ಬೆಂಗಳೂರು | ನ.7ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿದ ನ್ಯಾಯಬೆಲೆ ಅಂಗಡಿ ಮಾಲೀಕರು

0
269
ನ್ಯಾಯಬೆಲೆ
ನ್ಯಾಯಬೆಲೆ

ಅನ್ನಭಾಗ್ಯ ಯೋಜನೆಯಡಿ ಕಾರ್ಡ್‌ದಾರರಿಗೆ ಅಕ್ಕಿ ಬದಲು ಹಣ ನೀಡುವಿಕೆ ಸೇರಿ ನಾನಾ ಸಮಸ್ಯೆಗಳ ಈಡೇರಿಕೆಗಾಗಿ ನ್ಯಾಯಬೆಲೆ ಅಂಗಡಿ ಮಾಲೀಕರು, ರಾಜ್ಯಾದ್ಯಂತ ನ.7 ರವರೆಗೆ ಪಡಿತರ ವಿತರಣೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಫೇರ್‌ಪ್ರೈಸ್ ಷಾಪ್ ಡೀಲರ್ಸ್ ಅಸೋಸಿಯೇಷನ್ ​ನ್ಯಾಯಬೆಲೆ ಅಂಗಡಿಕಾರರು ​ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನಿಟ್ಟು ನವೆಂಬರ್ 7 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಈ ಹಿಂದೆ ಅಕ್ಟೋಬರ್‌ನಲ್ಲಿ ಪ್ರತಿಭಟನೆ ನಡೆದಾಗ ರಾಜ್ಯಾದ್ಯಂತ 20,350 ನ್ಯಾಯಬೆಲೆ ಅಂಗಡಿಗಳು ಬೆಂಬಲ ನೀಡಿದ್ದವು. ಇದೀಗ, ಮತ್ತೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ವಿತರಕ ಸಂಘಟನೆ ನಿರ್ಧರಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿಭಟನೆ ನಡೆಸುವುದರಿಂದ ಕಾರ್ಡ್‌ದಾರರಿಗೆ ಪ್ರಸಕ್ತ ತಿಂಗಳು ರೇಷನ್ ಪಡೆಯಲು ವಿಳಂಬವಾಗುವ ಸಾಧ್ಯತೆಯಿದೆ.

“ಆಹಾರ ಇಲಾಖೆ ಸಚಿವರು ಹಾಗೂ ಅಧಿಕಾರಿಗಳ ಜತೆ ಈಗಾಗಲೇ ಮೂರ್ನಾಲ್ಕು ಬಾರಿ ಸಭೆ ನಡೆದರೂ ಸಮಸ್ಯೆ ಈಡೇರಿಲ್ಲ. ಕಾರ್ಡ್‌ದಾರರಿಗೆ 10 ಕೆಜಿ ಅಕ್ಕಿ ವಿತರಿಸುವುದಾಗಿ ಗ್ಯಾರಂಟಿ ಯೋಜನೆ ಘೋಷಿಸಿರುವ ಸರ್ಕಾರ ಇದೀಗ, ಅಕ್ಕಿ ಸಿಗುತ್ತಿಲ್ಲ ಎಂದ ಕಾರಣವೊಡ್ಡಿ ಹಣ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರಿಂದಾಗಿ ನಮಗೆ ಸಿಗಬೇಕಿದ್ದ ಕಮಿಷನ್ ಹಣ ಸಿಗದಂತಾಗಿದೆ” ಎಂದು ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಹೇಳಿದರು.

“ಪಡಿತರ ವಿತರಣೆಗೆ ನೀಡಲಾಗುವ ಕಮಿಷನ್ ಹಣವನ್ನು ಹೆಚ್ಚಿಸಬೇಕು. 2022ರಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ಕಮಿಷನ್ ಹಣವನ್ನೂ ರಾಜ್ಯ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು” ಎಂದು ಒತ್ತಾಯಿಸಿದರು.

ಬೇಡಿಕೆಗಳು ಏನು?

  • ಇ-ಕೆವೈಸಿ ಕೆಲಸ ನಿರ್ವಹಿಸಲು ಸರ್ಕಾರವು ₹23.75 ಕೋಟಿ ಹಣವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು.
  • ಗೋವಾ, ಕೇರಳ ಮತ್ತು ಮಹಾರಾಷ್ಟ್ರ ಸರ್ಕಾರಗಳು ಹೇಗೆ ನೀಡುತ್ತಿವೆಯೋ ಹಾಗೆಯೇ ಕರ್ನಾಟಕದಲ್ಲಿ ನ್ಯಾಯಬೆಲೆ ಅಂಗಡಿ ನಡೆಸುವವರಿಗೆ ಕಮಿಷನ್ ಹಣವನ್ನು ನೀಡಬೇಕು.
  • ಪ್ರತಿ ಕ್ವಿಂಟಾಲ್ ಅಕ್ಕಿ ವಿತರಿಸಲು ₹250 ರೂಪಾಯಿ ಕಮಿಷನ್ ನೀಡಬೇಕು
  • ಅಂಗಡಿ ನಿರ್ವಾಹಕರು ಮೃತಪಟ್ಟರೆ ಅವರ ಕುಟುಂಬಕ್ಕೆ ಸರ್ಕಾರ ನೆರವು ನೀಡಬೇಕು
  • ಸರ್ವರ್ ಸಮಸ್ಯೆ ಇರುವುದರಿಂದ ಪ್ರತಿ ಜಿಲ್ಲೆಗೂ ಪ್ರತ್ಯೇಕ ಸರ್ವರ್ ಸೆಂಟರ್ ಕಲ್ಪಿಸಬೇಕು
  • 5 ಕೆಜಿ ಅಕ್ಕಿ ಹಣವನ್ನು ಡಿಬಿಟಿ ಮಾಡುವ ಬದಲು ಬೇರೆ ಆಹಾರ ಪದಾರ್ಥಗಳನ್ನು ನೀಡಬೇಕು
  • ಡಿಬಿಟಿ ಮೂಲಕವೇ ಕಮಿಷನ್ ಹಣವನ್ನು ಪಡಿತರ ವಿತರಕರಿಗೆ ನೀಡಬೇಕು

LEAVE A REPLY

Please enter your comment!
Please enter your name here