ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಮಾಲೂರು ಶಾಸಕ ನಂಜೇಗೌಡ ಅವರು ಯಾವುದೇ ಆಕಾಂಕ್ಷಿಗಳ ಅಭಿಪ್ರಾಯ ಪಡೆಯದೆ, ತಮ್ಮ ಪುತ್ರನನ್ನು ಅಭ್ಯರ್ಥಿ ಎಂದು ಏಕಪಕ್ಷೀಯವಾಗಿ ಘೋಷಣೆ ಮಾಡಿರುವುದಕ್ಕೆ ಕಾಂಗ್ರೆಸ್ ಮುಖಂಡ ಸತೀಶ್ ರಾಜಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಟೇಕಲ್ ಹೋಬಳಿಯ ಯಲುವಗುಳಿ ಗ್ರಾಮದ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ತಂದೆ ರಾಜಣ್ಣ ಅವರ ಕುಟುಂಬ ಸುಮಾರು 70 ವರ್ಷಗಳಿಂದ ಒಂದೇ ಪಕ್ಷದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿಕೊಂಡು ಬಂದಿದೆ. ತಾಲೂಕಿನಲ್ಲಿ ರಾಜಣ್ಣ ಅಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ರಾಜಣ್ಣ ಎಂಬ ಮಾತಿದೆ ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷನಾಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಸುಮಾರು 20 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು, ಈ ಬಾರಿ ಟೇಕಲ್ ಕ್ಷೇತ್ರ ಮೀಸಲಾಗುತ್ತದೆ, ಸ್ಪರ್ಧೆ ಮಾಡಬೇಕು ಎಂದು ಆಸೆ ಇತ್ತು ಎಂದರು. ಸಾಮಾನ್ಯ ಕ್ಷೇತ್ರವಾದರೂ ಸ್ಪರ್ಧೆಗೆ ಸಿದ್ಧ :ಆದರೆ ಈಗ ತೇಕಲ್ ಸಾಮಾನ್ಯ ಕ್ಷೇತ್ರ ಎಂದು ಘೋಷಣೆಯಾಗಿದೆ. ಆಗಲೂ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ತೀರ್ಮಾನ ಮಾಡಿ, ಸಾಮಾನ್ಯ ಕ್ಷೇತ್ರ ಆದರೂ ಸ್ಪರ್ಧೆ ಮಾಡಿ, ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಧೈರ್ಯ ತುಂಬಿದ್ದಾರೆ. ಅದರಂತೆ ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಲ್ಲಿ ಸ್ಪರ್ಧೆ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದೆ ಎಂದರು.
ಮಾಲೂರಿನ ಶಾಸಕರು ಒಂದು ಮೀಟಿಂಗ್ ಮಾಡಿ, ಅಲ್ಲಿ ಎಷ್ಟು ಜನ ಆಕಾಂಕ್ಷಿಗಳಿದ್ದಾರೆ, ಅವರ ಅಭಿಪ್ರಾಯವೇನು ಎಂದು ಯಾವುದೇ ಮಾಹಿತಿ ಸಂಗ್ರಹಿಸದೆ, ಯಾವುದೇ ಸಮಾಲೋಚನೆ ಮಾಡದೆ, ತಮ್ಮ ಪುತ್ರನನ್ನು ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನಲ್ಲಿ ಶಿಷ್ಟಾಚಾರ ಇದೆ : ಇದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಘೋಷಣೆ ಮಾಡಲು ತನ್ನದೇ ಆದ ಶಿಷ್ಟಾಚಾರ, ಪದ್ಧತಿ ಇದೆ. ಕೆಪಿಸಿಸಿ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ ಮಾಡಿ, ಅವರೆಲ್ಲರ ಜೊತೆ ಸಮಾಲೋಚನೆ ಮಾಡಿ, ಜಿಲ್ಲಾ ಕಾಂಗ್ರೆಸ್ ಮೂಲಕ ರಾಜ್ಯ ಸಮಿತಿಗೆ ಮಾಹಿತಿ ಕೊಡುತ್ತಾರೆ. ಅದರ ನಂತರ ರಾಜ್ಯ ಮಟ್ಟದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ. ಇದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲ, ಇದು ಜಿಲ್ಲಾ ಪಂಚಾಯಿತಿ ಚುನಾವಣೆ. ಶಾಸಕರ ಮನೆಯಲ್ಲಿ ಕೂತು ಡಿಸೈಡ್ ಮಾಡುವುದಲ್ಲ ಎಂದು ಅವರು ಹೇಳಿದರು.
