ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ ಪಕ್ಷ ಸಂಘಟಿಸುವ ಸವಾಲು ಅವರ ಮೇಲಿದೆ.
ಕೋಲಾರ ಜಿಲ್ಲೆಯನ್ನು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದೇ ಹೇಳಲಾಗುತ್ತದೆ. ಯಾಕೆಂದರೆ ಜಿಲ್ಲೆಯಲ್ಲಿ ಹಲವು ಬಾರಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಹೆಚ್ಚು ಗೆಲ್ಲುತ್ತ ಬಂದ್ದಿದ್ದಾರೆ. ಆದರೆ ಏಳು ಬಾರಿ ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ ಹೆಚ್ ಮುನಿಯಪ್ಪ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಪರಾಜಯಗೊಂಡ ಬಳಿಕ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಣಗಳಾಗಿ ಮಾರ್ಪಟ್ಟಿತು.
ಕೋಲಾರ ಜಿಲ್ಲೆಯಲ್ಲಿ ಒಂದು ಕಡೆ ಹಿರಿಯ ಮುತ್ಸದ್ದಿ ರಾಜಕಾರಣಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣವಾದರೆ, ಇನ್ನೊಂಡೆದೆ ಸಚಿವ ಕೆ ಹೆಚ್ ಮುನಿಯಪ್ಪ ಬಣ ಆಗಿತ್ತು. ಸುಮಾರು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಎರಡು ಬಣಗಳು ಮುಂದುವರಿಯುತ್ತ ಬಂದಿವೆ.
ಕಳೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ನಡೆಯುವ ಸಭೆಗಳಲ್ಲಿ ಬಣ ಬಡಿದಾಟವೇ ನಡೆಯುತ್ತಿತ್ತು, ಈ ಹಿಂದೆ ಮಾಲೂರಿನ ಲಕ್ಷ್ಮಿ ನಾರಾಯಣ ಅವರು ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಬಣಗಳ ಭಿನ್ನಾಭಿಪ್ರಾಯದ ನಡುವೆಯೇ ಕಾಲ ಕಳೆದುಹೋಯಿತು. ಅವರು ಕೆ ಹೆಚ್ ಮುನಿಯಪ್ಪ ಬಣದಲ್ಲಿ ಗುರುತಿಸಿಕೊಂಡಿದವರಾಗಿದ್ದು, ಆದರೆ ಈಗ ರಮೇಶ್ ಕುಮಾರ್ ಪರಮಾಪ್ತರಾದ ಮೈಕೆಲ್ ನಾರಾಯಣಸ್ವಾಮಿ ಅವರು ಅಧ್ಯಕ್ಷರಾಗಿದ್ದು, ರಮೇಶ್ ಕುಮಾರ್ ಬಣ ಮೇಲುಗೈ ಸಾಧಿಸಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಕಾಂಗ್ರೆಸ್ ಬಣಗಳ ಪ್ರಶ್ನೆ ಬಂದಾಗ ಈಗಿನ ಅಧ್ಯಕ್ಷರು ಯಾವುದೇ ಬಣವಿಲ್ಲ ಎಲ್ಲರನ್ನೂ ಒಗ್ಗಟ್ಟಾಗಿ ಜೊತೆ ಸೇರಿಸಿಕೊಂಡು ಪಕ್ಷ ಸಂಘಟನೆ ಮಾಡುತ್ತೇನೆಂದು ಹೇಳಿಕೆ ನೀಡಿದ್ದಾರೆ. ಆದರೆ ಮುಂದೆ ಯಾವ ರೀತಿ ಮುನ್ನಡೆಸಿಕೊಂಡು ಹೋಗುತ್ತಾರೆ ಎಂಬುದನ್ನು ಕಾಲವೇ ಹೇಳುತ್ತದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲು ಎಐಸಿಸಿಯಿಂದ ಓಜಾ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ಮಾಡಲಾಗಿತ್ತು, ಸಂಘಟನಾ ಸೃಜನ್ ಅಭಿಯಾನದ ಅಡಿಯಲ್ಲಿ ಸಮಿತಿಯು ಕೋಲಾರ ಜಿಲ್ಲೆಯ ಆರು ತಾಲೂಕುಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಶಾಸಕರು, ಚುನಾಯಿತ ಪ್ರತಿನಿಧಿಗಳು, ಮೂಂಚೂಣಿ ಘಟಕದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಹಲವರ ಅಭಿಪ್ರಾಯ ಪಡೆದು ಎಐಸಿಸಿಗೆ ಅಭಿಪ್ರಾಯ ವರದಿ ಸಲ್ಲಿಸಿದ ಬಳಿಕ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರ ಜತೆ ಚರ್ಚೆ ಮಾಡಿ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ.
