ಲೋಕ ವಿವೇಕ ಅರಿಯಲುˌ ಕನ್ನಡಿಗರ ನಿಜವಾದ ವಿವೇಕ ತಿಳಿಯಲು ಶ್ರೀವಿಜಯನ ಕವಿರಾಜಮಾರ್ಗ ಸಹಕಾರಿ
ಎಂದು ಲೇಖಕಿ ಡಾ. ಎಂ ಎಸ್ ಆಶಾದೇವಿ ಅವರು ಅಭಿಪ್ರಾಯಪಟ್ಟರು.
ಜೈನ ಮಿಲನ್ ಬೆಂಗಳೂರು ಸೆಂಟ್ರೆಲ್ ಹಾಗೂ ಜಯನಗರದ ಶ್ರೀಚಕ್ರೇಶ್ವರಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ʼಜೈನ ಸಾಹಿತ್ಯ ಸಿರಿʼ’ ಕಾರ್ಯಕ್ರಮದ ತಿಂಗಳ ಉಪನ್ಯಾಸದಲ್ಲಿ ಮಾತನಾಡಿದರು.
“ಮಾನವ ಕುಲ ನಾಶದ ಹಂತಕ್ಕೆ ಹೋಗುತ್ತಿರುವ ಕಾಲಘಟ್ಟದಲ್ಲಿ ಶ್ರೀವಿಜಯನ ವಿವೇಕ ನಮಗೆ ಬೇಕಿದೆ. ಕನ್ನಡನಾಡಿನ ಭೌಗೋಳಿಕ ವಿಸ್ತಾರವನ್ನು ತಿಳಿಸುವ ಕವಿˌ ʼಗಡಿಗಳನ್ನು ಮೀರಿದ್ದು ಜನರ ಭಾವನೆಗಳು. ಅಂತಹ ಭಾವನೆಗಳಿಗೆ ಮನ್ನಣೆ ಸಿಗಬೇಕುʼ ಎಂದನು. ಒಂದು ರಾಜ್ಯ, ಕವಿಗಳು ಮತ್ತು ರಾಜರು ಸೇರಿದಾಗ ಮಾತ್ರ ನಾಡಾಗುತ್ತದೆ” ಎಂದು ತಿಳಿಸಿದರು.
“ಕವಿಗಳು ಅಂದರೆ ಕಲೆಗಳು ಇರುವ ರಾಜ್ಯವೇ ನಿಜವಾದ ರಾಜ್ಯ. ಶ್ರೀವಿಜಯ ತನ್ನ ಕಾಲದ ಜನಸಾಮಾನ್ಯರ ಅಭಿರುಚಿ ಬಗ್ಗೆ ಹೇಳುತ್ತˌ ʼನನ್ನ ಕನ್ನಡ ನಾಡಿನ ಜನ ಓದಲು ಬರೆಯಲು ಬಾರದಿದ್ದರೂ ಒಂದು ಕಾವ್ಯವನ್ನು ಕೇಳಿ ಅದು ಉತ್ತಮವೋ ಅಲ್ಲವೋ ಎಂದು ನಿರ್ಧರಿಸಬಲ್ಲ ವಿವೇಕಶಾಲಿಗಳು. ʼಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತರುʼ ಅಂತಹ ತಾಕತ್ತು ಕನ್ನಡ ಜನಸಾಮಾನ್ಯರಿಗೆ ಇತ್ತೆಂದು ತಿಳಿಸಿದ್ದಾನೆ” ಎಂದರು.
This video cannot be played in your browser. Open the video directly
“ಪ್ರಭುತ್ವದಲ್ಲಿ ಇದ್ದುಕೊಂಡೇ ಶ್ರೀವಿಜಯ ಕವಿ ಕನ್ನಡ ನಾಡಿನ ಜನಪದರ ಭಾಷೆಗೆ ಬೆಲೆಕೊಡಬೇಕು ಎನ್ನುತ್ತಾನೆ. ʼಕಸವರವೆಂಬುದು ನೆರೆ ಸೈರಿಸಲಾರ್ಪೆಡೆ ಪರವಿಚಾರಮಂˌ ಧರ್ಮಮುಮಂʼ ಎಂಬ ಆ ಕಾಲದ ಮಾತು ಇಂದಿಗೆ ಬಹುಮುಖ್ಯ. ಸಹಿಷ್ಣುತೆಯನ್ನು ಹೇಳುತ್ತಲೇ ರಾಜ ವಿವೇಕವನ್ನು, ಜನಸಾಮಾನ್ಯರ ವಿವೇಕವನ್ನು ಶ್ರೀವಿಜಯ ತನ್ನ ಕವಿರಾಜಮಾರ್ಗದಲ್ಲಿ ತಿಳಿಸುತ್ತ ಕನ್ನಡಿಗರಿಗೆ ಬೇಕಿರುವ ವಿವೇಕವನ್ನು ವಿವರಿಸುತ್ತಾನೆ” ಎಂದರು.
