ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಗರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ದಿನೇಶ್ ಬಿವಾಲ್ ಎಂಬಾತ ರಾಜಕೀಯ ನಂಟು ಹೊಂದಿದ್ದಾನೆ ಎಂದು ಹೇಳಲಾಗಿದೆ. ಇದು, ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರಿ ರಾಜಕೀಯ ವಾಗ್ದಾಳಿಗೆ ನಾಂದಿ ಹಾಡಿದೆ.
ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಜೈಪುರದಲ್ಲಿ ದಿನೇಶ್ ಬಿವಾಲ್, ಅವನ ಸಹೋದರ ಮಾಂಗಿಲಾಲ್ ಬಿವಾಲ್ ಹಾಗೂ ಮಾಂಗಿಲಾಲ್ ಮಗ ವಿಕಾಸ್ ಬಿವಾಲ್‌ನನ್ನು ಬಂಧಿಸಿದೆ. ಆರೋಪಿ ದಿನೇಶ್ ಬಿವಾಲ್ ಗುರುಗ್ರಾಮದ ಯಶ್ ಯಾದವ್ ಎಂಬಾತನಿಂದ ಪ್ರಶ್ನೆಪತ್ರಿಕೆಯನ್ನು ಪಡೆದುಕೊಂಡು, ಅದನ್ನು ಸ್ಕ್ಯಾನ್ ಮಾಡಿ ಪಿಡಿಎಫ್ ರೂಪದಲ್ಲಿ ತನ್ನ ಮಗನಿಗೆ ನೀಡಿದ್ದನು. ಜೊತೆಗೆ, ರಾಜಸ್ಥಾನದ ಸೀಕರ್ ಜಿಲ್ಲೆಯ ಇತರ ನೂರಾರು ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡಿದ್ದನೆಂಬ ಗಂಭೀರ ಆರೋಪ ಎದುರಿಸುತ್ತಿದ್ದಾನೆ.
ಈ ಬೃಹತ್ ಹಗರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆಯೇ, ಪ್ರಮುಖ ಆರೋಪಿ ದಿನೇಶ್ ಬಿವಾಲ್ ತನಗೆ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ಉನ್ನತ ನಾಯಕರೊಂದಿಗೆ ನಿಕಟ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಆತನ ಈ ಹೇಳಿಕೆ ಹೊರಬರುತ್ತಿದ್ದಂತೆಯೇ, ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ.
ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದ್ದು, “ನೀಟ್ ಪರೀಕ್ಷೆಯ ವ್ಯವಸ್ಥಿತ ಹಗರಣದ ಹಿಂದೆ ಆಡಳಿತಾರೂಢ ಬಿಜೆಪಿ ನಾಯಕರ ಮತ್ತು ಪ್ರಭಾವಿ ವ್ಯಕ್ತಿಗಳ ಪ್ರಭಾವವಿದೆ. ಬಡ ಮತ್ತು ಮಧ್ಯಮ ವರ್ಗದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡಿದ ಇಂತಹ ದಂಧೆಕೋರರಿಗೆ ಸರ್ಕಾರದ ಪ್ರಭಾವಿ ನಾಯಕರೇ ರಕ್ಷಣೆ ನೀಡುತ್ತಿದ್ದಾರೆ. ಸಾಮಾನ್ಯ ಜನರನ್ನು ಮಾತ್ರ ತನಿಖೆಯ ಹೆಸರಿನಲ್ಲಿ ಪೀಡಿಸಲಾಗುತ್ತಿದೆ” ಎಂದು ಕಟುವಾಗಿ ಟೀಕಿಸಿದೆ. ಅಲ್ಲದೆ, ದೇಶದ ಶಿಕ್ಷಣ ವ್ಯವಸ್ಥೆಯನ್ನು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (NTA) ಬಿಜೆಪಿ ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡಿದೆ ಎಂದು ಕಿಡಿಕಾರಿದೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!
ಮತ್ತೊಂದೆಡೆ, ಕಾಂಗ್ರೆಸ್‌ನ ಆರೋಪಗಳನ್ನು ಬಿಜೆಪಿ ತಿರಸ್ಕರಿಸಿದೆ. ಈ ಹಗರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ ನಾಯಕರು, “ಆರೋಪಿ ದಿನೇಶ್ ಬಿವಾಲ್‌ಗೆ ಈ ಹಿಂದೆ ರಾಜಸ್ಥಾನದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನಾಯಕರೊಂದಿಗೆ ನಿಕಟ ಒಡನಾಟವಿತ್ತು. ಹಗರಣದ ಮೂಲ ಸೃಷ್ಟಿಯಾಗಿದ್ದೇ ಕಾಂಗ್ರೆಸ್ ಆಡಳಿತಾವಧಿಯ ಸಡಿಲ ನೀತಿಗಳು. ತನಿಖೆಯನ್ನು ಹಳ್ಳಹಿಡಿಸಲು ಮತ್ತು ರಾಜಕೀಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಿದೆ” ಎಂದು ಹೇಳಿದ್ದಾರೆ.
“ನಮ್ಮ ಸರ್ಕಾರವು ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಸಿಬಿಐ ಮೂಲಕ ಮುಕ್ತ ಮತ್ತು ಪಾರದರ್ಶಕ ತನಿಖೆಯನ್ನು ನಡೆಸುತ್ತಿದ್ದು, ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರನ್ನು ಜೈಲಿಗೆ ಅಟ್ಟುವುದು ನಿಶ್ಚಿತ” ಎಂದು ಬಿಜೆಪಿ ತಿರುಗೇಟು ನೀಡಿದೆ.
ಆರೋಪಿ ದಿನೇಶ್ ಬಿವಾಲ್‌ನ ಇಡೀ ಕುಟುಂಬವೇ ಈ ಹಿಂದೆ ಅನುಮಾನಾಸ್ಪದವಾಗಿ ನೀಟ್ ಪರೀಕ್ಷೆಗಳನ್ನು ಪಾಸು ಮಾಡಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಗಿಟ್ಟಿಸಿಕೊಂಡಿದೆ. ಜೊತೆಗೆ, ಹಗರಣದಲ್ಲಿ ತೊಡಗಿರುವ ದಂಧೆಕೋರರ ಜಾಲವು ಮಹಾರಾಷ್ಟ್ರ, ಹರಿಯಾಣ ಹಾಗೂ ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಿಗೆ ಹರಡಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದು ವರದಿಯಾಗಿದೆ.



