ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದಲ್ಲಿ ಕಂಬಳ ಕ್ರೀಡೆ ಆಯೋಜಿಸುವ ಪ್ರಸ್ತಾಪವನ್ನು ಕೈಬಿಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಸೂಕ್ತ ಸಲಹೆ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಪರಿಸರಕ್ಕಾಗಿ ನಾವು, ಭೂಮಿ ತಾಯಿ ಹೋರಾಟ ಸಮಿತಿ, ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರನ್ನೊಳಗೊಂಡ ಜಂಟಿ ಕ್ರಿಯಾ ಸಮಿತಿ ಬೆಂಗಳೂರಿನ ನಿವಾಸದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ.
ಈ ಕುರಿತು ಮಾತನಾಡಿದ ಜಂಟಿ ಕ್ರಿಯಾ ಸಮಿತಿಯ ಮುಖಂಡರು, ಮೈಸೂರು ದಸರಾ ಐತಿಹಾಸಿಕ ಹಿನ್ನೆಲೆ, ಭವ್ಯ ಪರಂಪರೆ, ಸಾಂಸ್ಕೃತಿಕ ವೈಶಿಷ್ಟ್ಯ ಹಾಗೂ ಧಾರ್ಮಿಕ ಆಚರಣೆಗಳನ್ನು ಒಳಗೊಂಡ ವಿಶ್ವವಿಖ್ಯಾತ ನಾಡಹಬ್ಬವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯುವದಸರಾ, ಯುವ ಸಂಭ್ರಮ, ಮಹಿಳಾ ದಸರಾ, ಮಕ್ಕಳ ದಸರಾ, ರೈತ ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳು ಸೇರ್ಪಡೆಯಾಗಿರುವುದರಿಂದ ಜನಜಂಗುಳಿ, ವಾಹನ ದಟ್ಟಣೆ, ವಾಯು ಹಾಗೂ ಶಬ್ದ ಮಾಲಿನ್ಯ ಮತ್ತು ಕಸದ ಸಮಸ್ಯೆ ಹೆಚ್ಚಾಗುತ್ತಿದೆ. ಇದರಿಂದ ದಸರಾ ಹಬ್ಬದ ಅನನ್ಯ ಲಕ್ಷಣಗಳು ಮಸುಕಾಗುತ್ತಿವೆ ಎಂದು ಹೇಳಿದರು.
ಇಂತಹ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಜನರನ್ನು ಸೇರಿಸುವ ಕಂಬಳ ಕ್ರೀಡೆಯನ್ನು ಆಯೋಜಿಸುವುದು ಮೈಸೂರಿನ ಜನರಲ್ಲಿ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಬಹುದು. ಕಂಬಳವು ಕರಾವಳಿ ಪ್ರದೇಶದ, ಅದರಲ್ಲೂ ತುಳುನಾಡಿನ ಸಾಂಸ್ಕೃತಿಕ ಹಾಗೂ ಗ್ರಾಮೀಣ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕ್ರೀಡೆಯಾಗಿದ್ದು, ಅಲ್ಲಿನ ಭೌಗೋಳಿಕ, ಕೃಷಿ ಮತ್ತು ಧಾರ್ಮಿಕ ಹಿನ್ನೆಲೆಯೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ ಕರಾವಳಿಯ ಸಾಂಸ್ಕೃತಿಕ ಪರಿಸರದಲ್ಲಿ ನಡೆಯಬೇಕಾದ ಕಂಬಳವನ್ನು ದಸರಾ ಸಂದರ್ಭದಲ್ಲಿ ಮೈಸೂರಿಗೆ ತಂದು ಆಯೋಜಿಸುವುದು ಸೂಕ್ತವಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಜುಲೈ 10ರಂದು ಬೆಂಗಳೂರಿನಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ ದಸರಾ ಹಬ್ಬಕ್ಕೆ ಹೊಸ ಕಾರ್ಯಕ್ರಮಗಳನ್ನು ಸೇರ್ಪಡೆಗೊಳಿಸುವ ಕುರಿತು ಮುಖ್ಯಮಂತ್ರಿ ಮಾತನಾಡಿರುವುದು ವರದಿಯಾಗಿದೆ. ದಸರಾ ಅಸ್ಮಿತೆ ಮತ್ತು ಅನನ್ಯತೆಗೆ ಧಕ್ಕೆ ಬಾರದಂತೆ ವಿವಿಧ ಜಿಲ್ಲೆಗಳ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಉಪಮುಖ್ಯಮಂತ್ರಿಗಳು ಕೂಡ ದಸರಾ ಆಚರಣೆಯನ್ನು ಮೈಸೂರಿಗೆ ಮಾತ್ರ ಸೀಮಿತಗೊಳಿಸದೆ ಚಾಮರಾಜನಗರ, ಶ್ರೀರಂಗಪಟ್ಟಣ, ಮಡಿಕೇರಿ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಯ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ನಡೆಸುವ ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಸರ್ಕಾರ ಅನುಷ್ಠಾನಗೊಳಿಸಿದರೆ ದಸರಾವನ್ನು ನಿಜವಾದ ‘ನಾಡಹಬ್ಬ’ವನ್ನಾಗಿ ರೂಪಿಸಬಹುದು ಎಂದು ಮುಖಂಡರು ಹೇಳಿದರು.
ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಕೊರತೆ ಉಂಟಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಕೆಲವು ಕಡೆ ಬಿತ್ತನೆ ಸಾಧ್ಯವಾಗದೆ, ಬಿತ್ತನೆ ಮಾಡಿರುವ ಕಡೆ ಬೆಳೆ ಒಣಗುತ್ತಿರುವ ಪರಿಸ್ಥಿತಿ ಇದೆ. ಕಾವೇರಿ ಜಲ ವಿವಾದವೂ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಕೊರತೆಯಾದರೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಆದ್ಯತೆಯಾಗಬೇಕೇ ಹೊರತು ಅನಗತ್ಯ ವೆಚ್ಚದಲ್ಲಿ ಕಂಬಳ ಆಯೋಜಿಸುವುದಲ್ಲ ಎಂದು ಅವರು ತಿಳಿಸಿದರು.
ಕೇವಲ ಎರಡು ದಿನಗಳ ಕ್ರೀಡೆಗಾಗಿ ಸುಮಾರು 400 ಕೋಣಗಳನ್ನು ಹಾಗೂ ಪ್ರತಿ ಕೋಣದ ಜವಾಬ್ದಾರಿಗೆ ಸುಮಾರು 50 ಜನರಂತೆ 20 ಸಾವಿರಕ್ಕೂ ಅಧಿಕ ಜನರನ್ನು ದೂರದ ಊರುಗಳಿಂದ ಮೈಸೂರಿಗೆ ಕರೆತರುವುದು, ಕೆಸರು ಗದ್ದೆ ನಿರ್ಮಾಣಕ್ಕಾಗಿ 25.28 ಎಕರೆ ಪ್ರದೇಶದಲ್ಲಿನ ಗಿಡಗಂಟಿಗಳನ್ನು ತೆರವುಗೊಳಿಸುವುದು, ಅಲ್ಲಿದ್ದ ಸಾತಗಳ್ಳಿ ಕೆರೆಗೆ ಸಂಬಂಧಿಸಿದ ಪರಿಸರದ ಮೇಲೆ ಪರಿಣಾಮ ಬೀರುವ ಕ್ರಮ ಕೈಗೊಳ್ಳುವುದು ಹಾಗೂ ನೀರಿನ ಅಭಾವವಿರುವ ಸಂದರ್ಭದಲ್ಲಿ ಲಕ್ಷಾಂತರ ಲೀಟರ್ ನೀರನ್ನು ಬಳಸುವುದು ವಿವೇಕದ ನಡೆಯಲ್ಲ ಎಂದು ಸಮಿತಿ ಆಕ್ಷೇಪಿಸಿದೆ.
ಮೈಸೂರು ದಸರಾ ಆಚರಣೆಯಲ್ಲಿರುವ ನ್ಯೂನತೆ ಹಾಗೂ ಲೋಪದೋಷಗಳನ್ನು ಸರಿಪಡಿಸುವುದು, ಸ್ಥಳೀಯ ಕಲೆ ಮತ್ತು ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು, ಕಲಾವಿದರಿಗೆ ಸೂಕ್ತ ಸಂಭಾವನೆ ನೀಡುವುದರ ಜೊತೆಗೆ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ಮುಖಂಡರು ಒತ್ತಾಯಿಸಿದರು.
ಕಳೆದ ವರ್ಷವೂ ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸುವ ಪ್ರಸ್ತಾಪ ಬಂದಾಗ ಮುಖ್ಯಮಂತ್ರಿಗಳು ಅದನ್ನು ಸಾರಾಸಗಟಾಗಿ ತಳ್ಳಿಹಾಕಿದ್ದನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿದ ಅವರು, ಈ ವರ್ಷವೂ ಕಂಬಳ ಕ್ರೀಡೆ ಆಯೋಜಿಸುವ ಪ್ರಸ್ತಾಪವನ್ನು ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ಸೂಕ್ತ ಸಲಹೆ ನೀಡಬೇಕು ಎಂದು ಮನವಿ ಮಾಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?SIR: 1.08 ಕೋಟಿ ಮತದಾರರಿಗೆ QR ಕೋಡ್ ನೋಟಿಸ್; ಹೆಸರು ಉಳಿಸಿಕೊಳ್ಳಲು ದಾಖಲೆ ಪರಿಶೀಲನೆ ನಿರ್ಣಾಯಕ
ನಿಯೋಗದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಇಂದೂಧರ ಹೊನ್ನಾಪುರ ಹಾಗೂ ಗುರುಪ್ರಸಾದ್ ಕೆರಗೋಡು, ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ, ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಪ್ರೊ. ಕಾಳಚನ್ನೇಗೌಡ ಹಾಗೂ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಇದ್ದರು.