“ಶ್ರೀವಿಜಯನ ಕವಿರಾಜಮಾರ್ಗ ಮುಖ್ಯ. ಏಕೆಂದರೆ ತನ್ನ ಕಾವ್ಯದಲ್ಲಿ ʼವಸುಧಾ ವಲಯ ವಿಲೀನ ವಿಷದ ವಿಷಯ ವಿಶೇಷಂʼ ಎಂದಿರುವ ಮಾತಿನಲ್ಲಿ ಆ ಕಾಲದಲ್ಲಿಯೇ ಕನ್ನಡಿಗರಿಗೆ ನಾವು ಜಾಗತಿಕ ಹಾಗೂ ಸ್ಥಳೀಯ ಅಸ್ಮಿತೆಯನ್ನು ಉಳಿಸಿಕೊಳ್ಳುವ ಮಾತನಾಡುತ್ತಾನೆ. ಇದು ಕುವೆಂಪು ಅವರ ವಿಶ್ವಮಾನವ ತತ್ವಕ್ಕೆ ಮೂಲ ಈ ಕಾವ್ಯದ ಮಾತುಗಳು ಎಂಬುದನ್ನು ಗಮನಿಸಬೇಕು” ಎಂದು ಹೇಳಿದರು.
“ಶ್ರೀವಿಜಯನ ರಾಜ ನೃಪತುಂಗ ಕೂಡ ಜನಪರವಾಗಿದ್ದ ಎನ್ನುವ ಕಾರಣಕ್ಕೂ ಆಳುವವನು ಹೇಗಿರಬೇಕು ಎನ್ನುವ ಲೋಕ ವಿವೇಕವನ್ನು ಈ ಮಹತ್ವದ ಕಾವ್ಯ ಹೇಳುತ್ತಿದೆ. 8ನೇ ಶತಮಾನದಲ್ಲಿ ಪಂಪನಿಗಿಂತ ಪೂರ್ವದಲ್ಲಿ ಜೈನ ಪರಂಪರೆಯ ಶ್ರೀವಿಜಯ ಕವಿ ಬರೆದ ಕವಿರಾಜಮಾರ್ಗ ಲಾಕ್ಷಣಿಕ ಗ್ರಂಥವಾಗಿದ್ದರೂˌ ಕನ್ನಡ ನಾಡಿನ ಬಗ್ಗೆˌ ಕನ್ನಡಿಗರ ಬಗ್ಗೆ ಹೆಮ್ಮೆಪಡಲು ಈ ಕಾವ್ಯವನ್ನು ಕನ್ನಡಿಗರು ಅರಿಯಬೇಕು” ಎಂದು ಡಾ. ಎಂ ಎಸ್ ಆಶಾದೇವಿ ತಿಳಿಸಿದರು.
ಇದನ್ನೂ ಓದಿದ್ದೀರಾ? ಬೀದರ್ | ರಾಜಕೀಯ ಲಾಭಕ್ಕಾಗಿ ಮಹಿಳಾ ಮೀಸಲಾತಿ ಬಳಕೆ : ಭೀಮಣ್ಣ ಮೇಟಿ
ಅಧ್ಯಕ್ಷತೆ ವಹಿಸಿದ್ದ ಶೋಭಾ ವಿಮುಕ್ತ ಜೈನ್ ಮಾತನಾಡಿ, “ಶ್ರೀವಿಜಯನ ಕವಿರಾಜಮಾರ್ಗ ಕಾವ್ಯದ ಮೂಲಕ ಕನ್ನಡ ನಾಡಿನ ಹಾಗೂ ಕನ್ನಡಿಗರ ಬಗ್ಗೆ ತಿಳಿಯಲು ಸಾಧ್ಯವಾಗಿಸಿದ್ದು ಸಾಹಿತ್ಯ ಸಿರಿಯಂತಹ ಕಾರ್ಯಕ್ರಮ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸೆಂಟ್ರಲ್ ಜೈನ್ ಮಿಲನ್‌ನ ಅಧ್ಯಕ್ಷೆ ಮಮತಾ ಕಾಂತರಾಜ್ˌ ಸಂಚಾಲಕಿ ಡಾ. ಪದ್ಮಿನಿ ನಾಗರಾಜುˌ ವಿಮಕ್ತ ಜೈನ್ˌ ಬ್ರಾಹ್ಮಿಲ ಮದನಕುಮಾರ ಇದ್ದರು. ಜಯಂತಿ ಜ್ವಾಲಕುಮಾರ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.