ಕೋಲಾರ ಕಾಂಗ್ರೆಸ್ ನೂತನ ಜಿಲ್ಲಾ ಅಧ್ಯಕ್ಷರಾಗಿರುವ ಮೈಕಲ್ ನಾರಾಯಣಸ್ವಾಮಿ ಅವರು ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದರಾಗಿದ್ದು, ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿ ಕೆಲಸ ಮಾಡುವ ಮೂಲಕ, ಬೆಂಗಳೂರಿನ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೋಲಾರ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಮಾಡಿದ್ದು, ಕೆಲವು ತಿಂಗಳ ಹಿಂದೆ ಕೋಲಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್ ಸಂಘಟನಾ ಸೃಜನ್ ಅಭಿಯಾನದ ಮೂಲಕ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೋಲಾರ ಜಿಲ್ಲಾ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೈಕೆಲ್ ನಾರಾಯಣಸ್ವಾಮಿ ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದ್ದು, “ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಜಿಲ್ಲೆಯ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ನನಗೆ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಿ ಈಗ ಇರುವುದಕ್ಕಿಂತ ಇನ್ನೂ ಅಧಿಕ ಬಲಿಷ್ಠವಾಗಿ ಪಕ್ಷವನ್ನು ಕಟ್ಟುತ್ತೇನೆ. ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದಕ್ಕೆ ಪ್ರಯತ್ನ ಮಾಡುತ್ತೇನೆ” ಎಂದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವು
“ರಾಜ್ಯ ವಿಧಾನಸಭಾ ಚುನಾವಣೆಗಿಂತ ಮುಂಚೆ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ನಗರಸಭೆ ಚುನಾವಣೆ ಬರುವುದರಿಂದ ಎಲ್ಲರ ಜೊತೆಗೂಡಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಳ್ಳೆಯ ಗೆಲುವು ತಂದುಕೊಟ್ಟು ಪಕ್ಷವನ್ನು ಗಟ್ಟಿಯಾಗಿ ಕಟ್ಟುವ ಕೆಲಸ ಮಾಡುತ್ತೇವೆ” ಎಂದರು.
ಕೋಲಾರದಲ್ಲಿ ಕಾಂಗ್ರೆಸ್ ಬಣ ರಾಜಕೀಯ
ಕೋಲಾರ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಇತ್ತು. ಆದರೆ ಈಗ ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಾವೆಲ್ಲರೂ ಕಾಂಗ್ರೆಸ್ ಪಕ್ಷದವರೇ ಆಗಿರುವುದರಿಂದ ಯಾವುದೇ ರೀತಿಯ ಬಣ ಇಲ್ಲ. ನಾನು ಎಲ್ಲರಿಗೂ ಸಮಾನ ಅವಕಾಶ ಕೊಡುವ ಕೆಲಸವನ್ನು ಮಾಡುತ್ತೇನೆ. ನಮ್ಮಲ್ಲಿರುವ ವೈಮನಸ್ಸುಗಳನ್ನು ಹೋಗಲಾಡಿಸಿ ಎಲ್ಲರ ಜೊತೆ ಸೇರಿ ಒಟ್ಟಿಗೆ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತೇವೆ. ನಮಗೆ ಹಳಬರು, ಹೊಸಬರು ಅಲ್ಲದೆ ಎಲ್ಲರನ್ನೂ ಒಂದೇ ಸಮಾನಾಗಿ ಕಾಣುವ ಕೆಲಸ ಮಾಡುತ್ತೇವೆ” ಎಂದು ಹೇಳಿದರು.
“ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪಂಚಾಯಿತಿಗೊಂದು ಗ್ಯಾರಂಟಿ ಸಮಿತಿ ಮಾಡುವುದಕ್ಕೆ ಆದೇಶ ಮಾಡಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಆ ಸಮಿತಿಯಲ್ಲಿದ್ದು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಾರೆ. ಇದರಿಂದ ನಮ್ಮ ಪಕ್ಷಕ್ಕೂ ಅನುಕೂಲವಾಗುತ್ತದೆ” ಎಂದರು.
