ಈ ದಿನ ಸಂಪಾದಕೀಯ | ಸಾಮರಸ್ಯ ಇರಲೆನ್ನುವ ಆರೆಸ್ಸೆಸ್, ಸಮಾನತೆ ಬೇಕೆಂದು ಸಾರುವುದಿಲ್ಲವೇಕೆ?

Date:

ಜಾತಿಪದ್ಧತಿಯೊಂದಿಗೆ ರಾಜಿ ಮಾಡಿಕೊಂಡ ಆರೆಸ್ಸೆಸ್ ಪ್ರಣೀತ ಸಾಮರಸ್ಯ ವಾದದಿಂದ ಅಸ್ಪೃಶ್ಯರು, ದಲಿತರು ಹಾಗೂ ಶೂದ್ರ ವರ್ಗದ ವಿಮುಕ್ತಿ ಸಾಧ್ಯವಿಲ್ಲ. ಜಾತಿಪದ್ಧತಿ- ವರ್ಣ- ಶಾಸ್ತ್ರ-ಸ್ಮೃತಿಗಳನ್ನು ಬೇರುಸಹಿತ ಕಿತ್ತು ಹಾಕುವ ಬಾಬಾಸಾಹೇಬರ ಸಾಮಾಜಿಕ ಸಮಾನತಾವಾದವೇ ಭಾರತದ ಬಹುಜನರ ನಿಜವಾದ ಬಿಡುಗಡೆಯ ದಾರಿ.  ಆರೆಸ್ಸೆಸ್ ನ ಸುಧಾರಣವಾದದ ಬಣ್ಣದ ಮಾತುಗಳಿಗೆ ಬಹುಜನರು ಮರುಳಾಗಬಾರದು.

- Advertisement -

ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಆಚರಣೆಯು ಹಿಂದೂ ಸಮಾಜಕ್ಕೆ ಕಳಂಕಪ್ರಾಯ ಎಂದು ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಈ ಕಳಂಕವನ್ನು ಕಾಯ್ದೆಕಾನೂನಿನ ಮೂಲಕ ಮಾತ್ರವೇ ತೊಡೆದು ಹಾಕಲು ಬರುವುದಿಲ್ಲ. ದಿನನಿತ್ಯದ ಜನಜೀವನದ ಚರ್ಯೆಯಲ್ಲಿ ಬದಲಾವಣೆಗಳಾಗಬೇಕು. ಜಾತಿಯ ಹೆಸರಿನಲ್ಲಿ ಕೀಳಾಗಿ ನಡೆಸಿಕೊಳ್ಳುವ ಯಾವುದೇ ಕ್ರಿಯೆ, ಸಮಾಜವನ್ನು (ಹಿಂದೂ) ದುರ್ಬಲಗೊಳಿಸುತ್ತದೆ ಎಂದಿದ್ದಾರೆ. ಆರೆಸ್ಸೆಸ್ ನಿಂದ ಇಂತಹ ಹೇಳಿಕೆಗಳು ಹೊಸತಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಎಐ ಕರಾಳ ಮುಖ: ಮುಂದಿನ ಹತ್ತು ವರ್ಷಗಳಲ್ಲಿ ನಾಗರಿಕತೆಗೆ...

ಎಐ ಸೇರಿದಂತೆ ತಂತ್ರಜ್ಞಾನದ ಅಭಿವೃದ್ಧಿ ಮಾನವನ ಕಲ್ಯಾಣಕ್ಕಾಗಿರಬೇಕೇ ಹೊರತು, ಮಾನವ ಜನಾಂಗದ ವಿನಾಶಕ್ಕಾಗಿಯಲ್ಲ. ಅಷ್ಟಕ್ಕೂ ಮುಂದಿನ ಒಂದು ದಶಕವು ಮಾನವ ನಾಗರಿಕತೆಯ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ನಿರ್ಣಾಯಕ ಅವಧಿಯಾಗಲಿದೆ ಎಂಬುದು ಖಚಿತ. ಸಾಕಷ್ಟು...