ನಮ್ಮ ತಂದೆ ರಾಜಣ್ಣ ಅವರ ಕುಟುಂಬ ಸುಮಾರು 60-70 ವರ್ಷಗಳಿಂದ ಒಂದೇ ಪಕ್ಷದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿಕೊಂಡು ಬಂದಿದೆ. ನಮ್ಮ ತಂದೆ ಕಾಂಗ್ರೆಸ್ ಪಕ್ಷದ ವಿವಿಧ ಹಂತಗಳಲ್ಲಿ ಕೆಲಸ ಮಾಡಿ, ಜಿಲ್ಲಾ ಪಂಚಾಯಿತಿ, ರೈಲ್ವೆ ಬೋರ್ಡ್, ಸಾಮಾಜಿಕ ನ್ಯಾಯ ಸಮಿತಿ, ಕೆಪಿಸಿಸಿ ಕಾರ್ಯದರ್ಶಿ, ಭೂ ನ್ಯಾಯ ಮಂಡಳಿ ಸದಸ್ಯ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೇವೆ ಮಾಡಿದ್ದಾರೆ. ತಾವು ಕೂಡ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಸುಮಾರು 20 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು, ಈ ಬಾರಿ ತೇಕಲ್ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂದು ಆಸೆ ಇತ್ತು ಎಂದರು.
ಆಕಾಂಕ್ಷಿಗಳಿಗೆ ಬೆದರಿಕೆ ಆರೋಪ : ಏಕಪಕ್ಷೀಯವಾಗಿ ಯಾರು ಆಕಾಂಕ್ಷಿಗಳು ಇದ್ದಾರೆ ಅವರನ್ನೆಲ್ಲ ಬೆದರಿಕೆ ಹಾಕಿ, ನನ್ನ ವಿರೋಧ ಮಾಡಿದರೆ, ನಾನು ಹೇಳಿದ ಅಭ್ಯರ್ಥಿಗೆ, ನನ್ನ ಮಗನಿಗೆ ನೀವೇನಾದರೂ ಬೆಂಬಲ ಕೊಟ್ಟಿಲ್ಲ ಅಂದರೆ ನಿಮ್ಮನ್ನ ಹಂಗೆ ಮಾಡಿಬಿಡುತ್ತೇನೆ, ಹಿಂಗೇ ಮಾಡಿಬಿಡುತ್ತೇನೆ ಅಂತ ಹೇಳಿ ಅಭ್ಯರ್ಥಿಯನ್ನು ಘೋಷಣೆ ಮಾಡಿರತಕ್ಕಂತದಕ್ಕೆ ನಾನು ಚಕಾರ ಎತ್ತುತ್ತಿದ್ದೇನೆ ಎಂದು ಹೇಳಿದರು.
ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್
ಕೆಪಿಸಿಸಿ ಸಹಮತ ಇದೆಯಾ? ಸ್ಪಷ್ಟೀಕರಣ ಕೊಡಿ : ಕೆಪಿಸಿಸಿಯ ಸಹಮತ ಇದೆಯಾ ಅಂತ ಶಾಸಕರು ಸ್ಪಷ್ಟೀಕರಣ ಕೊಡಬೇಕು. ಇವರು ಏನಾದರೂ ಕೆಪಿಸಿಸಿ ಸಹಮತ ಇದ್ದರೆ, ಇವತ್ತು ಡಿಕ್ಲೇರ್ ಮಾಡಿದ್ದಾರೆ ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ನಮ್ಮ ಮಗ ಸುನಿಲ್ ಗೌಡ ಅಂತ, ನಾಳೆ ಪ್ರಕಟಣೆ ಕೊಟ್ಟು ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ, ಕರ್ನಾಟಕ ರಾಜ್ಯ ಸಮಿತಿಯಿಂದ ಒಂದು ಹೇಳಿಕೆಯನ್ನು ಕೊಡಿಸಲಿ. ನಾವು ಅವರಿಗೆ ಕಾಯ ವಚ ಮನಸಾ ಚುನಾವಣೆ ಮಾಡ್ತೀವಿ ಎಂದರು.



