ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಹುತೇಕ ಕಡೆ ರಾತ್ರಿಪೂರ್ತಿ ಭಾರೀ ಮಳೆಯಾಗಿದ್ದು, ಒಂದೆಡೆ ಮಳೆ ಕೊರತೆಯಿಂದ ಕಂಗಲಾಗಿದ್ದ ಜನರು ಈಗ ತುಸು ನಿರಾಳರಾಗಿದ್ದರೆ, ಮತ್ತೊಂದು ಕಡೆ ಮಳೆ ಅವಾಂತರದಿಂದ ಅಸ್ತವ್ಯಸ್ತವಾಗಿರುವುದನ್ನು ಕಾಣಬಹುದು.
ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹುಬ್ಬೆ ಹುಣಸೆ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿ ಕೋಡಿಬಿದ್ದಿದೆ. ಜತೆಗೆ, ಉಡುತೊರೆ ಜಲಾಶಯ, ತಟ್ಟೆಹಳ್ಳ, ಸ್ವಾಮಿಹಳ್ಳಗಳು ತುಂಬಿದ್ದು, ಸೇತುವೆ ಮೇಲೆ ನೀರು ಹರಿದ ಪರಿಣಾಮ ಹನೂರು ಪಟ್ಟಣದ ಬಡಾವಣೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದ ಘಟನೆ ಸಂಭವಿಸಿದೆ.
ಹುಬ್ಬೆಹುಣಸೆ ಡ್ಯಾಂ ಕೋಡಿಬಿದ್ದ ಪರಿಣಾಮ ಹನೂರಿನ ಪಟ್ಟಣದ ತಟ್ಟೆಹಳ್ಳವೂ ತುಂಬಿ ದಿಢೀರ್ ಹರಿಯಿತು. ಇದರಿಂದಾಗಿ ದೇವಾಂಗಪೇಟೆ ಮತ್ತು ಸುತ್ತಮುತ್ತಲಿನ ವಸತಿ ಪ್ರದೇಶಗಳು ಹಾಗೂ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡು ನಿವಾಸಿಗಳು ಪರದಾಡುವಂತಾಗಿತ್ತು. ದೇವಾಂಗಪೇಟೆಯ ಮುಖ್ಯ ರಸ್ತೆಯ ಸೇತುವೆ ಮೇಲೆ ಐದಾರು ಅಡಿಗೂ ಅಧಿಕವಾಗಿ ನೀರು ಹರಿಯುತ್ತಿದ್ದರಿಂದ ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮಳೆಯ ಆರ್ಭಟಕ್ಕೆ ಸ್ಥಳೀಯ ನಿವಾಸಿಗಳ ಮನೆಗೆ ಸಂಪೂರ್ಣವಾಗಿ ನೀರು ನುಗ್ಗಿದ್ದು, ಆಹಾರ ಧಾನ್ಯಗಳು, ಬಟ್ಟೆ ಹಾಗೂ ದಿನಬಳಕೆಯ ವಸ್ತುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಅಷ್ಟೇ ಅಲ್ಲದೆ, ಕುಟುಂಬದ ಜೀವನೋಪಾಯಕ್ಕೆ ಆಸರೆಯಾಗಿದ್ದ 2 ಕುರಿಗಳು ಹಾಗೂ 20 ಕೋಳಿಗಳು ನೆರೆ ನೀರಿನಲ್ಲಿ ಕೊಚ್ಚಿಹೋಗಿರುವುದಾಗಿ ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
This video cannot be played in your browser. Open the video directly

ಹುಬ್ಬೆಹುಣಸೆ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿ ಕೋಡಿ ಬಿದ್ದಿದ್ದು, ಹನೂರು ಶಾಸಕ ಎಂ ಆರ್ ಮಂಜುನಾಥ್ ಭೇಟಿ ನೀಡಿ ಜಲಾಶಯವನ್ನು ಪರಿಶೀಲಿಸಿದರು.
ಇದನ್ನೂ ಓದಿದ್ದೀರಾ? ಹುಬ್ಬಳ್ಳಿ | ಸಂಸದ ಪ್ರಲ್ಹಾದ್ ಜೋಶಿ ವಿರುದ್ಧ ಸಿಡಿದೆದ್ಧ ಕಬ್ಬು ಬೆಳೆಗಾರರು: ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ
ಈ ವೇಳೆ ಮಾತನಾಡಿದ ಶಾಸಕರು, “ಕಳೆದ ಹಲವು ತಿಂಗಳಿಂದ ಸಮರ್ಪಕ ಮಳೆಯಾಗದೇ ಹನೂರು ತಾಲೂಕಿನಲ್ಲಿ ಭೀಕರ ಬರ ಆವರಿಸಿತ್ತು. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿತ್ತು. ಆದರೆ ಕಳೆದ ಒಂದು ವಾರದಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಬರ ಆವರಿಸಿದ್ದ ಜಾಗದಲ್ಲಿ ಭರವಸೆ ಮೂಡಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ತಡರಾತ್ರಿ ಸುರಿದ ಭಾರೀ ಮಳೆಗೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ರಸ್ತೆಗೆ ಬಂಡೆಗಲ್ಲುಗಳು ಉರುಳಿ ಬಿದ್ದ ಘಟನೆ ನಡೆದಿದ್ದು, ಕಲ್ಲುಗಳು ಹಾಗೂ ಮಣ್ಣು ಬಿದ್ದ ಪರಿಣಾಮ ಬೆಟ್ಟದ ಮುಖ್ಯರಸ್ತೆಯೇ ಕೆಸರು ಮಯವಾಗಿದೆ.





