ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ ಬಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಆಡಳಿತಾತ್ಮಕ ಲೋಪಗಳನ್ನು ಖಂಡಿಸಿ, ಪಂಚಾಯಿತಿ ವ್ಯಾಪ್ತಿಯ ಮೂರು ಗ್ರಾಮಗಳ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಪಿಡಿಒ ಕಚೇರಿಗೆ ನಿಯಮಿತವಾಗಿ ಹಾಜರಾಗದೇ ಬೇರೆ ಸ್ಥಳದಿಂದಲೇ ಆಡಳಿತ ನಡೆಸುತ್ತಿರುವುದು, ಜುಲೈ 30ರಂದು ಪಂಚಾಯಿತಿಗೆ ಬಾರದೇ ಹಣ ವರ್ಗಾವಣೆ ಮಾಡಿರುವುದು ಮತ್ತು ಪಂಚಾಯಿತಿಗೆ ಸಂಬಂಧಿಸದ ಸಿಬ್ಬಂದಿಯಿಂದ ಕೆಲಸ ನಿರ್ವಹಿಸಲಾಗಿದೆ ಎಂಬ ಆರೋಪಗಳು ವ್ಯಕ್ತವಾಗಿದ್ದು, ಈ ಬೆಳವಣಿಗೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು.
ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ(ಇಒ) ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಬಳಿಕ ಹುಣಶ್ಯಾಳ ಪಿ ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಗ್ರಾಮಗಳ ನಿವಾಸಿಗಳು ಇಒ ಅವರಿಗೆ ಲಿಖಿತ ಮನವಿ ಸಲ್ಲಿಸಿ, ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಂಬಂಧಿತ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದೇಶಕ್ಕೆ ಕೊಡುಗೆ ನೀಡುವವರಾಗಿ : ಡಾ. ಅಬ್ದುಲ್ ಖಾದರ್
ಪ್ರತಿಭಟನೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪ್ಪು ನಾಯಕ್, ಶ್ರೀಮಂತ ಅಳಗುಂಡಗಿ, ಬಸು ಹೆಬ್ಬಾಳ, ನಿಂಗಣ್ಣ ಮುರ್ಗಾನೂರ, ರಮೇಶ್ ಕೊಲ್ಕಾರ್, ಸೋಮನಗೌಡ ಮ್ಯಾಗೇರಿ, ಮುತ್ತು ರಾಥೋಡ್, ಮಂಜುನಾಥ ಮನ್ನ್ಯಾಳ, ಬಸವರಾಜ ಈಳಗೇರ, ನಾಗಪ್ಪ ಅಳಗುಂಡಗಿ, ಕುಮಾರಗೌಡ ಪಾಟೀಲ, ಶರಣಗೌಡ ಪಾಟೀಲ, ದೇವರೆಡ್ಡಿ ಗಾಡದಿನ್ನಿ, ಅಹಿಂದ ಯುವ ಮುಖಂಡ ಹಾಗೂ ವಡವಡಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಆಕಾಂಕ್ಷಿ ಮುತ್ತುರಾಜ ಹಾಲಿಹಾಳ ಸೇರಿದಂತೆ ಮೂರು ಗ್ರಾಮಗಳ ಬಹುತೇಕ ಗ್ರಾಮಸ್ಥರು ಇದ್ದರು.




