ಈ ದಿನ ಸಂಪಾದಕೀಯ | ಬಿಎಸ್‌ವೈ ವಿರುದ್ಧ ಪೋಕ್ಸೋ ಪ್ರಕರಣ, ದೂರುದಾರೆ ವಿಕ್ಷಿಪ್ತ ಮನಸ್ಥಿತಿಯವರಾದರೆ ಆರೋಪ ಸುಳ್ಳು ಎಂದು ಅರ್ಥವೇ?

Date:

ಪ್ರಕರಣದ ಸತ್ಯಾಸತ್ಯತೆ ತನಿಖೆಯಿಂದ ಹೊರಬರಲಿ. ಆದರೆ, ದೂರುದಾರರನ್ನು ಅನುಮಾನಿಸುವುದು, ಆಕೆಯ ಚಾರಿತ್ರ್ಯಹರಣ ಮಾಡುವುದು ಆರೋಪಿಗೆ ಬೆಂಬಲ ಕೊಡುವುದಕ್ಕೆ ಸಮ. ಮುರುಘಾ ಶ್ರೀ ಪ್ರಕರಣದಲ್ಲಿಯೂ ಯಡಿಯೂರಪ್ಪ ಆದಿಯಾಗಿ ಹಲವು ರಾಜಕಾರಣಿಗಳು, ಲಿಂಗಾಯತ ಮುಖಂಡರು, ಸ್ವಾಮೀಜಿಗಳು ಅವರ ಪರ ವಹಿಸಿ ಹೇಳಿಕೆ ನೀಡಿದ್ದರು

 

ಮಾರ್ಚ್‌ 14ರ ರಾತ್ರಿ ಬೆಂಗಳೂರಿನ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ವಿರುದ್ಧ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೋ ಮತ್ತು ಐಪಿಸಿ 354(ಎ) ಅಡಿ ಎಫ್‌ಐಆರ್‌ ದಾಖಲಾಗಿದೆ. ಪೊಲೀಸ್‌ ಠಾಣೆಯ ಮುಂದೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ದೂರುದಾರೆಯನ್ನು ಆರು ಗಂಟೆಗಳ ಕಾಲ ಸತಾಯಿಸಿ ನಂತರ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸಂಜೆ ಆರು ಗಂಟೆಗೆ ಬಾಲಕಿಯ ತಾಯಿ ಬಿ ಎಸ್‌ ಯಡಿಯೂರಪ್ಪ ವಿರುದ್ಧ ದೂರು ನೀಡಲೆಂದು ಸದಾಶಿವನಗರ ಪೊಲೀಸ್‌ ಠಾಣೆಗೆ ಹೋಗಿದ್ದಾರೆ. ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳದೇ ಆಕೆಯನ್ನು ಸಾಗಹಾಕಲು ಯತ್ನಿಸಿದ್ದಾರೆ. ಪೊಲೀಸರ ಜೊತೆ ಬಿಜೆಪಿಯ ಕೆಲವರು ಸೇರಿ ಠಾಣೆಯ ಬಳಿ ಬಂದ ಮಾಧ್ಯಮ ಪ್ರತಿನಿಧಿಗಳನ್ನು ಸುಳ್ಳು ಕೇಸು ಎಂದು ಹೇಳಿ ಹಾದಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಕಡೆಗೂ ರಾತ್ರಿ 12ರ ಸುಮಾರಿಗೆ ಎಫ್‌ಐಆರ್‌ ದಾಖಲಾಗಿದೆ.

