ಈ ದಿನ ಸಂಪಾದಕೀಯ | ಮೋದಿಯ 56 ಇಂಚಿನ ಅಳ್ಳೆದೆ ಮತ್ತು ಚೀನಾದ ಅತಿಕ್ರಮಣ

Date:

ಒಂದು ಕಡೆ ಚೀನಾ ನಮ್ಮ ಗಡಿ ಅತಿಕ್ರಮಿಸುತ್ತಿದ್ದರೆ, ಇನ್ನೊಂದು ಕಡೆ ಅದೇ ಚೀನಾದ ವ್ಯಾಪಾರ-ವಹಿವಾಟಿಗೆ ಭಾರತ ಸಮೃದ್ಧ ಮಾರುಕಟ್ಟೆ ನಿರ್ಮಿಸಿಕೊಟ್ಟಿದೆ. ಇದು ಕೇಂದ್ರ ಸರ್ಕಾರದ ದ್ವಂದ್ವನೀತಿಯನ್ನು, ಮಹತ್ವದ 'ಮೇಕ್ ಇನ್ ಇಂಡಿಯಾ' ಯೋಜನೆ ಮುಗ್ಗರಿಸಿರುವುದನ್ನು, ಮೋದಿಯವರ 56 ಇಂಚಿನ ಎದೆ- ಅಳ್ಳೆದೆಯಾಗಿರುವುದನ್ನು ತೆರೆದು ತೋರುತ್ತಿದೆ.

‘ಅರುಣಾಚಲ ಪ್ರದೇಶದ ಹಲವು ಸ್ಥಳಗಳಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಮುಖಾಮುಖಿ ನಡೆದಿದೆ. ಈಗಲೂ ನಡೆಯುತ್ತಿದೆ’ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕ ಶತ್ರುಜಿತ್ ಸಿಂಗ್ ಕಪೂರ್ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

- Advertisement -

‘ಗಲ್ವಾನ್ ಸಂಘರ್ಷದ ಬಳಿಕ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದ ಪ್ರಧಾನಿಯವರು, ಈಗ ಅರುಣಾಚಲ ಪ್ರದೇಶದ ವಿಚಾರದಲ್ಲೂ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆಯೇ. ದೇಶದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶದಲ್ಲಿ ಚೀನಾ ನಮ್ಮ ಯೋಧರನ್ನು ಗಸ್ತು ತಿರುಗಲು ಬಿಡದೆ ಅಡ್ಡಿಪಡಿಸುತ್ತಿದ್ದರೂ, ಪ್ರಧಾನಿ ಮಾತ್ರ ಈ ಬಗ್ಗೆ ತುಟಿ ಬಿಚ್ಚದಿರುವುದೇಕೆ’ ಎಂದು ವಿರೋಧ ಪಕ್ಷದ ನಾಯಕರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶ್ನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಬ್ರೆಜಿಲ್‌ನಲ್ಲಿ ʼಲೂಲಾʼ ಐತಿಹಾಸಿಕ ಗೆಲುವು: ನಾಗರಿಕ ಸಂಘಟನೆಗಳು ಚುನಾವಣೆಯ...

ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಸ್ ಇನಾಸಿಯೊ ಲೂಲಾ ಡಿ ಸಿಲ್ವಾ ಅವರು ಅತ್ಯಂತ ಐತಿಹಾಸಿಕ ರೀತಿಯಲ್ಲಿ ಮರುಆಯ್ಕೆಯಾಗಿದ್ದಾರೆ. ಅಕ್ಟೋಬರ್ 25ರಂದು ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಅವರು ಬಲಪಂಥೀಯ ಅಭ್ಯರ್ಥಿ...

ಅಂದರೆ, ದೇಶದ ಉನ್ನತ ಹುದ್ದೆಯಲ್ಲಿರುವ ಭದ್ರತಾ ಅಧಿಕಾರಿ ಹಾಗೂ ವಿರೋಧ ಪಕ್ಷದ ನಾಯಕರು ಚೀನಾ-ಭಾರತ ಗಡಿಭಾಗದ ಉದ್ವಿಗ್ನ ಸ್ಥಿತಿಯನ್ನು ದೇಶದ ಜನತೆಯ ಮುಂದಿಟ್ಟಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆ, ದೇಶದ ಭಾಗವೇ ಆಗಿರುವ ಅರುಣಾಚಲ ಪ್ರದೇಶದ ಜನ ಆತಂಕದಲ್ಲಿ ದಿನದೂಡುತ್ತಿದ್ದಾರೆ. ಮತ್ತು ದೇಶದ ಗಡಿ ಕಾಯುತ್ತಿರುವ ಭಾರತೀಯ ಯೋಧರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಪ್ರತಿನಿತ್ಯ ಚೀನಾ ಯೋಧರೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ. ಚೀನಾದ ಅತಿಕ್ರಮಣದ ವಿರುದ್ಧ ಸ್ಥಳೀಯರು ಪ್ರತಿಭಟಿಸುತ್ತಿದ್ದಾರೆ. ‘ಇಟಲಿಗೆ ಕ್ಯಾಂಡಿ ತೆಗೆದುಕೊಂಡು ಹೋಗುವ ಮೋದಿಯವರು, ಇಂಡಿಯನ್ ಫ್ಲಾಗ್ ಹಿಡಿದು ಅರುಣಾಚಲ ಪ್ರದೇಶಕ್ಕೆ ಯಾಕೆ ಬರುವುದಿಲ್ಲ’ ಎಂದು ಕೇಳುತ್ತಿದ್ದಾರೆ. ಸಂಘರ್ಷಮಯ ಸ್ಥಿತಿಯನ್ನು ತಿಳಿಸುವ, ಭಯ ಹುಟ್ಟಿಸುವ ಹತ್ತು ಹಲವು ಚಿತ್ರಗಳು-ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ.

ಇದನ್ನು ಓದಿದ್ದೀರಾ?: ‘Failed Product’ ಹಣೆಪಟ್ಟಿ- ರಾಹುಲ್ ವಿರುದ್ಧ ಪುನಃ ಪ್ರಾಪಗ್ಯಾಂಡ ಸಮರ!

ಇದು ಸಾಲದೆಂದು ಚೀನಾ, ಗಡಿಯಲ್ಲಿ ಸೇನಾ ಚಟುವಟಿಕೆ ಹೆಚ್ಚಿಸಿದೆ. ಗಡಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಗಡಿಯುದ್ದಕ್ಕೂ ಮಿಲಿಟರಿ ಮತ್ತು ನಾಗರಿಕ ಗ್ರಾಮಗಳನ್ನು ನಿರ್ಮಿಸುತ್ತಿದೆ. ಅರುಣಾಚಲ ಪ್ರದೇಶದೊಳಗೆ ಸೌತ್ ಟಿಬೆಟ್ ಗುರುತಿಸಿದೆ. ಈ ಎಲ್ಲ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಇಷ್ಟಾದರೂ, ಭಾರತ-ಚೀನಾ ಗಡಿಯಲ್ಲಿ ಏನಾಗಿದೆ, ಏನಾಗುತ್ತಿದೆ, ಯಾವ ಪ್ರದೇಶದಲ್ಲಿ ಸೇನಾ ಹಿಂಪಡೆಯುವಿಕೆ ನಡೆದಿದೆ, ಗಸ್ತು ವ್ಯವಸ್ಥೆಯಲ್ಲಿ ಯಾವ ಬದಲಾವಣೆಗಳಾಗಿವೆ ಮತ್ತು ಇನ್ನೂ ಯಾವ ಸಮಸ್ಯೆಗಳು ಬಾಕಿ ಉಳಿದಿವೆ ಎಂಬುದರ ಕುರಿತು ದೇಶದ ಜನತೆಗೆ ತಿಳಿಸಬೇಕಾದ, ಆ ಮೂಲಕ ಆತಂಕವನ್ನು ನಿವಾರಿಸಬೇಕಾದ ಕೇಂದ್ರ ಸರ್ಕಾರ, ರಕ್ಷಣಾ ಸಚಿವಾಲಯ, ಪ್ರಧಾನಿ ಕಾರ್ಯಾಲಯ ಬಾಯಿ ಬಂದ್ ಮಾಡಿಕೊಂಡು ಕೂತಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಪ್ರತಿಯೊಂದು ವಿವರವನ್ನು ರಕ್ಷಣಾ ಸಚಿವಾಲಯ ಬಹಿರಂಗಪಡಿಸಲು ಸಾಧ್ಯವಿಲ್ಲ, ನಿಜ. ಆದರೆ, ಅದನ್ನೇ ಗುರಾಣಿಯನ್ನಾಗಿ ಬಳಸಿ ಸತ್ಯಸಂಗತಿಯನ್ನು ಮರೆಮಾಚುವುದು; ದೇಶಪ್ರೇಮದ ಒಣಭಾಷಣ ಕುಟ್ಟುತ್ತ ಜನತೆಗೆ ಮಂಕುಬೂದಿ ಎರಚುವುದು ಎಷ್ಟು ಸರಿ?