ವಿಧಾನಸಭಾ ಚುನಾವಣೆಗೆ ತಯಾರಿ
ಪ್ರಸ್ತುತ ಜಿಲ್ಲೆಯಲ್ಲಿ ಕೋಲಾರ, ಬಂಗಾರಪೇಟೆ, ಮಾಲೂರು ಹಾಗೂ ಕೆಜಿಎಫ್‌ನಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಮುಳಬಾಗಿಲು ಹಾಗೂ ಶ್ರೀನಿವಾಸಪುರದಲ್ಲಿ ಜೆಡಿಎಸ್ ಶಾಸಕರಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದಕ್ಕೆ ನಾವು ಈಗಿನಿಂದಲೇ ತಯಾರಿ ಮಾಡಿಕೊಂಡು ಹೋಗುತ್ತೇವೆ” ಎಂದು ಹೇಳಿದರು.
“ನನಗೆ ಕೋಲಾರ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಿದಾಗ ಒಂದು ದೊಡ್ಡ ಜವಾಬ್ದಾರಿ ನೀಡಿದ್ದರು. ಕರ್ನಾಟಕ ರಾಜ್ಯದಲ್ಲಿ ಎಸ್‌ಐಆರ್ ಪ್ರಾರಂಭವಾಗುವುದಕ್ಕೂ ಮೊದಲು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಾಂಗ್ರೆಸ್ ಪಕ್ಷದ ಬಿಎಲ್ಎ ಮಾಡುವ ಜವಾಬ್ದಾರಿ ನೀಡಿದ್ದು, ಅದನ್ನು ಸಮರ್ಥವಾಗಿ ನಾನು ನಿಭಾಯಿಸಿ ಎಲ್ಲ ಬೂತ್‌ಗಳಲ್ಲಿಯೂ ಬಿಎಲ್ಎಗಳನ್ನು ಎಲ್ಲರ ಸಹಕಾರ ಪಡೆದು ಹೈಕಮಾಂಡ್ ಸೂಚನೆಯಂತೆ ಕೆಲಸ ನಿರ್ವಹಿಸಿದ್ದೇನೆ.
“ನಾವು ನಮ್ಮ ನಾಯಕರಾಗಿರುವ ರಮೇಶ್ ಕುಮಾರ್ ಅವರ ಆದರ್ಶಗಳನ್ನು ಅಳವಡಿಸಿಕೊಂಡು, ಅವರ ಮಾರ್ಗದರ್ಶನದಲ್ಲೇ ಕೆಲಸ ಮಾಡುತ್ತ ಬಂದಿದ್ದೇವೆ. ನಮಗೆ ಕೋಲಾರ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ ಸದಸ್ಯರು, ನಾಯಕರು, ಕಾರ್ಯಕರ್ತರು ಸಹಕಾರ ನೀಡಿದ್ದಾರೆ. ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ಕೃತಜ್ಞತೆ ಸಲ್ಲಿಸಿದರು.
ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದೇ ನಮ್ಮ ಗುರಿ
“ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಮತ್ತೆ ಅಧಿಕಾರಕ್ಕೆ ತಂದು ಇತಿಹಾಸ 2029ರ ಲೋಕಸಭಾ ಚುನಾವಣೆಯಲ್ಲಿ ಸಮಾನತೆ, ಪ್ರೀತಿ, ಸತ್ಯವನ್ನು ಸಾರುವ ರಾಹುಲ್ ಗಾಂಧಿಯವರನ್ನು ದೇಶದ ಪ್ರಧಾನ ಮಂತ್ರಿ ಮಾಡಲು ನಾವು ಹಗಲು ರಾತ್ರಿ ದುಡಿದು ಕೆಲಸ ಮಾಡುತ್ತೇವೆ” ಎಂದರು.
ಜಿಲ್ಲಾ ಅಧ್ಯಕ್ಷರು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಗಬೇಕು
ಕೆಲವು ದಿನಗಳ ಹಿಂದೆ ಕಾಂಗ್ರೆಸ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ನೂತನ ಅಧ್ಯಕ್ಷರ ಜೊತೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿ ಹಲವಾರು ಸೂಚನೆಗಳನ್ನು ನೀಡಿದ್ದಾರೆ.
