ರೈತರಿಗೆ ಅಗತ್ಯವಿರುವ ಸಂದರ್ಭದಲ್ಲಿ ಸಾಲ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಮುಂದಿನ ಮೂರು ತಿಂಗಳಲ್ಲಿ ಕೆಸಿಸಿ (ಕಿಸಾನ್ ಕ್ರೆಡಿಟ್ ಕಾರ್ಡ್) ಸಾಲ ವಿತರಣೆ ಆರಂಭಿಸಲಾಗುವುದು. ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘವು ಷೇರುದಾರರು, ರೈತರು ಹಾಗೂ ಮಹಿಳಾ ಸಂಘಗಳ ಸದಸ್ಯರಿಗೆ ಆರ್ಥಿಕ ನೆರವು ನೀಡುವ ಸಂಜೀವಿನಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಸಂಘದ ಅಧ್ಯಕ್ಷ ಪಿ.ಎನ್. ಮಂಜುನಾಥ್‌ರೆಡ್ಡಿ ಹೇಳಿದರು.
ಪಟ್ಟಣದ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸಂಘದ ಚಟುವಟಿಕೆಗಳನ್ನು ವಿಸ್ತರಿಸಿ ರೈತರಿಗೆ ಅಗತ್ಯ ಸಾಲ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲು ಆಡಳಿತ ಮಂಡಳಿ ಕ್ರಮ ಕೈಗೊಳ್ಳುತ್ತಿದೆ ಎಂದರು.
ಸಂಘದಿಂದ ಸಾಲ ಪಡೆದಿರುವ ರೈತರು ಹಾಗೂ ಮಹಿಳಾ ಸಂಘಗಳ ಸದಸ್ಯರು ಸರ್ಕಾರದಿಂದ ಸಾಲ ಮನ್ನಾ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಸಾಲ ಮರುಪಾವತಿ ಮಾಡದೆ ಇರುವುದು ಸರಿಯಲ್ಲ. ಸಾಲ ಮನ್ನಾ ಆಗುತ್ತದೆ ಎಂಬ ಭ್ರಮೆಯಿಂದ ದೂರವಿದ್ದು, ಪಡೆದ ಸಾಲವನ್ನು ನಿಯಮಾನುಸಾರ ಮರುಪಾವತಿ ಮಾಡುವ ಮೂಲಕ ಸಂಘದ ಆರ್ಥಿಕ ಶಿಸ್ತು ಕಾಪಾಡಬೇಕು. ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಸದಸ್ಯರಿಗೆ ಮುಂದಿನ ದಿನಗಳಲ್ಲಿ ಅರ್ಹತೆಯ ಆಧಾರದ ಮೇಲೆ ಮತ್ತೊಮ್ಮೆ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಂಜುನಾಥ್‌ರೆಡ್ಡಿ ತಿಳಿಸಿದರು.
ರೈತರ ಆರ್ಥಿಕ ಚಟುವಟಿಕೆಗಳಿಗೆ ಸಹಕಾರ ಸಂಘಗಳು ಪ್ರಮುಖ ಆಧಾರವಾಗಿವೆ. ರೈತರು ಸಂಘದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಲಭ್ಯವಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಂಘದ ಹಣಕಾಸಿನ ಸ್ಥಿತಿ ಸುಧಾರಿಸಿದಂತೆ ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಸಾಧ್ಯವಾಗಲಿದೆ ಎಂದರು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಸಿ.ಎಸ್. ಶಿವಾರೆಡ್ಡಿ ಮುಂದಿನ ಸಾಲಿನ ಅಂದಾಜು ಬಜೆಟ್ ಮಂಡಿಸಿದರು. ಸಂಘಕ್ಕೆ ಮಳಿಗೆಗಳ ಬಾಡಿಗೆ ರೂಪದಲ್ಲಿ ಮಾಸಿಕ ಸುಮಾರು ₹75 ಸಾವಿರ ಆದಾಯ ಬರುತ್ತಿದ್ದು, ಮಳಿಗೆಗಳನ್ನು ಹೊಂದಿರುವ ಮಾಲೀಕರಿಂದ ಒಟ್ಟು ₹9.5 ಲಕ್ಷ ಠೇವಣಿ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಅಪೆಕ್ಸ್ ಬ್ಯಾಂಕ್‌ನಿಂದ ₹58 ಲಕ್ಷ ಸಾಲ ಪಡೆಯಲಾಗಿದ್ದು, ಈ ಪೈಕಿ ಈಗಾಗಲೇ ₹26 ಲಕ್ಷ ಮರುಪಾವತಿ ಮಾಡಲಾಗಿದೆ. ಉಳಿದ ಸಾಲದ ಮೊತ್ತವನ್ನು ಮುಂದಿನ ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ತೀರಿಸಲು ಉದ್ದೇಶಿಸಲಾಗಿದೆ. ಸಂಘದ ಆದಾಯ ಮತ್ತು ಹಣಕಾಸಿನ ವ್ಯವಹಾರಗಳನ್ನು ಸುಧಾರಿಸುವ ಮೂಲಕ ಸಾಲದ ಹೊರೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಿವಾರೆಡ್ಡಿ ತಿಳಿಸಿದರು.
ಸಂಘದ ಆಸ್ತಿಗಳು ಹಾಗೂ ಆದಾಯ ಮೂಲಗಳನ್ನು ಸಮರ್ಪಕವಾಗಿ ನಿರ್ವಹಿಸಿ ಸದಸ್ಯರ ಹಿತ ಕಾಪಾಡಲು ಆದ್ಯತೆ ನೀಡಲಾಗುವುದು. ರೈತರು ಹಾಗೂ ಷೇರುದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಸಂಘದ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಯಿತು.
ಸಭೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ಶಬ್ಬೀರ್ ಅಹ್ಮದ್, ದರಖಾಸ್ತು ಸಮಿತಿ ಸದಸ್ಯ ಸೀತಾರಾಮರೆಡ್ಡಿ, ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಎಂ. ಬೈರಾರೆಡ್ಡಿ, ನಿರ್ದೇಶಕರಾದ ರಾಮಚಂದ್ರಪ್ಪ, ಬಿ.ವಿ. ವೆಂಕಟರೆಡ್ಡಿ, ಸಂಪತ್ ಕುಮಾರ್, ಎಚ್.ಸಿ. ಮಂಜುನಾಥ್, ಟಿಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮರೆಡ್ಡಿ ಸೇರಿದಂತೆ ಸಂಘದ ನಿರ್ದೇಶಕರು, ಷೇರುದಾರರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ..?ಮಾಲೂರು | ನೈಸ್ ಟೋಲ್ ಅಕ್ರಮ – 7 ದಿನದಲ್ಲಿ ಸ್ಫೋಟಕ ಸತ್ಯ ಬಹಿರಂಗವಾಗುತ್ತೆ
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಮುಂದಿನ ವರ್ಷದ ಚಟುವಟಿಕೆಗಳು, ಅಂದಾಜು ಬಜೆಟ್, ಹಣಕಾಸಿನ ವ್ಯವಹಾರಗಳು, ಸಾಲ ಮರುಪಾವತಿ ಹಾಗೂ ರೈತರಿಗೆ ನೀಡಬೇಕಾದ ಸಾಲ ಸೌಲಭ್ಯಗಳ ಕುರಿತು ಚರ್ಚೆ ನಡೆಯಿತು.




