12 ವರ್ಷದ ವಿದ್ಯಾರ್ಥಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಲಹಂಕ ಸಮೀಪದ ವಸತಿ ಶಾಲೆಯೊಂದರಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ವಿದ್ಯಾರ್ಥಿಯನ್ನು ದೈಹಿಕ ಶಿಕ್ಷಕ (ಪಿಟಿ) ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಶಿಕ್ಷಕನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಡಯಾರಪ್ಪನಹಳ್ಳಿ ಗ್ರಾಮದಲ್ಲಿರುವ ‘ಸ್ಟರ್ಲಿಂಗ್ ಇಂಗ್ಲಿಷ್ ರೆಸಿಡೆನ್ಶಿಯಲ್ ಸ್ಕೂಲ್’ನಲ್ಲಿ ಘಟನೆ ನಡೆದಿದೆ. ಮೃತ ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಶಾಲೆಯ ಪಿಟಿ ಶಿಕ್ಷಕ ನಾರಾಯಣ್ ವಿರುದ್ಧ ಬಿಎನ್ಎಸ್ ಸೆಕ್ಷನ್ 101ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
“ಬುಧವಾರ ಮುಂಜಾನೆ 6 ಗಂಟೆ ಸುಮಾರಿಗೆ ಶಾಲೆಯಿಂದ ನಮಗೆ ಕರೆ ಬಂದಿತ್ತು. ‘ಮಗನಿಗೆ ಹುಷಾರಿಲ್ಲ, ಜಾಗಿಂಗ್ ಮಾಡುವಾಗ ಕುಸಿದು ಬಿದ್ದಿದ್ದಾನೆ, ಆಸ್ಪತ್ರೆಗೆ ಸೇರಿಸಿದ್ದೇವೆ’ ಎಂದು ತಿಳಿಸಿದ್ದರು. ಆದರೆ, ನಾವು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವನು ಮೃತಪಟ್ಟಿದ್ದ. ಶಾಲೆಯ ಒಳಗಡೆ ಏನೋ ಅನಾಹುತ ನಡೆದಿದೆ ಎಂಬ ಅನುಮಾನ ನಮಗಿದೆ” ಎಂದು ಬಾಲಕನ ತಂದೆ ಹೇಳಿದ್ದಾರೆ.
“ಹಾಸ್ಟೆಲ್‌ನಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿಯು ನಮ್ಮ ಕುಟುಂಬಕ್ಕೆ ನೀಡಿದ ಮಾಹಿತಿ ಪ್ರಕಾರ, ಪಿಟಿ ಶಿಕ್ಷಕ ನಾರಾಯಣ್ ಅವರು ನಮ್ಮ ಮಗನಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು, ಅವನ ಕುತ್ತಿಗೆಯನ್ನು ಬಾಗಿಸಿದ್ದರು, ಇದರಿಂದಾಗಿ ಅವನು ಸಾವನ್ನಪ್ಪಿದ್ದಾನೆ” ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ಶಿಕ್ಷಕನ ರಕ್ಷಣೆಗೆ ಪೊಲೀಸರು ಯತ್ನಿಸಿದ್ದಾರೆ ಎಂದೂ ಅವರು ದೂರಿದ್ದಾರೆ.
ವಿದ್ಯಾರ್ಥಿಯ ಹಠಾತ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬುಧವಾರ ಶಾಲಾ ಆವರಣದಲ್ಲಿ ಪೋಷಕರು ಮತ್ತು ಆತನ ಸಂಬಂಧಿಕರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಇಂದು ಬೆಳಗ್ಗೆ ಸುಮಾರು 10 ಮೀಟರ್ ಓಡಿದ ನಂತರ ಬಾಲಕ ಕುಸಿದು ಬಿದ್ದಿದ್ದಾನೆ ಎಂದು ಶಾಲಾ ಆಡಳಿತ ಮಂಡಳಿ ಹೇಳುತ್ತಿದೆ. ಅಲ್ಲದೆ, ಬಾಲಕನಿಗೆ ಮೊದಲೇ ಕೆಲವು ಆರೋಗ್ಯ ಸಮಸ್ಯೆಗಳಿದ್ದವು ಎನ್ನಲಾಗಿದೆ. ಆದಾಗ್ಯೂ, ಸಾವಿಗೆ ನಿಖರ ಕಾರಣ ತಿಳಿಯಲು ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಮತ್ತೊಬ್ಬ ತನಿಖಾಧಿಕಾರಿ ಮಾತನಾಡಿ, “ಆರೋಪಿ ಪಿಟಿ ಶಿಕ್ಷಕ ನಾರಾಯಣ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಘಟನೆಯ ಹಿಂದಿನ ನೈಜತೆಯನ್ನು ಪತ್ತೆಹಚ್ಚಲು ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ಪರಿಶೀಲಿಸಲಾಗುತ್ತಿದೆ,” ಎಂದು ಹೇಳಿದ್ದಾರೆ.