ಮೋದಿಯವರು ಪ್ರಧಾನಿಯಾದ ನಂತರ ಚೀನಾದ ಅಧ್ಯಕ್ಷ ಜಿನ್‌ಪಿಂಗ್ ಅವರೊಂದಿಗೆ ಹಲವು ಉನ್ನತಮಟ್ಟದ ಭೇಟಿಗಳು ಜರುಗಿವೆ. ಈವರೆಗೆ ಅವರಿಬ್ಬರ ನಡುವೆ ಕನಿಷ್ಠ 23 ಸಭೆಗಳು ನಡೆದಿವೆ. ಆಗಸ್ಟ್ 25, 2026ರಂದು ಬೀಜಿಂಗ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ಗಡಿ ಪ್ರಶ್ನೆ ಕುರಿತು ವಿಶೇಷ ಪ್ರತಿನಿಧಿಗಳ 25ನೇ ಸುತ್ತಿನ ಮಾತುಕತೆಯೂ ಜರುಗಿದೆ. ಈ ಭೇಟಿ, ಸಭೆ, ಮಾತುಕತೆಗಳು ಹೊಸ ಭರವಸೆ ಮೂಡಿಸಿದ್ದೂ ಇದೆ.

ಆದರೆ, 2020ರ ಮೇ ತಿಂಗಳಿಗೂ ಮುನ್ನ ಭಾರತ ಹೊಂದಿದ್ದ ಗಸ್ತು ಹಕ್ಕುಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅರುಣಾಚಲ ಪ್ರದೇಶದೊಳಕ್ಕೆ ಚೀನಾ ಅಡಿ ಇಟ್ಟಿರುವುದಕ್ಕೆ, ಅತಿಕ್ರಮಿಸಿರುವುದಕ್ಕೆ ಸರ್ಕಾರದ ಬಳಿ ಸಮಜಾಯಿಷಿ ಇಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮುಖ್ಯವಾಹಿನಿ ಮಾಧ್ಯಮಗಳಿಗೆ ಗಡಿ ಸಮಸ್ಯೆ ಮುಖ್ಯವೆನಿಸುತ್ತಿಲ್ಲ. ಕನಿಷ್ಠ ಚರ್ಚೆಯೂ ನಡೆಯುತ್ತಿಲ್ಲ.

