ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾರ್ಚ್ 6 ರಂದು ಮಂಡಿಸಿದ ಬಜೆಟ್‌ನಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾದ ನಿಧಿಯಿಂದ ಶ್ರಮಿಕ ವಸತಿ ಶಾಲೆ ಹಾಗೂ ಕೌಶಲ್ಯ ತರಬೇತಿ ಕೇಂದ್ರಗಳ ಸ್ಥಾಪನೆ ಬಳಸಿಕೊಳ್ಳುವುದನ್ನು ಕೈ ಬಿಡಬೇಕೆಂದು ಹಾಗೂ ಹೊಸ ಲೇಬರ್ ಕೋಡ್‌ಗಳಿಂದ ಕಟ್ಟಡ ನಿರ್ಮಾಣ ಕಾರ್ಮಿಕರ ಬದುಕಿನ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ಸಿಐಟಿಯು) ವತಿಯಿಂದ ವಿಧಾನ ಸಭಾ ಸ್ಪೀಕರ್, ಸಚಿವರು ಹಾಗೂ ರಾಜ್ಯಾದ್ಯಂತ ಎಲ್ಲ ಶಾಸಕರಿಗೆ ಮನವಿಗಳನ್ನು ಸಲ್ಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಕ್ಷೇತ್ರದ ಶಾಸಕರು ಹಾಗೂ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಮಂಕಾಳು ಎಸ್ ವೈದ್ಯ, ಟಿ ನರಸೀಪುರ ಕ್ಷೇತ್ರದ ಶಾಸಕರು, ಸಚಿವರಾದ ಎಚ್ ಮಹಾದೇವಪ್ಪ, ಸೇಡಂ ಶಾಸಕರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್, ಆಳಂದ ಶಾಸಕರು ಹಾಗೂ ನೀತಿ ಆಯೋಗದ ಉಪಾಧ್ಯಕ್ಷ ಬಿ ಆರ್ ಪಾಟೀಲ್, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ, ಚಾಮರಾಜ ಕ್ಷೇತ್ರದ ಕೆ ಹರೀಶ ಗೌಡ, ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀ ವತ್ಸ್, ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಇಟ್ನಾಳ್, ದೇವದುರ್ಗ ಶಾಸಕಿ ಕರೆಮ್ಮ, ಹೊನ್ನಾಳಿ ಶಾಸಕ ಡಿ ಜಿ ಶಾಂತನಗೌಡ, ಹೊಸಪೇಟೆ ಶಾಸಕ ಎ ಆರ್ ಗವಿಯಪ್ಪ, ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ, ರಾಮದುರ್ಗ ಕ್ಷೇತ್ರದ ಶಾಸಕ ಅಶೋಕ ಪಟ್ಟಣ ಶೆಟ್ಟಿ, ಕುಂದಾಪುರ ಶಾಸಕ ಕಿರಣ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ ಗಂಟಿ, ಟಿ ದಾಸರಹಳ್ಳಿ ಕ್ಷೇತ್ರದ ಶಾಸಕ ಮುನಿರಾಜ್, ಬೀದರ್ ದಕ್ಷಿಣದ ಡಾ. ಶೈಲೇಂದ್ರ ಚಲ್ದಲೆ, ವಿಧಾನ ಪರಿಷತ್ ಸದಸ್ಯ ಡಾ ಭೀಮರಾವ್ ಪಾಟೀಲ್, ಹುಕ್ಕೇರಿ ಶಾಸಕ ಗಣೇಶ ಹುಕ್ಕೇರಿ, ಅಪ್ಜಲ್ ಪುರ ಶಾಸಕ ಎಂವೈ ಪಾಟೀಲ್, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮಲ್ಲಿಮಟ್, ಹುಮನಾಬಾದ್ ಶಾಸಕ ಡಾ ಸಿದ್ಧಲಿಂಗ ಪಾಟೀಲ್ ಇದಲ್ಲದೆ ಹಗರಿಬೊಮ್ಮನಹಳ್ಳಿ, ಕಾಗವಾಡ, ಕ್ಷೇತ್ರದ ಶಾಸಕರು ಸೇರಿ ಈವರೆಗೂ ಮೂವತ್ತಕ್ಕಿಂತ ಅಧಿಕ ಶಾಸಕರಿಗೆ ಸಿಐಟಿಯು ನೇತೃತ್ವದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಪ್ರತಿಭಟನೆ ಹಾಗೂ ನಿಯೋಗದ ಮೂಲಕ ಮನವಿ ಸಲ್ಲಿಸಿದ್ದು, ಬಜೆಟ್‌ನಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮೀಸಲಿರುವ ನಿಧಿ ದುರ್ಬಳಕೆ ಹಾಗೂ ಹೊಸ ಲೇಬರ್ ಕೋಡ್‌ಗಳಿಂದ ಆಗುತ್ತಿರುವ ಪರಿಣಾಮಗಳನ್ನು ತಡೆಗಟ್ಟಲು ಶಾಸಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು ಎಂದು ಎರಡು ಮನವಿಗಳನ್ನು ಪ್ರತಿ ಶಾಸಕರಿಗೆ ಸಲ್ಲಿಸಿ ಮನವರಿಕೆ ಮಾಡಿಕೊಡಲಾಗಿದೆ.
ಫೆಡರೇಶನ್ ಪರವಾಗಿ ಮನವಿಗಳನ್ನು ಸ್ವೀಕರಿಸಿದ ಸ್ಪೀಕರ್, ಸಚಿವರು, ಶಾಸಕರು ಹಾಗೂ ಪರಿಷತ್ ಸದಸ್ಯರು, “ಇಂದಿನಿಂದ ಪುನಃ ಆರಂಭಗೊಳ್ಳುವ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ನಡೆಸುತ್ತವೆ. ಆ ಮೂಲಕ ತಮ್ಮ ತಮ್ಮ ಮತ ಕ್ಷೇತ್ರದ ಮತದಾರರಾಗಿರುವ ಕಾರ್ಮಿಕರು ನೀಡಿರುವ ಈ ಮನವಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇವೆ” ಎನ್ನುವ ಭರವಸೆ ನೀಡಿದ್ದಾರೆ.
“ರಾಜ್ಯದ ನಿರ್ಮಾಣ ವಲಯದ ಕಾರ್ಮಿಕರು ಮಂಡಿಸಿರುವ ಬೇಡಿಕೆಗಳ ಕುರಿತು ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಏಪ್ರಿಲ್20ರಿಂದ ನಮ್ಮ ಸಂಘಟನೆ ಸ್ವತಂತ್ರವಾಗಿ ಇಲ್ಲವೇ ಸಮನ್ವಯ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂಪಾರ್ಕ್‌ನಲ್ಲಿ ಸಾವಿರಾರು ಕಾರ್ಮಿಕರ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಲು ಯೋಜನೆ ರೂಪಿಸಿದೆ” ಎಂದು ಸಿಐಟಿಯು ಎಚ್ಚರಿಕೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಆಲಿಕಲ್ಲು ಮಳೆಯಿಂದ ಬೆಳೆಹಾನಿ; ವರದಿ ಸಲ್ಲಿಸಲು ಡಿಸಿ ಸೂಚನೆ
ಮಾರ್ಚ್ 21-22 ರಂದು ಶಾಸಕರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ಸಮಿತಿಗಳಿಗೂ ಅದರ ನಾಯಕರುಗಳಿಗೂ ಹಾಗೂ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಎಲ್ಲ ಜನಪ್ರತಿನಿಧಿಗಳಿಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ಸಿಐಟಿ) ಕೃತಜ್ಞತೆಗಳನ್ನು ಸಲ್ಲಿಸಿದೆ.




