ಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಉಕ್ರೇನ್ ಸೇನೆಯು ರಷ್ಯಾದ ಮೇಲ್ಮೈ ಭಾಗಗಳನ್ನು ಗುರಿಯಾಗಿಸಿ ಏಕಕಾಲದಲ್ಲಿ 1,000ಕ್ಕೂ ಹೆಚ್ಚು ಡ್ರೋನ್‌ಗಳನ್ನು ಉಡಾಯಿಸಿ ಭಾರೀ ದಾಳಿ ನಡೆಸಿದೆ. ಇದರಲ್ಲಿ ನೂರಾರು ಡ್ರೋನ್‌ಗಳು ನೇರವಾಗಿ ರಾಜಧಾನಿ ಮಾಸ್ಕೋವನ್ನು ಗುರಿಯಾಗಿಸಿಕೊಂಡಿದ್ದವು. ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ ರಷ್ಯಾದ ರಾಜಧಾನಿ ಮಾಸ್ಕೋ ಮೇಲೆ ನಡೆದ ಅತಿ ದೊಡ್ಡ ಪ್ರಮಾಣದ ಡ್ರೋನ್ ದಾಳಿ ಇದಾಗಿದೆ ಎಂದು ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಬಣ್ಣಿಸಿದ್ದಾರೆ.
ಈ ದಿಢೀರ್ ದಾಳಿಯಿಂದಾಗಿ ಮಾಸ್ಕೋ ಪ್ರದೇಶದಲ್ಲಿ ಇಬ್ಬರು ನಾಗರಿಕರು (74 ವರ್ಷದ ವೃದ್ಧ ಹಾಗೂ 44 ವರ್ಷದ ಮಹಿಳೆ) ಸಾವನ್ನಪ್ಪಿದ್ದು, ಕನಿಷ್ಠ 20 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಗವರ್ನರ್ ಆಂಡ್ರೆಯ್ ವೊರೊಬ್ಯೋವ್ ತಿಳಿಸಿದ್ದಾರೆ. ಡ್ರೋನ್ ದಾಳಿಯ ಪರಿಣಾಮವಾಗಿ ಮಾಸ್ಕೋದ ಪ್ರಮುಖ ತೈಲ ಶುದ್ಧೀಕರಣ ಘಟಕ ಮತ್ತು ಬಹುಮಹಡಿಯ ವಸತಿ ಸಮುಚ್ಛಯಕ್ಕೆ ಹಾನಿಯಾಗಿದೆ.
ಇದನ್ನೂ ಓದಿ: 50 ಜನರಿದ್ದ ರಷ್ಯಾ ವಿಮಾನ ಪತನ; 50 ಮಂದಿ ಸಾವು
ರಷ್ಯಾದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿದ್ದ ಸಂಸತ್ತು ಚುನಾವಣೆಯ ಅಂತಿಮ ದಿನದಂದೇ ಉಕ್ರೇನ್ ಈ ಬೃಹತ್ ದಾಳಿ ನಡೆಸಿದೆ. ರಷ್ಯಾದ ಚುನಾವಣಾ ಪ್ರಕ್ರಿಯೆಗೆ ಭಂಗ ತರುವ ಉದ್ದೇಶದಿಂದ ಉಕ್ರೇನ್ ಈ ಕೃತ್ಯ ಎಸೆಗಿದೆ ಎಂದು ಮಾಸ್ಕೋ ಮೇಯರ್ ಆರೋಪಿಸಿದ್ದು, ದಾಳಿಯ ಹೊರತಾಗಿಯೂ ಚುನಾವಣೆ ಸುಸೂತ್ರವಾಗಿ ನಡೆದಿದೆ ಎಂದಿದ್ದಾರೆ.
ರಷ್ಯಾದ ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ, ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಯು ಕಪ್ಪು ಸಮುದ್ರ ಹಾಗೂ ಕ್ರಿಮಿಯಾ ಸೇರಿದಂತೆ ರಷ್ಯಾದಾದ್ಯಂತ ಒಟ್ಟು 1,100ಕ್ಕೂ ಹೆಚ್ಚು ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ರಾಜಧಾನಿ ಮಾಸ್ಕೋ ಕಡೆಗೆ ಬರುತ್ತಿದ್ದ ಸುಮಾರು 450 ಡ್ರೋನ್‌ಗಳನ್ನು ಹಾದಿಯಲ್ಲೇ ತಡೆಯಲಾಗಿದೆ ಎಂದು ರಷ್ಯಾ ಪ್ರತಿಪಾದಿಸಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ದಾಳಿಯಲ್ಲಿ ಉಕ್ರೇನ್ ಸ್ವದೇಶಿ ನಿರ್ಮಿತ ಫ್ಲೆಮಿಂಗೊ ಮತ್ತು ಪೆಲಿಕಾನ್ ಕ್ಷಿಪಣಿಗಳು ಹಾಗೂ ದೀರ್ಘ ಶ್ರೇಣಿಯ ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.