ಸಾಮಾಜಿಕ ಸಾಮರಸ್ಯ ಮತ್ತು ಸಾಮಾಜಿಕ ಸಮಾನತೆಯ ಮಾತುಗಳ ನಡುವೆ  ಅಂತರವಿದೆ. ಆರೆಸ್ಸೆಸ್ ಜಾತಿಪದ್ಧತಿಯನ್ನು ಸಾಮಾಜಿಕ ಸಾಮರಸ್ಯದ ದಾರಿಯಿಂದ ದೂರ ಮಾಡಬೇಕೆನ್ನುತ್ತದೆಯೇ ವಿನಾ ಜಾತಿಪದ್ಧತಿಯನ್ನು ನಾಶಗೊಳಿಸಬೇಕು ಅಥವಾ ಅದರ ಮೂಲ ಬೇರುಗಳನ್ನು ಕಡಿದು ಹಾಕುವ ಪರ ಇಲ್ಲ. ಜಾತಿಪದ್ಧತಿಯ ಏಣಿಶ್ರೇಣಿಗಳನ್ನು, ಮೇಲ್ಜಾತಿಗಳ ವಿಶೇಷಾಧಿಕಾರಗಳನ್ನು ಯಾವುದೇ ಬಗೆಯಲ್ಲಿ ಕಳಚಿ ಹಾಕುವ ಉದ್ದೇಶ ಇಲ್ಲವೇ ಇಲ್ಲ. ಹೀಗಾಗಿ ಜಾತಿಗಳ ಜಾತಿಗಳ ನಡುವೆ ಸಾಮರಸ್ಯವನ್ನು ತಂದು ಎಲ್ಲ ಜಾತಿಗಳೂ ಶಾಂತಿಯಿಂದ ಬದುಕಿ ಬಾಳಬೇಕು ಎಂಬುದು ಆರೆಸ್ಸೆಸ್ ಸಿದ್ಧಾಂತ. ಆದರೆ, ನೂರಾರು ವರ್ಷಗಳ ಈ ಜಾತಿವ್ಯವಸ್ಥೆಯ ಚೌಕಟ್ಟನ್ನು ಮುರಿಯುವುದಿರಲಿ, ಸಡಿಲಿಸುವುದೂ ಸಾಧ್ಯವಾಗಿಲ್ಲ. ಹೀಗಾಗಿ ಆರೆಸ್ಸೆಸ್ ಪ್ರತಿಪಾದಿಸುವ ಸಾಮರಸ್ಯ ಅರ್ಥವಿಲ್ಲದ್ದು. ಕಣ್ಣೊರೆಸುವ ತಂತ್ರ ಮಾತ್ರ. ದಲಿತರು ಮತ್ತು ಆದಿವಾಸಿಗಳನ್ನು ಹಿಂದು ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳ ಒಳಕ್ಕೆ ಬೆಸೆಯುವುದರ ಆಚೆಗೆ ಸಾಗಲು ಅದು ಸುತರಾಂ ಸಿದ್ಧವಿಲ್ಲ.

ಹಿಂದೂಗಳು ಒಂದಾಗಿ ಬದುಕಲು ಜಾತಿ ಭೇದವನ್ನು ನಿವಾರಿಸೋಣ, ಸಾಮಾಜಿಕ ಸಾಮರಸ್ಯವನ್ನು ನಿರ್ಮಿಸೋಣ  ಎನ್ನುತ್ತದೆ ಆರೆಸ್ಸೆಸ್.

ಜಾತಿ ವ್ಯವಸ್ಥೆಯನ್ನು ತಡವದೆ ಸಾಮಾಜಿಕ ಸಾಮರಸ್ಯವನ್ನು ತರುತ್ತೇವೆಂಬ ಮಾತು ಡಂಭಾಚಾರದ್ದು. ಬ್ರಾಹ್ಮಣವಾದಿ ಚೌಕಟ್ಟು ಮತ್ತು ಜಾತಿದತ್ತ ವಿಶೇಷಾಧಿಕಾರಗಳನ್ನು ಆರೆಸ್ಸೆಸ್ ಪ್ರಶ್ನಿಸಿಯೇ ಇಲ್ಲ.

