ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಎಚ್‌ಪಿಸಿಎಲ್ ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್‌ಗೆ ನೀರು ನುಗ್ಗಿ ಸುಮಾರು 3,000 ಎಲ್‌ಪಿಜಿ ಸಿಲಿಂಡರ್‌ಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.
ರಾಯಗಢ ಜಿಲ್ಲೆಯ ಹಲವಾರು ಭಾಗಗಳಲ್ಲಿ ತೀವ್ರ ಮಳೆಯಾಗುತ್ತಿದ್ದು ಪ್ರವಾಹ ಉಂಟಾಗಿದೆ. ಎಚ್‌ಪಿಸಿಎಲ್ ಬಾಟ್ಲಿಂಗ್ ಸ್ಥಾವರವು ಜಲಾವೃತವಾಗಿದ್ದು, ತುಂಬಿದ ಮತ್ತು ಖಾಲಿ ಸಿಲಿಂಡರ್‌ಗಳು ಸೇರಿದಂತೆ ಸುಮಾರು 3,000 ಎಲ್‌ಪಿಜಿ ಸಿಲಿಂಡರ್‌ಗಳು ಬಲವಾದ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ.
ಇದನ್ನೂ ಓದಿ: ಡೆಲಿವರಿ ಟೆಂಪೋದಲ್ಲಿದ್ದ 27 ಎಲ್‌ಪಿಜಿ ಸಿಲಿಂಡರ್‌ಗಳು ಕಳವು
ಇನ್ನು ನದಿಯಲ್ಲಿ ತೇಲುತ್ತಿರುವ ಸಿಲಿಂಡರ್‌ಗಳು ಯಾವ ಸ್ಥಿತಿಯಲ್ಲಿವೆ ಎಂದು ತಿಳಿಯದ ಕಾರಣ, ಸಾರ್ವಜನಿಕರು ಅವುಗಳನ್ನು ಮುಟ್ಟಬಾರದು ಅಥವಾ ಮನೆಗೆ ಕೊಂಡೊಯ್ಯಬಾರದು ಎಂದು ರಾಯಗಢ ಜಿಲ್ಲಾಧಿಕಾರಿ ಕಿಸನ್ ಜಾವಳೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಹಾಗೆಯೇ ಸಿಲಿಂಡರ್‌ಗಳು ಎಲ್ಲಾದರೂ ಕಂಡುಬಂದರೆ ತಕ್ಷಣವೇ ಸಮೀಪದ ಎಚ್‌ಪಿಸಿಎಲ್ ವಿತರಕರಿಗೆ ಅಥವಾ ತಹಶೀಲ್ದಾರ್ ಕಚೇರಿಗೆ ಮಾಹಿತಿ ನೀಡಲು ವಿನಂತಿಸಲಾಗಿದೆ.
ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ನೂರಾರು ಎಲ್‌ಪಿಜಿ ಸಿಲಿಂಡರ್‌ಗಳು ನದಿಯ ಕೆಳಭಾಗದಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಪ್ರವಾಹದ ನೀರಿನಿಂದ ಕೊಚ್ಚಿಹೋದ ಸಿಲಿಂಡರ್‌ಗಳನ್ನು ಜನರು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ಕೆಲವು ಪೋಸ್ಟ್‌ಗಳಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಈ ಸಿಲಿಂಡರ್ ಯಾವ ಸ್ಥಿತಿಯಲ್ಲಿದೆ ಎಂದು ತಿಳಿಯದ ಕಾರಣ ಗಂಭೀರ ಸುರಕ್ಷತಾ ಅಪಾಯವಿದೆ ಎಂದು ಅಧಿಕಾರಿಗಳು ಪುನರುಚ್ಚರಿಸಿದ್ದಾರೆ. ಸಾರ್ವಜನಿಕರು ಆ ಸಿಲಿಂಡರ್‌ಗಳಿಂದ ದೂರವಿರಲು ಸೂಚಿಸಿದ್ದಾರೆ.




