಿ ಗುರುತಿಸಿದೆ.
ಭಾರತದ ಈ ಕ್ರಮದ ಉದ್ದೇಶವೇನು?
ಗಡಿ ಪ್ರದೇಶಗಳ ಅಧಿಕೃತ ನಕ್ಷೆಗಳನ್ನು ಸರಳಗೊಳಿಸುವುದು, ನಿಖರವಾದ ಗುರುತಿಸುವಿಕೆಗೆ ಅನುವು ಮಾಡಿಕೊಡುವುದು ಮತ್ತು ಸೂಕ್ಷ್ಮ ಗಡಿ ಪ್ರದೇಶದ ಬಗ್ಗೆ ಸಾರ್ವಜನಿಕರಲ್ಲಿ ಉತ್ತಮ ಜಾಗೃತಿ ಮೂಡಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪಟ್ಟಿಯಲ್ಲಿರುವ ಪ್ರಮುಖ ಸ್ಥಳಗಳು: ಗೋಗ್ರಾ, ಹಾಟ್ ಸ್ಪ್ರಿಂಗ್ಸ್, ಅಲಿಶಾ ಗಿರಿ (ಉನ್ನತ ಶಿಖರ), ಬ್ರಂಗ್ಸಾ, ಚಾಪ್ಚಿಂಗಲ್ ಪಾಸ್, ಕನಿಷ್ಕ ಪೀಕ್, ಕಾರುನ್ ಪಿರ್ ಪರ್ವತ, ಕುಕ್ಸೆಲ್, ಮಾರ್ತಾಂಡ್ ಗಿರಿ, ಪರ್ಪಿಕ್ ಹಿಮನದಿ, ಸ್ಕಾಮ್ರಿ ಹಿಮನದಿ, ಝೋರಾವರ್ ಪೀಕ್, ದೆಹ್ರಾ ಕಾಂಪಸ್, ಜೊಲ್ಮೊರಿ, ಕುಮಾರಾಯಣ ಪಾಯಿಂಟ್, ಪಂಗ್ಲುಂಗ್, ರಿಂಚೆನ್ ಝಾಂಗ್ಪೋ, ಗುರು ರಿನ್ಪೋಚೆ ಮತ್ತು ಯಾನ್ಪಾ ನದಿ ಸೇರಿದಂತೆ ಒಟ್ಟು 28 ಸ್ಥಳಗಳನ್ನು ಮ್ಯಾಪ್‌ನಲ್ಲಿ ಅಧಿಕೃತವಾಗಿ ಸೇರಿಸಲಾಗಿದೆ.
ಭಾರತದ ಈ ಹೆಜ್ಜೆಗೆ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, “ಭಾರತವು ಏಕಪಕ್ಷೀಯವಾಗಿ ಮತ್ತು ಕಾನೂನುಬಹಿರವಾಗಿ ಸ್ಥಾಪಿಸಿರುವ ‘ಲಡಾಖ್ ಕೇಂದ್ರಾಡಳಿತ ಪ್ರದೇಶ’ವನ್ನು ಚೀನಾ ಎಂದಿಗೂ Recognise ಮಾಡಿಲ್ಲ. ಭಾರತದ ಈ ಕ್ರಮವು ಕಾನೂನುಬಹಿರ ಮತ್ತು ಅಮಾನ್ಯವಾಗಿದೆ” ಎಂದು ಗ್ಲೋಬಲ್ ಟೈಮ್ಸ್ ವರದಿಯಲ್ಲಿ ಆರೋಪಿಸಿದ್ದರು.
ಚೀನಾದ ಈ ದುರಹಂಕಾರದ ಹೇಳಿಕೆಗೆ ತಿರುಗೇಟು ನೀಡಿರುವ ಭಾರತ, “ಲಡಾಖ್ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಮತ್ತು ಬೇರ್ಪಡಿಸಲಾಗದ ಅಂಗವಾಗಿದೆ. ಚೀನಾ ಎಷ್ಟೇ ನಿರಾಕರಿಸಿದರೂ ಅಥವಾ ವಿರೋಧಿಸಿದರೂ ಈ ಸತ್ಯವನ್ನು ಬದಲಿಸಲು ಸಾಧ್ಯವಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದೆ. ಭೂಪಟದಲ್ಲಿ ಈ ಪ್ರಮುಖ ಸ್ಥಳಗಳನ್ನು ಅಧಿಕೃತವಾಗಿ ಸೇರಿಸುವ ಮೂಲಕ ಭಾರತವು ತನ್ನ ಆಡಳಿತಾತ್ಮಕ ಸ್ಪಷ್ಟತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಚೀನಾದ ಸುಳ್ಳು ಹಕ್ಕುಗಳನ್ನು ವಿಫಲಗೊಳಿಸಿದೆ.
ಇದನ್ನೂ ಓದಿ: ಕೆಂಡದುಂಡೆಯಾದ ಲಡಾಖ್; ಏನಿದು ಹಕೀಕತ್ತು?
ಜೂನ್ 2020 ರಲ್ಲಿ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ತೀವ್ರ ಘರ್ಷಣೆ ನಡೆದಿತ್ತು (1975 ರ ನಂತರದ ಮೊದಲ ಮಾರಕ ಮಿಲಿಟರಿ ಮುಖಾಮುಖಿ). ಈ ಗಲ್ವಾನ್ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಮತ್ತು 4 ಚೀನೀ ಸೈನಿಕರು ಸಾವನ್ನಪ್ಪಿದ್ದರು. ಎರಡು ವರ್ಷಗಳ ಸುದೀರ್ಘ ಬಿಕ್ಕಟ್ಟು ಮತ್ತು ಹಲವು ಸುತ್ತಿನ ಉನ್ನತ ಮಟ್ಟದ ಮಿಲಿಟರಿ ಮಾತುಕತೆಗಳ ಬಳಿಕ ಉಭಯ ದೇಶಗಳು ಗಡಿಯಿಂದ ಸೈನಿಕರನ್ನು ಹಿಂದಕ್ಕೆ ಪಡೆದಿದ್ದವು. ಪ್ರಸ್ತುತ 3,500 ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಇಂತಹ ಕ್ರಮಗಳ ಮೂಲಕ ಭಾರತ ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸುತ್ತಿದೆ.