ಆದರೆ ಈ ಭೇದಭಾವವನ್ನು ಜಾರಿಯಲ್ಲಿಟ್ಟಿರುವ ಜಾತಿಪದ್ಧತಿಯನ್ನೇ ನಾಶ ಮಾಡಬೇಕೆಂಬ ಕುರಿತು ಆರೆಸ್ಸೆಸ್ ಜಾಣ ಮೌನ ವಹಿಸಿದೆ. ಆರೆಸ್ಸೆಸ್ ನ ಅಸ್ಪೃಶ್ಯತೆ ವಿರೋಧವೇ ನಕಲಿ. ಜಾತಿ ಜಾತಿಗಳ ನಡುವೆ ಸಾಮರಸ್ಯದ ಮಾತಾಡುತ್ತ ಬರಲಾಗಿದೆಯೇ ವಿನಾ ಜಾತಿಯ ಬೇರನ್ನೇ ಕಡಿದು ಹಾಕುವುದರ ಪರವಾಗಿಲ್ಲ.

ಆರೆಸ್ಸೆಸ್ ನ ಮಹಾನ್ ಸೈದ್ಧಾಂತಿಕ ಪ್ರತಿಪಾದಕರಾದ ಎಂ.ಎಸ್.ಗೋಲ್ವಲ್ಕರ್  ಅವರ  ‘ಬಂಚ್ ಆಫ್ ಥಾಟ್ಸ್’ ಕೃತಿಯಲ್ಲಿ ವರ್ಣಾಶ್ರಮ ಪದ್ಧತಿಯನ್ನು ಎತ್ತಿ ಹಿಡಿದಿದ್ದಾರೆ. ಸಮಾನತೆಗೆ ಒತ್ತು ಕೊಡದೆ ಸಾಮರಸ್ಯವನ್ನು ಬೋಧಿಸುತ್ತದೆ ಆರೆಸ್ಸೆಸ್. ಮೇಲ್ಜಾತಿಗಳ ವಿಶೇಷಾಧಿಕಾರಗಳನ್ನು ಕಿತ್ತು ಹಾಕಲು ಆರೆಸ್ಸೆಸ್ ಒಪ್ಪಿಗೆಯಿಲ್ಲ. ಕೆಳ ಜಾತಿಗಳನ್ನು ‘ವಿಶಾಲ ಹಿಂದೂ ಛತ್ರಛಾಯೆ’ಯ ಅಡಿಯಲ್ಲಿ ತಂದು ಮತಾಂತರವನ್ನು ತಡೆಗಟ್ಟುವುದು ಅದರ ನಿಜ ಉದ್ದೇಶ.

ಅಸ್ಪೃಶ್ಯತೆಯನ್ನು ಖಂಡಿಸಿ ಹಲವು ಠರಾವುಗಳನ್ನು ಅಂಗೀಕರಿಸಿದೆ. ಅಸ್ಪೃಶ್ಯತೆಗೆ ಧಾರ್ಮಿಕ ಅಂಗೀಕಾರ ಇಲ್ಲ ಎಂದೂ ಸಾರಿದೆ. ಸಾಮಾಜಿಕ ಸಾಮರಸ್ಯದಂತಹ ಆರೆಸ್ಸೆಸ್ ನ ವೇದಿಕೆಗಳು ಸಾಮರಸ್ಯ ನಿರ್ಮಾಣದಲ್ಲಿ ತೊಡಗಿವೆ. ತಳದಲ್ಲಿ ತಿಪ್ಪೆಯಿದ್ದರೂ ಮೇಲ್ಗಡೆ ರಂಗೋಲಿ ಇಟ್ಟರೆ ಸಾಕೆಂಬ ಧೋರಣೆಯಿದು.

