ನಗರದ ವಿಧಾನಸೌಧ, ಹೈಕೋರ್ಟ್, ಲಾಲ್‌ಬಾಗ್, ಕಬ್ಬನ್‌ಪಾರ್ಕ್ ನಮ್ಮನ್ನ ಸೆಳೆದರೂ, ಟ್ರಾಫಿಕ್ ಎಂಬ ಕಿರಿಕಿರಿಯ ಶಬ್ದ ಬೆಂಗಳೂರಿನ ಸಹವಾಸ ಬೇಡ ಎಂಬ ಭಾವನೆ ಸೃಷ್ಟಿಸುತ್ತದೆ. ಏಕೆಂದರೆ, ಬೆಂಗಳೂರಿನ ಭಯಾನಕ ಟ್ರಾಫಿಕ್ ವಿಚಾರದ ಬಗ್ಗೆ ಎಷ್ಟು ಮಾತಾಡಿದರೂ ಕಡಿಮೆಯೇ…
ಯಲಹಂಕ ನಾಡಿನ ಪಾಳೇಗಾರರಾಗಿದ್ದ ಹಿರಿಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. ಹಂಪಿಯ ವೈಭವವನ್ನು ಕಂಡು, ಆ ಮಾದರಿ ಮತ್ತು ದೂರದೃಷ್ಟಿಯೊಂದಿಗೆ ಅವರು ಬೆಂಗಳೂರು ನಗರವನ್ನ ನಿರ್ಮಾಣ ಮಾಡಿದ್ದರು. ಅವರು ಕಟ್ಟಿದ ಬೆಂಗಳೂರು ಇದೀಗ ಕರ್ನಾಟಕ ರಾಜ್ಯದ ರಾಜಧಾನಿಯಾಗಿದೆ. ಅಲ್ಲದೇ, ಭಾರತದ ಪ್ರಮುಖ ನಗರಗಳ ಪೈಕಿಯೂ ಒಂದಾಗಿದೆ.
ನಗರದ ವಿಧಾನಸೌಧ, ಹೈಕೋರ್ಟ್, ಲಾಲ್‌ಬಾಗ್, ಕಬ್ಬನ್‌ಪಾರ್ಕ್ ನಮ್ಮನ್ನ ಸೆಳೆದರೂ, ಟ್ರಾಫಿಕ್ ಎಂಬ ಕಿರಿಕಿರಿ ಬೆಂಗಳೂರಿನ ಸಹವಾಸ ಬೇಡ ಎಂಬ ಭಾವನೆ ಸೃಷ್ಟಿಸುತ್ತದೆ. ಏಕೆಂದರೆ, ಬೆಂಗಳೂರಿನ ಭಯಾನಕ ಟ್ರಾಫಿಕ್ ವಿಚಾರದ ಬಗ್ಗೆ ಎಷ್ಟು ಮಾತಾಡಿದರೂ ಕಡಿಮೆಯೇ...
ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಪ್ರಕಾರ ವಿಶ್ವದ ಎರಡನೇ ಟ್ರಾಫಿಕ್ ಜಾಮ್ ನಗರಿ ಅನ್ನುವ ಕುಖ್ಯಾತಿಗೆ ನಮ್ಮ ಬೆಂಗಳೂರು ಪಾತ್ರವಾಗಿರುವುದು ಹಳೇ ಸುದ್ದಿ. ಇನ್ನು ಮೊದಲನೆ ಸ್ಥಾನದಲ್ಲಿ ಲಂಡನ್ ನಗರ ಇದೆ.
ಬೆಂಗಳೂರಿನಲ್ಲಿ ಮೆಜೆಸ್ಟಿಕ್‌ನಿಂದ 6.5 ಕಿ.ಮೀ ದೂರದಲ್ಲಿರುವ ಎಂಜಿ ರಸ್ತೆಗೆ ಹೋಗಲು ಮೊದಲೆಲ್ಲ 7-8 ನಿಮಿಷಗಳು ಸಾಕಾಗುತ್ತಿತ್ತು. ಆದರೆ, ಈಗ ಕನಿಷ್ಠ 19 ನಿಮಿಷ ಬೇಕಾಗುತ್ತದೆ. ಅದರಲ್ಲೂ, ಪೀಕ್ ಅವರ್‌ನಲ್ಲಿ ಬರೋಬ್ಬರಿ 30 ನಿಮಿಷಗಳೂ ಬೇಕಾಗಬಹುದು. ಅದೂ, ರಸ್ತೆಗಳು ಅಗಲವಾಗಿ ಮತ್ತು ಒನ್-ವೇ ರಸ್ತೆಗಳಾಗಿ ಮಾರ್ಪಟ್ಟ ಬಳಿಕವೂ ಇಷ್ಟೊಂದು ಸಮಯ ಬೇಕು ಅಂದರೆ, ಆ ಪಾಟಿ ಟ್ರಾಫಿಕ್ ಇದೆ ಎಂದೇ ಅರ್ಥ.
