ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಎಫ್‌ಡಿಎ) ಶನಿವಾರ ಬೆಂಗಳೂರು ನಗರದಾದ್ಯಂತ ಆಹಾರ ಸಂಗ್ರಹಣಾ ಸೌಲಭ್ಯಗಳನ್ನು ಪರಿಶೀಲಿಸಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಹೋಟೆಲ್‌ಗಳಿಗೆ ಸಾಸ್, ಪಾನೀಯ ಇನ್ನಿತರ ಆಹಾರ ಸಾಮಾಗ್ರಿ ಒದಗಿಸುವ ಘಟಕಗಳು ಹಾಗೇಯೇ ಮಟನ್ ಮತ್ತು ಮೀನು ಪೂರೈಸುವ ಘಟಕಗಳಲ್ಲಿ ಕಳಪೆ ನಿರ್ವಹಣೆ ಕಂಡುಬಂದಿವೆ.
ಕೋಲ್ಡ್‌ಮ್ಯಾನ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ರಾಧಾಕೃಷ್ಣ ಫುಡ್‌ಲ್ಯಾಂಡ್ ಲಿಮಿಟೆಡ್‌ನ ಆಹಾರ ಸಂಗ್ರಹಣಾ ಸೌಲಭ್ಯಗಳಲ್ಲಿ ಪರಿಶೀಲನೆ ನಡೆಸಿದಾಗ, ಅವಧಿ ಮೀರಿದ ಸುಮಾರು 70 ಕೆಜಿ ಸೋಯಾ ಸಾಸ್ ಮತ್ತು ಇತರ ಸಾಸ್‌ಗಳನ್ನು ಜಪ್ತಿ ಮಾಡಿ ನಾಶಪಡಿಸಲಾಗಿದೆ. ಜೊತೆಗೆ, ಸ್ಟ್ರಾಬೆರಿ ಫ್ಲೇವರ್‌ನ ಪಾನೀಯಗಳು ಸೇರಿದಂತೆ ಸುಮಾರು 10 ಲೀಟರ್ ಸೇವನೆಯ ಅವಧಿ ಮೀರಲಿದ್ದ ಪಾನೀಯಗಳನ್ನು ಸಹ ಜಪ್ತಿ ಮಾಡಲಾಗಿದೆ.
ಎಫ್‌ಡಿಎ 30 ವಿಶೇಷ ತಂಡಗಳನ್ನು ರಚಿಸಿ ಬೆಂಗಳೂರು ನಗರ ಜಿಲ್ಲೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ಆಹಾರ ಸಂಗ್ರಹಣಾ ಮತ್ತು ವಿತರಣಾ ಕೇಂದ್ರಗಳ ಪರಿಶೀಲನೆ ನಡೆಸಿದೆ. ಈ ಪರಿಶೀಲನೆಯು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006, 2011ರ ಅಡಿಯಲ್ಲಿ ನಡೆಸಲಾಗಿದ್ದು, ಅಧಿಕಾರಿಗಳು ಐದು ಮಾಂಸದ ಮಾದರಿಗಳು ಮತ್ತು 13 ಇತರ ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ವಿಶ್ಲೇಷಣೆಗೆ ಕಳುಹಿಸಿದ್ದಾರೆ.
ಈ ಕಾರ್ಯಾಚರಣೆ ಶುಕ್ರವಾರ ನಡೆದ ಫೈವ್‌ಸ್ಟಾರ್ ಹೋಟೆಲ್‌ಗಳ ಪರಿಶೀಲನೆಯ ಕಾರ್ಯಭಾಗವಾಗಿದ್ದು, ಆ ದಿನ 26 ತ್ರೀ ಸ್ಟಾರ್ ಮತ್ತು ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಿ, ಅವಧಿ ಮೀರಿದ ಮಾಂಸ, ಹಾಲು, ತರಕಾರಿಗಳು ಸೇರಿದಂತೆ ದೊಡ್ಡ ಪ್ರಮಾಣದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿ ನಾಶಪಡಿಸಲಾಗಿತ್ತು. ಲಲಿತ್ ಅಶೋಕ್, ಶಾಂಗ್ರಿ-ಲಾ, ಫೋರ್ ಸೀಸನ್ಸ್, ತಾಜ್ ಯಶವಂತಪುರ, ರಾಡಿಸನ್ ಬ್ಲೂ ಸೇರಿದಂತೆ ಹಲವು ಪ್ರಮುಖ ಹೋಟೆಲ್‌ಗಳಲ್ಲಿ ಕಳಪೆ ಗುಣಮಟ್ಟದ ಆಹಾರಗಳು ಪತ್ತೆಯಾಗಿದ್ದವು.
ಎಫ್‌ಡಿಎ ಆಯುಕ್ತರು, ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಪ್ರಯೋಗಾಲಯ ವರದಿಗಳು ಬಂದ ನಂತರ ಸಂಬಂಧಪಟ್ಟ ಆಹಾರ ವ್ಯವಹಾರ ನಿರ್ವಾಹಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.