ಇದು ದೇಶದ ಗಡಿ ಭದ್ರತೆಯ ವೈಫಲ್ಯಕ್ಕಷ್ಟೇ ಸೀಮಿತವಾಗಿಲ್ಲ, ಆಮದು-ರಫ್ತು ವ್ಯವಹಾರದಲ್ಲಿಯೂ ಚೀನಾ ಎದುರು ಕೇಂದ್ರ ಸರ್ಕಾರ ಮಂಡಿಯೂರಿದೆ. ಗಲ್ವಾನ್ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ನಂತರ ಚೀನಾದ ವಸ್ತುಗಳನ್ನು ಬಹಿಷ್ಕರಿಸುವಂತೆ ಆರ್‍ಎಸ್ಎಸ್ ಅಂಗಸಂಸ್ಥೆ ಹಿಂದೂ ಜಾಗರಣ್ ಮಂಚ್ ಕರೆ ಕೊಟ್ಟಿತು. ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕೂಡ ಚೀನಾದ ನೂರಾರು ಮೊಬೈಲ್ ಆಪ್‌ಗಳನ್ನು ನಿಷೇಧಿಸಿತು. ಚೀನಾ ಕಂಪನಿಗಳು ಸರ್ಕಾರಿ ಮೂಲಸೌಕರ್ಯ ಯೋಜನೆಗಳ ಟೆಂಡರ್‌ಗಳಲ್ಲಿ ಭಾಗವಹಿಸುವುದನ್ನು ತಡೆಯಲು ನಿಯಮಗಳನ್ನು ಬಿಗಿಗೊಳಿಸಲಾಯಿತು. ಚೀನಾದ ಆಮದನ್ನು ಕಡಿಮೆ ಮಾಡಲು ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ‘ಆತ್ಮನಿರ್ಭರ ಭಾರತ’ ಅಭಿಯಾನ ಹಮ್ಮಿಕೊಂಡಿತು.

ಆದರೆ ಭಾರತದ ಆಮದು-ರಫ್ತು ನೀತಿಯೇ ಈ ಎಲ್ಲದರ ವಿರುದ್ಧವಿತ್ತು. ಚೀನಾದಿಂದ ಭಾರತದ ಆಮದು 2020-21ರಲ್ಲಿ 65.21, 2021-22ರಲ್ಲಿ 94.57, 2022-23ರಲ್ಲಿ 98.51, 2023-24ರಲ್ಲಿ 101.74 ಮತ್ತು 2024-25ರಲ್ಲಿ 113.45 ಶತಕೋಟಿ ಡಾಲರ್ ವಹಿವಾಟು ನಡೆದಿದೆ. ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲೇ ಇದೆ. ಆದರೆ ಭಾರತದಿಂದ ಚೀನಾಕ್ಕೆ ರಫ್ತು ವಹಿವಾಟು 2020-21ರಲ್ಲಿ 21.19 ಇದ್ದದ್ದು, 2024-25ರಲ್ಲಿ 14.25 ಶತಕೋಟಿ ಡಾಲರ್‍‌ಗೆ ಕುಸಿದಿದೆ.   