ಇಂತಹ ಟ್ರಾಫಿಕ್‌ನಿಂದ ನಲುಗುತ್ತಿರುವ ಬೆಂಗಳೂರಿಗೆ ಕಳೆದ ವರ್ಷ 2023ರಲ್ಲಿ ಪ್ರತಿ ತಿಂಗಳು ಸರಾಸರಿ 56,124 ವಾಹನಗಳು ಹೊಸದಾಗಿ ಸೇರಿಕೊಂಡಿವೆ. ಅವುಗಳಲ್ಲಿ ಸುಮಾರು 13,000 ಕಾರುಗಳು ಮತ್ತು 29,000 ದ್ವಿಚಕ್ರ ವಾಹನಗಳು. ಈಗ, ಭಾರತದಲ್ಲಿಯೇ ಅತೀ ಹೆಚ್ಚು ವಾಹನ ದಟ್ಟಣೆಯನ್ನು ಬೆಂಗಳೂರು ಹೊಂದಿದೆ. ಅಂದರೆ, ಪ್ರತಿ ಕಿಲೋಮೀಟರ್‌ಗೆ 761 ವಾಹನಗಳ ಸಾಂದ್ರತೆಯನ್ನ ಬೆಂಗಳೂರು ಹೊಂದಿದೆ. ಇದು ರಾಷ್ಟ್ರ ರಾಜಧಾನಿ ದೆಹಲಿಗಿಂತ ಸರಿಸುಮಾರು ಎರಡು ಪಟ್ಟು ಹೆಚ್ಚಾಗಿದೆ.
ಆದರೆ, ಅಷ್ಟು ವಾಹನಗಳಿಗೆ ಅಗತ್ಯವಿರುವಷ್ಟು ರಸ್ತೆ ಬೆಂಗಳೂರಿನಲ್ಲಿ ಇಲ್ಲ ಎಂಬುದು ವಾಸ್ತವ. ವಾಹನಗಳ ಬೇಡಿಕೆ ಮತ್ತು ರಸ್ತೆ ಮೂಲಸೌಕರ್ಯದ ನಡುವೆ ದೊಡ್ಡ ಅಂತರವಿದೆ. ಈ ಅಂತರವು ನಗರದಲ್ಲಿ ಭಾರೀ ವಾಹನ ದಟ್ಟಣೆಗೆ ಕಾರಣವಾಗಿದೆ.
ಇನ್ನು ನಗರದಲ್ಲಿ ಯಾಕೆ ಇಷ್ಟೊಂದು ಟ್ರಾಫಿಕ್ ಜಾಮ್ ಆಗುತ್ತೇ ಎಂಬ ಅಂಶಗಳನ್ನು ನೋಡುವುದಾದರೆ, ಹಲವಾರು ಕಾರಣಗಳು ನಮ್ಮ ಕಣ್ಣುಮುಂದೆ ಒಂದು ಕ್ಷಣಕ್ಕೆ ಹಾದುಹೋಗುತ್ತವೆ. ಮೊದಲನೆಯದಾಗಿ ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಮಂದಿ ವಾಸ ಮಾಡುತ್ತಿದ್ದಾರೆ. ಜನರು ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸಲು ಮೆಟ್ರೋ, ಬಿಎಂಟಿಸಿ ಬಸ್, ಆಟೋ ಸೇರಿದಂತೆ ಹಲವು ಸಾರ್ವಜನಿಕ ಸಾರಿಗೆಗಳೇನೋ ಇವೆ. ಆದರೆ, ಸಾರ್ವಜನಿಕ ಸಾರಿಗೆ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಜನರು ಸಾರ್ವಜನಿಕ ಸಾರಿಗೆ ಬಳಸದೆ ಇರುವುದಕ್ಕೂ ಕೂಡ ಹಲವಾರು ಕಾರಣಗಳಿವೆ. ಕೊರೋನಾ ನಂತರವಂತೂ ಸ್ವಂತ ವಾಹನ ಬಳಕೆದಾರರ ಸಂಖ್ಯೆ ದುಪ್ಪಟ್ಟಾಗುತ್ತಿದೆ.