ಅಸ್ಪೃಶ್ಯತೆಯ ಮೂಲ ಜಾತಿ ವ್ಯವಸ್ಥೆಯಲ್ಲಿದೆ. ಜಾತಿಯ ಮೂಲ ಮನುಸ್ಮೃತಿಯನ್ನು  ಆಧರಿಸಿದ ಹಿಂದೂ ಧರ್ಮದಲ್ಲಿದೆ ಎಂದು ಸಾರಿ 1927ರಲ್ಲಿಯೇ ಸಾರ್ವಜನಿಕವಾಗಿ ಮನುಸ್ಮೃತಿಯನ್ನು ಸುಟ್ಟುಹಾಕಿದ್ದರು ಡಾ.ಬಾಬಾಸಾಹೇಬ ಬಿ.ಆರ್.ಅಂಬೇಡ್ಕರ್.

ಆದರೆ ಮಹಾನ್ ಸಮಾನತಾವಾದಿ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿಪದ್ಧತಿಯ ಸುಧಾರಣೆಯ ಸಾಮರಸ್ಯವಾದವನ್ನು ಅತ್ಯಂತ ಪ್ರಬಲವಾಗಿ ವಿರೋಧಿಸಿದರು. ಜಾತಿಪದ್ಧತಿಯ ಮೂಲ ವರ್ಣವ್ಯವಸ್ಥೆಯಲ್ಲಿದೆ. ಇವೆರಡರ ಮೂಲವಾದ ಶಾಸ್ತ್ರಗಳು ಮತ್ತು ಸ್ಮೃತಿಗಳನ್ನು ನಾಶಪಡಿಸಬೇಕಿದೆ. ಸಮಾನತೆಯ ನಿಜವಾದ ಶತ್ರು ಜಾತಿಪದ್ಧತಿಯನ್ನು ಪಾಲಿಸುವವರಲ್ಲ, ಬದಲಾಗಿ ಈ ಪದ್ಧತಿಯನ್ನು ಎತ್ತಿ ಹಿಡಿದು ಅದನ್ನು ಪವಿತ್ರವೆಂದು ಸಾರಿರುವ ಶಾಸ್ತ್ರಗಳು ಮತ್ತು ಸ್ಮೃತಿಗಳು. ಹಿಂದುವಾಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯಲಾರೆ ಎಂಬುದು ಅವರ ಪ್ರಸಿದ್ಧ ಘೋಷಣೆಯಾಗಿತ್ತು. 1956ರಲ್ಲಿ ಭಾರೀ ಸಂಖ್ಯೆಯ ದಲಿತರೊಂದಿಗೆ ಹಿಂದೂ ಧರ್ಮವನ್ನು ತಿರಸ್ಕರಿಸಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು. ಸ್ವಾತಂತ್ರ್ಯ ಸಮಾನತೆ ಹಾಗೂ ಸೋದರತೆಯ ತತ್ವಗಳನ್ನು ಎತ್ತಿ ಹಿಡಿದರು.

ತಾರತಮ್ಯದ ಪದ್ಧತಿಗಳು-ಆಚರಣೆಗಳನ್ನು ಸುಧಾರಿಸುವುದು ಸಲ್ಲದು. ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಥಿಕ ಸಂರಚನೆಗಳ ಅಸಮಾನತೆಯನ್ನು ಜಾರಿಯಲ್ಲಿಟ್ಟಿದೆ ಜಾತಿ ಪದ್ಧತಿ. ಪ್ರತಿಯೊಂದು ಜಾತಿಯ ಮೇಲೆ ಅಥವಾ ಕೆಳಗೆ ಮತ್ತೊಂದು ಜಾತಿಯನ್ನು ಇರಿಸಲಾಗಿದೆ. ಜಾತಿವಿನಾಶ ಮಾಡಿ ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತೆಯ ಸುತ್ತ ಸಮ ಸಮಾಜವನ್ನು ಮರು ನಿರ್ಮಿಸಬೇಕು. ಜಾತಿಯನ್ನು ನ್ಯಾಯಸಮ್ಮತಗೊಳಿಸುವ ಧಾರ್ಮಿಕ ಅಧಿಕಾರವನ್ನು ಅಂಬೇಡ್ಕರ್ ಪ್ರಶ್ನಿಸಿದ್ದರು. ಜಾತಿ ವಿನಾಶ ಆಗಬೇಕಿದ್ದರೆ ಇದು ಅತ್ಯಗತ್ಯ ಎಂಬುದು ಅವರ ದೃಢ ನಂಬಿಕೆಯಾಗಿತ್ತು.

