ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತದಲ್ಲಿ “ಎಲ್ಲವನ್ನೂ ಅತ್ಯುತ್ತಮವಾಗಿ ಮಾಡಿದೆ” ಎಂದು ಭಾವಿಸುವುದಾದರೆ, ನಟರಾದ ವಿವೇಕ್ ಒಬೆರಾಯ್ ಮತ್ತು ಆರ್. ಮಾಧವನ್ ದುಬೈನಲ್ಲಿ ಏಕೆ ನೆಲೆಸಿದ್ದಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಅಧ್ಯಕ್ಷ ರಾಜ್ ಠಾಕ್ರೆ ಖಾರವಾಗಿ ಪ್ರಶ್ನಿಸಿದ್ದಾರೆ.
ಶನಿವಾರ ಮುಂಬೈನಲ್ಲಿ ಎಂಎನ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ‘ಮಹಾರಾಷ್ಟ್ರ ನವನಿರ್ಮಾಣ ವಿದ್ಯಾರ್ಥಿ ಸೇನೆ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಠಾಕ್ರೆ, ದೇಶದ ಸಾವಿರಾರು ಕೈಗಾರಿಕೋದ್ಯಮಿಗಳು “ತಮ್ಮ ಗಂಟುಮೂಟೆ ಕಟ್ಟಿಕೊಂಡು ದೇಶ ಬಿಟ್ಟು ಹೋಗಿದ್ದಾರೆ” ಎಂದು ಆರೋಪಿಸಿದರು.
2019ರಲ್ಲಿ ಬಿಡುಗಡೆಯಾದ ಮೋದಿಯವರ ಜೀವನಾಧಾರಿತ ಚಿತ್ರದಲ್ಲಿ ಪ್ರಧಾನಿ ಪಾತ್ರವನ್ನು ನಿರ್ವಹಿಸಿದ್ದ ವಿವೇಕ್ ಒಬೆರಾಯ್ ಅವರ ಕುರಿತು ಉಲ್ಲೇಖಿಸಿದ ಅವರು, “ಮೋದಿ ಕುರಿತು ಸಿನಿಮಾ ಮಾಡಿದ ವಿವೇಕ್ ಒಬೆರಾಯ್ ಕೂಡ ದುಬೈನಲ್ಲಿ ವಾಸಿಸಲು ಹೋಗಿದ್ದಾರೆ. ಇನ್ನು ಪ್ರಧಾನಿ ಮೋದಿಯವರನ್ನು ಹೊಗಳುವ ಆರ್. ಮಾಧವನ್ ಎಲ್ಲಿ ವಾಸಿಸುತ್ತಿದ್ದಾರೆ? ಅವರೂ ದುಬೈನಲ್ಲಿಯೇ ಇದ್ದಾರೆ. ನಿಮಗೆ ಭಾರತದ ಬಗ್ಗೆ ಅಷ್ಟೊಂದು ಪ್ರೀತಿಯಿದ್ದರೆ, ಪ್ರಧಾನಿ ಮೋದಿಯವರ ಮೇಲೆ ಅಭಿಮಾನವಿದ್ದರೆ, ಮತ್ತು ಪ್ರಧಾನಿ ಮೋದಿಯವರು ಭಾರತವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ನೀವು ನಂಬುವುದಾದರೆ, ನೀವೇಕೆ ವಿದೇಶದಲ್ಲಿ ನೆಲೆಸಿದ್ದೀರಿ? ನಿಮ್ಮ ಕುಟುಂಬದೊಂದಿಗೆ ದುಬೈನಲ್ಲಿ ಏಕೆ ವಾಸಿಸುತ್ತಿದ್ದೀರಿ?” ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.
“ಅವರು ಇಲ್ಲಿಗೆ ಬರುತ್ತಾರೆ, ‘ಧುರಂಧರ್’ ನಂತಹ ಸರ್ಕಾರಿ ಪ್ರಾಯೋಜಿತ ಚಿತ್ರದಲ್ಲಿ ಕೆಲಸ ಮಾಡುತ್ತಾರೆ, ನಂತರ ಮತ್ತೆ ದುಬೈಗೆ ಹಿಂತಿರುಗುತ್ತಾರೆ” ಎಂದು ಅವರು ಟೀಕಿಸಿದರು.
ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಬಳಸಿದ ಭಾಷೆ ಅಸಮಂಜಸವಾಗಿತ್ತು ಎಂದು ರಾಜ್ ಠಾಕ್ರೆ ಇದೇ ವೇಳೆ ಹೇಳಿದರು.
ಇಂತಹ “ದಾರಿತಪ್ಪಿದ ಮಕ್ಕಳನ್ನು” ಕ್ಷಮಿಸಿ, ಸರಿಯಾದ ಮಾರ್ಗದಲ್ಲಿ ಮುನ್ನಡೆಸಬೇಕು ಎಂಬ ಪ್ರಧಾನಿಯವರ ಹೇಳಿಕೆಯನ್ನು ಪ್ರಸ್ತಾಪಿಸಿದ ಠಾಕ್ರೆ, “ನಾನು ಪ್ರಧಾನಿಯವರ ಹೇಳಿಕೆಯನ್ನು ಒಪ್ಪುತ್ತೇನೆ. ಯಾರೊಬ್ಬರೂ ಇಂತಹ ಕೀಳುಮಟ್ಟದ ಭಾಷೆಯನ್ನು ಬಳಸಬಾರದು. ಆದರೆ, ಈ ಮಾತನ್ನು ಅವರು ತಮ್ಮದೇ ಪಕ್ಷದವರಿಗೂ (ಬಿಜೆಪಿ) ಹೇಳಬೇಕು” ಎಂದು ತಿರುಗೇಟು ನೀಡಿದರು.
ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಅವರಿಂದ ಹಿಡಿದು ಠಾಕ್ರೆ ಕುಟುಂಬದವರೆಗಿನ ಮಹಾನ್ ನಾಯಕರನ್ನು ಬಿಜೆಪಿ ಟ್ರೋಲ್‌ಗಳು ಗುರಿಯಾಗಿಸುತ್ತವೆ ಎಂದು ಅವರು ಆರೋಪಿಸಿದರು. ಟ್ರೋಲ್ ಆಗುವ ಭೀತಿಯಿಂದಲೇ ಅನೇಕ ನಟರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಹಿಂಜರಿಯುತ್ತಾರೆ ಎಂದರು.
“ಅವರಿಗೂ (ಬಿಜೆಪಿ ಬೆಂಬಲಿಗರು) ಅವಹೇಳನಕಾರಿ ಭಾಷೆ ಬಳಸುವುದನ್ನು ನಿಲ್ಲಿಸಲು ಹೇಳಬೇಕು. ಬಿಜೆಪಿ ಟ್ರೋಲ್ ತಂಡಗಳೇ ಈ ಸಂಸ್ಕೃತಿಯನ್ನು ಪ್ರಾರಂಭಿಸಿದ್ದು. ನೀವು ಏನನ್ನು ಬಿತ್ತುತ್ತೀರೋ, ಅದನ್ನೇ ಬೆಳೆಯುತ್ತೀರಿ” ಎಂದು ಠಾಕ್ರೆ ಎಚ್ಚರಿಸಿದರು. ಇತರರಿಗೂ ತಾಯಂದಿರುತ್ತಾರೆ, ಹಾಗಾಗಿ ಅವರನ್ನೂ ನಿಂದಿಸಬಾರದು ಎಂದು ಅವರು ಕಿವಿಮಾತು ಹೇಳಿದರು.