ಬೆಂಗಳೂರಿನ ಮುಖ್ಯ ಸಾರ್ವಜನಿಕ ಸಾರಿಗೆ ಮೆಟ್ರೋ ಮತ್ತು ಬಿಎಂಟಿಸಿ. ನಗರದಲ್ಲಿ ಸರಿ ಸುಮಾರು 6 ಲಕ್ಷಕ್ಕೂ ಅಧಿಕ ಮಂದಿ ದಿನನಿತ್ಯ ಮೆಟ್ರೋ ಬಳಸುತ್ತಿದ್ದಾರೆ. ಸರಾಸರಿ 40 ಲಕ್ಷ ಜನರು ಬಿಎಂಟಿಸಿ ಬಳಸುತ್ತಿದ್ದಾರೆ. ಸದ್ಯಕ್ಕೆ, 74 ಕಿಮೀನಷ್ಟು ಸಂಚಾರ ಮಾರ್ಗ ಹೊಂದಿರುವ ಮೆಟ್ರೋ, ವಿಸ್ತರಣೆಯಾಗುತ್ತಿದೆ. ಆದರೂ ಖಾಸಗಿ ವಾಹನಗಳ ಸಂಖ್ಯೆಗೆ ಬ್ರೇಕು ಬಿದ್ದಿಲ್ಲ.
ಒಂದೂವರೆ ಕೋಟಿಯಲ್ಲಿ ಸರಿಸುಮಾರು 1 ಕೋಟಿ ಮಂದಿ ಸಾರ್ವಜನಿಕ ಸಾರಿಗೆಗಳನ್ನು ಬಳಸುತ್ತಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಒಂದೂವರೆ ಕೋಟಿಯಲ್ಲಿ 40 ಲಕ್ಷ ಜನ ಬಳಸುವುದರಿಂದಲೇ ಬಿಎಂಟಿಸಿ ಬಸ್‌ಗಳು ತುಂಬಿ ತುಳುಕುತ್ತಿವೆ. ಇನ್ನೂ ಹೆಚ್ಚು ಮಂದಿ ಬಳಸಿದರೇನು ಗತಿ? ಅಂದರೆ, ನಗರದ ಜನಸಂಖ್ಯೆಗೆ ತಕ್ಕಷ್ಟು ಸಾರಿಗೆ ಬಸ್‌ಗಳಿಲ್ಲ ಎಂಬುದು ಸ್ಪಷ್ಟ. ಅದೇ ರೀತಿ ಮೆಟ್ರೋ ನಿಲ್ದಾಣಗಳಿಗೆ ತಮ್ಮ ಗಮ್ಯ ಸ್ಥಾನಗಳಿಂದ ಸಂಪರ್ಕ ಸೇವೆ ಇಲ್ಲದೇ ಇರುವ ಕಾರಣ, ದೂರ ಮೆಟ್ರೋಗಳಿಗೆ ಬರಲಾರದೆ, ಹಲವರು ಮೆಟ್ರೋಗಳಿಂದಲೂ ದೂರ ಉಳಿದು, ಸ್ವಂತ ವಾಹನ ಅಥವಾ ಕ್ಯಾಬ್‌ಗಳನ್ನು ಬಳಸುತ್ತಿದ್ದಾರೆ.
ಮೆಟ್ರೋ, ಬಿಎಂಟಿಸಿ ಅಲ್ಲದೆ, ನಗರದಲ್ಲಿ 2.2 ಲಕ್ಷ ಆಟೋಗಳು ಹಾಗೂ ಸುಮಾರು 1.4 ಲಕ್ಷ ಕ್ಯಾಬ್‌ಗಳು ದಿನನಿತ್ಯ ಸೇವೆ ಒದಗಿಸುತ್ತಿವೆ. ಇವಲ್ಲದೆ, ನಗರದಲ್ಲಿ 99.8 ಲಕ್ಷ ವಾಹನಗಳಿವೆ. ಈ ಪೈಕಿ 75.6 ಲಕ್ಷ ದ್ವಿಚಕ್ರ ವಾಹನಗಳು ಮತ್ತು 23.1 ಲಕ್ಷ ಕಾರುಗಳು ವೈಯಕ್ತಿಕ ವಾಹನಗಳು.
