ಕೃಷಿ ಹೊಂಡಲ್ಲಿ 100 ಗ್ರಾಂ ಸೋಡಿಯಂ ಬಳಸಿ ವಿಜ್ಞಾನ ಪ್ರಯೋಗ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಹಾಗೂ ‘ಡ್ರೋನ್ ಪ್ರತಾಪ್’ ಅಲಿಯಾಸ್ ಎನ್ ಎಂ ಪ್ರತಾಪ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಪ್ರತಾಪ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೇ, “ಪ್ರತಾಪ್ ನಡೆಸಿದ ಪ್ರಯೋಗವು 10ನೇ ತರಗತಿಯ ಎನ್‌ಸಿಇಆರ್‌ಟಿ ಪಠ್ಯಕ್ರಮದಲ್ಲಿರುವ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಪ್ರಯೋಗದ ಉದ್ದೇಶ ಶೈಕ್ಷಣಿಕವಾಗಿದ್ದು, ಯಾವುದೇ ದುರುದ್ದೇಶ ಕಂಡುಬಂದಿಲ್ಲ”ವೆಂದು ಪೀಠ ತಿಳಿಸಿದೆ.
“ಪ್ರತಾಪ್ ಅವರು ಶೈಕ್ಷಣಿಕ ವಿಷಯಗಳ ಪ್ರಯೋಗ ನಡೆಸುವ ಯೂಟ್ಯೂಬರ್ ಆಗಿದ್ದು, ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಸುಮಾರು 600 ಡ್ರೋನ್‌ಗಳನ್ನು ನಿರ್ಮಿಸಿದ್ದಾರೆ. ರಾಸಾಯನಿಕ ಕ್ರಿಯೆಯನ್ನು ಸಾರ್ವಜನಿಕರಿಗೆ ಶೈಕ್ಷಣಿಕವಾಗಿ ವಿವರಿಸುವ ಉದ್ದೇಶದಿಂದಲೇ ವಿಡಿಯೋ ಮಾಡಲಾಗಿದೆ. ಆದಾಗ್ಯೂ, ಪ್ರಯೋಗ ನಡೆಸಿದ ವಿಧಾನವನ್ನು ನ್ಯಾಯಾಲಯ ಸಮರ್ಥಿಸುವುದಿಲ್ಲ ಅಥವಾ ಶ್ಲಾಘಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.
“ಆದರೆ, ಪ್ರಕರಣ ಮುಂದುವರಿಸಲು ಅಗತ್ಯವಿರುವ ದುರುದ್ದೇಶ ಸಾಬೀತಾಗಿಲ್ಲದ ಹಿನ್ನೆಲೆಯಲ್ಲಿ ಪ್ರತಾಪ್ ಅವರನ್ನು ತನಿಖೆ ಮತ್ತು ಕ್ರಿಮಿನಲ್ ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಪೀಠ ಹೇಳಿದೆ. ಆದ್ದರಿಂದ ಅರ್ಜಿದಾರ ಪ್ರತಾಪ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಾಗೂ ಸಂಬಂಧಿತ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲಾಗುತ್ತಿದ್ದರೂ ಭವಿಷ್ಯದಲ್ಲಿ ಇದೇ ರೀತಿಯ ಘಟನೆಗಳು ಮರುಕಳಿಸಿದರೆ, ಅವುಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಪ್ರಕರಣದ ಹಿನ್ನೆಲೆ: ಪ್ರತಾಪ್ ಅವರು ತಮ್ಮ ಸ್ನೇಹಿತನ ಖಾಸಗಿ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು 100 ಗ್ರಾಂ ಸೋಡಿಯಂ ಬಳಸಿ ವೈಜ್ಞಾನಿಕ ಪ್ರಯೋಗ ನಡೆಸಿದ್ದರು. ಈ ಸಂಬಂಧ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡ ಪರಿಣಾಮ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಸಂಸದ ಪ್ರಲ್ಹಾದ್ ಜೋಶಿ ವಿರುದ್ಧ ಸಿಡಿದೆದ್ಧ ಕಬ್ಬು ಬೆಳೆಗಾರರು: ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ
ಇದೇ ಆರೋಪ ಸಂಬಂಧ ಅರ್ಜಿದಾರ ಅರ್ಜಿದಾರರನ್ನು 2024ರ ಡಿಸೆಂಬರ್‌ನಲ್ಲಿ ಬಂಧಿಸಲಾಗಿತ್ತು. ಜೀವ ಅಥವಾ ಆಸ್ತಿಗೆ ಅಪಾಯ ಉಂಟುಮಾಡುವ ರೀತಿಯಲ್ಲಿ ಸ್ಫೋಟ ನಡೆಸಿದ ಆರೋಪದಡಿ ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3 ಹಾಗೂ ಸ್ಫೋಟಕ ವಸ್ತುಗಳ ನಿರ್ಲಕ್ಷ್ಯಪೂರ್ವಕ ನಿರ್ವಹಣೆಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 288 ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಪ್ರತಾಪ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.




