ಪ್ಯಾಕೆಟ್ ಮಾಡಿದ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು, ಸಕ್ಕರೆ ಮತ್ತು ಉಪ್ಪಿನ ಅಂಶವಿದ್ದರೆ, ಅವುಗಳ ಪೊಟ್ಟಣದ ಮುಂಭಾಗದಲ್ಲಿ ಪ್ರತ್ಯೇಕ ಎಚ್ಚರಿಕೆ ಲೇಬಲ್‌ಗಳನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (FSSAI) ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ನಿರ್ದೇಶನ ನೀಡಿದೆ.
ಗ್ರಾಹಕರು ಆಹಾರ ಪದಾರ್ಥಗಳನ್ನು ಖರೀದಿಸುವ ಮುನ್ನ ಅವುಗಳಲ್ಲಿರುವ ಅನಾರೋಗ್ಯಕರ ಅಂಶಗಳ ಬಗ್ಗೆ ಸುಲಭವಾಗಿ ತಿಳಿದುಕೊಂಡು, ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅನುವಾಗುವಂತೆ ಸುಪ್ರೀ ಕೋರ್ಟ್ ಈ ಆದೇಶ ಹೊರಡಿಸಲಾಗಿದೆ. ‘3S ಅಂಡ್ ಅವರ್ ಹೆಲ್ತ್ ಸೊಸೈಟಿ’ ಎಂಬ ಲಾಭರಹಿತ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.
ಇದನ್ನೂ ಓದಿ: ‘100% ನ್ಯಾಚುರಲ್’ ಲೇಬಲ್ ಬಳಸದಂತೆ ಡಾಬರ್ ಸಂಸ್ಥೆಗೆ FSSAI ಕಟ್ಟುನಿಟ್ಟಿನ ಸೂಚನೆ
ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಕೊಬ್ಬು, ಸಕ್ಕರೆ ಮತ್ತು ಉಪ್ಪು ಈ ಮೂರೂ ಅಂಶಗಳಿಗೆ ಒಂದೇ ಸಂಯೋಜಿತ ಲೇಬಲ್ ಹಾಕುವ ಬದಲು, ಪ್ರತಿಯೊಂದಕ್ಕೂ ಪ್ರತ್ಯೇಕವಾದ ಲೇಬಲ್ ಅನ್ನು ಮುದ್ರಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಅಲ್ಲದೆ, ಈ ಲೇಬಲ್‌ಗಳು ಕೇವಲ ‘ಸಕ್ಕರೆ ಸೇರಿಸಲಾಗಿದೆ’ (Added Sugar) ಅಥವಾ ‘ಕೊಬ್ಬು ಸೇರಿಸಲಾಗಿದೆ’ (Added Fat) ಎಂದು ಉಲ್ಲೇಖಿಸುವ ಬದಲಿಗೆ ಆಹಾರದಲ್ಲಿರುವ ‘ಒಟ್ಟು ಸಕ್ಕರೆ’ ಮತ್ತು ‘ಸ್ಯಾಚುರೇಟೆಡ್ ಕೊಬ್ಬು’ ಪ್ರಮಾಣವನ್ನು ಆಧರಿಸಿರಬೇಕು ಎಂದು ಸುಪ್ರೀಂ ಕೋರ್ಟ್ ಪೀಠ ಸೂಚಿಸಿದೆ.
ಪ್ರತಿಯೊಂದು ಎಚ್ಚರಿಕೆ ಚಿಹ್ನೆಯ ಪ್ರಮಾಣಿತ ಚಿತ್ರದೊಂದಿಗೆ ‘ಹೈ ಫ್ಯಾಟ್, ಹೈ ಶುಗರ್, ಹೈ ಸಾಲ್ಟ್’ ಎಂಬ ಸ್ಪಷ್ಟ ಪದಗಳನ್ನು ಹೊಂದಿರಬೇಕು ಎಂದೂ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಗ್ರಾಹಕರಿಗೆ ಸುಲಭವಾಗಿ ಕಾಣಿಸುವಂತೆ, ಪ್ಯಾಕೆಟ್‌ನ ಮುಂಭಾಗದಲ್ಲಿ ಪ್ರತಿಯೊಂದು ಚಿಹ್ನೆಯು ಕನಿಷ್ಠ ಶೇ. 4ರಿಂದ ಶೇ. 5 ರಷ್ಟು ಜಾಗವನ್ನು ಆಕ್ರಮಿಸಿರಬೇಕು. ಅದರಲ್ಲಿರುವ ಅಕ್ಷರಗಳು ಸ್ಪಷ್ಟವಾಗಿ ಓದುವಂತಿರಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಕರಡು ನಿಯಮಗಳನ್ನು ಅಂತಿಮಗೊಳಿಸಲು FSSAIಗೆ ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದ್ದು, ನಿಯಮ ಜಾರಿಯಾದ ನಂತರ ಆಹಾರ ಕಂಪನಿಗಳಿಗೆ ಬದಲಾವಣೆ ಮಾಡಿಕೊಳ್ಳಲು 365 ದಿನಗಳ ಅವಧಿಯನ್ನು ನೀಡಲಾಗಿದೆ.