ಕೇವಲ ಹತ್ತು-ಹನ್ನೊಂದು ವರ್ಷಗಳಲ್ಲಿ ಬೆಂಗಳೂರಿನ ಮೋಟಾರು ವಾಹನಗಳ ಸಂಖ್ಯೆ ಎರಡು ಪಟ್ಟು ಹೆಚ್ಚಿದೆ. 2012-13 ರಲ್ಲಿ ವಾಹನಗಳ ಸಂಖ್ಯೆ 55.2 ಲಕ್ಷ ಇತ್ತು. ಆದರೆ, ಈಗ 2023ರ ಸೆಪ್ಟೆಂಬರ್ 30ರ ವರೆಗೆ 1.1 ಕೋಟಿಯನ್ನು ಮುಟ್ಟಿದೆ.
ಇದೆಲ್ಲದರ ನಡುವೆ, ಪೆಟ್ರೋಲ್ ಬೆಲೆ ಹೆಚ್ಚಳ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. 2021ರ ಬಳಿಕ ಎಲೆಕ್ಟ್ರಿಕ್ ವಾಹನಗಳ ಬಳಕೆಯ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. 2022-23ರಲ್ಲಿ 1,10,492 ವಾಹನಗಳು ನೋಂದಣಿಯಾದರೆ, 2023-24 ರಲ್ಲಿ ಬರೋಬ್ಬರಿ 1,03,009 ಎಲೆಕ್ಟ್ರಿಕಲ್ ವಾಹನಗಳು ರಸ್ತೆಗಿಳಿದಿವೆ.
ಸಂಚಾರ ನಿಯಮಗಳ ಉಲ್ಲಂಘನೆ
ಖಾಸಗಿ ಅಥವಾ ವೈಯಕ್ತಿಕ ವಾಹನಗಳ ಸಂಖ್ಯೆಯ ಹೆಚ್ಚಳದಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಸಂಚಾರ ನಿಯಮಗಳ ಉಲ್ಲಂಘನೆಗಳು ಹದ್ದುಮೀರಿ ಹೋಗುತ್ತಿವೆ.
ಬೆಂಗಳೂರು ಸಂಚಾರ ಪೊಲೀಸರು ಬಿಡುಗಡೆ ಮಾಡಿರುವ ವರದಿ ಪ್ರಕಾರ, 2023ರಲ್ಲಿ ಹತ್ತು ಲಕ್ಷ ಕಡಿಮೆ ಒಂದು ಕೋಟಿಯಷ್ಟು ಅಂದರೆ, 89,74,945 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಬೆಂಗಳೂರಿನಲ್ಲಿ ಒಟ್ಟು 4,095 ಅಪಘಾತ ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ 909 ಜನರು ಸಾವನ್ನಪ್ಪಿದ್ದರೆ, 4,201 ಜನರು ಗಾಯಗೊಂಡಿದ್ದಾರೆ. ನಿಯಮ ಉಲ್ಲಂಘಿಸಿದವರಿಂದ ₹184.83 ಕೋಟಿ ದಂಡ ವಸೂಲಾಗಿದೆ. ಇನ್ನು ಪೊಲೀಸರ ಗಮನಕ್ಕೆ ಬಾರದೆ ದಾಖಲಾಗದೆ ಇರುವ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ನಿಮ್ಮ ಊಹೆಗೆ ಬಿಟ್ಟದ್ದು.