ಅಚ್ಚರಿಯೆಂಬಂತೆ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಒಂದು ಸಾಲಿನ ಸುದ್ದಿ ಕೂಡಾ ಬಂದಿರಲಿಲ್ಲ. ಅಷ್ಟೇ ಅಲ್ಲ ಬೆಳಗಾಗುವಾಗ ಪೊಲೀಸರು ದೂರುದಾರೆಯ ಮಾನಸಿಕ ಸ್ಥಿತಿ ಸರಿಯಿಲ್ಲ, ಆಕೆ ಈವರೆಗೆ ಹಲವರ ವಿರುದ್ಧ ದೂರು ನೀಡಿದ್ದಾರೆ ಎಂದು ಪೊಲೀಸರೇ ಆಕೆ ನೀಡಿದ ದೂರುಗಳ ಪಟ್ಟಿಯನ್ನು ಮಾಧ್ಯಮಗಳಿಗೆ ರವಾನಿಸಿದ್ದರು. ದೂರು ದಾಖಲಿಸುವಲ್ಲಿ ಇಲ್ಲದ ಆಸಕ್ತಿಯನ್ನು ಆಕೆ ಹಿಂದೆ ಕೊಟ್ಟ‌ ದೂರುಗಳನ್ನು ಪಟ್ಟಿ ಮಾಡಿ ಮಾಧ್ಯಮಗಳಿಗೆ ರವಾನಿಸುವುದರಲ್ಲಿ ಪೊಲೀಸರು ತೋರಿಸಿದ್ದರು. ಅಷ್ಟೇ ಅಲ್ಲ ಗೃಹಸಚಿವ ಡಾ. ಜಿ ಪರಮೇಶ್ವರ್‌ ಕೂಡಾ, “ದೂರುದಾರೆ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಆಕೆ ದೂರನ್ನು ಟೈಪ್‌ ಮಾಡಿಸಿ ಕೊಟ್ಟಿದ್ದಾರೆ” ಎಂಬ ಲಘು ಹೇಳಿಕೆ ನೀಡಿ ತನ್ನ ಎಂದಿನ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ದೂರನ್ನು ಕೈ ಬರಹದಲ್ಲೇ ಕೊಡಬೇಕು ಎಂಬ ನಿಯಮ ಇದೆಯೇ?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಒಂದು ವೇಳೆ ದೂರುದಾರೆ ವಿಕ್ಷಿಪ್ತ ಮನಸ್ಥಿತಿಯಲ್ಲಿದ್ದರೆ, ದೂರು ನೀಡಲು ಆಕೆಗೆ ಯಾರಾದರೂ ಸಹಾಯ ಮಾಡಿದ್ದರೆ ಅದೇನು ಅಪರಾಧವೇ? ಪೋಕ್ಸೋ ಕಾಯ್ದೆ ಏನು ಹೇಳುತ್ತದೆ ಎಂಬುದನ್ನು ಮಾಧ್ಯಮಗಳು, ಜನಪ್ರತಿನಿಧಿಗಳು ಪೊಲೀಸರು ತಿಳಿದುಕೊಳ್ಳುವ ಅಗತ್ಯವಿದೆ.

ಅಪ್ರಾಪ್ತ ಮಕ್ಕಳ ಮೇಲೆ (ಹೆಣ್ಣುಅಥವಾ ಗಂಡು) ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂಬುದನ್ನು ತಿಳಿದೂ ಸುಮ್ಮನಿರುವುದು ಕೂಡಾ ಕಿರುಕುಳಕ್ಕೆ ಸಹಕರಿಸಿದಷ್ಟೇ ಗಂಭೀರ ಅಪರಾಧ. ದೂರುದಾರೆ ಮಾನಸಿಕ ಅಸ್ವಸ್ಥಳಾಗಿದ್ದರೆ ಆಕೆಯ ಅಪ್ರಾಪ್ತ ಮಗಳ ಮೇಲೆ ಆದ ದೌರ್ಜನ್ಯದ ವಿರುದ್ಧ ದೂರು ನೀಡಲು ಯೋಗ್ಯಳಲ್ಲವೇ? ಅಥವಾ ಈ ಹಿಂದೆ ಹಲವರ ವಿರುದ್ಧ ದೂರು ನೀಡಿರುವುದೇ ಮಾನಸಿಕ ಅಸ್ವಸ್ಥತೆಯ ಲಕ್ಷಣವೇ ಎಂಬ ಪ್ರಶ್ನೆ ಉಂಟಾಗುತ್ತದೆ.