ಕೋಲಾರ ಹಾಗೂ ತಾಲೂಕು ಮಟ್ಟದ ಸಮಿತಿಗಳನ್ನು ಒಂದು ತಿಂಗಳ ಒಳಗೆ ನೇಮಿಸಬೇಕು. ಜಿಲ್ಲೆಯ ಎಲ್ಲ ನಾಯಕರ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳಬೇಕು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಆರು ತಿಂಗಳು ಕಾಲಾವಕಾಶ ನೀಡಿದ್ದು, ಕೆಲಸ ಮಾಡದೇ ಇದ್ದವರಿಗೆ ಬದಲಾವಣೆ ಖಚಿತ ಎಂದ್ದಿದ್ದಾರೆ.
ಎಲ್ಲ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಸೂಚನೆ
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಮುಂಬರುವ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಂದಾಗಿ ಸ್ಪರ್ಧೆ ಮಾಡುವುದರಿಂದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಬಹಳ ಸವಾಲಾಗಿ ಪರಿಣಮಿಸುತ್ತದೆ. ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಪ್ರಬಲವಾಗಿ ಜೆಡಿಎಸ್ ಪೈಪೋಟಿ ನೀಡುತ್ತ ಬಂದಿದ್ದು, ಕೋಲಾರ ಸಂಸದ ಮಲ್ಲೇಶ್ ಬಾಬು ಅವರು ಜೆಡಿಎಸ್ ಪಕ್ಷದಿಂದ ಸಂಸದರಾಗಿದ್ದಾರೆ. ಮುಳಬಾಗಿಲು, ಶ್ರೀನಿವಾಸಪುರಲ್ಲೂ ಜೆಡಿಎಸ್ ಶಾಸಕರಿದ್ದಾರೆ.
ಇದನ್ನೂ ಓದಿದ್ದೀರಾ? ಕೊಲ್ಹಾರ | ಶಾಸಕರಿಲ್ಲದ ಪ್ರಜಾಸೇವಾ ಆಂದೋಲನ: ಅಹವಾಲು ಹೊತ್ತುಬಂದವರಿಗೆ ನಿರಾಸೆ, ಅಧಿಕಾರಿಗಳಿಂದ ಪರಿಹಾರದ ಭರವಸೆ
ಮಾಲೂರಿನಲ್ಲಿ ಪ್ರಬಲ ನಾಯಕರಾಗಿರುವ ಹೂಡಿ ವಿಜಯ್ ಕುಮಾರ್ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಪ್ರಬಲ ಪೈಪೋಟಿ ನೀಡಲಿದ್ದು, ತಮ್ಮ ಹೊಸ ಜವಾಬ್ದಾರಿಯನ್ನು ಕೋಲಾರ ಜಿಲ್ಲಾ ನೂತನ ಕಾಂಗ್ರೆಸ್ ಅಧ್ಯಕ್ಷ ಮೈಕೆಲ್ ನಾರಾಯಣಸ್ವಾಮಿ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕೋಲಾರ ಜಿಲ್ಲೆಯಲ್ಲಿ ದೀರ್ಘಕಾಲದಿಂದ ಶಮನವಾಗದ ಬಣ ರಾಜಕೀಯ ಮತ್ತು ಮುಂಬರುವ ಸಾಲು ಸಾಲು ಚುನಾವಣೆಗಳ ನಡುವೆ, ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ ‘ರಮೇಶ್ ಕುಮಾರ್ ಬಣ’ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ ಪಕ್ಷ ಸಂಘಟಿಸುವ ಸವಾಲು ಅವರ ಮೇಲಿದೆ.
ಒಂದೆಡೆ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಿ ನಾಯಕರ ನಡುವೆ ಸಮನ್ವಯ ಸಾಧಿಸುವುದು, ಇನ್ನೊಂದೆಡೆ ಜಿಲ್ಲೆಯಲ್ಲಿ ಬಲಗೊಳ್ಳುತ್ತಿರುವ ಬಿಜೆಪಿ-ಜೆಡಿಎಸ್ ಮೈತ್ರಿಕೂಟವನ್ನು ಎದುರಿಸುವುದು ನೂತನ ಅಧ್ಯಕ್ಷರಿಗೆ ಸುಲಭದ ಹಾದಿಯಲ್ಲ. ಹೈಕಮಾಂಡ್ ನೀಡಿರುವ ಆರು ತಿಂಗಳ ಕಾಲಾವಕಾಶದಲ್ಲಿ ಅವರು ಪಕ್ಷವನ್ನು ಹೇಗೆ ಮುನ್ನಡೆಸುತ್ತಾರೆ ಮತ್ತು ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಯಶಸ್ಸು ತಂದುಕೊಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.