ಸಂಚಾರ ನಿಯಮ ಉಲ್ಲಂಘನೆಯನ್ನು ತಡೆಯಲು ಸಂಚಾರ ಪೊಲೀಸರು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಇದೀಗ, ನಿಯಮ ಉಲ್ಲಂಘಿಸುವವರ ವಿರುದ್ಧ ಅವರು ಕೆಲಸ ಮಾಡುವ ಕಂಪನಿಗಳಿಗೆ ನೋಟಿಸ್ ಕಳಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ನಿಮ್ಮ ಕೆಲಸವೂ ಹೋಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ವರ್ಷಕ್ಕೆ ಸುಮಾರು ₹19.750 ಕೋಟಿ ನಷ್ಟ
ಇನ್ನೊಂದು ಮುಖ್ಯ ವಿಚಾರ ಏನೆಂದರೆ, ಸಂಚಾರ ದಟ್ಟಣೆ, ವಿಳಂಬ, ದಟ್ಟಣೆ ಮತ್ತು ಸಿಗ್ನಲ್ ನಿಲುಗಡೆಗಳ ಕಾರಣ ಇಂಧನ ವ್ಯರ್ಥವಾಗಿ, ಆಗುತ್ತಿರುವ ನಷ್ಟ, ವರ್ಷಕ್ಕೆ ಸುಮಾರು ₹19.750 ಕೋಟಿ ರುಪಾಯಿ ಎಂದು ಅಂದಾಜು ಮಾಡಲಾಗಿದೆ.
ವಿಶೇಷವೆಂದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 2031ರವರೆಗೆ ದೂರದೃಷ್ಟಿ ಹರಿಸಿ, 2017ರಲ್ಲಿ ಪರಿಷ್ಕೃತ ಮಾಸ್ಟರ್ ಪ್ಲಾನ್ ರೂಪಿಸಿತ್ತು. ಅದರಲ್ಲಿ ಕೂಡ ಸಂಚಾರ ದಟ್ಟಣೆಯಿಂದಾಗಿ ಉತ್ಪಾದಕತೆ ನಷ್ಟ ಕುರಿತು ಉಲ್ಲೇಖಿಸಲಾಗಿತ್ತು. ವರ್ಷಕ್ಕೆ ನಗರದ ಜನರ ಸುಮಾರು 16,666 ಗಂಟೆಗಳಷ್ಟು ಸಮಯ ವ್ಯರ್ಥವಾಗುವುದರಿಂದ 3,700 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ವೆಚ್ಚವಾಗುತ್ತಿದೆ ಎಂದಿತ್ತು. ಈ 3,700 ಕೋಟಿ ರೂಪಾಯಿಯಲ್ಲಿ 1,350 ಕೋಟಿ ರೂಪಾಯಿ ಸಿಗ್ನಲ್‌ನಲ್ಲಿ ವಾಹನಗಳು ನಿಲ್ಲುವುದರಿಂದಾಗಿ ವ್ಯರ್ಥವಾಗುವ ಇಂಧನ ವೆಚ್ಚದ ನಷ್ಟವೆಂದು ವಿವರಿಸಿತ್ತು.
ಸಂಚಾರ ದಟ್ಟಣೆಯಿಂದಾಗಿ ಇಷ್ಟೆಲ್ಲ ಸಮಸ್ಯೆಗಳು ಎದುರಾಗುತ್ತಿವೆ. ಸಂಚಾರ ದಟ್ಟಣೆಯೇ ಒಂದು ಸಮಸ್ಯೆಯಾದರೆ, ಆ ದಟ್ಟಣೆಗೂ ಇತರೆ ನಾನಾ ಸಮಸ್ಯೆಗಳು ಪೂರಕವಾಗಿವೆ. ರಸ್ತೆ ಗುಂಡಿಗಳು ಮತ್ತು ಹದಗೆಟ್ಟ ರಸ್ತೆಗಳು ವಾಹನಗಳ ಸಲೀಸು ಸಂಚಾರಕ್ಕೆ ಅಡ್ಡಿಯಾಗಿವೆ.
ದಟ್ಟಣೆ ನಿವಾರಿಸಲು ಸಂಚಾರ ಪೊಲೀಸರು ನಾನಾ ಕ್ರಮಗಳನ್ನು ರೂಪಿಸುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ, ಹಲವು ರಸ್ತೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದ 11ರವರೆಗೆ (ಪೀಕ್ ಅವರ್) ಭಾರೀ ವಾಹನಗಳ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ನಗರದ ಹೊರವರ್ತುಲ ರಸ್ತೆ, ಆರ್ಟೀರಿಯಲ್ ರಸ್ತೆಗಳು ಹಾಗೂ ಸಂಪರ್ಕ ರಸ್ತೆಗಳಲ್ಲೂ ಇದೇ ನಿರ್ಬಂಧವಿದೆ. ಆದರೂ, ಸಮಸ್ಯೆ ಪರಿಹಾರವಾಗಿಲ್ಲ. ಹೀಗಾಗಿ, ಬೆಳಗ್ಗೆ 7 ರಿಂದಲೇ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ರಾತ್ರಿ ಹತ್ತಕ್ಕೆ ಸೀಮಿತಗೊಳಿಸಲು ಬೆಂಗಳೂರು ಸಂಚಾರ ಪೊಲೀಸ್ ತೀರ್ಮಾನಿಸಿದೆ.
