ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಹ್ರಾನ್ ಮೇಲೆ ಮತ್ತೆ ದಾಳಿ ನಡೆಸಲಾಗುವುದು ಎಂಬ ಬೆದರಿಕೆ ಹಾಕಿದ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಇನ್ನಷ್ಟೂ ತೀವ್ರಗೊಂಡಿದೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಮೊದಲ ಸುತ್ತಿನ ಮಾತುಕತೆ ನೀರಸವಾಗಿ ಆರಂಭವಾಗಿದ್ದು, ಟ್ರಂಪ್ ಬೆದರಿಕೆಯನ್ನು ಖಂಡಿಸಿ ಇರಾನ್ ಅಧಿಕಾರಿಗಳು ಮಾತುಕತೆಯಿಂದ ಹೊರನಡೆದಿದ್ದಾರೆ. ಅಮೆರಿಕ, ಇರಾನ್ ಅಧಿಕಾರಿಗಳ ಗುಂಪು ಛಾಯಾಚಿತ್ರವನ್ನು ಕ್ಲಿಕ್ಕಿಸಲು ಕಾಯುತ್ತಿದ್ದ ಮಾಧ್ಯಮಗಳಿಗೂ ಫೋಸ್ ನೀಡದೆ ಇರಾನ್ ಅಧಿಕಾರಿಗಳು ಹೊರನಡೆದಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಸಹಿ ಹಾಕಿದ ಇಸ್ಲಾಮಾಬಾದ್ ಒಪ್ಪಂದದ ಅಡಿಯಲ್ಲಿ ಇರಾನ್, ಅಮೆರಿಕ, ಪಾಕಿಸ್ತಾನ ಮತ್ತು ಕತಾರ್ ಆರಂಭಿಕ ಸುತ್ತಿನ ಮಾತುಕತೆಗಾಗಿ ಸ್ವಿಟ್ಜರ್‌ಲ್ಯಾಂಡ್‌ನ ಬರ್ಗೆನ್‌ಸ್ಟಾಕ್ ರೆಸಾರ್ಟ್‌ನಲ್ಲಿ ಸಭೆ ಸೇರಿತ್ತು. ಆದರೆ ಅಷ್ಟರೊಳಗೆ ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ಟ್ರುತ್ ವೇದಿಕೆಯಲ್ಲಿ ಇರಾನ್ ಮೇಲೆ ಮತ್ತೆ ದಾಳಿ ನಡೆಸುವ ಬೆದರಿಕೆ ಹಾಕಿದ್ದಾರೆ. ಇದೀಗ ಮಾತುಕತೆ ಬಹುತೇಕ ಮುರಿದುಬಿದ್ದಂತೆ ಭಾಸವಾಗಿದೆ. ಈ ರಾಜತಾಂತ್ರಿಕ ಬಿಕ್ಕಟ್ಟಿನ ನೇರ ಪರಿಣಾಮ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ ಮೇಲೆ ಬಿದ್ದಿದ್ದು, ಅಲ್ಲಿ ಹಡಗುಗಳ ಸಂಚಾರ ಗಣನೀಯವಾಗಿ ಕುಸಿತ ಕಂಡಿದೆ.
ಇದನ್ನೂ ಓದಿ: . ಇಸ್ರೇಲ್‌ನಿಂದ ಕದನ ವಿರಾಮ ಉಲ್ಲಂಘನೆ: ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್
ಈಗಾಗಲೇ ಕದನ ವಿರಾಮ ಒಪ್ಪಂದದ ನಡುವೆಯೂ ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸಿರುವ ವಿಚಾರದಲ್ಲಿ ಇರಾನ್ ಆಕ್ರೋಶಗೊಂಡಿದೆ. ಈ ದಾಳಿಗೆ ಪ್ರತಿಯಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗುವುದು ಎಂದು ಘೋಷಿಸಿದೆ. ಈ ನಡುವೆ ಟ್ರಂಪ್ ಕೂಡಾ ಬೆದರಿಕೆ ಹಾಕುವ ಮೂಲಕ ಇರಾನ್ ಅನ್ನು ಇನ್ನಷ್ಟೂ ಕೆಣಕಿದ್ದಾರೆ.
