ಕರ್ನಾಟಕದ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ಆಗಸ್ಟ್ 1ರಿಂದ 15ರವರೆಗೆ ಜಾಬ್ ಬ್ರಿಡ್ಜ್ ಉದ್ಘಾಟನಾ ಅಭಿಯಾನ ಹಮ್ಮಿಕೊಂಡಿದ್ದು, ಉದ್ಯೋಗ ಹುಡುಕುವವರಿಗೆ ನೆರವಾಗುವ ಉದ್ದೇಶದಿಂದ ಆರಂಭಿಸಿರುವ ‘ಜಾಬ್ ಬ್ರಿಡ್ಜ್’ ವೆಬ್ ಸೈಟನ್ನು ಜಮಾಅತೆ ಇಸ್ಲಾಮಿ ಹಿಂದ್‌ನ ರಾಷ್ಟ್ರೀಯ ಉಪಾಧ್ಯಕ್ಷ ಮೌಲಾನಾ ವಲೀಯುಲ್ಲಾ ಸಯೀದಿ ಫಲಾಹಿ ಅವರು ಬೆಂಗಳೂರಿನ ಶಫಿ ಬಾಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಯೋಜನೆಯ ಬಗ್ಗೆ ವಿವರಿಸುತ್ತ ಮಾಹಿತಿ ನೀಡಿದ ಸೋಲಿಡಾರಿಟಿ ರಾಜ್ಯಾಧ್ಯಕ್ಷ ಡಾ. ನಸೀಂ ಅಹ್ಮದ್, “ಇಂದಿನ ಆಧುನಿಕ ಯುಗದಲ್ಲಿ ನಿರುದ್ಯೋಗವು ಹೆಚ್ಚಾಗುತ್ತಿರುವುದು ಯುವಜನತೆಯಲ್ಲಿ ಆತಂಕ ಮೂಡಿಸಿದೆ. ಈ ನಡುವೆ ಉದ್ಯೋಗ ಕೊಡಿಸುವ ನೆಪದಲ್ಲಿ ಯುವಕರಿಗೆ ಮೋಸ ಮಾಡುತ್ತಿರುವ ಘಟನೆಗಳು ಕೂಡ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಲಿಡಾರಿಟಿ ವತಿಯಿಂದ ಜಾಬ್ ಬ್ರಿಡ್ಜ್ ಎಂಬ ದೀರ್ಘಕಾಲಿಕ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ” ಎಂದು ತಿಳಿಸಿದರು.
“ಜಾಬ್ ಬ್ರಿಡ್ಜ್ ಯೋಜನೆಯ ಮೂಲಕ ಉದ್ಯೋಗ ನೀಡುವವರು ಹಾಗೂ ಉದ್ಯೋಗ ಹುಡುಕುವವರ ನಡುವೆ ಒಂದು ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲಿದೆ. ಜಾಬ್ ಬ್ರಿಡ್ಜ್ ವೆಬ್ ಸೈಟ್‌ನಲ್ಲಿ ಕಂಪನಿಗಳು, ಉದ್ಯಮಿಗಳು ತಮ್ಮ ಅವಶ್ಯಕತೆಗಳನ್ನು ಹಾಕಬಹುದು. ನಮ್ಮ ಜತೆಗೆ ಸಂಪರ್ಕ ಹೊಂದಿರುವ ಯುವಜನರಿಗೆ ಉದ್ಯೋಗದ ಬಗ್ಗೆ ಮಾಹಿತಿ ನೀಡಿ, ಸೇತುವೆಯ ಮಾದರಿಯಲ್ಲಿ ಕೆಲಸ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ” ಎಂದು ಡಾ. ನಸೀಂ ಅಹ್ಮದ್ ತಿಳಿಸಿದರು.
ನಮ್ಮ ವೆಬ್ ಸೈಟ್ www.jobbridgenode.comಗೆ ಯುವಕರು ಹಾಗೂ ಉದ್ಯೋಗದಾತರು ಭೇಟಿ ನೀಡಿ, ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 6366234200 ಮೊಬೈಲ್ ಸಂಖ್ಯೆಯನ್ನು ಸಂಪರ್ಕ ಮಾಡಬಹುದು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ತೀರ್ಥಹಳ್ಳಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹುಣಶ್ಯಾಳ ಪಿ ಬಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಆರೋಪ: ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ, ಗ್ರಾಮಸ್ಥರ ಧರಣಿ
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳಗಾಮಿ, ರಾಜ್ಯ ಕಾರ್ಯದರ್ಶಿ ಮೌಲಾನಾ ವಹೀದುದ್ದೀನ್, ಡಾ. ತಾಹಾ ಮತೀನ್, ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಬೆಂಗಳೂರು ನಗರಾಧ್ಯಕ್ಷ ಸುಹೈಲ್, ಜಾಬ್ ಬ್ರಿಡ್ಜ್ ಸಂಯೋಜಕ ಸಾಕಿಬ್, ರಾಜ್ಯ ಮಾಧ್ಯಮ ಸಂಯೋಜಕ ಇರ್ಷಾದ್ ವೇಣೂರು ಇದ್ದರು.