ಒಂದು ಕಡೆ ಚೀನಾ ನಮ್ಮ ಗಡಿ ಅತಿಕ್ರಮಿಸುತ್ತಿದ್ದರೆ, ಇನ್ನೊಂದು ಕಡೆ ಅದೇ ಚೀನಾದ ವ್ಯಾಪಾರ-ವಹಿವಾಟಿಗೆ ಭಾರತ ಸಮೃದ್ಧ ಮಾರುಕಟ್ಟೆ ನಿರ್ಮಿಸಿಕೊಟ್ಟಿದೆ. ಇದು ಕೇಂದ್ರ ಸರ್ಕಾರದ ದ್ವಂದ್ವನೀತಿಯನ್ನು, ಮಹತ್ವದ ‘ಮೇಕ್ ಇನ್ ಇಂಡಿಯಾ’ ಯೋಜನೆ ಮುಗ್ಗರಿಸಿರುವುದನ್ನು, ಮೋದಿಯವರ 56 ಇಂಚಿನ ಎದೆ- ಅಳ್ಳೆದೆಯಾಗಿರುವುದನ್ನು ತೆರೆದು ತೋರುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ವಿದೇಶಾಂಗ ನೀತಿಯಲ್ಲಿ ನುರಿತವರು, ರಾಜತಾಂತ್ರಿಕತೆಯಲ್ಲಿ ನಿಪುಣರು ಎಂದು ಬಿಂಬಿಸಲಾಗಿದೆ. ವಿಶ್ವದ ಪ್ರಮುಖ ನಾಯಕರನ್ನು ಆತ್ಮೀಯವಾಗಿ ಸ್ವಾಗತಿಸುವುದು, ಆಪ್ತವಾಗಿ ಅಪ್ಪಿಕೊಳ್ಳುವುದು, ಸ್ನೇಹಕ್ಕೆ ಒತ್ತು ನೀಡುವುದು ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಪ್ರಭಾವವನ್ನು ಎತ್ತಿಹಿಡಿಯುವುದು ಅವರ ರಾಜತಾಂತ್ರಿಕತೆಯ ಪ್ರಮುಖ ಲಕ್ಷಣಗಳಾಗಿವೆ ಎಂದು ಬಣ್ಣಿಸಲಾಗಿದೆ. ಈ ಆತಿಥ್ಯ, ಆತ್ಮೀಯತೆಯ ಫಲವಾಗಿ ಭಾರತ ಜಾಗತಿಕ ಮಟ್ಟದಲ್ಲಿ ವಿಶ್ವಗುರುವಿನತ್ತ ದಾಪುಗಾಲು ಹಾಕುತ್ತಿದೆ ಎಂಬ ವಾದವೂ ಇದೆ. ಅದನ್ನು ಮಡಿಲ ಮಾಧ್ಯಮಗಳು, ಸಂಘಪರಿವಾರದವರು ಮತ್ತು ಬಿಜೆಪಿ ಐಟಿ ಸೆಲ್ ಎವರೆಸ್ಟ್ ಎತ್ತರಕ್ಕೆ ಕೊಂಡೊಯ್ದಿದಿರುವುದೂ ಇದೆ.

ಆದರೆ, ರಾಜತಾಂತ್ರಿಕತೆಯ ಯಶಸ್ಸನ್ನು ನಾಯಕರ ನಡುವಿನ ನಗು, ಕೈ ಕುಲುಕುವಿಕೆ, ಬೆನ್ನು ತಟ್ಟುವಿಕೆ, ಬಿಗಿಯಾದ ಅಪ್ಪುಗೆ ಚಿತ್ರಗಳಿಂದ ಅಳೆಯಲು ಸಾಧ್ಯವೇ? ಈ ಪ್ರಶ್ನೆ ಚೀನಾದೊಂದಿಗಿನ ಭಾರತದ ಸಂಬಂಧವನ್ನು ಗಮನಿಸಿದಾಗ ಹೆಚ್ಚಿನ ಮಹತ್ವ ಪಡೆಯುತ್ತದೆ. ಒಂದು ಕಡೆ ಉಭಯ ದೇಶಗಳ ನಾಯಕರು ಭೇಟಿಯಾಗಿ ಸ್ನೇಹದ ಸಂದೇಶ ನೀಡುತ್ತಾರೆ. ಮತ್ತೊಂದೆಡೆ ಗಡಿ ವಿವಾದ, ಸೇನಾ ನಿಯೋಜನೆ, ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಉದ್ವಿಗ್ನತೆ ಮತ್ತು ಪರಸ್ಪರ ಅನುಮಾನದ ಸಮಸ್ಯೆಗಳು ಮುಂದುವರಿಯುತ್ತವೆ. ಈ ವೈರುಧ್ಯವೇ ಭಾರತದ ರಾಜತಾಂತ್ರಿಕತೆಯ ಕುರಿತು ಗಂಭೀರ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡುತ್ತದೆ.

ಇದನ್ನು ಓದಿದ್ದೀರಾ?: ಅಮೆರಿಕದ ದಬ್ಬಾಳಿಕೆ-ಮೋದಿ ಸರ್ಕಾರದ ಮೌನ; ಭಾರತದ ಸಾರ್ವಭೌಮತ್ವಕ್ಕೆ ಶೋಭೆಯಲ್ಲ!

