“ಕೋಮುವಾದ ಹೆಸರಿನಲ್ಲಿ ಮಹಿಳೆಯರ ಮೇಲೆ ಶೋಷಣೆ ಮತ್ತು ಲಿಂಗ ತಾರತಮ್ಯ ನಡೆಯುತ್ತಿದ್ದು, ಇದರ ವಿರುದ್ದ ಜಾಗೃತಿ ಅಭಿಯಾನ ನಡೆಸಿ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆ ಕಲ್ಪಿಸಬೇಕು” ಎಂದು ಜನವಾದಿ ಮಹಿಳಾ ಸಂಘದ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ದೇವಿ ಒತ್ತಾಯಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ನಗರದ ಸೇವಾಲಾಲಾ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
“ಧರ್ಮಸ್ಥಳದಲ್ಲಿ ನಡೆದಿರುವ ಪದ್ಮಲತಾರಿಂದ ಸೌಜನ್ಯವರೆಗಿನ ಅಪಹರಣ, ಅತ್ಯಾಚಾರ, ಕೊಲೆ, ಭೂಕಬಳಿಕೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಮಹಿಳಾ ಬ್ಯಾಂಕ್‌ಗಳ ವ್ಯವಹಾರದ ಕುರಿತು ಎಸ್‌ಐಟಿ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.
“ದೇಶದ ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಯಾಗಿ ಸಮಾಜದಲ್ಲಿ ಕಾಣಲಾಗುತ್ತಿದೆ. ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮಾಡುವ ಮೂಲ ಉದ್ದೇಶವಾಗಿದೆ. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯನ್ನು ತಾಲೂಕಿನಲ್ಲಿ ಬಲಿಷ್ಠವಾಗಿ ಸಂಘಟಿಸುವ ಮೂಲಕ ಮಹಿಳಾ ಹಕ್ಕುಗಳನ್ನು ರಕ್ಷಿಸಲು ಮುಂದಾಗಿ” ಎಂದರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಕ್ಕಮ್ಮ ರಾಠೋಡ ಮಾತನಾಡಿ, “ಮಹಿಳೆಯರ ಸಬಲೀಕರಣ ಆಗಬೇಕಾದರೆ ಮಹಿಳೆಯರು ಸಾಮಾಜಿಕ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು. ಎಲ್ಲ ರಂಗದಲ್ಲಿಯೂ ಮಹಿಳೆಗೆ ಮುಕ್ತ ಅವಕಾಶಗಳು ಸಿಗಬೇಕಿದೆ. ಆ ನಿಟ್ಟಿನಲ್ಲಿ ಜನವಾದಿ ಮಹಿಳಾ ಸಂಘಟನೆಯ ನಿರಂತರವಾಗಿ ಮಹಿಳೆಯರ ಪರವಾಗಿ ಚಳುವಳಿ ರೂಪಿಸುತ್ತಾ ಬಂದಿದೆ” ಎಂದರು.
ಇದೇ ಸಂದರ್ಭದಲ್ಲಿ ಸೂರಿಂಜೆ ಅವರ ಅನುವಾದದ ಸೌಜನ್ಯ ತೀರ್ಪು ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ತಾಲೂಕು ಸಂಚಾಲನಾ ಸಮಿತಿ ಸಂಚಾಲಕರಾಗಿ ಅಕ್ಕಮ್ಮ ರಾಠೋಡ, ಸಹ ಸಂಚಾಲಕರಾಗಿ ಕುಸುಮಾ ಕಮ್ಮಾರ, ಪ್ರೇಮಾ ಚವ್ಹಾಣ, ಬಿಬಿಜಾನ ಮುಜಾವರ, ರೇಣಕಾ ಅಂಬಿಗೇರಿ ಸೇರಿದಂತೆ 15 ಜನರನ್ನೊಳಗೊಂಡ ಸಮಿತಿ ಆಯ್ಕೆ ಮಾಡಲಾಯಿತು.
ಈ ಸಮಾವೇಶದಲ್ಲಿ ಸುಲೋಚನಾ ಮುದಗಲ್, ಅಂಜನಾದೇವಿ ಮ್ಯಾಗೇರಿ, ಪ್ರೇಮ ಚವ್ಹಾಣ, ಕುಸುಮ ಕಮ್ಮಾರ್, ಬಿಬಿಜಾನ್ ಮುಜಾವರ್, ಸುಮಂಗಲಾ ಅಂಗಡಿ, ಅನುಸೂಯ ಬಿಸನಳ್ಳಿ, ರೇಣುಕಾ ಅಬ್ಬಿಗೇರಿ, ಅಕ್ಮಹಾದೇವಿ ಡೊಳ್ಳಿನ, ಚೌಡಮ್ಮ ಯಲ್ಪು, ಯಮನವ್ವ ಚನ್ನದಾಸರ, ಪದ್ಮಾವತಿ ಸಿಂಗ್ರಿ, ಬಾಲು ರಾಠೋಡ, ಎಂ.ಎಸ.ಹಡಪದ, ಪೀರು ರಾಠೋಡ, ದಾವಲಸಾಬ ತಾಳಿಕೋಟಿ ಸೇರಿದಂತೆ ಜನವಾದಿ ಮಹಿಳಾ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.




