ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕರ ನಡುವೆಯೇ ಕಾಮುಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಕಿರುಕುಳಕ್ಕೆ ಒಳಗಾದ ಯುವತಿಯ ಸ್ನೇಹಿತರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಕಾಲೇಜಿಗೆ ತೆರಳಲು ಯುವತಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದಳು. ಮೆಟ್ರೋ ಹತ್ತುವಾಗ ಕೆಂಪು ಅಂಗಿ ಧರಿಸಿದ್ದ ವ್ಯಕ್ತಿ ಹಿಂದಿನಿಂದ ಆಕೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಮೊದಲಿಗೆ ಆತನ ಅಸಭ್ಯ ವರ್ತನೆ ಯುವತಿಯ ಅರಿವಿಗೆ ಬಂದಿಲ್ಲ. ಪದೇ-ಪದೇ ಅದೇ ರೀತಿ ನಡೆಯುತ್ತಿದ್ದರಿಂದ ಆಕೆಗೆ ಆತನ ವರ್ತನೆ ಅರಿವಾಗಿದೆ. ಬಳಿಕ ಆಕೆ ಸಹಪ್ರಯಾಣಿಕರಿಗೆ ಆ ಬಗ್ಗೆ ತಿಳಿಸಿದರೂ ಯಾರು ಆಕೆಯ ನೆರವಿಗೆ ಬಂದಿಲ್ಲ ಎಂದು ದೂರಲಾಗಿದೆ.
ಆರೋಪಕ್ಕೆ ಸಂಬಂಧಿಸಿದ್ದಂತೆ ಪ್ರತಿಕ್ರಿಯೆ ನೀಡಿರುವ ಬಿಎಂಆರ್‌ಸಿಎಲ್ ಅಧಿಕಾರಿಗಳು, “ಸೋಮವಾರ ನಡೆದಿರುವ ಘಟನೆಯ ಬಗ್ಗೆ ಯಾರು ದೂರು ನೀಡಿಲ್ಲ. ಯಾರಾದರೂ ದೂರು ನೀಡಿದರೆ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.