ದೂರುದಾರೆ ಯಡಿಯೂರಪ್ಪ ಅವರಿಗೆ ಅಥವಾ ಬಿಜೆಪಿಯವರಿಗೆ ಅಪರಿಚಿತೆಯೇನಲ್ಲ. ಆಕೆಯ ಪತಿ ಕೂಡಾ ಲಿಂಗಾಯತ ಸಮುದಾಯದವರು. ಆಕೆ ಬಿಜೆಪಿ ಬೆಂಬಲಿತೆ, ಅಷ್ಟೇ ಅಲ್ಲ ಯಡಿಯೂರಪ್ಪ ಅವರ ಮನೆಗೆ ಆಗಾಗ ಬಂದು ಹೋಗುತ್ತಿದ್ದವರು. ಯಡಿಯೂರಪ್ಪ ಅವರನ್ನು ಅಪ್ಪಾಜಿ ಎಂದೇ ಮಾತನಾಡಿಸುತ್ತಿದ್ದಾಕೆ. ಫೆ. 2ರಂದು ಯಡಿಯೂರಪ್ಪ ಅವರ ಮನೆಗೆ ಹೋಗಿದ್ದ ದೂರುದಾರೆ, ತನ್ನ ಪತಿಯ ಜೊತೆಗಿನ ವಿರಸ ಹಾಗೂ ಮಗಳ ಮೇಲೆ ಅಪ್ಪನೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲು ಸಹಕರಿಸುವಂತೆ ಯಡಿಯೂರಪ್ಪ ಅವರನ್ನು ಕೋರಿದ್ದಾರೆ. ಆ ಸಮಯದಲ್ಲಿ ಯಡಿಯೂರಪ್ಪನವರು ತಮ್ಮ ಮಗಳನ್ನು ತನ್ನ ಕೊಠಡಿಗೆ ಕರೆದೊಯ್ದು ಆಕೆಯ ಅಂಗಾಂಗ ಮುಟ್ಟಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಪೋಕ್ಸೋ ಕಾಯ್ದೆಯಡಿ ದೂರು ದಾಖಲಾದ ಕಾರಣ ಯಡಿಯೂರಪ್ಪನವರ ಮನೆಗೆ ಶುಕ್ರವಾರ ಬೆಳಿಗ್ಗೆ ಪೊಲೀಸ್‌ ಅಧಿಕಾರಿಗಳು ತೆರಳಿ ಹೇಳಿಕೆ ಪಡೆದಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ನೀಡಿದೆ. ಪೋಕ್ಸೋ ಅಡಿ ದೂರು ದಾಖಲಾದರೆ ಮೊದಲು ಆರೋಪಿಯನ್ನು ಬಂಧಿಸಬೇಕು. ಸಿಆರ್‌ಪಿಸಿ ಸೆಕ್ಷನ್‌ 164 ಅಡಿ ಮ್ಯಾಜಿಸ್ಟ್ರೇಟ್‌ ಮುಂದೆ ಸಂತ್ರಸ್ತೆಯ ಹೇಳಿಕೆ ದಾಖಲಾಗಬೇಕು. ಆದರೆ, ಈ ಪ್ರಕರಣದಲ್ಲಿ ಆರೋಪಿಯ ಬಂಧನವಾಗುವುದು ಅನುಮಾನ. ಮುಖ್ಯವಾಹಿನಿಯ ಎಲ್ಲಾ ಮಾಧ್ಯಮಗಳು ಇದೊಂದು ಸುಳ್ಳು ಪ್ರಕರಣ ಎಂಬ ತೀರ್ಮಾನಕ್ಕೆ ಬಂದಂತೆ ವರ್ತಿಸುತ್ತಿವೆ. ಕಾಂಗ್ರೆಸ್‌ ನಾಯಕರೂ ಅಷ್ಟೇ ಗಂಭೀರವಾಗಿ ಪರಿಗಣಿಸದಂತೆ ಒಮ್ಮತಕ್ಕೆ ಬಂದಂತಿದೆ. ಒಂದು ವೇಳೆ ಇದೇ ಆರೋಪ ಕಾಂಗ್ರೆಸ್‌ ನಾಯಕರ ಮೇಲೆ ಬಂದಿದ್ದರೆ, ಅದು ಖೊಟ್ಟಿ ಕೇಸೇ ಆಗಿದ್ದರೂ ಚುನಾವಣೆ, ಟಿಕೆಟ್‌ ಗೊಂದಲ ಎಲ್ಲ ಮರೆತು ಬಿಜೆಪಿಯ ನಾಯಕರು ಹಾಗೂ ಮಾಧ್ಯಮದವರು ಒಂದಾಗಿ ಉಗ್ರ ಹೋರಾಟ ಮಾಡುತ್ತಿದ್ದರು. ಮಾಧ್ಯಮಗಳು ಈ ಪ್ರಕರಣವನ್ನು 24/7 ಬೆನ್ನತ್ತುತ್ತಿದ್ದವು.