ಹೊರ ವರ್ತುಲ ರಸ್ತೆಯ 18 ಕಿ.ಮೀ. ವ್ಯಾಪ್ತಿಯಲ್ಲಿ ಯಮಲೂರು ಜಂಕ್ಷನ್, ಪಣತ್ತೂರು ಜಂಕ್ಷನ್, ಬೆಳ್ಳಂದೂರು ಕೆರೆ ಜಂಕ್ಷನ್, ಎಂಬೆಸ್ಸಿ ಪಾರ್ಕ್ ಗೇಟ್, ಸಕ್ರಾ ಆಸ್ಪತ್ರೆ ಸೇರಿದಂತೆ ಅತಿ ಹೆಚ್ಚು ವಾಹನ ದಟ್ಟಣೆಯಿರುವ 36 ಸ್ಥಳಗಳನ್ನು ಗುರುತಿಸಲಾಗಿದೆ. ಈ ಭಾಗದಲ್ಲಿ ಟ್ರಾಫಿಕ್ ಸಿಗ್ನಲ್‌ಗಳ ಅವಧಿ ತಗ್ಗಿಸಲು ಮತ್ತು ಪಾದಚಾರಿ ಮಾರ್ಗದ ಒತ್ತುವರಿ ತೆರವು ಮಾಡಲು ನಿರ್ಧರಿಸಲಾಗಿದೆ. ಮನೆಗಳಿಂದಲೇ ಕೆಲಸ ಮಾಡುವ ಪದ್ಧತಿ(ಡಬ್ಲ್ಯೂಎಫ್ಎಚ್) ಮರು ಜಾರಿ ಬಗ್ಗೆ ಕೂಡ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ
ಕೆಆರ್ ಪುರಂ ವರೆಗಿನ ಸಿಲ್ಕ್ ಬೋರ್ಡ್ ಜಂಕ್ಷನ್ ನಡುವಿನ ಪ್ರದೇಶದಲ್ಲಿ 6.4ಲಕ್ಷ ಐಟಿ ವೃತ್ತಿಪರರು ಕೆಲಸ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಬಸ್ ಪೂಲಿಂಗ್ ವ್ಯವಸ್ಥೆಯನ್ನು ಸಾರಿಗೆ ಇಲಾಖೆಯ ನಿಬಂಧನೆಗಳ ಕಾರಣಕ್ಕೆ ರದ್ದುಪಡಿಸಲಾಗಿತ್ತು. ಇದೀಗ, ಮತ್ತೆ ಐಟಿ ಉದ್ಯೋಗಿಗಳ ಅನುಕೂಲಕ್ಕಾಗಿ ಕಾರು ಮತ್ತು ಬಸ್ ಪೂಲಿಂಗ್‌ಗೆ ಅವಕಾಶ ಕಲ್ಪಿಸುವ ಬಗ್ಗೆ ಚರ್ಚೆ ನಡೆದಿದೆ. ಮತ್ತೆ ಪೂಲಿಂಗ್‌ಗೆ ಅವಕಾಶ ನೀಡಿದರೆ ಐಟಿ ಕಾರಿಡಾರ್‌ನಲ್ಲಿ ವಾಹನ ದಟ್ಟಣೆ ತಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ‘ವರ್ಷದ ಅತ್ಯುತ್ತಮ ವಿಮಾನ ನಿಲ್ದಾಣ’ ಪ್ರಶಸ್ತಿ
ಟ್ರಾಫಿಕ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಕರ್ನಾಟಕ ಸರ್ಕಾರ ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್‌ನಂತಹ ತಂತ್ರಜ್ಞಾನ ಸಾಧನಗಳನ್ನು ಬಳಸಬೇಕು. ನಗರದ ಬೆಳವಣಿಗೆಗೆ ಹೊಂದಿಕೆಯಾಗುವ ರೀತಿಯಲ್ಲಿ ಬೆಂಗಳೂರಿನಲ್ಲಿ ರಸ್ತೆಗಳ ಯೋಜನೆ ಮತ್ತು ನಿರ್ಮಾಣಕ್ಕೆ ಹಲವಾರು ಟ್ರಾಫಿಕ್ ತಜ್ಞರು ಒತ್ತಾಯಿಸಿದ್ದಾರೆ.