‘ಹಿಂದೂ ರಾಷ್ಟ್ರದ ನಿರ್ಮಾಣ ಆರೆಸ್ಸೆಸ್ ನ ಅಂತಿಮ ಗುರಿ. ಒಂದು ವೇಳೆ ಹಿಂದೂ ರಾಜ್ಯ ನಿರ್ಮಾಣ ಆದಲ್ಲಿ, ಅದಕ್ಕಿಂತ ದೊಡ್ಡ ವಿಪತ್ತು ಈ ದೇಶಕ್ಕೆ ಮತ್ತೊಂದಿಲ್ಲ. ಹಿಂದೂಗಳು ಏನು ಬೇಕಾದರೂ ಹೇಳಿಕೊಳ್ಳಲಿ, ವಾಸ್ತವದಲ್ಲಿ ಹಿಂದೂವಾದವು ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತೆಗೆ ಮಾರಕ. ಹೀಗಾಗಿ ಹಿಂದೂವಾದವು ಜನತಂತ್ರ ವ್ಯವಸ್ಥೆಯ ವಿರೋಧಿ. ಯಾವ ಬೆಲೆಯನ್ನು ತೆತ್ತಾದರೂ ಸರಿ, ಹಿಂದೂರಾಜ್ಯವನ್ನು ತಡೆಯಲೇಬೇಕು’ ಎಂದಿದ್ದರು ಬಾಬಾಸಾಹೇಬರು.

“ಇಂದಿನ ಸಂದರ್ಭದಲ್ಲಿ ನಾವು ನಮ್ಮ ಎಲ್ಲ ಶಕ್ತಿ ಸಂಪನ್ಮೂಲಗಳನ್ನು ಒಗ್ಗೂಡಿಸಿ ಮಾಡಬೇಕಾದ ತುರ್ತು ಕೆಲಸವೆಂದರೆ  ಸವರ್ಣೀಯ ಹಿಂದೂಗಳ ಸೈನಿಕ ತರಬೇತಿ. ಆ ತರಬೇತಿಯನ್ನು ಪಡೆದವರು ಆನಂತರದಲ್ಲಿ ಹಿಂದೂ ಧರ್ಮವನ್ನು ತೊರೆಯುವವರನ್ನು ಮತ್ತು ಆ ರೀತಿ ಹಿಂದೂ ಶ್ರದ್ಧೆಯನ್ನು ತೊರೆಯುವಂತೆ ಮಾಡುವವರನ್ನು ಶಿಕ್ಷಿಸಲು ಸಮರ್ಥರಾಗುತ್ತಾರೆ” ಎಂದು ಹಿಂದೂ ಮಹಾಸಭಾದ ಪ್ರಮುಖ ನಾಯಕ ಮತ್ತು ಆರೆಸ್ಸೆಸ್ ನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಡಾ. ಬಿ.ಎಸ್. ಮೂಂಜೆ ತಮ್ಮ ದಿನಚರಿಯಲ್ಲಿ ನಮೂದಿಸಿದ್ದಾರೆ.

1932ರ ಪೂನಾ ಒಪ್ಪಂದದಲ್ಲಿ ಗಾಂಧಿ ನೀಡಿದ ದಲಿತೋದ್ಧಾರದ ಒಪ್ಪಂದಕ್ಕೆ ಹಿಂದೂ ಸಮಾಜದ ಪರವಾಗಿ ಸಹಿ ಹಾಕಿದವರಲ್ಲಿ ಮೂಂಜೆಯವರೂ ಒಬ್ಬರಾಗಿದ್ದರು. ಆದರೂ ಅವರು ಅಸ್ಪೃಶ್ಯರು ಮತ್ತು ಅಂಬೇಡ್ಕರ್ ಕುರಿತು ತಮಗಿದ್ದ ದ್ವೇಷವನ್ನು 1935ರಲ್ಲಿ ಕಾರಿಕೊಂಡಿದ್ದರು: “..ಅಂಬೇಡ್ಕರ್ ಮತ್ತು ಅಸ್ಪೃಶ್ಯರ ಮೇಲೆ ಹಣ ಖರ್ಚು ಮಾಡುವುದು ಹಾವಿಗೆ ಹಾಲೆರೆದಂತೆ. ಇವರಿಗೆ ಯಾವುದೇ ನೆರವು ನೀಡಕೂಡದು. ಅವರ ಕಷ್ಟಗಳನ್ನು ಅವರೇ ಅನುಭವಿಸಲು ಬಿಟ್ಟುಬಿಡಬೇಕು” ಎಂದಿದ್ದರು ಮೂಂಜೆ.