ಪ್ರಕರಣದ ಸತ್ಯಾಸತ್ಯತೆ ತನಿಖೆಯಿಂದ ಹೊರಬರಲಿ. ಆದರೆ, ದೂರುದಾರರನ್ನು ಅನುಮಾನಿಸುವುದು, ಆಕೆಯ ಚಾರಿತ್ರ್ಯಹರಣ ಮಾಡುವುದು ಆರೋಪಿಗೆ ಬೆಂಬಲ ಕೊಡುವುದಕ್ಕೆ ಸಮ. ಮುರುಘಾ ಶ್ರೀ ಪ್ರಕರಣದಲ್ಲಿಯೂ ಯಡಿಯೂರಪ್ಪ ಆದಿಯಾಗಿ ಹಲವು ರಾಜಕಾರಣಿಗಳು, ಲಿಂಗಾಯತ ಮುಖಂಡರು, ಸ್ವಾಮೀಜಿಗಳು ಅವರ ಪರ ವಹಿಸಿ ಹೇಳಿಕೆ ನೀಡಿದ್ದರು. ಸ್ವಾಮಿಗಳು ಆರೋಪ ಮುಕ್ತರಾಗಿ ಬರಲಿ ಎಂದು ಹಾರೈಸಿದ್ದರು. ಆದರೆ ಮುರುಘಾಶ್ರೀ ಒಂದು ವರ್ಷಗಳ ಕಾಲ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಆಗಲೂ ಸಂತ್ರಸ್ತ ಮಕ್ಕಳಿಗೆ ದೂರು ನೀಡಲು ಸಹಕರಿಸಿದ ಮಠದ ಮಾಜಿ ಸಿಬ್ಬಂದಿಗಳ ಮೇಲೆ ಷಡ್ಯಂತ್ರದ ಆರೋಪ ಹೊರಿಸಲಾಗಿತ್ತು. ಕೇಸು ಕೊಡಿಸಿದ್ದು ಷಡ್ಯಂತ್ರದ ಭಾಗವೇ ಆಗಿದ್ದರೂ ದೌರ್ಜನ್ಯ ನಡೆದಿರುವುದು ಸುಳ್ಳಲ್ಲ ಎಂಬುದು ಮಕ್ಕಳ ಹೇಳಿಕೆ ಮತ್ತು ಸಾಂದರ್ಭಿಕ ಸಾಕ್ಷ್ಯಗಳಿಂದ ತಿಳಿದುಬಂದಿತ್ತು. ಪ್ರಭಾವಿ ಸ್ವಾಮೀಜಿಯ ವಿರುದ್ಧ ದೂರು ನೀಡಲು ಪುಟ್ಟ ಸಂತ್ರಸ್ತ ಮಕ್ಕಳು ಭಯಪಡುವುದು ಸಹಜವೇ. ಅದರಲ್ಲೂ ಪೊಲೀಸರಿಗೆ ದೂರು ನೀಡಬೇಕಿದ್ದರೆ ಯಾರದಾದರೂ ಸಹಾಯ ಪಡೆಯಲೇಬೇಕು. ಆ ಪ್ರಕರಣದಲ್ಲೂ ಮಠದ ಮಾಜಿ ಸಿಬ್ಬಂದಿ ಮಕ್ಕಳಿಗೆ ದೂರು ನೀಡಲು ಸಹಾಯ ಮಾಡಿದ ಕಾರಣ ಮೂರು ದಶಕಗಳಿಂದ ಮಠದಲ್ಲಿ ಮಕ್ಕಳ ಮೇಲೆ ನಡೆಯುತ್ತಿದ್ದ ರಾಕ್ಷಸೀಯ ದೌರ್ಜನ್ಯಕ್ಕೆ ತಡೆ ಬಿದ್ದಿದೆ.

ಇತ್ತೀಚೆಗೆ ತುಮಕೂರಿನ ವಿದ್ಯಾಚೌಡೇಶ್ವರಿ ಮಠದ ಬಾಲ ಮಂಜುನಾಥ ಸ್ವಾಮಿ ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಪೋಕ್ಸೋ ಕಾಯ್ದೆ ನೂರಕ್ಕೆ ನೂರರಷ್ಟು ಸರಿಯಾಗಿ ಜಾರಿಯಾದರೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಭಯಪಡುವಂತಾಗಲಿದೆ. ಪ್ರಭಾವಿ ವ್ಯಕ್ತಿಗಳಿಗೆ ಮತ್ತು ಸಾಮಾನ್ಯ ವ್ಯಕ್ತಿಗಳಿಗೆ ಒಂದೇ ಕಾನೂನು ಒಂದೊಂದು ಬಗೆಯಲ್ಲಿ ಕೆಲಸ ಮಾಡಿದರೆ ಎಷ್ಟೇ ಕಠಿಣ ಕಾನೂನಾದರೂ ಪ್ರಯೋಜನವಿಲ್ಲ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...