“ಲೆಬನಾನ್‌ನಲ್ಲಿ ಅಧಿಕ ಸಂಭಾವನೆ ಪಡೆಯುವ ಪ್ರಾಕ್ಸಿಗಳಿಂದ ದಾಳಿ ಮಾಡಿಸುವುದನ್ನು ಇರಾನ್ ತಕ್ಷಣ ನಿಲ್ಲಿಸಬೇಕು. ಹೀಗೆ ದಾಳಿ ನಿಲ್ಲಿಸಿದಿದ್ದರೆ ನಾವು ಮತ್ತೆ ಇರಾನ್ ಮೇಲೆ ತೀವ್ರ ದಾಳಿ ಮಾಡುತ್ತೇವೆ. ಕಳೆದ ವಾರ ನಾವು ದಾಳಿ ಮಾಡಿದಂತೆ ಮತ್ತೆ ದಾಳಿ ಮಾಡಲಾಗುತ್ತದೆ. ಇನ್ನಷ್ಟೂ ತೀವ್ರವಾಗಿ ದಾಳಿ ನಡೆಸಲಾಗುತ್ತದೆ” ಎಂದು ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಬರೆದಿದ್ದಾರೆ.
ಟ್ರಂಪ್ ಮಿಲಿಟರಿ ಕ್ರಮಗಳ ಎಚ್ಚರಿಕೆ ನೀಡಿದ ನಂತರ ಇರಾನ್‌ನ ಉನ್ನತ ಅಧಿಕಾರಿಗಳು ನಡೆಯುತ್ತಿದ್ದ ರಾಜತಾಂತ್ರಿಕ ಮಾತುಕತೆಗಳನ್ನು ಅರ್ಧಕ್ಕೆ ನಿಲ್ಲಿಸಿ ಹೊರನಡೆದಿದ್ದಾರೆ. “ಬೆದರಿಕೆ ಮತ್ತು ಒತ್ತಡದ ವಾತಾವರಣದಲ್ಲಿ ಯಾವುದೇ ಮಾತುಕತೆ ಸಾಧ್ಯವಿಲ್ಲ” ಎಂದು ಇರಾನ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ‘ಡ್ರೋನ್ ವ್ಯೂಹ’ಕ್ಕೆ ದೊಡ್ಡಣ್ಣನ ಪ್ರತಿಷ್ಠೆ ಧೂಳೀಪಟ: ಅಮೆರಿಕದ ಕೊಬ್ಬು ಇಳಿಸಿದ ಇರಾನ್
ಜಾಗತಿಕವಾಗಿ ಬಳಕೆಯಾಗುವ ಒಟ್ಟು ತೈಲದ ಸುಮಾರು 20% ಕ್ಕೂ ಹೆಚ್ಚು ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುವುದರಿಂದ, ಈ ಭಾಗದಲ್ಲಿ ಸದ್ಯ ಮತ್ತೆ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಸಂಭಾವ್ಯ ದಾಳಿ ಅಥವಾ ಮುಟ್ಟುಗೋಲು ಹಾಕಿಕೊಳ್ಳುವ ಭೀತಿಯಿಂದಾಗಿ ಪ್ರಮುಖ ಶಿಪ್ಪಿಂಗ್ ಕಂಪನಿಗಳು ತಮ್ಮ ಹಡಗುಗಳನ್ನು ಹಾರ್ಮುಜ್ ಮಾರ್ಗದ ಬದಲಾಗಿ ದೀರ್ಘ ಮತ್ತು ಹೆಚ್ಚು ವೆಚ್ಚದಾಯಕ ಪರ್ಯಾಯ ಮಾರ್ಗಗಳಿಗೆ ತಿರುಗಿಸುತ್ತಿವೆ. ಕಡಲ ಸಂಚಾರದ ದತ್ತಾಂಶಗಳನ್ನು ಟ್ರ್ಯಾಕ್ ಮಾಡುವ ಏಜೆನ್ಸಿಗಳ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ ಈ ಜಲಸಂಧಿಯನ್ನು ದಾಟುವ ಹಡಗುಗಳ ದೈನಂದಿನ ಸಂಖ್ಯೆಯಲ್ಲಿ ಭಾರಿ ಇಳಿಕೆ ದಾಖಲಾಗಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಹೀಗೆಯೇ ಮುಂದುವರಿದರೆ ಅಥವಾ ಸಂಪೂರ್ಣ ಸ್ಥಗಿತಗೊಂಡರೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿಢೀರ್ ಏರಿಕೆಯಾಗುವ ಸಾಧ್ಯತೆಯಿದೆ. ಇದು ಭಾರತ ಸೇರಿದಂತೆ ಇಂಧನ ಆಮದು ಮಾಡಿಕೊಳ್ಳುವ ದೇಶಗಳ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಲಿದೆ.