ಸಂಚಾರ ದಟ್ಟಣೆ ನಿಯಂತ್ರಿಸಲು ಬಿಬಿಎಂಪಿ ಮತ್ತು ಸಂಚಾರ ಪೊಲೀಸರು ನಾನಾ ರೀತಿಯಲ್ಲಿ ಯತ್ನಿಸುತ್ತಿದ್ದಾರೆ. ಇನ್ನೂ ಅನೇಕ ಮಾರ್ಗಗಳು ನಮ್ಮ ಮುಂದಿವೆ. ಅದರಲ್ಲಿ, ದೆಹಲಿ ರೀತಿಯಲ್ಲಿ, ವಾರದಲ್ಲಿ ಮೂರು ದಿನ ಬೆಸ ಸಂಖ್ಯೆ, ಮೂರು ದಿನ ಸಮ ಸಂಖ್ಯೆಗಳ ಆವೃತ್ತಿಯಲ್ಲಿ ವಾಹನಗಳು ಸಂಚರಿಸುವಂತೆ ಸೂಚಿಸುವುದು. ಪಾದಚಾರಿ ಮಾರ್ಗಗಳನ್ನು ಸುಧಾರಿಸುವುದು ಮತ್ತು ವಿಸ್ತರಿಸುವುದು, ಬೈಸಿಕಲ್ ಬಳಕೆಗೆ ಉತ್ತೇಜನ ನೀಡಬೇಕು. ರಸ್ತೆಗಳನ್ನು ಸರಿಯಾಗಿ ನಿರ್ವಹಿಸಬೇಕು. ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಅವೈಜ್ಞಾನಿಕ ಹಂಪ್‌ಗಳನ್ನು ತೆರವು ಗೊಳಿಸಿ, ರಸ್ತೆ ಸುರಕ್ಷತೆಯನ್ನು ಖಾತ್ರಿ ಪಡಿಸಬೇಕಿದೆ.
ಇದೆಲ್ಲದಕ್ಕಿಂತ ಮುಖ್ಯವಾಗಿ, ಬೆಂಗಳೂರಿನಲ್ಲಿ ಜನ ದಟ್ಟಣೆಯನ್ನು ನಿಯಂತ್ರಿಸಬೇಕು. ಜನರು ಬೆಂಗಳೂರನ್ನು ಅವಲಂಬಿಸುವುದನ್ನು ಕಡಿಮೆ ಮಾಡಬೇಕು. ಬೆಂಗಳೂರಿಗೆ ಜನರು ವಲಸೆ ಬರುವುದನ್ನು ತಡೆಯಬೇಕು. ಅಂದರೆ, ಜನರಿಗೆ ಅವರ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿಯೇ ಉದ್ಯೋಗಗಳು ದೊರೆಯುವಂತೆ ಮಾಡಬೇಕು. ನಾನಾ ರೀತಿಯ ಉದ್ದಿಮೆಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಆರಂಭಿಸಬೇಕು. ಈ ರೀತಿಯಲ್ಲಿ ಬೆಂಗಳೂರಿನ ಮೇಲಿನ ಅವಲಂಬನೆ ತಗ್ಗಿಸಬೇಕು. ಬೆಂಗಳೂರಿನಲ್ಲಿ ಜನ ದಟ್ಟಣೆ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಇರುವ ಬಹುದೊಡ್ಡ ಏಕೈಕ ಮಾರ್ಗವಿದು… ಆದರೆ, ಇದಕ್ಕೆ ಸರ್ಕಾರಗಳ ಇಚ್ಛಾಶಕ್ತಿ ಬಹುಮುಖ್ಯವಾದುದು. ಅದು ಸಾಧ್ಯವಾದರೆ, ಎಲ್ಲವೂ ಸಾಧ್ಯವಾಗುತ್ತದೆ…