ಪಾಕಿಸ್ತಾನದ ವಿಚಾರದಲ್ಲಿ ಕಡ್ಡಿಯನ್ನು ಗುಡ್ಡ ಮಾಡುವ, ಕಾಶ್ಮೀರ ಎಂದಾಕ್ಷಣ ಕನಲಿ ಕೆಂಡವಾಗುವ, ದೇಶದೊಳಗಿನ ಹಿಂದು-ಮುಸ್ಲಿಮರ ನಡುವೆ ದ್ವೇಷಾಸೂಯೆ ಬಿತ್ತಿ ರಾಜಕೀಯ ಲಾಭ ಪಡೆಯುವ ಸಂಘಪರಿವಾರ ಮತ್ತು ಬಿಜೆಪಿ, ಚೀನಾ ವಿಷಯದಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವಂತೆ ನಡೆದುಕೊಳ್ಳುತ್ತಿದೆ.

ಹಾಗಂತ ಚೀನಾದೊಂದಿಗೆ ಸಂವಾದ ನಡೆಸಬಾರದು ಎಂಬುದಲ್ಲ. ನೆರೆಯ ರಾಷ್ಟ್ರಗಳ ನಡುವೆ ನಿರಂತರ ಸಂವಹನ, ಗಡಿ ನಿರ್ವಹಣಾ ವ್ಯವಸ್ಥೆಗಳು ಮತ್ತು ವ್ಯಾಪಾರ ಸಂಬಂಧಗಳು ಅಗತ್ಯ. ಸಂಘರ್ಷವನ್ನು ತಡೆಯಲು ರಾಜತಾಂತ್ರಿಕತೆ ಅನಿವಾರ್ಯ. ಹಾಗೆಯೇ ಭಾರತದ ಹಿತಾಸಕ್ತಿಯೂ ಮುಖ್ಯ. ಆದರೆ, ಸದ್ಯದ ಸ್ಥಿತಿ ಅವಲೋಕಿಸಿದರೆ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ಹೇಳುವುದು ಒಂದು, ಮಾಡುವುದು ಇನ್ನೊಂದು. ಇವರು 56 ಇಂಚಿನ ಎದೆಯುಳ್ಳ ನಾಯಕರೇ, ಇವರು ದೇಶ ರಕ್ಷಿಸುವ  ದೇಶಪ್ರೇಮಿಗಳೇ ಎಂಬ ಪ್ರಶ್ನೆಯಂತೂ ಎದುರಾಗುತ್ತದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಪಾವಳಿ ವ್ಯಾಪಾರದ ಮೇಲೆ ರ‍್ಯಾಲಿ ಬಿಸಿ; ರಾಹುಲ್ ಗಾಂಧಿಗೆ ಮತ್ತೊಮ್ಮೆ ಪತ್ರ ಬರೆದ ದೆಹಲಿ ವ್ಯಾಪಾರಿಗಳ ಸಂಘ

ದೆಹಲಿಯಲ್ಲಿ ನವೆಂಬರ್ 1ರಂದು ನಡೆಯಲಿರುವ ಇಂಡಿಯಾ (INDIA) ಮೈತ್ರಿಕೂಟದ ಬೃಹತ್ ಪ್ರತಿಭಟನಾ...

ತಮಿಳುನಾಡಿನ ಥೇಣಿ ಕಾರಾಗೃಹದಿಂದ 17 ಖೈದಿಗಳ ಪರಾರಿ: ನಾಟಕವಾಡಿ ಸಿಬ್ಬಂದಿ ಮೇಲೆ ಹಲ್ಲೆ

ತಮಿಳುನಾಡಿನ ಥೇಣಿ ಉಪ ಕಾರಾಗೃಹದಲ್ಲಿ ಸೋಮವಾರ ತಡರಾತ್ರಿ ಸಿನಿಮೀಯ ರೀತಿಯಲ್ಲಿ 17...