ಅಂಬೇಡ್ಕರ್ ಅವರು ನಡೆಸಿದ ಮಹಾಡ್ ಸತ್ಯಾಗ್ರಹ ಅಥವಾ ಕಾಳಾರಾಮ್ ದೇವಸ್ಥಾನ ಪ್ರವೇಶ ಹೋರಾಟವನ್ನು ಆರೆಸ್ಸೆಸ್ ಬೆಂಬಲಿಸಿರಲಿಲ್ಲ, ಬದಲಾಗಿ ವಿರೋಧಿಸಿತ್ತು.

ಜಾತಿಪದ್ಧತಿಯೊಂದಿಗೆ ರಾಜಿ ಮಾಡಿಕೊಂಡ ಆರೆಸ್ಸೆಸ್ ಪ್ರಣೀತ ಸಾಮರಸ್ಯ ವಾದದಿಂದ ಅಸ್ಪೃಶ್ಯರು, ದಲಿತರು ಹಾಗೂ ಶೂದ್ರ ವರ್ಗದ ವಿಮುಕ್ತಿ ಸಾಧ್ಯವಿಲ್ಲ. ಜಾತಿಪದ್ಧತಿ- ವರ್ಣ- ಶಾಸ್ತ್ರ-ಸ್ಮೃತಿಗಳನ್ನು ಬೇರುಸಹಿತ ಕಿತ್ತು ಹಾಕುವ ಬಾಬಾಸಾಹೇಬರ ಸಾಮಾಜಿಕ ಸಮಾನತಾವಾದವೇ ಭಾರತದ ಬಹುಜನರ ನಿಜವಾದ ಬಿಡುಗಡೆಯ ದಾರಿ. ಆರೆಸ್ಸೆಸ್ ನ ಸುಧಾರಣವಾದದ ಬಣ್ಣದ ಮಾತುಗಳಿಗೆ ಬಹುಜನರು ಮರುಳಾಗಬಾರದು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಸ್‌ಐಟಿ ರಚನೆಗೆ ಹೈಕೋರ್ಟ್ ಆದೇಶ

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಇತ್ತೀಚೆಗೆ ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ...

ಎಐ ಕರಾಳ ಮುಖ: ಮುಂದಿನ ಹತ್ತು ವರ್ಷಗಳಲ್ಲಿ ನಾಗರಿಕತೆಗೆ ಆಪತ್ತೇ?

ಎಐ ಸೇರಿದಂತೆ ತಂತ್ರಜ್ಞಾನದ ಅಭಿವೃದ್ಧಿ ಮಾನವನ ಕಲ್ಯಾಣಕ್ಕಾಗಿರಬೇಕೇ ಹೊರತು, ಮಾನವ ಜನಾಂಗದ...

ಚಿಕ್ಕಬಳ್ಳಾಪುರ | ದಲಿತರ ಕೇರಿಗೆ ಹೋದರೆ ‘ನಾನು ಸಾಯ್ತೀನಿ’: ಉದ್ಧಟತನ ಮೆರೆದ ಪೂಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯ ಪಿಡಚಲಹಳ್ಳಿ ಗ್ರಾಮದಲ್ಲಿ ದಲಿತರ ಕೇರಿಗೆ ದೇವರ ಮೂರ್ತಿ ಹೋಗುವುದನ್ನು...

ನಾಳೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ; ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ನಾಳೆ, 2026ರ ಸೆಪ್ಟೆಂಬರ್...